Sunday, 15th December 2024

ರಾಜಕೀಯಕ್ಕೆ ಪ್ರಯೋಗಶಾಲೆ ಆಯಿತೆ?

ಹಿಜಾಬ್ ವಿವಾದ ಮತ್ತೆ ಕರಾವಳಿ ಜಿಲ್ಲೆಗಳನ್ನು ಕುದಿಮರುಳು ಸ್ಥಿತಿಗೆ ತಂದು ನಿಲ್ಲಿಸಿದೆ. ಚುನಾವಣೆಗೆ ಒಂದು ವರ್ಷವಿರುವಾಗಲೇ ರಾಜಕೀಯ ಪಕ್ಷಗಳು ಈ ಮೂಲಕ ಅಖಾಡ ಸಿದ್ಧಪಡಿಸಿಕೊಂಡರೇ ಎಂಬ ಅನುಮಾನ ಜನತೆಯಲ್ಲಿ ಮೂಡಿದೆ.

ಅದಿಲ್ಲದಿದ್ದರೆ ಒಂದು ಕಾಲದಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡವು ಕೋಮು ಸೌಹಾರ್ದದ ನೆಲೆ ಬೀಡಾಗಿತ್ತು. ಆದರೆ ಈಗ ಧರ್ಮಗಳ ನಡುವೆ ಕೋಮು ಸಂಘರ್ಷ ಹಬ್ಬಿಸುವ ಪ್ರಯೋಗ ಶಾಲೆಯಂತಾಗಿದೆ. ಈ ಹಿಂದೆ ಚರ್ಚ್, ಮಸೀದಿ, ದೇವಾಲಯ ವಿಚಾರದಲ್ಲಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಲವಾರು ಕೋಮು ಸಂಘರ್ಷಗಳು ನಡೆದಿವೆ. ಈಗ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ವಿಚಾರದಲ್ಲಿ ಕೋಮು ವಿಭಜನೆ ನಡೆಯುತ್ತಿದೆ. ಕಳೆದ ಮೂವತ್ತಕ್ಕೂ ಅಧಿಕ ವರ್ಷಗಳಿಂದ ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸರ್ವ ಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್ ಧರಿಸಿ ಬರುವವರು ತರಗತಿ ಪ್ರವೇಶ ಮಾಡಿದ ಮೇಲೆ ಹಿಜಾಬ್ ತೆಗೆದಿರಿಸಿ, ಪಾಠ ಕೇಳುತ್ತಿದ್ದರು.

ಆದರೆ ಇದೇ ಮೊದಲ ಬಾರಿಗೆ ಹಿಜಾಬ್ ಎಂಬ ವಿವಾದವೊಂದು ಎದ್ದಿದೆ. ಒಂದೆಡೆ ಹಿಜಾಬ್ ನಮ್ಮ ಧಾರ್ಮಿಕ ಹಕ್ಕು ಎಂದು ವಿದ್ಯಾರ್ಥಿನಿಯರು ಹೇಳಿದರೆ, ಇನ್ನೊಂದೆಡೆ ಹಿಜಾಬ್ ಹಾಕಿ ಕಾಲೇಜಿನ ಕಾಂಪೌಡ್ ಒಳಗೆ ಬರುವುದಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಕಾಲೇಜಿನ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳ ಲಾಗಿದೆ. ಇದಕ್ಕೆಲ್ಲ ಏನರ್ಥ? ಸರಕಾರವೂ ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿ ಕಾನೂನಿನನ್ವಯ ಶಾಲಾ ಸುಧಾರಣಾ ಸಮಿತಿಯ ನಿರ್ಧಾರವೇ ಅಂತಿಮ ಎಂದು ವಿವಾದಕ್ಕೆ ತೆರೆ ಎಳೆಯಬಹುದಿತ್ತು. ಆದೂ ಆಗಿಲ್ಲ.

ಮಾಧ್ಯಮಗಳೆದುರು ಮಾತನಾಡಲೂ ಹಿಂಜರಿಯುವ ವಿದ್ಯಾರ್ಥಿನಿಯರು, ಅವರ ಪೋಷಕರು ಇದೀಗ ಹೈಕೋಟ್ ಮೆಟ್ಟಿಲೇರುವ ಮಟ್ಟಕ್ಕೆ ಹೋಗಿದ್ದಾರೆಂದರೆ ಅದರ ಹಿಂದಿನ ಅರ್ಥವೇನು? ಈ ಮೂಲಕ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಲಾಗಿದೆ. ಒಂದೆಡೆ ಬಲಪಂಥೀಯ ಕೋಮು ವಾದಿ ಗುಂಪು ಹಾಗೂ ಇನ್ನೊಂದೆಡೆ ಮತೀಯವಾದಿ ಗುಂಪು ಈ ವಿಚಾರವನ್ನು ಹಿಡಿದುಕೊಂಡು ಎಳೆದಾಡುವ ಮೂಲಕ ಶೈಕ್ಷಣಿಕ ಕೇಂದ್ರವನ್ನು ಕೋಮುವಾ ದದ ಪ್ರಯೋಗ ಶಾಲೆಯನ್ನಾಗಿಸುತ್ತಿದೆ. ಈ ನಡುವೆ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳು, ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಅರ್ಥವಾಗದಂತಹ ಸ್ಥಿತಿ ನಿರ್ಮಾಣ ವಾಗಿದೆ. ಇಂಥವಕ್ಕೆ ಕೊನೆ ಹಾಡಲೇಬೇಕು. ವಿದ್ಯಾರ್ಥಿಗಳು ಧರ್ಮದ ಗುರುತು, ಸಂಪ್ರದಾಯ ಗಳಿಗಾಗಿ ತರಗತಿಯ ಒಳಗಡೆ ಪರಸ್ಪರ ಕಿತ್ತಾಡುವುದು ಖೇದಕರ.