Thursday, 12th December 2024

ಲತಾ ನಿಧನ ಸಂಗೀತ ಲೋಕದ ಯುಗಾಂತ್ಯದ ಕುರುಹು

ಸುದೀರ್ಘ ಎಪ್ಪತ್ತು ವರ್ಷಗಳ ಕಾಲ ಸಾವಿರಾರು ಗೀತೆಗಳ ಸುಮಧುರ ಗಾಯನದಿಂದ ಕೋಟ್ಯಂತರ ಅಭಿಮಾನಿಗಳ ಅಂತರಾಳದಲ್ಲಿ ನೆಲೆಯಾಗಿರುವ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಈಗ ನೆನಪು ಮಾತ್ರ.

ಲತಾ ಮಂಗೇಶ್ಕರ್ ಅವರ ನಿಧನವು ಸಂಗೀತ ಲೋಕದ ಒಂದು ಯುಗಾಂತ್ಯದ ಕುರುಹಾಗಿದೆ. ಅವರ ನಿಧನ ದಿಂದ ಇಡೀ ದೇಶದಲ್ಲಿ ಶೂನ್ಯ ಆವರಿಸಿದೆ. ಲತಾ ಮಂಗೇಶ್ಕರ್ ಅವರ ಗಾಯನಕ್ಕೆ ಹಲವು ಪ್ರಶಸ್ತಿ, ಪುರಸ್ಕಾರ ಗಳು ಸಂದಿವೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಏಳು ಫಿಲ್ಮ್ ಫೇರ್ ಪ್ರಶಸ್ತಿಗಳು, 1989ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ೨೦೦೧ರಲ್ಲಿ ದೇಶದ ಅತ್ಯುತ್ತಮ ಗೌರವ ಭಾರತ ರತ್ನ ನೀಡಿ ಗೌರವಿಸ ಲಾಯಿತು. ಎಂ.ಎಸ್.ಸುಬ್ಬಲಕ್ಷ್ಮಿ ನಂತರ ಭಾರತ ರತ್ನ ಗೌರವಕ್ಕೆ ಪಾತ್ರರಾದ ಎರಡನೇ ಗಾಯಕಿ ಲತಾ ಮಂಗೇಶ್ಕರ್.

ಈ ಪ್ರಶಸ್ತಿ, ಪುರಸ್ಕಾರಗಳಿಗೆಲ್ಲ ಮೀರಿದ ಸಾಧಕಿ ಅವರು. ಅವರಿಗೆ ಸರಿಸಾಟಿ ಯಾರೂ ಇಲ್ಲ. ಮುಂದೆಯೂ ಇರುವುದಿಲ್ಲ. ಅವರ ಗಾಯನ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆ ಗಳು, ಅದರಲ್ಲೂ ‘ಏ ಮೇರೆ ವತನ್ ಕೆ ಲೋಗೋ’ ಹಾಡು ಭಾರತೀಯರ ಹೃದಯದಲ್ಲಿ ಚಿರಸ್ಥಾಯಿ ಯಾಗಿದೆ. ಇಂದಿಗೂ ಆ ಹಾಡು ಕೇಳಿದರೆ ಭಾರತೀಯರ ಕಣ್ಣಲ್ಲಿ ನೀರು ಹರಿದು, ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಷ್ಟು ಪ್ರೇರಣಾದಾಯಕವಾದ ಧ್ವನಿ ಮತ್ತು ಹಾಡುಗಾರಿಕೆ ಅವರದ್ದಾಗಿತ್ತು.

ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿಯೂ ಹಾಡಿದ್ದು, ಕರ್ನಾಟಕದ ನಂಟು ಹೊಂದಿದ್ದರು. ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಅವರು ಭಾನುವಾರ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದು ಅರಗಿಸಿಕೊಳ್ಳಲಾಗದ ಸತ್ಯ. ಆದರೆ ಎಲ್ಲಿವರೆಗೂ ಭೂಮಿಯ ಮೇಲೆ ಸಂಗೀತ, ಹಾಡುಗಾರಿಕೆ ಇರುತ್ತದೆಯೋ, ಅಲ್ಲಿವವರೆಗೂ ಲತಾ ಮಂಗೇಶ್ಕರ್ ಅವರು ಎಲ್ಲರ ಮನಗಳಲ್ಲಿ ನೆಲೆಸಿರುತ್ತಾರೆ. ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಅವರ ಗಾಯನ ಮೋಡಿ ಶಾಶ್ವತವಾಗಿರಲಿದೆ. ಸಂಗೀತ ಲೋಕದ ತಾರೆಯಾಗಿದ್ದ ಅವರು ಸದಾ ಕಾಲ ಮಿನುಗುತ್ತಿರಲಿ. ಹೋಗಿ ಬನ್ನಿ ಲತಾ ಜೀ…