ಕಳಪೆ ಫಾರ್ಮ್ ಕಾರಣಕ್ಕೆ ರಹಾನೆ, ಪೂಜಾರಗೆ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ವಂಚಿತ
ಮುಂಬೈ: ಭಾರತ ತಂಡದ ಅನುಭವಿ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ’ಎ ಗ್ರೇಡ್ನಿಂದ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ತಂಡದಿಂದ ಹೊರಬಿದ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ’ಎ’ ಗ್ರೇಡ್ನಿಂದ ’ಸಿ’ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ.
ಈಗಾಗಲೆ ರಹಾನೆ ಮತ್ತು ಪೂಜಾರ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ವಂಚಿತ ರಾಗಿದ್ದಾರೆ. ಇದೀಗ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿಗೆ ಒಳಗಾಗಿದ್ದಾರೆ.
ಇನ್ನು ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ದೂರ ಉಳಿದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ’ಎ’ ಗ್ರೇಡ್ನಿಂದ ’ಸಿ’ ಗ್ರೇಡ್ಗೆ ಕುಸಿತ ಕಂಡಿದ್ದಾರೆ. ಅವರು ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬೌಲಿಂಗ್ ಮಾಡದಿರುವುದರಿಂದ ಅವರನ್ನು ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿದೆ. ಭಾರತ ತಂಡಕ್ಕೆ ಮತ್ತೆ ಮರಳ ಬೇಕಾದರೆ ಅವರು ಬೌಲಿಂಗ್ನಲ್ಲಿ ಫಿಟ್ನೆಸ್ ಸಾಬೀತುಪಡಿಸಬೇಕೆಂದು ತಿಳಿಸಿದೆ.
ತಂಡದಿಂದ ಹೊರಬಿದ್ದ ನೋವಿನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೂಡ ಬಿ ನಿಂದ ಸಿ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ. ಮಯಾಂಕ್ ಅಗರ್ವಾಲ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಕೂಡ ಬಿ ನಿಂದ ಸಿ ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ.
ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ+ ಗ್ರೇಡ್ ಹೊಂದಿರುವ ಆಟಗಾರರು 7 ಕೋಟಿ ರೂ ಪಡೆಯಲಿದ್ದಾರೆ. ಎ, ಬಿ ಮತ್ತು ಸಿ ಗ್ರೇಡ್ನಲ್ಲಿರುವವರು ಕ್ರಮವಾಗಿ 5, 3 ಮತ್ತು 1 ಕೋಟಿ ರೂ ಪಡೆಯಲಿದ್ದಾರೆ. ಕಳೆದ ಬಾರಿ 28 ಆಟಗಾರರು ಗುತ್ತಿಗೆ ಪಡೆದುಕೊಂಡಿದ್ದರು. ಈ ಬಾರಿ 27 ಆಟಗಾರರಿಗೆ ಮಾತ್ರ ಅವಕಾಶ ಸಿಕ್ಕಿದೆ.
ಈ ವರ್ಷ ಬಡ್ತಿ ಪಡೆದುಕೊಂಡಿರುವ ಏಕೈಕ ಆಟಗಾರನೆಂದರೆ ಮೊಹಮ್ಮದ್ ಸಿರಾಜ್ ಮಾತ್ರ. ಅವರು ಸಿ ಗ್ರೇಡ್ನಿಂದ ಬಿ ಗ್ರೇಡ್ಗೆ ಬಡ್ತಿ ಪಡೆದುಕೊಂಡಿದ್ದಾರೆ. ಕುಲ್ದೀಪ್ ಯಾದವ್ ಮತ್ತು ನವದೀಪ್ ಸೈನಿ ಗುತ್ತಿಗೆಯಿಂದ ಹೊರಬಿದ್ದರೆ, ಸೂರ್ಯಕುಮಾರ್ ಯಾದವ್ ಹೊಸ ದಾಗಿ ಗುತ್ತಿಗೆ ಪಡೆದುಕೊಂಡಿದ್ದಾರೆ.
A+ ಗ್ರೇಡ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ
A ಗ್ರೇಡ್: ರವಿಚಂದ್ರನ್ ಅಶ್ವಿನ್, ಕೆಎಲ್ ರಾಹುಲ್, ರಿಷಭ್ ಪಂತ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ
B ಗ್ರೇಡ್: ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ
C ಗ್ರೇಡ್: ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಶಿಖರ್ ಧವನ್, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್, ಹನುಮ ವಿಹಾರ, ಯುಜ್ವೇಂದ್ರ ಚಹಲ್,