ರಾವ್ – ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ವಿಶ್ವ ಸಮರದ ಸಂದರ್ಭದಲ್ಲಿ – ಪೀಡಿತ ಸೈನಿಕರನ್ನು ಗುಣಪಡಿಸಿದ್ದು ನಮ್ಮ ನಂಜನಗೂಡಿನ ಬಿವಿ ಪಂಡಿತರ ವೈದ್ಯಶಾಲೆಯಿಂದ ರವಾನೆಯಾದ ಆಯುರ್ವೇದ ಮಾತ್ರೆ ಎಂಬ ಐತಿಹಾಸಿಕ ಅಂಶ ಎಷ್ಟು ಮಂದಿಗೆ ಗೊತ್ತು?
ಕವಿಶ್ರೇಷ್ಠರಾದ ಕಾಳಿದಾಸ, ಕನಕದಾಸರಂತೆ, ನಾಟಕಕಾರ ಕವಿ ಶೇಕ್ಸ್ಪೀಯರನ ಕಸಬೂ ಕುರಿಸಾಕಾಣಿಕೆಯೇ. ನಮ್ಮ ಬಂಡೂರು ಕುರಿಯಂತೆ ಶೇಕ್ಸ್ಪೀಯರ್ ಹುಟ್ಟಿದ ಸ್ಟ್ರಾಟರ್ಡ್ ಹತ್ತಿರದ ಕಾಟ್ಸ್ವೊಲ್ಡ ಕುರಿಗೆ ತನ್ನದೇ ಆದ ವೈಶಿಷ್ಠ್ಯ. ಈ ಶತಮಾನದ ಆರಂಭದಲ್ಲಿ
ಬಾಗಿಲು ಮುಚ್ಚಿದ ಬೆಂಗಳೂರಿನ ಐತಿಹಾಸಿಕ ಬಿನ್ನಿ ಮಿಲ್ಸ್ ಕಾಟ್ಸ್ವೂಲ್ ಎಂಬ ಬಟ್ಟೆ ತಯಾರಿಸುತ್ತಿತ್ತು. ಅದು ಕಾಟ್ಸ್ವೊಲ್ಡ್ ಪದದ ಅಪಭ್ರಂಶವೋ ಅಥವಾ ಅದರಿಂದ ಸ್ಫೂರ್ತಿ ಪಡೆದದ್ದೇ ತಿಳಿಯೆ.
ಕಾಟ್ಸ್ವೊಲ್ಡ್ ಕುರಿಯ ತುಪ್ಪಟಕ್ಕೆ ಇಂಗ್ಲೆಂಡ್ನಲ್ಲಿ ದೊಡ್ಡ ಹೆಸರಿದೆ. ಶೇಕ್ಸ್ಪಿಯರ್ನ ಕೃತಿಗಳಲ್ಲಿ ಕುರಿಯ ಪ್ರತಿಮೆ ಪದೇ ಪದೇ ಬರುತ್ತದೆ. ನಾಟಕಾರನ ತಂದೆ ಕುರಿ ವ್ಯಾಪಾರದಲ್ಲೂ ನಿರತನಾಗಿದ್ದುದಕ್ಕೆ ದಾಖಲೆ ಇದೆ. ಈಗಲೂ ಸ್ಟಾಟರ್ಡ್ನಲ್ಲಿ ಕುರಿ ರಸ್ತೆ ಇದೆ. ಪಶು ಸಂಗೋ ಪನೆಗೆ ಹೆಸರುವಾಸಿಯಾದ ಯುಕೆ ಈ ಶತಮಾನದ ಆರಂಭದಲ್ಲಿ ಮುಗ್ಗರಿಸಿತು. ಇಡೀ ದೇಶವೇ ತತ್ತರಿಸಿಹೋಗುವಂತೆ ಕಾಲು-ಮತ್ತು-ಬಾಯಿ ರೋಗ ಕಾಣಿಸಿಕೊಂಡಿತು. 1967 ರಲ್ಲಿ ಈ ಪಿಡುಗು ಕಾಣಿಸಿಕೊಂಡಿತ್ತಾದರೂ, 2001ರಲ್ಲಿ ತಲೆದೋರಿ ಮಾಡಿದ ಅನಾಹುತ, ಘಾಸಿ ಕಲ್ಪನಾತೀತವಾದದ್ದು. ಈ ರೋಗ ತಗಲುವುದು ಸಾಮಾನ್ಯವಾಗಿ ಸಸ್ಯಾಹಾರಿ ಪಶುಗಳಿಗಾದರೂ, ಮನುಷ್ಯ ರಿಗೂ ತಗಲುವ ಸಾಧ್ಯತೆ ಇಲ್ಲದಿಲ್ಲ.
ಯುಕೆನಲ್ಲಿ 2000 ಕಾಲು-ಬಾಯಿ ರೋಗದ ಪ್ರಕರಣಗಳು ದಾಖಲಾದವು, ಆದರೆ ರೋಗ ವಿಸ್ತಾರವನ್ನು ತಡೆಗಟ್ಟಲು ಕೊಲ್ಲಲ್ಪಟ್ಟ ಕುರಿ, ದನ, ಹಂದಿಗಳ ಸಂಖ್ಯೆ 60 ಲಕ್ಷ ದಾಟಿತ್ತು. ಭಯಗ್ರಸ್ತ ಪಶುಸಂಗೋಪಕರು ಕಷ್ಟಪಟ್ಟು ಸಾಕಿದ್ದ ಪ್ರಾಣಿಗಳು ತಮ್ಮ ಕಣ್ಣೆದುರೇ ಕೊಲ್ಲಲ್ಪ ಡುವುದನ್ನು ಕಣ್ಣೀರಿಡುತ್ತಾ ನೋಡಿ ದರು. ಸತ್ತ ಪ್ರಾಣಿಗಳನ್ನು ರಾಶಿರಾಶಿಯಾಗಿ ಪೇರಿಸಿ ಸುಡುವ ಚಿತ್ರ ಟಿವಿ ಪರದೆ, ಪತ್ರಿಕೆ, ಜಾಲತಾಣ ಗಳನ್ನು ತುಂಬಿದವು. ಕಳೇಬರಗಳ ವಿಲೇವಾರಿಗೆ ಸೈನಿಕರನ್ನು ಬಳಸಿಕೊಳ್ಳಲಾಯಿತು.
ಈ ಭೀಕರ ಅನಾಹುತದಿಂದ ಆ ದೇಶದ ಸಾರ್ವಜನಿಕ ಕ್ಷೇತ್ರಕ್ಕೆ ಆದ ನಷ್ಟ 3 ಬಿಲಿಯನ್ ಪೌಂಡ್ (ಅಂದಿನ ದರದಲ್ಲಿ 66 ಸಹಸ್ರ ಕೋಟಿ ರೂಗಳು), ಖಾಸಗಿ ಕ್ಷೇತ್ರಕ್ಕೆ ಆದ ಲುಕ್ಸಾನು 5 ಬಿಲಿಯನ್ ಪೌಂಡ್ (ಒಂದು ಲಕ್ಷ ಹತ್ತು ಸಾವಿರ ಕೋಟಿ). ಕಾಲು-ಬಾಯಿ ರೋಗದ ಹೆಮ್ಮಾರಿ ಪ್ರವಾಸೋದ್ಯಮದ ಮೇಲೂ ದುಷ್ಪರಿಣಾಮ ಬೀರಿತು. ಯುಕೆಯಿಂದ ಹೊರಹೊರಟ ವಿಮಾನಗಳು ತಮ್ಮ ಗಮ್ಯಸ್ಥಾನದಲ್ಲಿ ಇಳಿಯುತ್ತಿದ್ದಂತೆ, ಸ್ಮಶಾನಕ್ಕೆ ಹೋಗಿ ಬಂದವರನ್ನು ದೂರದಲ್ಲಿ ಕೂರಿಸಿ ನೀರು ಹುಯ್ಯುವಂತೆ ದೂರದಲ್ಲಿ ನಿಲ್ಲಿಸಿ, ಪ್ರಯಾಣಿಕರು ಇಳಿದ ನಂತರ ಹೊಗೆ ಹಾಕಿ, ವಿಮಾನವನ್ನು ಶುದ್ಧೀಕರಿಸಲಾಗುತ್ತಿತ್ತು.
ಬ್ರಿಟಿಷ್ ಪ್ರತಿಷ್ಠೆಗೆ ಆ ಮಟ್ಟಿನ ಹೊಡೆತ ಕೋವಿಡ್-19 ಕ್ಕೆ ಮುಂಚೆ ಬಿದ್ದಿರಲಿಲ್ಲವೇನೋ. ಅವರು ದುರ್ಬೀನು ಬಳಸಿ ನೋಡಿದರೂ ಪಿಡುಗಿಗೆ ಕಾರಣವಾದ ವೈರಸ್ ಎಲ್ಲಿಂದ ಬಂತೆಂದು ತಿಳಿಯಲು ಸಫಲರಾಗಲಿಲ್ಲ. ಬಾಬ್ಬಿ ವಾ ಎಂಬ ಪಶುಸಂಗೋಪಕ ತಾನು ಸಾಕಿದ್ದ
ಹಂದಿಗಳಿಗೆ ರೆಸ್ಟುರಾಗಳಲ್ಲಿ ತ್ಯಾಜ್ಯವಾದ ಆಹಾರವನ್ನು ಉಣಿಸಿದ್ದರಿಂದ ರೋಗ ಹರಡಿರಬಹುದೆಂಬ ಸಂಶಯದಲ್ಲಿ ಅವನು ಪಶು ಸಂಗೋಪನೆಯಲ್ಲಿ ತೊಡಗಬಾರದೆಂಬ ನಿರ್ಬಂಧವನ್ನು 15 ವರ್ಷಗಳ ಕಾಲ ಅವನ ಮೇಲೆ ಹೇರಲಾಯಿತು. ರೆಸ್ಟುರಾಗಳಲ್ಲಿ ತ್ಯಜಿಸ ಲಾದ ಆಹಾರವನ್ನು ಸಾಕುಪ್ರಾಣಿಗಳಿಗೆ ಉಣಿಸಬಾರದೆಂಬ ನಿಯಮವನ್ನು ವಿಧಿಸಲಾಯಿತು.
2001 ರ ಫೆಬ್ರವರಿಯಲ್ಲಿ ಪತ್ತೆಯಾದ ಕಾಲು-ಬಾಯಿ ರೋಗ ನಿಯಂತ್ರಣಕ್ಕೆ ಬರುವ ವೇಳೆಗೆ ಸೆಪ್ಟೆಂಬರ್ ಆಗಿತ್ತು. ರೋಗವನ್ನು ತಡೆಯಲು ಯುಕೆ ಮಾಡದ ಪ್ರಯತ್ನವೇ ಇಲ್ಲ. ಗಡಿಯಾಚೆಯಿಂದ ರೋಗಾಣು ಬರಬಾರದೆಂದು ಕಟ್ಟೆಚ್ಚರ ವಹಿಸಿತು. ಆದರೆ, ಉದಾ ಹರಣೆಗೆ, ಟರ್ಕಿ ದೇಶದಲ್ಲಿ ಬಿರಿಯಾನಿ ರುಚಿಯಾಗಿದೆ ಎಂದು ಅದನ್ನು ಪಾರ್ಸೆಲ್ ಮಾಡಿಸಿಕೊಂಡು, ತನ್ನ ವೈಯಕ್ತಿಕ ಬ್ಯಾಗೇಜ್ನಲ್ಲಿ ತರುವ ಪ್ರಯಾಣಿಕನನ್ನು ತರದಂತೆ ಹೇಗೆ ತಡೆಯುವುದು? ಅರೆಬೆಂದ ಮಾಂಸದಲ್ಲಿ ಕೂಡ ಕಾಲು-ಬಾಯಿ ರೋಗದ ವೈರಸ್ ನಾಶ ವಾಗದೇ ದೀರ್ಘಕಾಲ ಉಳಿಯಬಲ್ಲದು. ನಾನು ಇದುವರೆವಿಗೂ ಇಲ್ಲಿ ಬರೆದದ್ದು ಈ ವಿಷಯದ ಬಗ್ಗೆ ಬರೆಯಲಿಕ್ಕಿರುವ ಅಗಾಧ ಮಾಹಿತಿಯ ಒಂದು ಸಣ್ಣ ಅಂಶ ಮಾತ್ರ.
ಸುಮಾರು ಎರಡು ವರ್ಷಗಳ ಹಿಂದೆ, ಮೈಸೂರು ಆಕಾಶವಾಣಿಯಲ್ಲಿ ಬಂಡೂರು ಕುರಿ ತಳಿಯ ಕುರಿತಾಗಿಯೇ ಬಾನುಲಿ ಕಾರ್ಯಕ್ರಮ ಮೂಡಿಬಂತು. ಕುರಿಕಾಯುವವರೆಂದು ಸಮಾಜದ ಮುಖ್ಯವಾಹಿನಿಯ ಅಸಡ್ಡೆಗೆ ಗುರಿಯಾದವರ ಜ್ಞಾನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ಆ ಕಾರ್ಯಕ್ರಮ ಒದಗಿಸಿಕೊಟ್ಟಿತು. ಕುರಿಯ ಆಯ್ಕೆ ಇರಲಿ, ರಾಸಿನ ಆಯ್ಕೆ ಇರಲಿ, ಆ ವಿಷಯಗಳ ಬಗ್ಗೆ ಎಷ್ಟೆ ತಿಳಿಯುವಂಥ, ತಿಳಿಯಲೇಬೇಕಾದಂಥ ಮಾಹಿತಿ ಇದೆ ಎಂಬುದನ್ನು ತಿಳಿದು ಚಕಿತನಾದೆ.
ಉದಾಹರಣೆಗೆ, ಗದ್ದೆ ಊಳಲು ಬೇಕಾದ ಎತ್ತನ್ನು ಕೊಳ್ಳಬೇಕಾದರೆ ಯಾವುದೆಲ್ಲ ಅಂಶಗಳನ್ನು ಗಮನಿಸಬೇಕು ಎಂಬುದನ್ನು ವರಾಹಿ ಮಿಹಿರ ತನ್ನ ಸಂಹಿತೆಯಲ್ಲಿ ತಿಳಿಸಿದ್ದಾನೆ ಎನ್ನುವದನ್ನು ಕೇಳಿ ರೋಚಕಗೊಂಡೆ. ಬಂಡೂರು ಕುರಿಯ ಹಿರಿಮೆಯನ್ನು ವಿಶ್ವವ್ಯಾಪಿಯಾಗಿ ಬೆಳಗಿಸಲು ಸ್ಥಳೀಯರೇ ಆದ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಯತ್ನ ಪಟ್ಟರೆ ಆಗುತ್ತಿತ್ತು. ಹೇಳಿಕೇಳಿ ಕುರುಬ ಜನಾಂಗ ದವರೇ. ಆದರೆ, ವರಾಹಿ ಮಿಹಿರನ ಹೆಸರು ಅವರಿಗೆ ಅಲರ್ಜಿಯಾಗಬಹುದು.
ಕಳೆದ ಸುಮಾರು 30 ವರ್ಷಗಳಲ್ಲಿ ಜ್ಞಾನ ಯುಗದ ಕುರಿತಾಗಿ ಸಾಕಷ್ಟು ಚರ್ಚೆಯಾಗಿದೆ. ಸಧ್ಯದಲ್ಲಿ ನಾವಿರುವುದು ಜ್ಞಾನ ಯುಗದಲ್ಲಿ. ಜ್ಞಾನವೆಂಬ ಬಂಗಾರದ ಮೂಟೆ ಹೊತ್ತ ಕತ್ತೆ ನಮ್ಮ ಭಾರತ ಎಂದು ಪ್ರಸಿದ್ಧ ಆರ್ಥಿಕ ತಜ್ಞ ಮತ್ತು ಸಂವಿಧಾನ ಪರಿಣತ ನಾನಿ ಪಾಲ್ಖಿ ವಾಲಾ ಹೇಳಿದ್ದಾರೆ. ಕತ್ತೆಗೆ ತಾನು ಹೊತ್ತಿರುವ ಚಿನ್ನದ ಬೆಲೆ ಗೊತ್ತಿಲ್ಲ. ಅಂತಹ ಒಂದು ಚಿನ್ನದ ಮೂಟೆ ಮೈಸೂರು ಆಯುರ್ವೇದದ್ದು. ಆಯುರ್ವೇದವೆಂದರೇ, ಊಹಿಸಲಾಗದಷ್ಟು ಬೃಹತ್ತಾದ eನ ಭಂಡಾರ. ಹಲವು ವರ್ಷಗಳ ಹಿಂದೆ ನನ್ನೊಬ್ಬ ಪರಿಚಯದ ಡಯಾ ಬಿಟಾಲಜಿ ಸ್ನೇಹಿತ ಹೇಳಿದ್ದು: ನನಗೆ ಆಯುರ್ವೇದ ತಿಳಿದಿದ್ದರೆ, ಅಗಾಧ ಸಂಪತ್ತು ಮಾಡುತ್ತಿದ್ದೆ.
ಆಯುರ್ವೇದದ ಉದ್ದೇಶ ಹಣವಲ್ಲ, ಆದರೆ ಆಯುರ್ವೇದ ಶಾಸ್ತ್ರವನ್ನು ಹೆಚ್ಚು ಪ್ರಚಲಿತಗೊಳಿಸಲು ಸಾಕಷ್ಟು ಸಂಶೋಧನೆ ಅಗತ್ಯವಿದೆ. ಅಂತಹ ಸಂಶೋಧನೆಗೆ ಹಣದ ಅವಶ್ಯಕತೆ ಇದೆ. ಮುಂದುವರಿಸಿ, ಅದೇ ಸ್ನೇಹಿತ ಹೇಳಿದ ಮತ್ತೊಂದು ಅಂಶ ಆಯುರ್ವೇದ ವೈದ್ಯರಲ್ಲಿ ಆತ್ಮ ವಿಶ್ವಾಸದ ಕೊರತೆ. ಅವರ ಈ ಮಾತಿನಲ್ಲಿ ಸತ್ಯಾಂಶವಿದೆ. ನಾನು ಕಂಡ ಆಯುರ್ವೇದ ವೈದ್ಯರಾರೂ ಸೂಟು ಧರಿಸಿದವರಲ್ಲ. ಮಹಿಳಾ ವೈದ್ಯರು ಆಧುನಿಕ ಉಡುಗೆ ತೊಟ್ಟವರಲ್ಲ. ಬಹಳಷ್ಟು ಮಂದಿಗೆ ಥಳುಕಿನ ಮಾತು ಬರುವುದಿಲ್ಲ. ಅವರಾರೂ ಇಂಗ್ಲಿಷ್ನಲ್ಲಿ ಬಡಾಯಿಕೊಚ್ಚುವರಲ್ಲ. (ಎಂಬಿಬಿಎಸ್ ಓದಿದವರೆಲ್ಲರೂ ಇಂಗ್ಲಿಷ್ ಪರಿಣಿತರಲ್ಲ) ನನ್ನ ಮತ್ತೊಬ್ಬ ವೈದ್ಯ-ಮಿತ್ರರು ನೋವಿನಿಂದ ಹೇಳಿಕೊಳ್ಳುವ ವಿಚಾರವೊಂದಿದೆ.
ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಗಳಿಸುವ ಮುನ್ನ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಅಲೋಪತಿ ವೈದ್ಯರ ಅಡಿ ಯಲ್ಲಿ ಕಾರ್ಯ ನಿರ್ವಹಿಸಬೇಕು. ಆ ಸಂದರ್ಭದಲ್ಲಿ ಆ ವೈದ್ಯರು ಅವರನ್ನು ಎಷ್ಟು ಕೀಳಾಗಿ ಕಾಣುತ್ತಾರೆಂದು ಅಲವತ್ತುಕೊಂಡರು. ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳುವುದಕ್ಕೆ ಆ ಒಂದು ತಿಂಗಳು ಸಾಕು. ನಮ್ಮ ದೇಶದ ಮೇಲೆ ಲಾಗಾಯ್ತಿನಿಂದಲೂ ನಡೆದು ಕೊಂಡು ಬಂದಿರುವ ಸಾಂಸ್ಕೃತಿಕ ದಾಳಿಗೆ ಇದು ಮತ್ತೊಂದು ಉದಾಹರಣೆ.
ಸತತವಾದ ಆ ದಾಳಿಯಿಂದ ಅಪಾರ. ಭಾರತೀಯ ವೈದ್ಯ ಶಾಸ್ತ್ರವನ್ನು ಸಮಾನಾಂತರ ವೈದ್ಯಕೀಯ ಪದ್ಧತಿ ಎಂದು ನಾವೇ
ಅಭಿಮಾನ ಶೂನ್ಯರಾಗಿ ಹೇಳುವಂಥ ದುರ್ದೆಶೆ ನಮ್ಮದು. ವಿಶ್ವ ಸಮರದ ಸಂದರ್ಭದಲ್ಲಿ – ಪೀಡಿತ ಸೈನಿಕರನ್ನು ಗುಣಪಡಿಸಿದ್ದು ನಮ್ಮ ನಂಜನಗೂಡಿನ ಬಿವಿ ಪಂಡಿತರ ವೈದ್ಯಶಾಲೆಯಿಂದ ರವಾನೆಯಾದ ಆಯುರ್ವೇದ ಮಾತ್ರೆ ಎಂಬ ಐತಿಹಾಸಿಕ ಅಂಶ ಎಷ್ಟು ಮಂದಿಗೆ ಗೊತ್ತು? ಈ ಅಂಶ ಜನಜನಿತವಾಗಿದ್ದರೆ ಕರೋನಾ ಹೆಮ್ಮಾರಿಗೆ ಸ್ಥಳೀಯ ಔಷಧೋಪಚಾರದಿಂದ ಯಶಸ್ವಿ ಚಿಕಿತ್ಸೆ ಸಾಧ್ಯ ಎಂಬುದನ್ನು
ಅಽಕಾರಸ್ಥರಿಗೆ ಮನವರಿಕೆ ಮಾಡಿಕೊಡಲು ಸ್ಥಳೀಯ ವೈದ್ಯರು ಪರದಾಡಬೇಕಾದ ದುಸ್ಥಿತಿ ಒದಗುತ್ತಿರಲಿಲ್ಲ.
ಮಹಾತ್ಮಾ ಗಾಂಧಿದ ರಾಮ ರಾಜ್ಯವೆಂಬ ಸರ್ಟಿಫಿಕೇಟ್ ಗಿಟ್ಟಿಸಿಕೊಂಡಿದ್ದ ಮೈಸೂರು ಸಂಸ್ಥಾನದ ಪ್ರಜೆಗಳ ಆರೋಗ್ಯವನ್ನು ಸುಸ್ಥಿತಿ ಯಲ್ಲಿಟ್ಟದ್ದು ಅರಮನೆಯಿಂದ ಮನೆಮನೆಗೆ ಸರಬರಾಜಾಗುತ್ತಿದ್ದ ಕುಪ್ಪಿ ಮಾತ್ರೆ ಎಂಬ ದಿವ್ಯಔಷಧವೆಂದು ಕೇಳ್ಪಟ್ಟಿದ್ದೇನೆ. ಕಲ್ಲು-ಕಲ್ಲು ಕತೆ ಹೇಳುವುದಿಲ್ಲಿ ಎಂಬ ಮಾತು ಇಡೀ ಪರಂಪರಾ-ಸಮೃದ್ಧಿತ ಭಾರತಕ್ಕೆ ಅನ್ವಯಿಸುತ್ತದೆ. ಅಂತಹ ಬೃಹತ್ ಪರಂಪರೆಯ ಒಂದು ಅತೀ ಸಣ್ಣ ಭಾಗವಾದ ಮೈಸೂರು ನಗರವನ್ನೇ ಉದಾಹರಣೆಯಾಗಿ ನೀಡುವುದಾದರೆ, ಈ ಊರಿನಲ್ಲಿ ಇಲ್ಲದಿದುದಿಲ್ಲ. ಈ ಪುಟ್ಟ ನಗರಿಯನ್ನೇ ಬ್ರಾಂಡ್ ಮಾಡುವುದಾದರೆ, ಒಂದು ಸಾವಿರ ವಿಷಯಗಳು ಸಿಗುತ್ತವೆ.
ಒಮ್ಮೆ ಯದುಕುಲ ವಂಶಸ್ಥರಾದ ಶ್ರೀಕಂಠ ದತ್ತ ಒಡೆಯರ್ ನನಗೆ ತೋರಿಸಿದ್ದ ಎರಡು ಶತಮಾನಕ್ಕೂ ಹಿಂದಿನ ಒಂದು ಹಸ್ತಪ್ರತಿಯನ್ನು ಉದ್ದರಿಸುತ್ತೇನೆ. ಅಂದಿನ ಕಾಲಕ್ಕೇ ಅರಮನೆಯ ಕಲಾವಿದರು ನೈಸರ್ಗಿಕ ಬಣ್ಣಗಳನ್ನು ಬಳಸಿ ಮೂರು ಆಯಾಮಗಳ ಕಲಾಕೃತಿಯನ್ನು ರಚಿಸಿದ್ದರು! ಅದನ್ನು ನೋಡಿಯೇ ನಾನವರಿಗೆ ಮೈಸೂರಿನಕೆ ಸೋದೆಬಿಸ್ ಅಥವಾ ಕ್ರಿಸ್ಟೀಸ್ನಂಥ ಅಂತಾರಾಷ್ಟ್ರೀಯ ಮಾರ್ಕೂಗಿನ ವೇದಿಕೆಯನ್ನು ಸ್ಥಾಪಿಸಬಾರದೆಂಬ ಸಲಹೆ ನೀಡಿದ್ದೆ.
ಆ ನಿಟ್ಟಿನಲ್ಲಿ ಹಾಲಿವುಡ್ನ ಪ್ರಸಿದ್ಧ ಕಂಪನಿಯೊಂದರ ಜತೆ ಸಂಪರ್ಕವನ್ನೂ ಸಾಧಿಸಿದ್ದೆ. ಅರಮನೆಯ ಮತ್ತೊಂದು ಅಪರೂಪದ ಕೊಡುಗೆ ಯಾದ, ಕಲಾಶಾಸ್ತ್ರದ ಉಧ್ಗ್ರಂಥವೆಂದೇ ಬಣ್ಣಿಸಲಾದ, ಶ್ರೀತತ್ವ ನಿಧಿ ವಿಶ್ವಾದ್ಯಂತ ಪಸರಿಸಬೇಕಾದ ಅಪರೂಪದ ಕೃತಿ. ಆತ್ಮ ನಿರ್ಭರ ತೆಯ ಮಂತ್ರದ ಉದ್ಘೋಷ ಮೊಳಗಲಾರಂಭಿಸಿರುವ ಈ ಸಂಧಿಕಾಲದಲ್ಲಿ ದೇಶದ ಉದ್ದಗಲಕ್ಕೂ ಲಭ್ಯವಿರುವ ಜ್ಞಾನ ಭಂಡಾರದ ಬೀಗ ತೆರೆದದ್ದೇ ಆದಲ್ಲಿ ಕರೋನಾ ಬಾರಿಸಿದ ಹೊಡೆತದಿಂದ ನಲುಗಿರುವ ಭಾರತದ ವ್ಯವಸ್ಥೆ ಚೇತರಿಸಿಕೊಳ್ಳುವುದಷ್ಟೇ ಅಲ್ಲ, ಜಗತ್ತಿನ ವಿವಿಧ ಸಮಾನ ಸಂತ್ರಸ್ತ ರಾಷ್ಟ್ರಗಳ ಪುನಶ್ಚೇತನಕ್ಕೆ ಮೇಲ್ಪಂಕ್ತಿ ಹಾಕಿಕೊಡಬಲ್ಲದು.