ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@gmail.com
ಆಫ್ ಬೀಟ್ ಟ್ರೆಕ್ ಅಥವಾ ಟ್ರಾವೆಲ್ ಎಂಬುವುದು ಈಗ ಭಾರಿ ಫೇಮಸ್ಸು. ಆದರೂ ಕೆಲವೊಮ್ಮೆ ನಮ್ಮ ನಿಗಾದಿಂದ ಕೆಲವೊಂದು ಆಫ್ ಆಗಿಬಿಡುತ್ತವೆ. ಕಾರಣ ಸ್ಥಳೀಯವಾಗಿ ಮಾಹಿತಿ ಲಭ್ಯ ಇಲ್ಲದಿರೋದು ಅಥವಾ ನಮಗೆ ಕೈಗೆಟುಕದಿರೋದು. ಜಾಗತಿಕ ಪ್ರಸಿದ್ಧಿಗೆ
ಬರಬಹುದಾದ, ಆದರೆ ರಾಜ್ಯ ಮಟ್ಟದಲ್ಲೂ ಲಿಸ್ಟ್ಗೆ ಸೇರದ ನತದೃಷ್ಟ ಪ್ರದೇಶಗಳೂ ಇವೆ ಎಂದಾದರೆ ಕಾರಣ ಇಂಥಾ ದಿವ್ಯ ನಿರ್ಲಕ್ಷ್ಯ ಮಾತ್ರವೇ.
ದೂರದ ಚಂದ್ರನಿಂದಲೂ ಕಂಡು ಬರುವ ಐತಿಹಾಸಿಕ ಇಮಾರತು ಎಂದರೆ ಚೈನಾ ದೇಶದ ಮಹಾಗೋಡೆ ಎಂದು ಪ್ರಖ್ಯಾತಿ ಪಡೆದಿರುವಂತೆ. ಹಾಗೇ ತದ್ರೂಪಿಯಂತಿರುವ ಆದರೆ ಅದರಂತೆ ಪ್ರಸಿದ್ಧಿಗೆ ಬಾರದಿರುವ ಜೈನ ಕ್ಷೇತ್ರವಾಗಿಯೂ ಇರುವ ಸ್ಥಳವೊಂದು ನಮ್ಮ ಪಕ್ಕದ ಇದೆ. ಇಲ್ಲೇ ಪಕ್ಕದ ಮಹಾರಾಷ್ಟ್ರದಲ್ಲಿದೆ. ಚೈನಾ ಗೋಡೆಯಂತೆಯೇ ಪರ್ವತದ ಮಧ್ಯದಲ್ಲಿ ಅಗಾಧವಾಗಿ ಮೆಟ್ಟಿಲು ಮೆಟ್ಟಿಲಾಗಿ ಹರಡಿಕೊಂಡಿರುವ ಈ ಪ್ರದೇಶ ಆಗೀಗ ಕಣ್ಣಿಗೆ ಬಿದ್ದಿದ್ದೇ ಆದರೆ ಅದು ಚಾರಣಿಗರಿಂದಾಗಿಯೇ. ಹೆಸರಿನಿಂದಾಗಿಯೂ ಮುದ
ಕೊಡುವ ‘ಮಾಂಗಿ -ತುಂಗಿ’ ನಮ್ಮ ಮಟ್ಟಿಗೆ ಭಾರತದ ಚೈನಾಗೇಟ್ ಎಂದರೆ ತಪ್ಪಿಲ್ಲ.
ಜೈನ ಸಮುದಾಯ ಉಚ್ಛ್ರಾಯ ಕಾಲದಲ್ಲಿ ಸಮೂಹ ದೈವಿ ಸ್ಥಳವಾಗಿ ಚಾಲ್ತಿಗೆ ಬಂದ ಮಾಂಗಿ ಮತ್ತು ತುಂಗಿ ಹೆಸರಿನ ಎರಡೂ ಗಿರಿ ಶಿಖರಗಳು ಒಂದೇ ಪರ್ವತದ ಎರಡು ವಿಭಿನ್ನ ಧ್ರುವಗಳು. ಮೊದಲನೆಯದಾಗಿ ಸಿಕ್ಕುವ ‘ಮಾಂಗಿ’ ಪರ್ವತ ಪ್ರದೇಶದ ತುದಿ ೪೩೪೩ ಅಡಿ ಎತ್ತರದ ಶಿಖರವಾಗಿದ್ದರೆ, ಪರ್ವತಾಗ್ರಹದ ಇನ್ನೊಂದು ತುದಿಗಿರುವ ‘ತುಂಗಿ’ ೪೩೬೬ ಅಡಿ ಎತ್ತರದಲ್ಲಿದ್ದು ಸದ್ಯದಲ್ಲಿ ಪ್ರವಾಸಿಗರಿಗಿಂತ ಚಾರಣಿಗರಿಗೆ ಆಕರ್ಷಣೀಯ ಸ್ಥಳ.
ಪ್ರತಿವರ್ಷ ಕಾರ್ತಿಕ ದೀಪಾರಾಧನೆಯಂದು ದೀಪೋತ್ಸವ ಜರುಗಿಸುವ ಈ ಸ್ಥಳಕ್ಕೆ ತಲುಪಲು ಏರಬೇಕಾದ ತಯಾರಿಯನ್ನು ಬೇಸ್ ಕ್ಯಾಂಪಿನ ಮಾಡಿಕೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ನಾಸಿಕ್ನಿಂದ ೧೨೫ ಕಿ.ಮೀ.ದೂರದ ಮಾಂಗಿ-ತುಂಗಿ ಪರ್ವತಾಗ್ರಗಳು ಕೇವಲ ಎತ್ತರದಿಂದಷ್ಟೆ ಅಲ್ಲ ತಮ್ಮ ಸಹಜ ಸೃಷ್ಟಿ ಸೌಂದರ್ಯದಿಂದಲೂ ಮನಸೆಳೆಯುತ್ತವೆ. ನಾಸಿಕ್ನಿಂದ ಸಾತ್ನಾ ತಾಲೂಕಾ ಕೇಂದ್ರ ತಲುಪಿ ಅಲ್ಲಿಂದ ಬೇಸ್ಕ್ಯಾಂಪ್ ಎಂದೆನ್ನಿಸಿಕೊಳ್ಳುವ ಭಿಲ್ವಾಡಿ ಗ್ರಾಮವನ್ನು ಸೇರಿಕೊಂಡರೆ ಅಲ್ಲಿಂದ ಮುಂದೆ ಸರಿ ಸುಮಾರು ೪೫೦೦ ಮೆಟ್ಟಿಲುಗಳ ಪರ್ವತದ ಬೆನ್ನಿನ ಮೇಲೆ ಕೊರೆದಿರುವ ಮಹಾ ಗೋಡೆಯಂತೆ ನಿರ್ಮಿಸಿಲಾಗಿರುವ ಶಿಲಾ ಬಂಡೆಯನ್ನು ಏರಲು ಸಜ್ಜಾಗಬೇಕಾಗುತ್ತದೆ.
ಕಪ್ಪು ಶಿಲಾ ಪರ್ವತದ ಬೆನ್ನ ಮೇಲೆ ೧೫೦೦ ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಮಾನವ ಸಹಜ ಅದ್ಭುತಗಳಲ್ಲಿ ಒಂದಾದ ಮಾಂಗಿ – ತುಂಗಿ ಇವತ್ತು ಚೈನಾ ಗೋಡೆಯ ಮಿನಿಯೇಚರ್ ನಂತೆ ಕಂಡುಬರುತ್ತದೆ. ೧೬೫೦ ವರ್ಷಗಳಷ್ಟು ಹಳೆಯ ಕಾಲಾವಧಿಯಲ್ಲಿ ಮಹಾವೀರ, ಆದಿನಾಥ, ಶಾಂತಿನಾಥ ಮತ್ತು ಪಾರ್ಶ್ವನಾಥ ತಿರ್ಥಂಕರರ ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸಲಾಗಿದ್ದು ಜೈನರಿಗೆ ಸಂಬಂಽಸಿದ ಹಲವು ಶಿಲಾಲೇಖಗಳು ಲಭ್ಯವಿವೆ.
ಪರ್ವತದ ಮೊದಲಿನ ತುದಿಗೆಗೆ ಲಭ್ಯವಾಗುವ, ಐದು ಚಿಕ್ಕ ದೇವಸ್ಥಾನಗಳನ್ನು ಹೊಂದಿರುವ ಮಾಂಗಿ ತುದಿಯಲ್ಲಿ ಅಗಾಧವಾದ ನಿಸರ್ಗ ಚೆಲುವಿನ ಹಿನ್ನೋಟ ಹಾಗೂ ಚೈನಾ ಗೋಡೆಯಂತೆ ಕಾಣುವ ಹತ್ತಿ ಬಂದಿರುವ ನಾಲ್ಕೂ ಸಾವಿರ ಚಿಲ್ಲರೆ ಮೆಟ್ಟಿಲ ದಾರಿ, ನೋಡುಗರಿಗೆ ತುಂಬಾ ಅಪರೂಪದ ದೃಶ್ಯಾವಳಿಗಳನ್ನು ನೀಡುತ್ತದೆ. ಇಲ್ಲಿ ಹಲವು ಪುರಾತನ ಜೈನ ಮುನಿಗಳ ಪಾದುಕೆಗಳನ್ನು ಸ್ಥಾಪಿಸಲಾಗಿದ್ದು, ಕೃಷ್ಣ ಕುಂಡ ಎನ್ನುವ ತಿಳಿನೀರ ಸರೋವರ ಅಷ್ಟು ಎತ್ತರದಲ್ಲಿದ್ದೂ ಯಾವಾಗಲೂ ನೀರಿನ ಒರತೆಯನ್ನು ಸೂಸುತ್ತಿರುತ್ತದೆ. ಕೃಷ್ಣ ಮತ್ತು ಬಲರಾಮರು ಇಲ್ಲಿಂದಲೇ ಮುಕ್ತಿಯನ್ನು ಹೊಂದಿದರು ಎನ್ನುವ ಪ್ರತೀಕವಾಗಿ ಈ ಕುಂಡವೂ, ಬಲರಾಮ ಹೆಸರಿನ ಒಂದು ತಪಸ್ಸಿನ ಗುಹೆಯೂ ಇಲ್ಲಿದೆ.
ಇಲ್ಲಿಂದ ಇನ್ನೊಂದು ಪಾರ್ಶ್ವದಲ್ಲಿಂದ ಕೊರೆಯಲಾಗಿರುವ ಮೆಟ್ಟಿಲುಗಳ ಮುಖಾಂತರ ಇಳಿದಲ್ಲಿ ಲಭ್ಯವಾಗುವುದೇ ತುಂಗಿ. ೮ ನೇ ತಿರ್ಥಂಕರ ಚಂದ್ರ ಪ್ರಭುವಿನ ಹೆಸರಿನ ಗುಹೆಯನ್ನುಹೊಂದಿರುವ ತುಂಗಿ ಕಡಿದಾದ ತುದಿಯಲ್ಲಿ ಅಪರೂಪದ ಶಿಲಾ ಶಿಖರವನ್ನು ಹೊಂದಿದ್ದು ಅದು ಮತ್ತೆ ೧೦೦ ಅಡಿಗೂ ಮಿಗಿಲಾಗಿದೆ. ಅದರ ಪಾದದವರೆಗೂ ಚೈನಾ ಗೋಡೆಯಂತಹ ಮೆಟ್ಟಿಲ ಸಾಲು ಸಾಗಿ ಹೋದರೆ ಅದರ ಸುತ್ತಲೂ ಪ್ರದಕ್ಷಿಣೆ ಬರಲೂ ಅನುಕೂಲವಾಗುವಂತೆ ಪರ್ವತವನ್ನು ಕೊರೆದು ಸ್ಥಳಾವಕಾಶ ಕಲ್ಪಿಸಲಾಗಿದೆ.
ಹನುಮ, ರಾಮ ಮತ್ತು ನೀಲ ಹೆಸರಿನ ಪ್ರತಿಮೆಗಳನ್ನು ಇದರ ಮೇಲೆ ಕಾಣಬಹುದು. ಶುದ್ಧ ಮತ್ತು ಬುದ್ಧ ಹೆಸರಿನ ಎರಡು ಗುಹೆಗಳು ದಾರಿ ಮಧ್ಯದಲ್ಲಿದ್ದು ಇದನ್ನು ಹಾಯ್ದು ಹೋಗುವಂತೆ ವೃತ್ತಾಕಾರದ ಮಾಲೆಯ ಆಕಾರದಲ್ಲಿ ಮಾಂಗಿ ಮತ್ತು ತುಂಗಿಯನ್ನು ಸಂಪರ್ಕಿಸುವ ಮೆಟ್ಟಿಲುಗಳನ್ನು ಕೊರೆಯಲಾಗಿದೆ.
ದಾರಿಯುದ್ದಕ್ಕೂ ಯಕ್ಷ ಮತ್ತು ಯಕ್ಷಿಣಿಯರ ಮೂರ್ತಿಗಳನ್ನು ಕೊರೆಯಲಾಗಿದ್ದು, ಸಾಕಷ್ಟು ಅಗಲವಾಗಿರುವ ಮೆಟ್ಟಿಲ ಎರಡೂ ಕಡೆಯಲ್ಲೂ ತಡೆಗೋಡೆಗಳಿದ್ದು ಆ ಎತ್ತರದಿಂದ ಬೀಳುವ ಅಥವಾ ಅಪಾಯಕ್ಕೀಡಾಗುವ ಸಂಭಾವ್ಯವನ್ನು ಆಗಲೆ ಊಹಿಸಿ ನಿರ್ಮಿಸಿದ ನಾಲ್ಕೂವರೆ ಸಾವಿರ ಅಡಿ ಎತ್ತರದ ಮೆಟ್ಟಿಲ ಗೋಡೆ ಪರ್ವತದ ಒಂದೊಂದು ಮಗ್ಗುಲಿಂದ ನೋಡಿದಾಗಲೂ ಚೈನಾ ಗೋಡೆಯಂತೆ ಕಾಣಿಸುತ್ತದೆ.
ಸುಮಾರು ನಾಲ್ಕೂ ನೂರಕ್ಕೂ ಹೆಚ್ಚು ಕಾಲ ಈ ಪ್ರದೇಶವನ್ನು ಆಳಿದ ಮುಲ್ಹೇರ ರಾಜ ವಂಶಸ್ಥರಲ್ಲಿ ವಿರಾಮದೇವ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ. ಅವನ ಕಾಲಾವಧಿಯಲ್ಲಿ ಪಾವಿತ್ರ್ಯತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಪರ್ವತದ ಮೇಲಿರುವ ಅಸಂಖ್ಯಾತ ದೇವತಾ ವಿಗ್ರಹಗಳನ್ನು ಸ್ಥಾಪಿಸಿದನಲ್ಲದೆ, ಸ್ವತಃ ಚಕ್ರೇಶ್ವರಿಯ ಆರಾಧಕನೂ ಆಗಿದ್ದ. ಅದಕ್ಕಾಗಿ ಇಲ್ಲಿಯೂ ಚಕ್ರೇಶ್ವರಿಯ ಪ್ರತಿಷ್ಠಾಪಿಸಿದ್ದನಲ್ಲದೇ ಯಾವುದೇ ಯುದ್ಧಕ್ಕೆ ಹೊರಡುವ ಮುನ್ನ ಅಲ್ಲಿಂದಲೇ ತನ್ನ ಪಯಣವನ್ನೂ ಆರಂಭಿಸುತ್ತಿದ್ದನೆನ್ನಲಾಗಿದೆ.
ಮಾಂಗಿ ತುಂಗಿಯನ್ನು ಸಂದರ್ಶಿಸಲು ಮತ್ತು ಪ್ರಕೃತಿಯನ್ನು ಆನಂದಿಸಲು ಸಾಮಾನ್ಯವಾಗಿ ನವಂಬರ್ ತಿಂಗಳಿನಿಂದ ಆರಂಭವಾಗಿ ಜನವರಿ ಕೊನೆಯವರೆಗೆ ಸೂಕ್ತ ಕಾಲಾವಧಿ. ಕಾರಣ ಆಗಷ್ಟೆ ಮಳೆ ಬಿದ್ದು ಚಿಗುರೊಡೆದ ಹಸಿರು ಕಣ್ಣಿಗೆ, ಮನಸ್ಸಿಗೆ ಮುದವನ್ನುಂಟು ಮಾಡಬಲ್ಲದು.
ಮಹಾರಾಷ್ಟ್ರದ ಯಾವುದೇ ಭಾಗದಿಂದಲೂ ನಾಸಿಕ ಅಥವಾ ಸಾತ್ನಾ ಪಟ್ಟಣಕ್ಕೆ ಸಾಕಷ್ಟು ವಾಹನ ಸೌಕರ್ಯಗಳಿದ್ದು ತಲುಪುವುದು ಸುಲಭ. ಇಲ್ಲವಾದರೆ ತೆಹ್ರಾಬಾದ್ನಿಂದಲೂ ೩೫ ಕಿ.ಮಿ. ಕ್ರಮಿಸಿದರೆ ಭಿಲ್ವಾಡಿ ಬೇಸ್ಕ್ಯಾಂಪ್ ಎಂದೆನ್ನಿಸಿಕೊಳ್ಳುವ ಹಳ್ಳಿಯನ್ನು ತಲುಪಬಹುದಾಗಿದ್ದು ಅಲ್ಲಿ ಜೈನ್ ಸಮುದಾಯದವರು ನಿರ್ಮಿಸಿದ ಕೆಲವು ವ್ಯವಸ್ಥೆಗಳು ಚಾರಣವನ್ನು ಹಿತವಾಗಿಸುತ್ತದೆ.
ಭಿಲ್ವಾಡಿ ಗ್ರಾಮದ ಆಸುಪಾಸಿನಲ್ಲಿ ಜೈನ ಸಮುದಾಯದ ವಿಶ್ರಾಂತಿ ಧಾಮಗಳಿದ್ದು, ಹಿಂದಿನ ದಿನವೇ ಅಲ್ಲಿ ವಸತಿ ಹೂಡಿಕೊಂಡರೆ ಮರುದಿನ ಬೆಳಿಗ್ಗೆ ಎದ್ದು ಹೊರಡಲು ಅನುಕೂಲ. ಕಾರಣ ಯಾತ್ರಿಗಳು ಮರುದಿನ ಬೆಳಿಗ್ಗೆ ಪರ್ವತದ ಪಾದವನ್ನು ಸೇರಲು ಅನುಕೂಲ ಮಾಡಿಕೊಳ್ಳಲೇ ಬೇಕು ಬಿಸಿಲ ಬೇಗೆ ತಡೆಯಲು.
ಇದರಿಂದಾಗಿ ಮಾಂಗಿ ತುಂಗಿ ಮತ್ತು ಹತ್ತಿರದ ಕಂಚನಪುರ ಕೋಟೆಯನ್ನು ಸಂದರ್ಶಿಸಲು ಅನುಕೂಲವಾಗುವಂತೆ ಸಾತ್ನಾದಿಂದ ವಾಹನ ಸೌಕರ್ಯ ಮಾಡಿಕೊಂಡರೆ ಅನುಕೂಲ. ಭಿಲ್ವಾಡಿಯಿಂದ ಒಂದೂವರೆ ಕಿ.ಮಿ. ಏರು ದಾರಿ ಪರ್ವತ ಪ್ರದೇಶದ ಪಾದಕ್ಕೆ ತಂದು ನಿಲ್ಲಿಸುತ್ತದೆ. ತೀರ ಬೆಳಗಿನ ಜಾವಕ್ಕೆ ಏರಲು ಆರಂಭಿಸುವುದು ಎಲ್ಲರೂ ಅನುಸರಿಸುವ ಪದ್ಧತಿ. ಕಾರಣ ಬಿಸಿಲೇರುತ್ತಿದ್ದಂತೆ ಎತ್ತರದ ಪ್ರದೇಶದಲ್ಲಿ ಒಣ ಹವೆಯ ಸಂಚಾರ ಮತ್ತು ಕಾಯ್ದು ನಿಲ್ಲುವ ಕಪ್ಪು ಕಲ್ಲಿನ ಏರು ದಾರಿ ಚಾರಣವನ್ನು ಅಸಹನೀಯವಾಗುತ್ತದೆ. ಅದಕ್ಕಾಗಿ
ಬೆಳಗ್ಗೆ ಐದು ಗಂಟೆಯ ಹೊತ್ತಿಗಾಗಲೇ ಪರ್ವತದ ಪಾದವನ್ನು ಸೇರಿಕೊಳ್ಳುವ ಚಾರಣಿಗರು ಸೂರ್ಯ ನೆತ್ತಿಗೇರುವ ಹೊತ್ತಿಗಾಗಲೇ ಮಾಂಗಿ-ತುಂಗಿಯನ್ನು ಮುಗಿಸಿ ಕೆಳಕ್ಕಿಳಿಯುವ ಸನ್ನಾಹದಲ್ಲಿರುತ್ತಾರೆ. ಹೆಚ್ಚಿನ ತಂಡಗಳ ಯಾತ್ರಿಗಳ ಆಯ್ಕೆ ಇದೇ ಆಗಿದ್ದು, ಸ್ಥಳೀಯರೂ ಗೈಡುಗಳು ಅದನ್ನೆ ಸೂಚಿಸುತ್ತಾರೆ.
ಮಾಂಗಿ-ತುಂಗಿಯ ಪರ್ವತ ಶಿಖರಗಳ ಮಧ್ಯದಂದು ಪುರಾತನ ಮಾರ್ಬಲ್ ಕೃಷ್ಣನ ದೇವಾಲಯವಿದ್ದು, ಅದರ ಹಿನ್ನೆಲೆಯಲ್ಲಿ ಅದ್ಬುತ ಲ್ಯಾಂಡ್ಸ್ಕೇಪ್ನಂತೆಯೆ ಕಾಣಿಸುತ್ತದೆ. ಅಲ್ಲಿಂದ ಹಿಂದಿರುಗಿ ಒಂದು ಸುತ್ತು ತುಂಗಿಯನ್ನು ಪ್ರದಕ್ಷಿಣೆ ಮಾಡಿ ಕೆಳಕ್ಕಿಳಿಯುವ ಸನ್ನಾಹದಲ್ಲಿzಗಲೇ ಅರ್ಧ ನೆತ್ತಿ ಸುಡತೊಡಗಿರುತ್ತದೆ. ಪರ್ವತ ಪಾದದಿಂದ ತುಂಗಿಯನ್ನು ವೃತ್ತಾಕಾರವಾಗಿ ಸುತ್ತಿ ಕೆಳಕ್ಕಿಳಿಯುವ ದೂರ ಸುಮಾರು ಹದಿನೈದು ಕಿ.ಮಿ.ನಷ್ಟಾಗುತ್ತದೆ. ಚೈನಾಗೇಟ್ನಂತೆ ಸಾಲು ಸಾಲಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆಯಾದರೂ
ಒಂದೊಂದು ಮೆಟ್ಟಿಲೇ ನಾಲ್ಕೈದು ಹೆಜ್ಜೆಗಳಾಗುತ್ತವೆ..ಆರು ಅಡಿಗೊಂದರಂತೆಯೂ ಮೆಟ್ಟಿಲುಗಳಿದ್ದು ನಾಲ್ಕೂವರೆ ಸಾವಿರ ಮೆಟ್ಟಿಲು ಕ್ರಮಿಸುವುದು ಲೆಕ್ಕಾಚಾರಕ್ಕಾದರೂ ದೂರ ಮಾತ್ರ ಲೆಕ್ಕಕ್ಕೆ ಸಿಗುವುದಿಲ್ಲ. ಕಾರಣ ಸಾವಿರ ಲೆಕ್ಕ ನಾಲ್ಕು ಪಟ್ಟಿಗೂ ಅಧಿಕವಾದ ಅಂತರದಲ್ಲಿರುವ ನಿರ್ಮಾಣ ಆಗಿಸುವುದರಿಂದ ಕಿ.ಮೀ. ಲೆಕ್ಕದಲ್ಲಿ ಗಣಿಸುವುದೇ ಸೂಕ್ತ ಇದನ್ನು.
ಒಮ್ಮೆ ನೋಡಿಯೇ ಅನುಭವಿಸಬೇಕಾದ ಚೀನಾ ಗೋಡೆಯಂತೆ ಅದೇ ಎತ್ತರ, ಆಳ ಅಗಲ ವಿನ್ಯಾಸದಲ್ಲಿ ಅನುಭವಕ್ಕೆ ಮುದ ನೀಡುವ ಮಾಂಗಿ-ತುಂಗಿ ಜೋಡಿ ಪರ್ವತ ಶಿಖರಗಳನ್ನು ಏರಿ ಚಾರಣ ಮಾಡಲು ಬರುವವರ ಸಂಖ್ಯೆ ಈಗೀಗ ಗಣನೀಯವಾಗಿ ಏರುತ್ತಿದ್ದರೂ ಈಗಲೂ ಇದು ಜೈನ ಮುನಿಗಳ ಆರಾಧ್ಯ ಸ್ಥಳವಾಗಿ, ಜೈನರ ತಿರ್ಥ ಕ್ಷೇತ್ರವಾಗಿಯೇ ಗುರುತಿಸಲ್ಪಡುತ್ತಿದೆ. ಆ ಒಂದು ಕಾರಣದಿಂದಲೇ ಬೇಸ್ಕ್ಯಾಂಪಿನಲ್ಲೂ ಸಾಕಷ್ಟು ಸೌಲಭ್ಯಗಳು ಲಭ್ಯವಾಗುತ್ತಿವೆ. ಆದರೆ ಇತರ ಸಹಜ ಆಫ್ ಬೀಟ್ ಟ್ರೆಕ್ ಅಥವಾ ಪ್ರಯಾಣಕ್ಕೆ ಹೋಲಿಸಿದರೆ ಇದು ತೀರ ಸಹಜ ಪ್ರವಾಸ ಲೆಕ್ಕದಲ್ಲಿಲ್ಲ. ಒಂದು ಕನಿಷ್ಠ ಫಿಟ್ನೆಸ್ ದೇಹಕ್ಕೆ ಬೇಕೆ ಬೇಕು. ಮತ್ತೆ ಅಲೆಮಾರಿತನ ಎಂದರೆ ಸುಮ್ಮನೇನಾ..?