Saturday, 14th December 2024

ಮಾದಕ ವಸ್ತುವಿಗೆ ಕಡಿವಾಣ ಬೀಳಲಿ

ಅತ್ಯದಿಕವಾಗಿ ಮಾದಕ ವಸ್ತುಗಳ ಬಳಕೆಯಾಗುತ್ತಿರುವ ಜಿಲ್ಲೆಗಳು ಎಂದು ಕೇಂದ್ರ ಸರಕಾರವು ಒಟ್ಟು ದೇಶದ 272 ಜಿಲ್ಲೆಗಳನ್ನು ಗುರುತಿಸಿದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಆರು ಜಿಲ್ಲೆಗಳೂ ಇವೆ. ಕೋಲಾರ, ಮೈಸೂರು, ಕೊಡಗು, ಉಡುಪಿ ಮತ್ತು ರಾಮನಗರ ಜಿಲ್ಲೆಗಳಲ್ಲೂ ಅತ್ಯಧಿಕ ಮಾದಕ ವಸ್ತುಗಳ ಬಳಕೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಸಿಸಿಬಿ ಪೊಲೀಸರು ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ ವೆಂದಾದರೆ ಇದರ ಹಿಂದೆ ದೊಡ್ಡ ಕುಳಗಳ ಕೈವಾಡವಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತದೆ. ಮಾದಕ ವಸ್ತು ಮಾರಾಟವೆಂಬುದು ದೇಶದ ಯುವಕರ ಭವಿಷ್ಯದ ವಿಷಯ ಮಾತ್ರವಲ್ಲದೇ, ದೇಶದ ಭದ್ರತೆಗೆ ಅಪಾಯ ತರುವ ವಿಚಾರ. ಹೀಗಾಗಿ ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚುವತ್ತ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುತುವರ್ಜಿ ವಹಿಸಬೇಕಿದೆ. ಅಲ್ಲದೆ, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಕರಿಗೆ ತಿಳಿಸಲು ದೊಡ್ಡ ಮಟ್ಟದ ಅಭಿಯಾನದ ಅವಶ್ಯಕತೆ ಇದೆ.

ಮಾದಕವಸ್ತು ವ್ಯಸನಿಗಳನ್ನು ಗುರುತಿಸಿ ಸಮಾಲೋಚನೆ ನಡೆಸುವ ಮೂಲಕ ಅವರನ್ನು ವ್ಯಸನ ಮುಕ್ತರಾಗಿಸಲು ಪ್ರಯತ್ನಿಸಬೇಕಿದೆ. ಸರಕಾರ ಮತ್ತು ಪೊಲೀಸ್ ಇಲಾಖೆ ಮಾತ್ರವಲ್ಲದೆ ಇತರ ಸೇವಾ ಸಂಸ್ಥೆಗಳೂ ಈ ಕಾರ್ಯಕ್ಕೆ ನೆರವಾಗಬೇಕಿದೆ. ಪೊಲೀಸ್ ಇಲಾಖೆಯಲ್ಲಿದ್ದ ಅನೇಕರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಮೌನವಾಗಿದ್ದಾರೆ. (ಅದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚೆಗೆ ಮುಖ್ಯಮಂತ್ರಿಗಳ ಮನೆ ಕಾವಲಿಗಿದ್ದ ಸಿಬ್ಬಂದಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದು) ಅಂಥವರನ್ನು ವಶಕ್ಕೆ ಪಡೆದು ಪೆಡ್ಲರ್‌ಗಳ ಮಾಹಿತಿ ಜಾಲಾಡಬೇಕಿದೆ. ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಬಹುತೇಕರು ವಿದೇಶಿ ಪ್ರಜೆಗಳೇ ಭಾಗಿಯಾಗಿರುವುದರಿಂದ ಅವರ ಮೇಲೆ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಇದೀಗ ಬೆಂಗಳೂರು ಬಿಟ್ಟು ಜಿಲ್ಲಾ ಕೇಂದ್ರಗಳತ್ತಲೂ ಹರಡಿರುವ ಈ ಮಾಫಿಯಾ ಹಳ್ಳಿ ಹಳ್ಳಿಗಳಿಗೂ ತಲುಪುವ ಸಾಧ್ಯತೆ ಇದೆ.