Friday, 22nd November 2024

ಸ್ಥಳೀಯ ಸಂಸ್ಥೆ ಚುನಾವಣೆ: ಎಂ.ಕೆ.ಸ್ಟಾಲಿನ್‌ ಪಕ್ಷಕ್ಕೆ ದೊಡ್ಡ ಗೆಲುವು

ಚೆನ್ನೈ: ಎಂ ಕೆ ಸ್ಟಾಲಿನ್‌ ನೇತೃತ್ವದ ಆಡಳಿತರೂಢ ಡಿಎಂಕೆ ಪಕ್ಷ ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ದೊಡ್ಡ ಗೆಲುವನ್ನು ತನ್ನದಾಗಿಸಿದೆ. ಪ್ರತಿಪಕ್ಷ ಎಐಎಡಿಎಂಕೆಯ ಭದ್ರಕೋಟೆಯಾಗಿದ್ದ ಕ್ಷೇತ್ರಗಳಲ್ಲೂ ವಿಜಯದ ನಗೆ ಬೀರಿದೆ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಗೆದ್ದಿದ್ದ ಪಶ್ಚಿಮ ತಮಿಳುನಾಡಿನಲ್ಲಿ ಶೇ.75 ರಷ್ಟು ಸ್ಥಾನಗಳನ್ನು ಡಿಎಂಕೆ ಗೆದ್ದಿದೆ.

ಎಐಎಡಿಎಂಕೆ ಸತತ ಎರಡು ಅವಧಿಯ ಆಡಳಿತದ ನಂತರ ರಾಜ್ಯದ ಬಹುತೇಕ ಕಡೆ ಸೋಲು ಅನುಭವಿಸಿದ್ದರೂ ಕೊಯಮತ್ತೂರು ಪ್ರದೇಶದಲ್ಲಿ ಎಲ್ಲಾ 10 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಆದರೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆ ಪ್ರದೇಶದ ಹೆಚ್ಚಿನ ಸ್ಥಾನಗಳನ್ನು ಡಿಎಂಕೆ ಪಡೆದುಕೊಂಡಿದೆ.

ಚೆನ್ನೈ ಸೇರಿದಂತೆ 21 ನಗರಗಳಲ್ಲಿ ಶನಿವಾರ ಚುನಾವಣೆ ನಡೆದಿತ್ತು. ಒಟ್ಟು 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯಿತಿಗಳಿಗೆ 12,000 ಕ್ಕೂ ಹೆಚ್ಚು ಸದಸ್ಯ ರನ್ನು ಆಯ್ಕೆ ಮಾಡಬೇಕಿತ್ತು.

ಐದು ವರ್ಷಗಳಿಂದ ಚುನಾವಣೆ ನಡೆಯದ ಕಾರಣ ಚುನಾಯಿತ ಪ್ರತಿನಿಧಿಗಳೇ ಇರಲಿಲ್ಲ. ಈ ಸ್ಥಳೀಯ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳ ಮೂಲಕ ಡಿಎಂಕೆ ಸತತ ನಾಲ್ಕನೇ ಬಾರಿ ಗೆಲುವಿನತ್ತ ಸಾಗಿದೆ.

ಚುನಾವಣೆಯ ಫಲಿತಾಂಶವು ಡಿಎಂಕೆ ಸರ್ಕಾರದ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.

ಪಾಲಿಕೆಗಳ ಒಟ್ಟು 1,374 ವಾರ್ಡ್‌ಗಳ ಪೈಕಿ ಇದುವರೆಗೆ ಡಿಎಂಕೆ 425 ಮತ್ತು ಎಐಎಡಿಎಂಕೆ 75 ಗೆದ್ದಿದೆ. ಪುರಸಭೆಗಳಲ್ಲಿ, 3,843 ವಾರ್ಡ್ ಸದಸ್ಯ ಸ್ಥಾನಗಳಲ್ಲಿ, ಇದುವರೆಗೆ ಡಿಎಂಕೆ 1,832 ಮತ್ತು ಎಐಎಡಿಎಂಕೆ 494 ಗೆದ್ದಿದೆ. ಪಟ್ಟಣ ಪಂಚಾಯಿತಿಗಳ 7,621 ಸ್ಥಾನಗಳ ಪೈಕಿ 4,261 ಸ್ಥಾನಗಳಲ್ಲಿ ಡಿಎಂಕೆ ಗೆಲುವು ಸಾಧಿಸಿದೆ.