ಹಿಜಾಬ್ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭಟನೆ ಹಿಜಾಬ್
ಹಾಗೂ ಕೇಸರಿ ಕೇಸರಿ ಶಾಲಿಗಾಗಿ ನಡೆಯುತ್ತಿದೆ. ಹೈಕೋರ್ಟ್ ಆದೇಶ ಸ್ಪಷ್ಟವಾಗಿದ್ದರೂ ಪಾಲನೆಯಾಗುತ್ತಿಲ್ಲ.
ಇದೆಲ್ಲ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಶಾಲೆಯಲ್ಲಿ ಪಾಠ ಕೇಳಬೇಕಾದ ವಿದ್ಯಾರ್ಥಿಗಳು, ಅವರಿಗೆ ಬುದ್ಧಿ ಹೇಳಬೇಕಿರುವ ಪೋಷಕರು, ಮತೀಯವಾದಿಗಳ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆಯೇ ಎಂಬ ಚಿಂತೆ ಮೂಡಿದೆ. ಶಿಕ್ಷಣ ಪಡೆದು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿರುವ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ದಾರಿ ತಪ್ಪಿಸಲಾಗುತ್ತಿದೆ.
ಇದು ವಿದ್ಯಾರ್ಥಿಗಳ ಭವಿಷ್ಯ ಹಾಗೂ ದೇಶದ ಅಭಿವೃದ್ಧಿ ಎರಡಕ್ಕೂ ಮಾರಕವಾಗಿದೆ. ಜತೆಗೆ ಸಮಾಜದ ಶಾಂತಿ, ಸಮುದಾಯಗಳ ನಡುವಿನ ಸೌಹಾರ್ದತೆ, ಭ್ರಾತೃತ್ವ , ಒಗ್ಗಟ್ಟು ಹಾಗೂ ಶೈಕ್ಷಣಿಕ ಅಭಿವೃದ್ಧಿಯನ್ನು ಹಾಳು ಮಾಡುತ್ತಿರುವುದಂತೂ ಒಳ್ಳೆಯ ಸಂಗತಿಯಲ್ಲವೇ ಅಲ್ಲ. ಅದಕ್ಕೆ ತಾಜಾ ಉದಾಹರಣೆಯೆಂದರೆ, ಹೈ ಆದೇಶ ಉಲ್ಲಂಘಿಸಿ ಹಿಜಾಬ್ಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿ ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತಿಲಕವಿಟ್ಟುಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಯನ್ನು ವಾಪಸ್ ಮನೆಗೆ ಕಳುಹಿಸ ಲಾಗಿದೆ. ಹಿಜಾಬ್ ತೆಗೆಯಲು ತಿಳಿಸಿದ್ದಕ್ಕೆ ಉಪನ್ಯಾಸಕಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಪ್ರಾಥಮಿಕ ಶಾಲೆ ಶಿಕ್ಷಕಿಯೊಬ್ಬರನ್ನು ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡಿಸಲಾಗಿತ್ತು. ಇಂತಹ ಸಂಗತಿಗಳು ಸಮಾಜಕ್ಕೆ ಮತೀಯ ಸಂದೇಶ ವನ್ನು ಕಳುಹಿಸುತ್ತಿರುವುದಂತೂ ಅತ್ಯಂತ ಕಳವಳಕಾರಿಯಾಗಿದ್ದು, ಇಂತಹ ಸಂಗತಿಗಳು ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತವೆಯೋ ತಿಳಿದಿಲ್ಲ.
ಹೈಕೋರ್ಟ್ ಕೂಡ ಮಧ್ಯಂತರ ಆದೇಶ ನೀಡಿ, ಪೂರ್ಣಕಾಲಿಕ ಆದೇಶವನ್ನು ಮುಂದೂಡತ್ತಲೇ ಇದೆ. ಸಂಘರ್ಷದ ಕಾವು ಕಡಿಮೆಯಾಗ ಬಹುದು, ಎಲ್ಲವೂ ಸರಿಯಾಗಬಹುದು ಎಂಬ ಕಾರಣವೂ ಇರಬಹುದು. ಆದರೆ ಹಿಜಾಬ್ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಲ್ಲಿ ಮತೀಯ ಕೈವಾಡ ಇಲ್ಲ ಎಂದು ಹೇಗೆ ಎಂದುಕೊಳ್ಳುವುದು. ಮಕ್ಕಳ ಮನಸ್ಸನ್ನು ಧರ್ಮದ ತಳಹದಿಗೆ ತರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೆಚ್ಚಿನ ಹಾನಿಯೇ ಆಗುತ್ತದೆಯೇ ಹೊರತು, ಲಾಭವಾಗುವುದಿಲ್ಲ.
ಹೀಗಾಗಿ ಮತೀಯವಾದಿಗಳ ವಿಚಾರಗಳಿಗೆ ತಲೆಕೊಡದೇ ಶಾಂತವಾಗಿದ್ದು ಕೊಂಡು ಹೈಕೋರ್ಟ್ನ ಮುಂದಿನ ಆದೇಶದವರೆಗೆ, ಆದೇಶ ಪಾಲಿಸುವುದು ಒಳಿತು.