Sunday, 15th December 2024

ಜೈ ಹೇಳುವ ಹುಡುಗಿಯರು

ಶ್ರೀರಂಜನಿ ಅಡಿಗ

ಮದುವೆಯೆಂಬುದು ಹೆಣ್ಣಿನ ಬಾಳಿನಲ್ಲಿ ಎಂತೆಂಥ ಬದಲಾವಣೆಗಳನ್ನು ತರುತ್ತದೆ! ಚೆಲ್ಲುಚೆಗಿ, ಮೊಂಡಾಟ ಮಾಡುತ್ತಿದ್ದವಳ
ಕುತ್ತಿಗೆಗೆ ತಾಳಿ ಬಿದ್ದ ಮರುದಿನದಿಂದಲೇ ಬದಲಾಗುವುದೆಂದರೆ ಆಶ್ಚರ್ಯವಲ್ಲವೇ? ನಿನ್ನೆಯವರೆಗೂ ಹಠ ಹಿಡಿಯುತ್ತಿದ್ದ ಹುಡುಗಿ ಇವಳೇನಾ? ಎಂಬಷ್ಟು ಜವಾಬ್ದಾರಿಯುತ ಹೆಣ್ಣಾಗಿ ವರ್ತಿಸಲಾರಂಭಿಸುತ್ತಾಳೆ.

ಮಾತುಮಾತಿಗೂ ಒಡಹುಟ್ಟಿದವರೊಡನೆ ಕಾಲುಕೆರೆದು ಜಗಳಕ್ಕಿಳಿಯುತ್ತಿದ್ದ ಮಗಳು ಮದುವೆಯ ನಂತರ ಗಂಡನ ಮನೆಯಲ್ಲಿ ಹೇಗೆ ಬದುಕುವಳೋ ಎಂಬ ಪೋಷಕರ ಚಿಂತೆಗೆ ಅವರು ಆಚ್ಚರಿಪಡುವಷ್ಟು ತಾಳ್ಮೆಯ ಪ್ರತಿರೂಪವಾಗುತ್ತಾಳೆ. ಈ ಮುಂಚೆ ಅಡುಗೆಮನೆಗೆ ಕಾಲಿಡದವಳು ಗಂಡನ ಮನೆಯಲ್ಲಿ ಚಕಾಚಕ್ ಆಗಿ ಅಡುಗೆ ಮಾಡಿ ಮನೆವಾರ್ತೆಯನ್ನು ನಿಭಾಯಿಸು ವುದನ್ನು ಕಂಡಾಗ ತಮ್ಮ ಮಗಳು ಇವಳೇನಾ ಎಂದು ಹುಬ್ಬೇರಿಸು ವಂತೆ ಮಾಡುತ್ತಾಳೆ.

ದೋಸೆ ಹೆಚ್ಚು ಕಾದಿದ್ದರೆ ಬೇಡ, ತಣ್ಣಗಾಗಿದ್ದು ಮೊದಲೇ ಊಹೂಂ. ಏನಿದ್ದರೂ ಕಾವಲಿ ಯಿಂದ ನೇರ ಪ್ಲೇಟಿಗೆ ಬಿದ್ದರೆ ಮಾತ್ರ ತಿನ್ನುವ ಹುಡುಗಿ ಮದುವೆಯ ನಂತರ, ಎಲ್ಲರೂ ತಿಂದ ಮೇಲೆಯೇ ತನ್ನ ಪ್ಲೇಟಿಗೊಂದಿಷ್ಟು ನಾಲ್ಕೈದು ದೋಸೆ ಹಾಕಿ ಕೊಂಡು ತಣ್ಣಗೋ, ಬಿಸಿದೋ ಎಂದೂ ನೋಡದೆ ನಿರ್ಲಿಪ್ತಳಾಗಿ ತಿನ್ನುವಾಗ ಮದುವೆಯಲ್ಲಿ ಅದ್ಯಾವ ಚಿದಂಬರ ರಹಸ್ಯ ಅಡಗಿದೆಯೋ? ಎಂದೆನಿಸದೇ ಇರದು. ಮಧ್ಯೆ ಮಧ್ಯೆ, ರಚ್ಚೆ ಹಿಡಿವ ಮಗುವನ್ನು ರಮಿಸಿ, ಅದರ ಬೇಕುಬೇಡಗಳನ್ನು ಪೂರೈಸಿ ಬರುವಾಗ ಮತ್ತಷ್ಟು ತಣಿದ ತಿಂಡಿ ತಿನ್ನುವಾಗ ತನ್ನ ಸ್ಥಿತಿಗೆ ವಿಷಾದ ಪಡಬೇಕು ಎಂದೆನಿಸುವುದೂ ಇಲ್ಲ.

ಹಿಂದಿನ ದಿನದ ರಾತ್ರಿಯನ್ನು ಮರುದಿನ ಅಮ್ಮ ಚಿತ್ರಾನ್ನದ ರೂಪು ಕೊಟ್ಟರೂ ನಿನ್ನೆದಾ? ಎಂದು ರಾಗವೆಳೆಯುತ್ತಿದ್ದವಳು ಈಗ ಒಂದು ಮುಷ್ಟಿ ಅನ್ನ ಉಳಿದಿದ್ದರೂ ಎಸೆಯಲು ಮನಮಾಡದೆ ಮರುದಿನಕ್ಕೆಂದು ಇಟ್ಟುಕೊಳ್ಳುತ್ತಾಳೆ. ಬಲುಬೇಗ ಬದಲಾವಣೆಗೆ
ಹೊಂದಿಕೊಳ್ಳುವ ಹುಡುಗಿಯ ಗುಣ ಇಷ್ಟು ದಿನ ಅದೆಲ್ಲಿಅವಿತಿರುತ್ತದೋ? ಮನೆ, ಮಕ್ಕಳು, ಉದ್ಯೋಗ ಎಂದು ಎಲ್ಲವನ್ನೂ
ಸಮಾನವಾಗಿ ಕಾಣುತ್ತಾ ಅತ್ತೆ ಮಾವನ ಕಣ್ಮಣಿಯಾಗಿ, ತನ್ನ ಹೊಣೆಗಾರಿಕೆಗೆ ಚ್ಯುತಿ ಬಾರದಂತೆ ನಿಭಾಯಿಸುವ ಗುಣವನ್ನು
ಹೆಣ್ಣಿಗೆ ಯಾರು ಹೇಳಿಕೊ ಟ್ಟರು? ಮದುವೆಗೆ ಮುಂಚೆ ಅಕ್ಕನೋ ತಂಗಿಯೋ ಮಾತ್ರ ಆಗಿದ್ದವಳು ಮದುವೆಯ ನಂತರ ಅತ್ತಿಗೆ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಆಂಟಿ ಎಂಬ ಹೊಸ ವಿಶೇಷ ಸಂಬಂಧಗಳು ಸೃಷ್ಟಿಯಾದಾಗ ಅದಕ್ಕಾಗಿ ತನ್ನನ್ನು ತಾನು ಅರ್ಪಿಸಿ ಕೊಳ್ಳುವ ರೀತಿ ವಿಸ್ಮಯಕಾರಿ.

ತವರಿನಲ್ಲಿ ಗಂಡನ ಮನೆಯನ್ನು ಹಳಿಯದೆ, ತವರನ್ನು ಗಂಡನ ಮನೆಯಲ್ಲಿ ಉಬ್ಬಿಸದೆ, ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳುವ ಶಕ್ತಿ ಅವಳಿಗೆ ಇದ್ದಕ್ಕಿದ್ದಂತೆ ಹುಟ್ಟುವುದಾದರೂ ಹೇಗೆ? ಬಲ್ಲವರು ತಿಳಿ ಹೇಳಬಲ್ಲಿರಾ?