ಟ್ರಸ್ಟಿಯಿಂದಲೇ ಕದ್ರಿ ದೇಗುಲದ ಹುಂಡಿಗೆ ಕನ್ನ: ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕೃತ್ಯ
ಜಿತೇಂದ್ರ ಕುಂದೇಶ್ವರ ಮಂಗಳೂರು
ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿದ್ದಾರೆ. ‘ದೇವಸ್ಥಾನಗಳ ಹುಂಡಿಗೆ ಹಣ ಹಾಕಬೇಡಿ ಅದು ಹಜ್ ಯಾತ್ರೆಗೆ ಬಳಕೆಗುತ್ತದೆ’ ಎಂದು ಪ್ರಚಾರ ಮಾಡಿ ಗೆದ್ದಿರುವವವರೇ ಶಿಫಾರಸು ಮಾಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮಹಿಳಾ ಟ್ರಸ್ಟಿ ಈ ಕೆಲಸ ಮಾಡಿದ್ದಾರೆ.
ಇಂಥವರ ರಾಜೀನಾಮೆ ಪಡೆದು ಹೊರ ಹಾಕುವ ಬದಲು ರಕ್ಷಿಸುವ ಕಾರ್ಯವನ್ನು ಆಡಳಿತ ಸಮಿತಿಯೇ ಮಾಡುತ್ತಿದೆ. ಸಮಿತಿ ಧೋರಣೆಗೆ ಸಂಘ ಪರಿವಾರದ ಬೆಂಬಲದಿಂದ ಆಯ್ಕೆಯಾದ ಟ್ರಸ್ಟಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಈ ಕುರಿತು ತನಿಖೆ ನಡೆಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗೆ ದೂರು ನೀಡಿದ್ದಾರೆ. ಆದರೆ, ಅವರ ಬಾಯಿಯನ್ನು ಹೈಕಮಾಂಡ್ ಮುಚ್ಚಿಸಿದೆ. -.
೨೪ರಂದು ದೇವಸ್ಥಾನದ ಕಾಣಿಕೆ ಡಬ್ಬಿ ಹಣದ ಲೆಕ್ಕಾಚಾರ ನಡೆದಿತ್ತು. ಇದಾದ ಎರಡು ದಿನಗಳ ಬಳಿಕ ಟ್ರಸ್ಟಿಯೊಬ್ಬರಿಗೆ ಅನಾಮಧೇಯ ಮಹಿಳೆಯ ಕರೆ ಬಂದಿದ್ದು, ಅದರಲ್ಲಿ ೫೦೦ ರು. ನೋಟುಗಳನ್ನು ಮಹಿಳಾ ಟ್ರಸ್ಟಿ, ಬ್ಲೌಸ್ ಒಳಗೆ ತುರುಕಿಸುತ್ತಿರುವು ದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದರು. ಬೇಕಾದರೆ ಸಿ.ಸಿ. ಕ್ಯಾಮೆರಾ ಪರಿಶೀಲಿಸಿ ಎಂದು ಸಲಹೆ ನೀಡಿದ್ದರು. ಬಳಿಕ ಟ್ರಸ್ಟಿಗಳು ಸೇರಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಶಂಕಿತ ಆರೋಪಿ ಮಹಿಳಾ ಟ್ರಸ್ಟಿ ನೋಟಿನ ಬಂಡಲ್ಗಳಲ್ಲಿ ಒಂದನ್ನು ಬ್ಯಾಗ್ಗೆ ಹಾಕುತ್ತಿರುವ ದೃಶ್ಯ ಕಂಡು ಬಂದಿತ್ತು.
ಈ ಕುರಿತು ತಕ್ಷಣ ವ್ಯವಸ್ಥಾಪನ ಆಡಳಿತ ಸಮಿತಿ ತುರ್ತು ಸಭೆ ಕರೆಯಲಾಯಿತು. ಸಭೆಯಲ್ಲಿ ವಾದ- ವಿವಾದ ನಡೆದು ರಾಜೀನಾಮೆ ನೀಡುವುದಾಗಿ ಮಹಿಳಾ ಟ್ರಸ್ಟಿ ಒಪ್ಪಿದ್ದರು. ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆ ಆಕ್ರೋಶಗೊಂಡ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಬಳಿಕ ಮುಜರಾಯಿ ಇಲಾಖೆಪಿಎಸ್ ಎಂದು ಹೇಳಿಕೊಂಡದವರು ಕದ್ರಿ ಕ್ಷೇತ್ರದ ಆಡಳಿತಾಧಿಕಾರಿಗೆ ಕರೆ ಮಾಡಿ ತನಿಖೆ ನಡೆಸುವಂತೆ ಮೌಖಿಕವಾಗಿ ಹೇಳಿರುವುದು ದೇವಸ್ಥಾನದ ಅಂಗಣದೊಳಗೆ ಸುದ್ದಿಯಾಗಿತ್ತು. ಬಳಿಕ ಟ್ರಸ್ಟಿ ಬೆಂಬಲಕ್ಕೆ ಸಮಿತಿ ಅಧ್ಯಕ್ಷರು ಮತ್ತು ಶಿ-ರಸು ಮಾಡಿದ ಪಕ್ಷದ ಅಧ್ಯಕ್ಷರು ಬೆಂಬಲವಾಗಿ ನಿಂತ ಕಾರಣ ವಿಚಾರಣೆ ನಿಂತ ನೀರಾಗಿತ್ತು.
***
ಈ ಕುರಿತು ಮಾಹಿತಿ ಬಂದಿಲ್ಲ. ಟ್ರಸ್ಟಿಗಳು ತಪ್ಪು ಮಾಡಿದ್ದು ಹೌದಾದರೆ ರಕ್ಷಿಸುವ ಪ್ರಮೇಯವೇ ಇಲ್ಲ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ
– ವಿ. ಸುನಿಲ್ ಕುಮಾರ್
ದಕ್ಷಿಣ ಕನ್ನಡ ಜಿ ಉಸ್ತುವಾರಿ ಸಚಿವ
ಕಾಣಿಕೆ ಹುಂಡಿಯಲ್ಲಿ ಹಣ ಎಗರಿಸಲಾಗಿದೆ ಎಂಬ ಕುರಿತು ಟ್ರಸ್ಟಿಯೊಬ್ಬರು ದೂರು ನೀಡಿದ್ದು ಹೌದು. ಟ್ರಸ್ಟಿಗಳನ್ನು ಧಾರ್ಮಿಕ ಪರಿಷತ್ ನೇಮಕ ಮಾಡುವುದರಿಂದ ನಮಗೆ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಹೀಗಾಗಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಕಳುಹಿಸಿದ್ದೇವೆ.
– ಜಗದೀಶ್ ಕಾರ್ಯನಿರ್ವಹಣಾಧಿಕಾರಿ