Friday, 20th September 2024

ಪ.ಬಂಗಾಳದ 7 ಜಿಲ್ಲೆಗಳಲ್ಲಿ 8 ದಿನ ಇಂಟರ್ನೆಟ್ ಸೇವೆ ಸ್ಥಗಿತ

ಕೋಲ್ಕತ್ತಾ: ರಾಜ್ಯದ 7 ಜಿಲ್ಲೆಗಳಲ್ಲಿ 8 ದಿನಗಳ ವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪಶ್ಚಿಮ ಬಂಗಾಳ  ಸರ್ಕಾರ ಆದೇಶ ಹೊರಡಿಸಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ.

ಮಾ.7 ರಿಂದ 16 ರವರೆಗೆ ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆ ಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ.

ಸರ್ಕಾರದ ಆದೇಶದ ಪ್ರಕಾರ ಮಾಲ್ಡಾ, ಮುರ್ಷಿದಾಬಾದ್, ಉತ್ತರ ದಿನಾಜ್‌ ಪುರ್, ಕೂಚ್‌ಬೆಹಾರ್, ಜಲ್ಪೈಗುರಿ, ಬಿರ್ಭೂಮ್ ಮತ್ತು ಡಾರ್ಜಿಲಿಂಗ್ ಪ್ರದೇಶಗಳಲ್ಲಿ ಇಂದಿನಿಂದ ಮಾ.16ರವರೆಗೆ ಇಂಟರ್‌ನೆಟ್ ಸಂಪರ್ಕ ಕಡಿತ ಗೊಳ್ಳಲಿದೆ.

ಆದರೆ ಮಾ.10ರಂದು ವಿನಾಯಿತಿ ಇದ್ದು ಯುಪಿ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಗಳ ಎಣಿಕೆ ನಡೆಯುವಾಗ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ತಿಳಿಸಿದೆ.

ಧ್ವನಿ ಕರೆಗಳು ಮತ್ತು ಎಸ್‌ಎಂಎಸ್ ಹಾಗೂ ಪತ್ರಿಕೆಗಳ ಮೇಲೆ ಯಾವುದೇ ನಿರ್ಬಂಧ ಹೇರಲಾಗುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಸಲುವಾಗಿ ತಾತ್ಕಾಲಿಕವಾಗಿ ಯಾವುದೇ ಇಂಟರ್‌ನೆಟ್ ಕೆಲಸ ಮಾಡುವುದಿಲ್ಲ ಎಂದು ಸಂದೇಶ ರವಾನೆಯಾಗಿದೆ. ಹೀಗಾಗಿ, ಪಶ್ಚಿಮ ಬಂಗಾಳದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧಿಕೃತ ಆದೇಶದಲ್ಲಿ, ಮುಂದಿನ ಕೆಲವು ದಿನಗಳಲ್ಲಿ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.