Wednesday, 23rd October 2024

ಆ ಪಂಚಕ್ಷೇತ್ರಗಳು……

ಶನಿವಾರ ಘೋಷಿಸಿದ 2020ರ ಬಜೆಟ್‌ನಲ್ಲಿ, ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವದ ಐದು ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮವೊಂದು ಜನರ ಗಮನ ಸೆಳೆದಿದೆ.

ಕಳೆದ ಸಹಸ್ರಮಾನ ಹಾಗೂ ಯುಗಗಳಷ್ಟು ಹಿಂದಿನ ಇತಿಹಾಸದ ಕುರುಹುಗಳಾಗಿ ಉಳಿದುಕೊಂಡಿರುವ ಈ ಸ್ಮಾರಕಗಳು ಭಾರತೀಯ ನಾಗರೀಕತೆ ನಡೆದು ಬಂದ ಹಾದಿಯ ಕುರಿತ ಅಧ್ಯಯನಕ್ಕೆ ಇನ್ನಷ್ಟು ಸಹಕಾರಿಯಾಗಲಿದೆ. ದ್ವಾಪರಯುಗ ಮಹಾಭಾರತದಿಂದ ಹಿಡಿದು, ಮಣ್ಣಿನ ಮಡಿಕೆಗಳ ಬಳಕೆಯ ಆರಂಭಿಕ ದಿನಗಳು, ಹರಪ್ಪ-ಮೊಹೆಂಜೋದಾರೋವಿನ ನಗರ ಯೋಜನೆಗಳ ಕುರಿತಂತೆ ಇನ್ನಷ್ಟು ಬೆಳಕು ಚೆಲ್ಲುವ ಯತ್ನ ಇದಾಗಿದೆ ಎಂದು ಹೇಳಬಹುದಾಗಿದೆ.

ಭಾರತೀಯ ಪ್ರವಾಸೋದ್ಯಮದಲ್ಲಿರುವ ಅಗಾಧವಾದ ಸಾಧ್ಯತೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಂಥ ಮತ್ತಷ್ಟು ಹೆಜ್ಜೆಗಳ ಅಗತ್ಯವಿದೆ. ರಾಮಾಯಣ ಸರ್ಕ್ಯೂಟ್‌‌ ಬಳಿಕ, ಇದೀಗ ದೇಶದ ಪ್ರಮುಖ ಪ್ರವಾಸೀ ತಾಣಗಳನ್ನು ತೇಜಸ್‌ ಎಕ್ಸ್‌ಪ್ರೆಸ್‌ ರೈಲುಗಳ ಮೂಲಕ ಸಂಪರ್ಕಿಸುವ ಯೋಜನೆಯನ್ನೂ ಸಹ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

ಆ ಐದು ತಾಣಗಳ ಬಗ್ಗೆ….

ರಾಖಿಗರ್ಹಿ ಹರಿಯಾಣಾ

ಹರಿಯಾಣಾದ ಹಿಸಾರ್‌ನಲ್ಲಿರುವ ರಾಖಿಗರ್ಹಿ ಸಿಂಧೂ ನಾಗರಿಕತೆಗಿಂತ ಹಳೆಯದಾಗಿದ್ದು, ಕ್ರಿಸ್ತ ಪೂರ್ವ 6500ದ ಕಾಲಕ್ಕೆ ಸೇರಿದೆ. ಅಲ್ಲದೇ ಸಿಂಧೂ ಕಣಿವೆ ನಾಗರಿಕತೆಯ ಪ್ರಬುದ್ಧ ಘಟ್ಟದ ಭಾಗವಾಗಿಯೂ (ಕ್ರಿ.ಪೂ 2600-1900) ಇರುವ ಈ ಜಾಗವನ್ನು ಏಷ್ಯಾದ 10 ಸೂಕ್ಷ್ಮ ಪಾರಂಪರಿಕ ತಾಣಗಳಲ್ಲಿ ಒಂದು ಎಂದು ಗ್ಲೋಬಲ್ ಹೆರಿಟೇಜ್‌ ಫಂಡ್‌‌ನಿಂದ ಮೇ 2012ರಲ್ಲಿ ಘೋಷಿಸಲ್ಪಟ್ಟಿದೆ.

ಹಸ್ತಿನಾಪುರ, ಉತ್ತರ ಪ್ರದೇಶ

ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಹಸ್ತಿನಾಪುರ ಪಾಂಡವರು ಹಾಗೂ ಕೌರವರ ರಾಜಧಾನಿಯಾಗಿತ್ತು. ದ್ವಾಪರಯುಗದಲ್ಲಿ ಸಂಭವಿಸಿದ ಮಹಾಭಾರತದ ಕುರುಹುಗಳನ್ನು ಈಗಲೂ ತನ್ನೊಡಲಲ್ಲಿ ಇಟ್ಟುಕೊಂಡಿರುವ ಹಸ್ತಿನಾಪುರವು ಸಾಮ್ರಾಟ ಭರತನ ರಾಜಧಾನಿಯೂ ಆಗಿತ್ತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೈನ ಭಕ್ತರಿಗೂ ಪವಿತ್ರ ಕ್ಷೇತ್ರವಾದ ಹಸ್ತಿನಾಪುರ, ದೇಶದ ಗತಕಾಲದ ದಿನಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಬಲ್ಲ ಜಾಗಗಳಲ್ಲಿ ಒಂದಾಗಿದೆ.

ಧೋಲವಿರಾ, ಗುಜರಾತ್‌

ಗುಜರಾತ್‌ನ ಕಚ್ಛ್‌ ಜಿಲ್ಲೆಯ ಧೊಲವಿರಾ ಹರಪ್ಪ ನಾಗರೀಕತೆಯ ಸ್ಮಾರಕಗಳ ಪೈಕಿ ಅತ್ಯಂತ ದೊಡ್ಡದಾದ ಎರಡು ಸ್ಮಾರಕಗಳಲ್ಲಿ ಒಂದಾಗಿದೆ. ಈ ಜಾಗವನ್ನು 1967ರಲ್ಲಿ ಪ್ರಾಚ್ಯ ವಸ್ತು ಇಲಾಖೆ ಹೊರತೆಗೆದಿದ್ದು, 1990ರಿಂದ ವ್ಯವಸ್ಥಿತವಾದ ಪ್ರಕ್ರಿಯೆಗಳ ಮೂಲಕ ಇನ್ನಷ್ಟು ಕುರುಹುಗಳನ್ನು ಆಚೆ ತರಲಾಗುತ್ತಿದೆ.

ಆದಿಚನಲ್ಲೂರು, ತಮಿಳು ನಾಡು

ತಮಿಳುನಾಡಿದ ತೂತ್ತುಕುಡಿ ಜಿಲ್ಲೆಯಲ್ಲಿರುವ ಆದಿಚನಲ್ಲೂರು, ಪ್ರಾಚ್ಯವಸ್ತು ಸ್ಮಾರಕವಾಗಿದೆ. ಇಂದಿನ ದಿನಮಾದಲ್ಲೂ ಸಹ ಸಿಗಲಾರದಷ್ಟು ಉತ್ಕೃಷ್ಟ ಗುಣಮಟ್ಟ ಮಡಿಕೆಗಳು, ಕಬಿಣದ ಅಸ್ತ್ರಗಳು, ಮಾನವರ ಅಸ್ಥಿಯನ್ನು ಹೊಂದಿದ್ದ ಜೇಡಿಮಣ್ಣಿನ ಕುಡಿಕೆಗಳು ಇಲ್ಲಿ ಕಂಡುಬಂದಿದ್ದು, ಇವೆಲ್ಲಾ ಕನಿಷ್ಠ 38,000 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.

ಶಿವಸಾಗರ, ಅಸ್ಸಾಂ

ಶಿವನ ಸಾಗರ ಎಂಬ ಅರ್ಥದ ಈ ಊರು ಅಸ್ಸಾಂ ರಾಜ್ಯದಲ್ಲಿದೆ. 1699-1788ರ ನಡುವೆ ಅಹೋಮ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶಿವಸಾಗರ್‌‌, ದೇಹಿಂಗ್ ಮಳೆಕಾಡುಗಳ ನಡುವೆ ಇರುವ ನಗರವಾಗಿದ್ದು, ’ಪೂರ್ವದ ಅಮೇಝಾನ್‌’ ಎಂದು ಕರೆಯಲ್ಪಡುತ್ತಿದೆ.