ರಾವ್ ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಜಗತ್ತು ಕಂಡ ಅತ್ಯಂತ ದುರಂತಮಯ ಅಣು ಸ್ಥಾವರ ಅವಘಡ ಸಂಭವಿಸಿದಾಗ (1986) ನಾನು ಬೆಂಗಳೂರು ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿದ್ದೆ. ದುರಂತದ ಪರಿಮಾಣದ ದೃಷ್ಟಿಯಿಂದ ಆ ಸುದ್ದಿ ಮುಖಪುಟದಲ್ಲಿ ರಾರಾಜಿಸಬೇಕಿತ್ತು. ಆದರೆ ಅದು ಪ್ರಕಟವಾಗಿದ್ದು ಸಂಪಾ ದಕೀಯ ಪುಟದ ಕೊನೆಯ ಎರಡು ಕಾಲಮ್ಗಳ ಮಧ್ಯಭಾಗದಲ್ಲಿ.
ಅಭಿಪ್ರಾಯಕ್ಕಾಗಿ ಮೀಸಲಾದ ಆ ಪುಟದಲ್ಲಿ, ಏಳು ಮತ್ತು ಎಂಟನೇ ಕಾಲಮ್ಗಳಿಗೆ ಸೂಕ್ತ ಲೇಖನಗಳು ಇಲ್ಲದಿರುವ ಸಂದರ್ಭದಲ್ಲಿ ಕಡಿಮೆ ಪ್ರಾಮುಖ್ಯತೆಯ ಸುದ್ದಿಗಳನ್ನು ತುಂಬಲಾಗುತ್ತಿತ್ತು. ಈ ಪ್ರಮಾದಕ್ಕೆ ಕಾರಣವಾದ ಇಬ್ಬರು ಸಹೋದ್ಯೋಗಿಗಳೂ ಪ್ರತಿಭಾ ವಂತರೇ. ಆ ಸುದ್ದಿಗೆ ಅಗ್ರ ಪ್ರಾಶಸ್ತ್ಯ ಕೊಡದೆ ಒಳಗೆ ತಳ್ಳುವ ನಿರ್ಧಾರ ತೆಗೆದು ಕೊಂಡ ಇನ್ಚಾರ್ಜ್ ನಮ್ಮಲ್ಲಿದ್ದ ಮೂವರು ಮುಖ್ಯ ಉಪಸಂಪಾದಕರುಗಳಲ್ಲಿ ಅತ್ಯಂತ ಸಮರ್ಥರು, ಅನುಭವಿಗಳು. ಅವರ ನಿರ್ಧಾರವನ್ನು ಅನುಷ್ಠಾನಗೊಳಿಸಿದ ಉಪಸಂಪಾ ದಕಿ ಕೂಡ ಬುದ್ಧಿವಂತೆ. ಹಿರಿಯರ ನಿರ್ಧಾರವನ್ನು ಪ್ರಶ್ನಿಸಲಿಕ್ಕೆ ಹೋಗಿಲ್ಲ.
ಪ್ರಮಾದದಿಂದ ಪತ್ರಿಕೆಗೆ ಒಂದಷ್ಟು ಮುಜುಗರವಾಗಿದ್ದಿರಬೇಕು. ಇಂತಹ ತಪ್ಪುಗಳು ದಿನಪತ್ರಿಕೆಗಳಲ್ಲಿ ಆಗುತ್ತಿರುತ್ತದೆ. ಕಾರ್ಯ ಕ್ಷಮತೆಯ ಅಭಾವದಿಂದ ಆಗುವ ತಪ್ಪು ಗಳೆಂದು ಹೇಳುವಂತಿಲ್ಲ. ಪ್ರತಿಭಾನ್ವಿತರೇ ಮಾಡುವಂತಹ ತಪ್ಪುಗಳು. ಇಡೀ ಜೀವನ ಏಗಬೇಕಾದ ವಿಷಯಕ್ಕೆ ಸಂಬಂಧಿಸಿದ ವಿಷಯವಾದರೂ, ವಿವಾಹಕ್ಕೆ ಸಮ್ಮತಿಸುವ ವಧೂ-ವರರಿಗೆ ಆ ಒಂದು ಕ್ಷಣ ಮಂಕು ಕವಿದುಕೊಳ್ಳುತ್ತದಲ್ಲ, ಆ ರೀತಿ. ಬಹಳಷ್ಟು ಅವಘಡಗಳ ಹಿಂದೆ ಬುದ್ಧಿ ಕೈಕೊಟ್ಟ ಕಾರಣದಿಂದ ತೆಗೆದುಕೊಂಡ ನಿರ್ಧಾರಗಳಿರು ರುತ್ತವೆ. ಐದು ದಶಕಗಳ ಹಿಂದೆ ಘಟಿಸಿದ ಪಾಕ್ ವಿರುದ್ಧದ ಯುದ್ಧದಲ್ಲಿ, ವೈರಿಪಡೆಯ ಯುದ್ಧವಿಮಾನ ಭಾರತದಲ್ಲಿ ಮೊದಲು ಬಾಂಬ್ ಹಾಕಿದ್ದು ಅಂಬಾಲಾದ ಮಿಲಿಟರಿ ಆಸ್ಪತ್ರೆಯ ಮೇಲೆ.
ನಾಗರಿಕ ನೆಲೆಗಳ ಮೇಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡುವ ಹಾಗಿಲ್ಲ. ಯುದ್ಧನಿಯಮಗಳನ್ನು ಉಲ್ಲಂಘಿಸಿ ಆಸ್ಪತ್ರೆಯ ಮೇಲೆ ಬಾಂಬ್ ಹಾಕಿದ ಪೈಲಟ್ ಕೂಡ ಉದ್ದೇಶಪೂರ್ವಕವಾಗಿ ಹಾಗೆ ಮಾಡಿರದ ಸಾಧ್ಯತೆಯಿದೆ. ಯುದ್ಧ-ಸಂಬಂಧಿ ವಿಷಯಗಳ ಬಗ್ಗೆ ಸಾರ್ವಜನಿಕರವರೆಗೆ ಹರಿದುಬರದ ಎಷ್ಟೋ ಮುಖ್ಯ ವಿಷಯಗಳಿರುತ್ತವೆ. ಅಂತಹ ವರ್ತಮಾನಗಳಲ್ಲಿ ಇದೂ ಒಂದು. ಅಂತರಿಕ್ಷದ ಗಡಿಯನ್ನು ದಾಟಿ ವೈರಿದೇಶಕ್ಕೆ ನುಗ್ಗುವ ಸೈನಿಕನ ಮನಸ್ಸಿನಲ್ಲೂ ತಳಮಳವಿರುತ್ತದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಾಪಸ್ ಆಗುವ ಆತುರ ಅವನದ್ದು. ಈ ಮಾತು ಪೈಲಟ್ಗಳಿಗೆ ಹೆಚ್ಚು ಅನ್ವಯಿಸುತ್ತದೆ.
ವಾಯುಸೀಮೆಯನ್ನು ಉಲ್ಲಂಘಿಸಿದ ತನ್ನ ವಿಮಾನದ ಆಗಮನವನ್ನು ಸೆರೆ ಹಿಡಿದು radar ನೀಡುವ ಮುನ್ಸೂಚನೆಯನ್ನಾಧರಿಸಿ ವೈರಿ ತನ್ನ ವಿಮಾನವನ್ನು ಉಡಾಯಿಸುವ ಸಾಧ್ಯತೆಯ ಅರಿವು ಅವನಿಗಿರುತ್ತದೆ. ಆದರೆ, ಪ್ರಸಕ್ತ ಯುದ್ಧದಲ್ಲಿ ನಡೆಯುತ್ತಿರುವುದು ಅಂತಹ ತಪ್ಪುಗಳಲ್ಲ. ಇದು ಉದ್ದೇಶಪೂರ್ವಕ ಪಾತಕ. ಶಸ್ತ್ರಚಿಕೆತ್ಸೆಯಲ್ಲಿ ಬಳಸಲಾಗುವ ಶಸಗಳೂ, ರಣರಂಗದಲ್ಲಿ ಬಳಕೆಯಾಗುವ ಅನೂಹ್ಯ ಭೀಕರತೆಯ ಶಸ್ತ್ರಾಸ್ತ್ರಗಳೂ ತಲುಪಬೇಕಾದ ಸ್ಥಳವನ್ನು ನಿಖರವಾಗಿ ತಲುಪಬಲ್ಲ ವ್ಯವಸ್ಥೆಯನ್ನು ತಂತ್ರಜ್ಞಾನ ಸಾಧ್ಯವಾಗಿಸಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವುದು ಯುದ್ಧವಲ್ಲ, ರಷ್ಯಾದ ಭಯೋತ್ಪಾದನೆ. ಚೆರ್ನೋ ಬಿಲ್ ಅಣುಸ್ಥಾವರವನ್ನು ರಷ್ಯಾ ವಶಪಡಿಸಿ ಕೊಂಡಾಗಿದೆ.
ನಲವತ್ತು ದಶಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸಬಲ್ಲ ಸಾಮರ್ಥ್ಯವಿರುವ ಝಪೋರಿಜ್ಜಿಯಾ (Zaporizzhia) ಅಣುಸ್ಥಾವರದಲ್ಲಿನ ಒಂದು ಕಟ್ಟಡಕ್ಕೆ ಬಾಂಬ್ ದಾಳಿಯಿಂದುಟಾದ ಅಗ್ನಿ ಅನಾಹುತವನ್ನು ನಿಭಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯೂರೋಪ್ ಖಂಡದ ಅತಿ ದೊಡ್ಡ ಅಣುಸ್ಥಾವರವಿದು. ಯುದ್ಧನಿಯಮಗಳನ್ನೂ, ನಾಗರಿಕತೆಯನ್ನೂ ಗಾಳಿಗೆ ತೂರಿ ನಡೆಸಲಾಗುತ್ತಿರುವ ದುಷ್ಕೃತ್ಯ ಗಳಿವು.
ಮಚ್ಚು-ಲಾಂಗ್ ಹಿಡಿದು, ವಿರೋಧಿ ಗ್ಯಾಂಗನ್ನು ಅಟಕಾಯಿಸಿಕೊಂಡು ರಸ್ತೆಯ ಮುಗಿಬಿದ್ದು ಕೊಚ್ಚಿ ಹಾಕುವ ರೌಡಿಗಳಿಗೂ ಸದ್ಯ ಉಕ್ರೇನಿನ ಮೇಲೆ ಮುಗಿ ಬಿದ್ದಿರುವ ಪುಟಿನ್ ಎಂಬ ನರರಾಕ್ಷಸನಿಗೂ ಬಿಲ್ಕುಲ್ ವ್ಯತ್ಯಾಸವಿಲ್ಲ. ಅಂತಹ ದರಿದ್ರಗಳೂ ನಾಯಕರಾಗಿ ದೇಶವನ್ನೂ ಹಾಳುಗೆಡವಿ, ಸಮಾಜಕ್ಕೆ ಕಂಟಕರಾಗುವ ಪರಂಪರೆಯನ್ನು ಕಾಂಗ್ರೆಸ್ ಪಕ್ಷ ಹುಟ್ಟುಹಾಕಿದ್ದಲ್ಲ ಎಂಬುದೇ ಸಮಾಧಾನ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಕಳೆದ ಮಿಲೇನಿಯಮ್ಮಿನ ಕೊನೆಯ ದಶಕಗಳಲ್ಲಿ ನಡೆದ ಮಹಿಳಾ ಲೈಂಗಿಕ ಕ್ರಾಂತಿ ಯನ್ನು ಕುರಿತ Sexing the Millennium ಎಂಬ ಪ್ರಪ್ರಥಮ ವಿಶ್ಲೇಷಣಾತ್ಮಕ ಪುಸ್ತಕವನ್ನು ಲಿಂಡಾ ಗ್ರಾಂಟ್ ಹೊರತಂದರು. ಅತ್ಯುತ್ತಮ ಪುಸ್ತಕ.
ಅದನ್ನು ಓದಿ ಇಪ್ಪತ್ತು ವರ್ಷಗಳೇ ಆದವು. ಆದರೆ, ಲೇಖಕಿ ಸಮರ್ಥವಾಗಿ ಚಿತ್ರಿಸಿರುವ ದೈತ್ಯ ಅಮೆರಿಕದ ಶಿಶ್ನವು ಪುಟ್ಟ ವಿಯೆಟ್ನಾಂನ ಯೋನಿಯನ್ನು ಬೇಧಿಸುವ ರೂಪಕ ಮನಸ್ಸಿನ ಉಳಿದಿದೆ. ರಕ್ತವೀರ್ಯಗಳನ್ನು ಕೈಮೈಗಳಿಗೆ ಮೆತ್ತಿಕೊಂಡ ಅಂತಹ ಅನಾಗರಿಕ ಅಮೆರಿಕ ರಷ್ಯಾದ ಮೇಲೆ ನಿರ್ಬಂಧವನ್ನು ಹೇರುವ ಪ್ರಹಸನದಲ್ಲಿ ನಿರತವಾಗಿದೆ. ವೃದ್ಧ ಬೈಡೆನ್ ಬೇರೇನು ಮಾಡಿಯಾನು? ತೈಲ ಅಥವಾ ಅನಿಲದ ಆಮದಿಗೆ ರಷ್ಯಾ ದೇಶವನ್ನು ನೆಚ್ಚಿಕೊಂಡಿರುವ ಮುಖ್ಯ ಕಾರಣಕ್ಕೆ ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ಪುಟಿನ್ ಮೇಲೆ ಮೃದು ನಿಲುವು ತಳೆಯುವುದು ಅಕ್ಷಮ್ಯ.
ಮೂವತ್ತರ ದಶಕದಲ್ಲಿ ವಿಶ್ವವು ಹಿಟ್ಲರನ್ನು ಒಲಿಸಿಕೊಳ್ಳುವುದಕ್ಕೆ ಮುಂದಾಗದೆ ಅವನನ್ನು ಕತೆ ಮುಗಿಸಿದ್ದರೆ ಮಹಾಯುದ್ಧದಲ್ಲಿ ಏಳು ಕೋಟಿ ಜನ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಇಂದು ಪುಟಿನ್ ಜಗತ್ತಿಗೇ ಕಂಟಕನಾಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಮಾಸ್ಕೊನಲ್ಲಿ ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಮೈಕೇಲ್ ಮೆಕಾಲ್ ಅಂದಾಜಿಸುವಂತೆ ಈಗಾಗಲೇ 24 ವರ್ಷ ರಷ್ಯಾದ ಅಧಿಕಾರ ವನ್ನು ಅನುಭವಿಸಿರುವ ಪುಟಿನ್ ಇನ್ನೂ ಎರಡು ದಶಕಗಳು ಮುಂದುವರೆಯುತ್ತಾನಂತೆ.
ಅಂದರೆ, ಪ್ರಜಾ ಪ್ರಭುತ್ವದ ವಾಸನೆ ರಷ್ಯಾ ಬಳಿ ಸುಳಿಯುವುದು ಕಷ್ಟವೇ. ರಾಜಕೀಯ ವಿರೋಧಿಗಳ ದಮನ, ಮಾಧ್ಯಮ ಸ್ವಾತಂತ್ರ್ಯದ ಹತ್ತಿಕ್ಕುವಿಕೆ, ಮಾನವ ಹಕ್ಕುಗಳ ಉಲ್ಲಂಘನೆ ಮುಂತಾದ ಅನಾಚಾರಗಳನ್ನು ಪುಟಿನ್ ಅವ್ಯಾಹತವಾಗಿ ಮಾಡುತ್ತಾ ಬಂದಿದ್ದಾನೆ. ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ದೌರ್ಬಲ್ಯಗೊಳಿಸುವುದು (ನಮ್ಮ ಎಲ್ಲಾ ಕೇಳಿದ ಹಾಗೆ ಇದೆಯಲ್ಲ ಅನ್ನಿಸುತ್ತೆ, ಅಲ್ವೇ?!) ಹೆಚ್ಚು ಮಾತಾಡಿದವರನ್ನು ಎತ್ತಿಸಿಬಿಡುವುದು ಇವೆಲ್ಲವೂ ಸರ್ವೇ ಸಾಧಾರಣ. ಪುಟಿನ್ನನ್ನು ರಷ್ಯಾದ ಮೇಲೆ ಹೇರಿದ್ದು ಬೋರಿಸ್ ಎಲ್ಟ್ಸಿನ್.
ಅವನನ್ನು ಅನುಮೋದಿಸಿದ್ದು ಬೋರಿಸ್ ಬೊರೊಝೋಸ್ಕಿ ಎಂಬ ಮಾಧ್ಯಮ ದೊರೆ.
ದೇಶದ ಅತ್ಯಂತ ಜನಪ್ರಿಯ ಟಿವಿ ಚಾನೆಲ್ ಆದ ತನ್ನ ಒಡೆತನದ ORTಯನ್ನು, ಪುಟಿನ್ನನ ಹಿಂಸೆ ತಡೆಯಲಾರದೆ, ಅವನ ಚರಣ ಗಳಿಗೆ ಅರ್ಪಿಸಿಬಿಟ್ಟ. ಮತ್ತೊಂದು ಜನಪ್ರಿಯ ಚಾನೆಲ್ NTV ಮಾಲೀಕನನಾದ ವ್ಲಾಡಿಮಿರ್ ಗುಸಿನ್ಸ್ಕಿ ಬಿದ್ದೇನೋ ಕೆಟ್ಟೆನೋ ಎಂದು ದೇಶ ದಿಂದಲೇ ಪಲಾಯನಗೈದ. ಕ್ರೆಮ್ಲಿನ್ ವಿರುದ್ಧ ನಿಂತ ರಾಜಕಾರಣಿ ಗಳ, ಪಕ್ಷಗಳ ಆರ್ಥಿಕ ನೆರವಿಗೆ ನಿಂತ ದೇಶದ ಅತ್ಯಂತ ಧನಿಕ ಮಿಖೆಲ್ ಖೊಡೋರ್ಕೋವ್ಸ್ಕಿಯನ್ನು ಪುಟಿನ್ ಜೈಲಿಗೆ ಅಟ್ಟಿದ. ಪುಟಿನ್ ಬದಲು ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದ್ದ ನೆಮ್ಸ್ಟೊವ್ – ಆತ ಅಧ್ಯಕ್ಷನಾಗಿದ್ದರೆ ರಷ್ಯಾದ ಭವಿಷ್ಯವೇ ಉಜ್ವಲವಾಗಿರುತ್ತಿತ್ತು – ಹತನಾದ.
ಇಂತಹ ಕಡುಭ್ರಷ್ಟ, ಸ್ವೇಚ್ಛಾಚಾರಿ ರಾಜನ ನಿರಂಕುಶ ಪ್ರಭುತ್ವವನ್ನು ಖಂಡಿಸಿ ಅದೆಷ್ಟು ಲೇಖನಗಳು ನಮ್ಮ ಮಾಧ್ಯಮದಲ್ಲಿ ಬಂದಿವೆ. ಅವನನ್ನು ನರಹಂತಕ ಎಂದು ವರ್ಣಿಸಿದ ಅದೆಷ್ಟು ಹೆಡ್ಲೈನ್ಗಳನ್ನು ನಮ್ಮ ಎಡಪ್ರಾಬಲ್ಯದ ಮಾಧ್ಯಮದಲ್ಲಿ ನೀವು ಕಂಡಿದ್ದೀರಿ? ರಷ್ಯನ್ನರ ಮಾನವಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕೆ ಕಳೆದ ಎರಡು ದಶಕಗಳಲ್ಲಿ ಅದೆಷ್ಟು ಮಾನವ ಸರಪಳಿಗಳನ್ನು ನಮ್ಮಲ್ಲಿ ಹೆಣೆಯಲಾಯಿತು? ಉಕ್ರೇನಿನ ಘೋರಾತಿಘೋರ ಯುಧ್ಧವನ್ನೂ, ಜನರ ಸಂಕಟವನ್ನೂ ನಮ್ಮ ಮಾಧ್ಯಮಗಳು ಬಿತ್ತರಿಸಿದ್ದೂ ಬಿತ್ತರಿಸಿದ್ದೇ (ವರದಿ ಮಾಡು ವುದು ತಪ್ಪಲ್ಲ, ಅದಕ್ಕೆ ದೀಪಾವಳಿ ಸಡಗರದ ಮೆರಗನ್ನು ನೀಡುವುದು ಅನುಚಿತ.) ಕಾಶ್ಮೀರಿ ಪಂಡಿತರ ಸಾಮೂಹಿಕ ಹತ್ಯೆಗೆ ಈ ಮಟ್ಟಿನ ಟಿವಿ ಪ್ರಚಾರ ಸಿಗದಿರಲು ಮೂರು ದಶಕಗಳ ಹಿಂದೆ ಟಿವಿ ಪ್ರಾಬಲ್ಯ ಅಷ್ಟಿರಲಿಲ್ಲವೆಂದು ನಮಗೆ ನಾವೇ ಸಮಾಧಾನಗೊಳಿಸಿ ಕೊಳ್ಳುವು ದಿಕ್ಕಾಗುವುದಿಲ್ಲ.
ಮುದ್ರಣ ಮಾಧ್ಯಮಕ್ಕೇನು ಗರ ಬಡಿದಿತ್ತೇ? ಸದ್ಯದ ಬಿಡುಗಡೆಯಾಗಲಿರುವ ಕಾಶ್ಮೀರ್ -ಲ್ಸ ಚಿತ್ರಕ್ಕೆ ಪ್ರಚಾರ ನೀಡಲು ಏನು ಧಾಡಿ?
ಜಗತ್ತಿನಾದ್ಯಂತ ವಿವಿಧ ದೇಶಗಳ ಮೇಲೆ ದುರಾಕ್ರಮಣವನ್ನು ನಡೆಸುತ್ತಲೇ ಬಂದಿರುವ ರಾಕ್ಷಸೀಶಕ್ತಿಗಳನ್ನು ಮಾಧ್ಯಮಗಳು ಐರೋಪ್ಯ ಕ್ರಿಶ್ಚಿಯನ್ನರೆಂದು ಗುರುತಿಸಿದ್ದು ನಿಮಗೆ ಗೊತ್ತುಂಟೇ? ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿತನಾದ, ಜಾತ್ಯತೀತವಾಗಿ ಎಲ್ಲರ ವಿಕಸ ನಕ್ಕೂ ಶ್ರಮಿಸುತ್ತಿರುವ ನರೇಂದ್ರ ಮೋದಿ ಹಿಂದೂ ನಾಯಕನಂತೆ.
ತಾನು ಹದಿನಾರಾಣೆ ಕ್ರಿಶ್ಚಿಯನ್ ಎಂದು ಹೇಳಿಕೊಂಡಿದ್ದರೂ ಪುಟಿನ್ನಂತಹ ಅಯೋಗ್ಯ ಶಿಖಾಮಣಿಯನ್ನು ಯಾರೂ ಕ್ರಿಶ್ಚಿಯನ್ ನಾಯಕ ನೆಂದು ವರ್ಣಿಸಿಲ್ಲ. ನನ್ನದೊಂದು ಸಲಹೆ. ಕ್ರಿಶ್ಚಿಯನ್ ನಾಯಕಿಯೂ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯೂ ಆದ ಸೋನಿಯಾ ಗಾಂಧಿ ರಷ್ಯಾದ ಕರ್ಮಠ ಕ್ರಿಶ್ಚಿಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ನಿಗೆ, ನೇರವಾಗಿಯೋ, ವ್ಯಾಟಿಕನ್ ಮೂಲಕವೋ, ಕೂಡಲೇ ಯುದ್ಧ ನಿಲ್ಲಿಸೆಂದು ವಿನಂತಿಸಲಿ. ಯಾರಿಗೆ ಗೊತ್ತು, ಅನಿರೀಕ್ಷಿತ ಫಲಿತಾಂಶ ಬಂದು ಯುದ್ಧ ನಿಂತರೂ ನಿಂತೀತೇ!
ಹಿಂದೂ ಭಯೋತ್ಪಾದನೆ ಎಂಬ ಗುಮ್ಮನನ್ನು ಸೃಷ್ಟಿಸಿದ ಪಾಪದಿಂದ ಮುಕ್ತವಾಗುವ ಸಲುವಾಗಿ ಬೇಡ ಬಿಡಿ, ಕ್ರಿಶ್ಚಿಯನ್ ಭಯೋತ್ಪಾದನೆ ಯಿಂದ ನಲುಗಿ ಮತ್ತೊಂದು ಬೃಹತ್ ಸಮರದಿಂದ ಪ್ರಪಂಚವನ್ನು ಪಾರಾಗಿಸಬಹುದಾದ ಈ ಅಪೂರ್ವ ಅವಕಾಶದತ್ತ ಆಕೆಯ ದೃಷ್ಟಿ ಹರಿಸುವತ್ತ ಇದೊಂದು ಪ್ರಯತ್ನ. ದೊಡ್ಡಣ್ಣ ಅಮೆರಿಕ ರಷ್ಯಾದಿಂದ ದಿನಕ್ಕೆ ಐದು ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅಂದರೆ, ಉಕ್ರೇನಿಗರನ್ನು ಕೊಲ್ಲಲು ಪ್ರತಿನಿತ್ಯ ಅರ್ಧ ಬಿಲಿಯನ್ ಹಣವನ್ನು ರಷ್ಯಾಗೆ ಪಾವತಿಸುತ್ತಿದೆ.
ರಷ್ಯಾದ ತೈಲ ನಿಕ್ಷೇಪಗಳನ್ನು ಹೆಕ್ಕಲು ಪಾಶ್ಚಿಮಾತ್ಯರದ್ದೇ ಬಂಡವಾಳ, ತಂತ್ರಜ್ಞಾನ, ನಿರ್ವಹಣೆ. ಇನ್ನು ಬಡ ಯುಕ್ರೇನಿಗರ ಗೋಳನ್ನು ಕೇಳಲು ಯಾರಿದ್ದಾರೆ? ತಮ್ಮ ತಮ್ಮ ಬುಡವನ್ನು ಭದ್ರಮಾಡಿಕೊಳ್ಳಲೇ ಎಲ್ಲ ದೇಶಗಳು ಹಾತೊರೆಯುವಾಗ, ಬಡ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಕೋಪ ದಾರುಣಿಗೆ ಮೂಲ. ತೈಲ ವ್ಯಾಪಾರಮ್ ದ್ರೋಹ ಚಿಂತನಮ್ ಎಂಬುದು ಜಾಗತಿಕ ಸತ್ಯ. ಈ ವಿಶ್ವವ್ಯಾಪಿ ದ್ರೋಹಜಾಲದಲ್ಲಿ, ಇನ್ನೂ ಕೊಂಚ ಧರ್ಮಕರ್ಮ ಅಂತಿದ್ದರೆ ಅದು ಸನಾತನ ಧರ್ಮದ ಭಾರತದಲ್ಲಿ. ಅದಕ್ಕೆಂದೇ ಉಕ್ರೇನ್ ಅಧ್ಯಕ್ಷ ಭಾರತದ ಮಧ್ಯಸ್ಥಿಕೆ ಬಯಸಿದ್ದಾರೆ. ಆ ಮಧ್ಯಸ್ಥಿಕೆ ಫಲಪ್ರದವಾದಲ್ಲಿ, It will be advantage Modi and one more set back to Congress. ಅದನ್ನು ತಪ್ಪಿಸಲಿಕ್ಕಾದರೂ, ಸೋನಿಯಾ ಮಧ್ಯಪ್ರವೇಶಿಸಲಿ.
ಯುದ್ಧವನ್ನು ತಪ್ಪಿಸದಿದ್ದರೆ ಅದು ದೊಡ್ಡ ತಪ್ಪಾದೀತು – ಚೆರ್ನೋಬಿಲ್ ಸುದ್ದಿಯನ್ನು ಒಳಪುಟಕ್ಕೆ ತಳ್ಳಿದ ತಪ್ಪಿಗಿಂತಲೂ ಭೀಕರ ತಪ್ಪು.