ದೇಶದಲ್ಲಿ ನಿರುದ್ಯೋಗ ಮತ್ತು ಸಾಲದ ಸಮಸ್ಯೆಗಳಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ನಿರುದ್ಯೋಗ ಹಾಗೂ ಸಾಲದ ಸುಳಿಗೆ ಸಿಲುಕಿ ೨೦೧೮-೨೦ರ ಅವಧಿಯಲ್ಲಿ ೨೫ ಸಾವಿರಕ್ಕೂ ಹೆಚ್ಚು
ಆತ್ಮಹತ್ಯೆಗಳು ನಡೆದಿವೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ ದತ್ತಾಂಶದ ಪ್ರಕಾರ, ನಿರುದ್ಯೋಗದಿಂದ ಆತ್ಮಹತ್ಯೆ ಪ್ರಕರಣ ೨೦೨೦ರಲ್ಲಿ ಗರಿಷ್ಠವೆಂದರೆ ೩,೫೪೮ ತಲುಪಿತ್ತು. ೨೦೧೮- ೨೦೨೦ ರ ಅವಧಿಯಲ್ಲಿ ೯,೧೪೦ ಜನ ನಿರುದ್ಯೋಗದ ಸಂಬಂಧ ನೊಂದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ. ೨೦೨೦ ರಿಂದ ಇಲ್ಲಿಯವರೆಗೆ ಇನ್ನೂ ಎಷ್ಟು ಜನರು ನಿರುದ್ಯೋಗ, ಸಾಲದ ಸಮಸ್ಯೆಗೆ ಸಿಲುಕಿ ಎಷ್ಟು ಜನ ಪ್ರಾಣ ತೆತ್ತಿದ್ದಾರೆ ಎಂಬುದರ ಬಗ್ಗೆ ಅಂಕಿ ಅಂಶಗಳ ಮಾಹಿತಿ ಲಭ್ಯವಿಲ್ಲ.
ಆತ್ಮಹತ್ಯೆಗೆ ಪರಿಹಾರವಾಗಿ ಕೇಂದ್ರ ಸರಕಾರವು ಜನರ ಮಾನಸಿಕ ಆರೋಗ್ಯ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗಮನ ಹರಿಸುತ್ತಿದೆ ಎಂದು ಮಾಹಿತಿ ನೀಡಿದೆ. ಆದರೆ ಆ ನಿಟ್ಟಿನಲ್ಲಿ ಯಾವ ಯೋಜನೆ ಗಳೂ ಈವರೆಗೂ ಜಾರಿಯಾಗಿಲ್ಲ. ಜಾರಿಯಾದರೂ ಜನರ ಉಪಯೋಗಕ್ಕೆ ಬರುತ್ತಿಲ್ಲ. ಕಳೆದ ಎರಡು ವರ್ಷದಿಂದ ಕಾಡುತ್ತಿರುವ ಕೊವಿಡ್ ಸಾಂಕ್ರಾಮಿಕ ವೈರಸ್ನ ಹಾವಳಿ ಯಲ್ಲಿ ದೇಶಡೆಲ್ಲೆಡೆಯ ಜನರು ಮತ್ತಷ್ಟು ಆರ್ಥಿಕ ಸಮಸ್ಯೆಗೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊಸ ರೂಪದ ಕಾರ್ಯಯೋಜನೆಯೊಂದಿಗೆ ಜನರಲ್ಲಿ ಮಾನಸಿಕ ಸ್ಥೈರ್ಯ ತುಂಬುವ, ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕಿದೆ.
ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದಿಂದ ನೊಂದವರನ್ನು ಗುರುತಿಸಿ, ಮಾನಸಿಕ ಆರೋಗ್ಯ ಸುಧಾರಣೆಗಾಗಿ ಕುಶಲೋಪರಿ ಕೇಂದ್ರ, ಸಾಂತ್ವನ ಕೇಂದ್ರಗಳನ್ನು ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕಿದೆ. ಹಾಗೆಯೇ ಅವರ ಆರ್ಥಿಕ ಸ್ವಾವಲಂಬನೆಗೆ ಉದ್ಯೋಗ ಕೊಡುವ ಯೋಜನೆಗಳು ಜಾರಿಯಾಗಬೇಕಿದೆ. ಇದರ ಬಗ್ಗೆ ತಜ್ಞರ ಸಮಿತಿ ರಚಿಸಿ ಅವರ ಸಲಹೆಗಳ ಮಾರ್ಗೋಪಾಯದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ.