ರಾಜ್ಯದಲ್ಲಿ ಹಿಜಾಬ-ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದೆ. ಆರಂಭದಲ್ಲಿ ಬರೀ ಪ್ರತಿಭಟನೆಗೆ ಮೀಸಲಾಗಿದ್ದ ಹೋರಾಟ ನಂತರ ಕಲ್ಲು ತೂರಾಟ, ಬಾವುಟಗಳ ಹಾರಾಟ, ಪರ-ವಿರೋಧದ ಘೋಷಣೆಯಂತಹ ವಿದ್ಯಮಾನಗಳಿಗೂ ಸಾಕ್ಷಿಯಾಗಿದೆ. ಒಂದೇ ಕಾಲೇಜಿಗೆ ಸೀಮಿತವಾಗಿದ್ದ ವಿವಾದ ಇದೀಗ ರಾಜ್ಯದ ಗಡಿ ದಾಟಿದೆ.
ಒಂದೆಡೆ ಮುಸ್ಲಿಂ ಕುಟುಂಬದ ವಿದ್ಯಾರ್ಥಿನಿಯರು ತಮ್ಮ ಕುಟುಂಬದ ಒತ್ತಡಕ್ಕೆ ಸಿಲುಕಿ ‘ಇಂತಹುದೇ ಬಟ್ಟೆ ತೊಟ್ಟುಕೊಳ್ಳಬೇಕು’ ಎಂಬ ನಿರ್ಬಂಧಕ್ಕೊಳ ಗಾಗಿದ್ದರೆ, ಇನ್ನೊಂದೆಡೆ ತಮ್ಮ ಧರ್ಮದ ಮುಖಂಡರ ಒತ್ತಡಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ವಸವನ್ನೇ ವಿವಾದವಾಗಿಸಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳು ಕೂಡ ತಮ್ಮ ಜವಾಬ್ದಾರಿ ಮರೆತು ಹಿಜಾಬ್-ಕೇಸರಿ ಶಾಲು ವಿವಾದವನ್ನು ಎಳೆದಾಡುತ್ತಿವೆ. ವಿದ್ಯಾರ್ಥಿಗಳ ಸ್ವಚ್ಛ ಮನಸ್ಸು ಗಳ ನಡುವೆ ವಿಷ ಬೀಜ ಬಿತ್ತಿ ಮೋಜು ನೋಡಲಾಗುತ್ತಿದೆ. ಭ್ರಾತೃತ್ವ, ಸಮಾನತೆ, ಜಾತ್ಯತೀತ, ಏಕತೆಯ ಭಾರತವನ್ನು ಹಾದಿ ತಪ್ಪಿಸಲಾಗುತ್ತಿದೆ.
ದೊಂಬಿ, ಗಲಾಟೆಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದರಿಂದ ಅಮಾಯಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ತಮ್ಮ ಭವಿಷ್ಯವನ್ನೇ ಕತ್ತಲು ಮಾಡಿಕೊಳ್ಳುವಂತಾಗಿದೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಸಮಾನತೆ, ವಿವಿಧತೆಯಲ್ಲಿ ಏಕತೆ, ವರ್ಗ ಸಮಾನತೆಯನ್ನು ಸಾಧಿಸಲು ಸಮವಸ ಜಾರಿಯಾಗಿದೆ. ಆದರೆ ಸಮವಸದ ಹೆಸರಿನಲ್ಲಿ ಶಿಕ್ಷಣಕ್ಕೆ ಕುತ್ತು ತರುವ ವಿದ್ಯಮಾನ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರ. ಶಿಕ್ಷಣದ ಕಡೆಗೆ ಮುಖ ಮಾಡುತ್ತಿರುವ ಎಲ್ಲ ಜಾತಿ, ಮತ, ಜನಾಂಗದ ಹೆಣ್ಣು ಮಕ್ಕಳನ್ನು ಘನತೆಯಿಂದ, ಅಕ್ಕರೆಯಿಂದ ಬರಮಾಡಿಕೊಳ್ಳಬೇಕಾದದ್ದು ಸಾರ್ವಜನಿಕರ ಕರ್ತವ್ಯ.
ವಿದ್ಯೆಯ ಮೂಲಕ ಜಾತಿ, ಧರ್ಮದ ಅಸ್ಮಿತೆಗಳಾಚೆಗೆ ಮನುಷ್ಯರನ್ನು ರೂಪಿಸಬೇಕಾದದ್ದು ಶಿಕ್ಷಣ ಇಲಾಖೆಯ ಮುಖ್ಯ ಜವಾಬ್ದಾರಿ. ಅದುಬಿಟ್ಟು ಧರ್ಮದ ಹೆಸರಿ ನಲ್ಲಿ ವಿದ್ಯಾರ್ಥಿಗಳನ್ನು ಕೆರಳಿಸಲು, ಎತ್ತಿಕಟ್ಟಲು ಅವಕಾಶ ನೀಡುವುದು ಅಕ್ಷ್ಯಮ್ಯ. ಚುನಾವಣೆಗಳು ಹತ್ತಿರ ಬಂದಾಗಲೆಲ್ಲ ಒಂದಲ್ಲ ಒಂದು ಧಾರ್ಮಿಕ ಅಸ್ಮಿತೆ ಯನ್ನು ವಿವಾದಗೊಳಿಸುವುದು ರಾಜಕಾರಣಿಗಳಿಗೆ ರೂಢಿಯಾಗಿದೆ. ಈ ವಾಸ್ತವವನ್ನು ಅರಿತು ಸಮಾಜವು ಶಿಕ್ಷಣಕ್ಕೆ ಒತ್ತು ನೀಡಬೇಕು. ನ್ಯಾಯಾಲಯದ ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಸಮಚಿತ್ತದಿಂದ ಇದ್ದು, ವಿದ್ಯಾಭ್ಯಾಸದತ್ತ ಗಮನಹರಿಬೇಕು. ಇಲ್ಲವಾದಲ್ಲಿ ಕಾಲೇಜು ಮುಗಿದು ಕೆಲಸಕ್ಕಾಗಿ ಅಲೆಯುವ ದಿನಗಳಲ್ಲಿ ಯಾವ ಜಾತಿ, ಧರ್ಮ, ಮುಖಂಡ ನಿಮ್ಮ ನೆರವಿಗೆ ಬರಲಾರ.