ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@gmail.com
ಮೊದಲೇ ಹೇಳೀ ಕೇಳಿ, ಇಲ್ಲಿ ವರ್ಷವಿಡೀ ಊರಿ ಬಿಸಿಲು, ಬೇಸಿಗೆಯಂತೂ ಕೇಳುವುದೇ ಬೇಡ. ಅಂಥದ್ದರಲ್ಲಿ ಅಪರೂಪಕ್ಕೆ ಲೆಕ್ಕ ತಪ್ಪಿ ಮಳೆ ಹೊಡೆದುಬಿಟ್ಟರೆ ಈ ಗುಜ್ಜುಗಳ ಸಂಭ್ರಮ ಕೇಳುವುದೇ ಬೇಡ. ಇದ್ದ ಬದ್ದ ಜಾಗಗಳು ನೀರು-ನದಿ- ಕೇರಿಗಳೆಲ್ಲ ಭರ್ತಿ ಭರ್ತಿ. ಆಗೆಲ್ಲ ಜನವೋ ಜನ. ನಾನು ಗುಜರಾತಿನಲ್ಲಿದ್ದಾಗ ನೀರಿಗೆ ಬರ ಬಿದ್ದಂತೆ ಆಗಿತ್ತು. ಎಲ್ಲೆಲ್ಲೂ ಯಾವಾಗಲೂ ರಣ ರಣ ಬಿಸಿಲು ಮತ್ತು ಉರಿ ಸೆಕೆ.
ಹ್ಯೂಮಿಡಿಟಿ ಇರುತ್ತಿರಲಿಲ್ಲ. ಆದರೆ ನನಗೆ ಅಭ್ಯಾಸವಿರಲಿಲ್ಲವಲ್ಲ; ನೋಡ ನೋಡು ತ್ತಿದ್ದಂತೆ ಮಳೆ ಏರಿ ಬಂತು. ಗುಜರಾತಿನ ಏಕೈಕ ಪರ್ವತ ಶ್ರೇಣಿ ಸಾಪುತಾರ ಕಡೆಯಿಂದ ಇಳಿದ ನೀರು ನದಿ-ನೆಲ-ಜಲ-ಮೂಲಗಳನ್ನೆಲ್ಲ ತುಂಬಿ ತುಳುಕಿಸಿಬಿಟ್ಟಿತ್ತು. ಇದೆಲ್ಲ ಅಪರೂಪಕ್ಕೆ ನಡೆಯುವ ವಿದ್ಯಮಾನ. ಹಾಗಾಗಿ ‘ಗುಜರಾತಿನ ನಯಾಗರ ನೋಡುವಾ’ ಎನ್ನುವ ಸ್ನೇತರ ಅಬ್ಬರಕ್ಕೆ ಧೋ ಎನ್ನುತ್ತಿದ್ದ ಮಳೆಯಲ್ಲೇ ಕಾಡು ದಾರಿ, ಕಾಲು ದಾರಿಗೆ ಇಳಿದಿದ್ದಾಗಿತ್ತು.
ಇಲ್ಲಿ ಇನ್ನು ಎರಡು ಮೂರು ತಿಂಗಳು ಭರ್ತಿ ನೀರು. ಅದನ್ನೆಲ್ಲ ಅವಗಾಹಿಸಿ ಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಜನವೋ ಜನ. ಇದ್ದ ಸಣ್ಣ ದಾರಿಗಳಲ್ಲೂ ವಾಹನಗಳ ಓಡಾಟ. ಇನ್ನಿಲ್ಲದ ಆಬ್ಬರ. ಕಾಡು ಹೆದ್ದಾರಿಯ ತಿರುವು ಮುರುವಿನಲ್ಲಿ ಸರಿಯಾಗಿ ಪಾಲಿಸದ ರಸ್ತೆಯ ನಿಯಮದಿಂದಾಗಿ ಅರ್ಧರ್ಧ ಗಂಟೆಗೊಮ್ಮೆ ಟ್ರಾಫಿಕ್ಕು ಜಾಮ್. ವಾಹನಗಳು ನಿಂತಲ್ಲೇ ದಾರಿ ಬದಿಯ ಬೀದಿ ವ್ಯಾಪಾರ. ನೀರು ಪ್ಯಾಕೇಟು. ಬಾಳೆ ಹಣ್ಣು, ಚಾಕೋಲೇಟ್, ಚಿಪ್ಸುಗಳ ಭರ್ಜರಿ ವ್ಯವಹಾರ. ಸಿಗ್ನಲ್ ಸಿಗು ತ್ತಿದ್ದಂತೆ ಎಲ್ಲ ಮೊಬೈಲ್‌ಗಳು ಒಮ್ಮೆಲೆ ಜೀವಂತ. ಅಷ್ಟೊತ್ತಿಗೆ ಇನ್ನೇನೋ ಆಗಿ ಮತ್ತೆ ಮಾಯವಾಗುವ ಆಟ.
ಸರತಿ ಕಳೆಯುತ್ತಿದ್ದಂತೆ ರೊಂಯ್ಯನೆ ಮುಂದಕ್ಕೋಡುವ ಸಾಲು ಸಾಲು ವಾಹನಗಳು, ಟೂರಿಸ್ಟ್ ಬಸ್ಸುಗಳು. ರಪರಪನೆ ಆಗೀಗ ರಾಚುವ ಮಳೆ, ಹೊರಲಾರದಷ್ಟು ಹೊರೆ ತುಂಬಿಕೊಂಡ ಲೋಕಲ್ ಸವಾರಿಯ ಜೀಪಿಗೆ ನಿಂತಲ್ಲೆ ಹಿಂದಕ್ಕೆ ಉರುಳದಂತೆ ಟೈಯ್ಯರಿಗೆ ಕಲ್ಲಿನ ಆಸರೆ ನೀಡುತ್ತ ಹರಸಾಹಸದಿಂದ ಕಣಿವೆಯತ್ತ ಸವಾರಿ ಸಾಗಿಸುವ ಡಾಂಗ್ ಬುಡಕಟ್ಟು ಯುವಕರು. ಇಷ್ಟೆಲ್ಲ ದಾಟಿ ಭೋರ್ಗರೆವ ನದಿಯ ಅಂಚಿಗೆ ತಲುಪಿ ಕಲ್ಲು ಬಂಡೆ ಏರಿ ಹಣಿಕಿಕ್ಕಿದರೆ ಅಷ್ಟು ದೂರದಲ್ಲಿ ಸರತಿ ಸಾಲಿನಲ್ಲಿ ಪಹರೆ ಕಾಯುವ ಸೆಕ್ಯೂರಿಟಿಯವರು.
ತುಂಬಿ ಹರಿಯುವ ನದಿಯ ಒಡಲಿಗೆ ಮತ್ತು ಎಲ್ಲೆಲ್ಲೋ ಅಪಾಯಕಾರಿ ಪ್ರದೇಶಕ್ಕೆ ತೆರಳದಂತೆ ಡಾಂಗ್ ಅರಣ್ಯ ಪ್ರದೇಶ ಪೂರ್ತಿ ಆವರಿಸುತ್ತಾರೆನ್ನುವುದು ನಿಜವೇ ಆದರೂ ಕಾವಲು ಪಡೆ ಕಣ್ತಪ್ಪಿಸಿ ನೀರಿಗಿಳಿಯುವ, ಹತ್ತಬಾರದ ಜಾಗಕ್ಕೆ ಹತ್ತಿ ನಿಂತು ಸೆಲಿ ಫೋಟೊ ತೆಗೆಯುವ ಉಮೇದಿ. ಗುಂಪಿನಲ್ಲಿ ಕೊಂಚ ಯಾಮಾರುತ್ತಿದ್ದಂತೆ ಒಂದರ್ಧ ಗಂಟೆ ಎಲ್ಲವೂ ಸ್ತಬ್ಧ. ಕಾರಣ ಈ ಎತ್ತರ ಅಥವಾ ಕೊರಕಲು ಯಾವ ಕಡೆಯಿಂದ ಬಿದ್ದರೂ ಜೀವ ಉಳಿದಿದೆಯಾ ನೋಡುವ ಪ್ರಶ್ನೆಯೇ ಇರುವುದಿಲ್ಲ. ಅಲ್ಲಿಗೆ ಆ ಜೀವ ನದಿಯ ಅರ್ಭಟದ ಸುಳಿಗೆ ಮೊದಲ ಬಲಿ ಬಿದ್ದಿರುತ್ತದೆ. ಒಂದೆರಡು ದಿನ ಜೀವಭಯದಿಂದ ಆರ್ಭಟ ಕಮ್ಮಿಯಾಗುತ್ತದೆ.
ಮತ್ತೆ ಮರೆಗೆ ಎಲ್ಲ ಮಾಮೂಲು. ಹೌದು, ಇದು ಸೂರ್ಯ ನಗರಿಯ ಕಾಡುತಾಣದ ಅರ್ಭಟದ ಏಕೈಕ ಜಲಪಾತ. ಗುಜರಾತಿನ ನಯಾಗರಾ ಎಂದೇ ಕರೆಸಿಕೊಳ್ಳುವ ‘ಗೀರಾ ದೂದ್’ (ಬೀಳುತ್ತಿರುವ ಹಾಲು) ಜಲಪಾತ ದಕ್ಷಿಣ ಗುಜರಾತಿನ ಡಾಂಗ್ ಜಿಲ್ಲೆಯ
ಅಂಚಿನಲ್ಲಿ ಆರ್ಭಟಿಸುತ್ತಿದೆ. ವರ್ಷದ ಮಳೆಗಾಲದ ಆರಂಭದಲ್ಲಿ ತೊರೆಯೊಂದಿಗೆ ಸೇರಿ ಜೀವ ಪಡೆಯುವ ತಾಪಿ ನದಿಯ ಒಂದು ಕವಲು ಈ ಗೀರಾ ದೂದ್ ಜಲಪಾತವನ್ನು ಸೃಷ್ಟಿಸಿದೆ.
ಅಸಲಿಗೆ ಗುಜರಾತಿನಲ್ಲಿ ಅಲ್ಲಲ್ಲಿ ಕುರುಚಲು ಕಾಡು ಬಿಟ್ಟರೆ ಮರಗಳ ಉಸಿರೇ ಇಲ್ಲದ ಕಾಲದಲ್ಲಿ ಹತ್ತು ವರ್ಷಗಳ ಹಿಂದೆ ಇದ್ದ ಅರೆಬರೆ ಕಾಡನ್ನು ಬೆಳೆಸುವ ಯೋಜನೆಗೆ ಚಾಲನೆ ನೀಡಿ ಪ್ರಾಮಾಣಿಕವಾಗಿ ಬೆಳೆಸಿ ಸಂರಕ್ಷಿಸಿದ ಪರಿಣಾಮ ಇಂದು ಅಚ್ಚ ಪಶ್ಚಿಮ ಘಟ್ಟದ ಪಾಲುದಾರನೆನ್ನುವ ಹಾಗೆ ಹಸಿರು ಮತ್ತು ದಟ್ಟತೆ ಕಂಗೊಳಿಸುತ್ತಿದೆ. ಅಷ್ಟರ ಮಟ್ಟಿಗೆ ಅಲ್ಲಿನ ಅರಣ್ಯ ಇಲಾಖೆ ಅಭಿನಂದನೀಯವೇ.
ಪೂರ್ತಿ ರಾಜ್ಯದಲ್ಲೇ ಕೊಂಚ ಮಾತ್ರ ಕಾಡು ಜಾಗವನ್ನು ಹೊಂದಿರುವ ಪ್ರದೇಶವನ್ನು ಗುರುತಿಸಿ, ಡಾಂಗ್ ಎಂದು ಈ ಜಿಲ್ಲೆ ಯನ್ನು ವಿಶೇಷವಾಗಿ ಘೋಷಣೆಗೊಳಪಡಿಸಿ ಅಭಿವೃದ್ಧಿಪಡಿಸಲಾಗಿದ್ದು ಇದರಿಂದಾಗಿ ಗೀರಾ ದೂದ್ ಕೂಡ ಕೊಂಚ ಮೈ ಕೈ ತುಂಬಿಕೊಂಡು ಹರಿಯತೊಡಗಿದೆ. ಜುಲೈ ಮೊದಲ ವಾರದಲ್ಲಿ ಸಾಕಷ್ಟು ನೀರಿನ ಹರಿಗೆ ಈಡಾಗುವ ತಾಪಿ ನದಿಯ ಕವಲು ಜನವರಿಯವರೆಗೆ ಒಂಚೂರು ಚೂರಾಗಿ ಆದರೆ ಸರಿ, ಸುಂದರ ಜಲಪಾತಕ್ಕೆ ಇಂಬು ನೀಡುತ್ತದೆ. ಸುಮಾರು ನೂರು ಅಡಿಯ ಮೇಲಿಂದ ನೇರವಾಗಿ ಧರೆಗುರುಳುವ ಧಾರೆಯ ರಭಸ ಅನಾಹುತಕಾರಿಯಾದದ್ದು. ಜತೆಗೆ ಎಲ್ಲೆಲ್ಲೂ ಇರುವ ಬಂಡೆಗಳ ಕೊರಕಲು ಅಪಾಯಕಾರಿಯಾಗಿ ಸೆಳವನ್ನು ಸೃಷ್ಟಿಸಿವೆ.
ಗುಜರಾತಿನ ಅತಿ ದೊಡ್ಡ ಜಲಪಾತವಾಗಿಯೂ ಗುರುತಿಸಿಕೊಂಡಿರುವ ಗೀರಾದೂದ್ ಇರುವುದು ಡಾಂಗ್ ಜಿಲ್ಲೆಯ ವಘೈ ಪ್ರದೇಶ ದಿಂದ ಐದು ಕಿಮೀ ದೂರದಲ್ಲಿ. ಪ್ರಮುಖ ವಾಣಿಜ್ಯ ಮತ್ತು ವಜ್ರಗಳ ಮಾರುಕಟ್ಟೆಯ ನಗರಿ ಸೂರತ್ ನಗರದಿಂದ ಉಣೈ (ಇಲ್ಲಿ ಬೀಸಿ ನೀರ ಬುಗ್ಗೆಗಳ ಕುಂಡವಿದ್ದು ಭಾರಿ ಜನಾಕರ್ಷಣೆಯ ಉಣೈ ಮಾತಾ ಮಂದಿರ ಭಕ್ತಿ ಕೇಂದ್ರವೆಂದು ಪ್ರಸಿದ್ಧಿ ಪಡೆದಿದೆ) ಮಾರ್ಗವಾಗಿ ಸುಮಾರು ಎಂಬತ್ತು ಕಿಮೀ ದೂರದ ವಾಸ್ಡಾ ಕೇಂದ್ರ ಪ್ರದೇಶ ತಲುಪಿದರೆ ಸ್ಥಳೀಯ ಸವಾರಿ ಜೀಪುಗಳ ಮೂಲಕ ಈ ಜಲಪಾತ ತಲುಪಬಹುದು.
ಗೀರಾದೂದ್‌ಗೆ ಒಮ್ಮೆ ಹೈವೆಯಿಂದ ಒಳಕ್ಕೆ ರಸ್ತೆಯ ತಿರುವನ್ನು ತೆಗೆದುಕೊಂಡರೆ ನಂತರದ್ದು ಕಿರಿದಾದ ಟಾರು ರಸ್ತೆ, ತೀವ್ರ ಅಂಕು ಡೊಂಕಿನಿಂದ ಕೂಡಿದ್ದು ಎಕಮುಖ ಸಂಚಾರ ಮಾತ್ರ ಸಾಧ್ಯ. ಅಲ್ಲಲ್ಲಿ ಎದುರು ಬರುವ ಪ್ರವಾಸಿ ವಾಹನಗಳು ಸಾಕಷ್ಟು ಅಂಚಿಗೆ ಸುರಕ್ಷಿತ ಸ್ಥಳದಲ್ಲಿ ನಿಂತು ದಾರಿ ಮಾಡಿಕೊಂಡು ಸಾಗುವುದು ಅನಿವಾರ್ಯ. ಮುಖ್ಯ ರಸ್ತೆಯಿಂದ ಐದು ಕಿಮೀ ಅಂತರ ಕ್ರಮಿಸಿದರೆ ಕೊರಕಲು ಇಳಿಯುವ ಮುನ್ನವೇ ನೇರ ದರ್ಶನಕ್ಕೆ ಲಭ್ಯವಾಗುವ ಗೀರಾದೂದ್ ಜಲಪಾತ ಪಶ್ಚಿಮ ಭಾರತದ ಅಂಚಿ ನಲ್ಲಿ ರಭಸ ಮತ್ತು ಅಗಾಧತೆಗೆ ಹೆಸರುವಾಸಿ.
ಗೀರಾ ದೂದ್ ಸಂದರ್ಶಿಸುವ ಪ್ರವಾವಸಿಗರು ಹೆಚ್ಚಿನಂಶ ಅದರ ಪಕ್ಕದಲ್ಲೇ ಇರುವ ಐದು ಕಿಮೀ ಮೊದಲೇ ಸಿಕ್ಕುವ ಬೊಟಾ ನಿಕಲ್ ಗಾರ್ಡನ್ ತಪ್ಪಿಸಿಕೊಳ್ಳುತ್ತಾರೆ. ಆದರೆ ಕಾಡಂಚಿನಲ್ಲಿ ಉತ್ತಮವಾಗಿ ನಿರ್ವಹಣೆ ಹೊಂದಿರುವ ವಘೈ ಬೋಟಾನಿಕಲ್ ಗಾರ್ಡನ್ ಗೀರಾದೂದ್ ಜತೆಗೆ ಒಮ್ಮೆ ನೋಡಲೇಬೇಕಾದ ಸ್ಥಳ. ಸುಂದರ ಚಿರತೆಯ ಹಾರು ಭಂಗಿಯ ಕೃತಕ ಪ್ರತಿಕೃತಿ ಮರದ ಮೇಲೆ ಕುಳಿತಲ್ಲಿಂದಲೇ ಆರ್ಕಸುತ್ತದೆ. ಜೀವ ವೈವಿಧ್ಯ ಮತ್ತು ಚಿಟ್ಟೆ ಪಾರ್ಕ್ ಇಲ್ಲಿನ ಪ್ರಮುಖ ಆಕರ್ಷಣೆ.
ಖುಷಿ ನೀಡುವ ಪ್ರಶಾಂತ ಸ್ಥಳ ಮತ್ತು ವ್ಯವಸ್ಥಿತ ವಾಶ್‌ರೂಮ್ ವ್ಯವಸ್ಥೆ ಈ ಪ್ರವಾಸವನ್ನು ಸುಂದರಗೊಳಿಸುತ್ತವೆ.(ಈಗ ಹೇಗಿದೆ ಗೊತ್ತಿಲ್ಲ) ಸುಮಾರು ಇನ್ನೂರು ಕಿ.ಮೀ ದೂರ ಹರಿವ ನೀರಿನಂಚಿನಲ್ಲಿ ಅಗಾಧ ಕಲ್ಲು ಬಂಡೆಗಳ ಮೇಲೆ ಸರಿದು ಹೋಗುವ ಗಿರಾ ದೂದ್ ಜಲಪಾತದ ಪಾದದ ಸುತ್ತ ನೀರಿನ ರಭಸಕ್ಕೆ ಕಂದಕಗಳಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಬಲ್ಲವು. ಸಾಮಾನ್ಯ ವಾಗಿ ಇಲ್ಲಿ ನೀರಿಗಿಳಿಯುವ ಧೈರ್ಯವನ್ನು ಯಾರೂ ಮಾಡಲಾರರು. ಅದೇನಿದ್ದರೂ ಜಲಪಾತ ಸುರಿದು ಕೆಳ ಹಂತದಲ್ಲಾಗುವ ನದಿಯಲ್ಲಿ ಸ್ನಾನದ ಮೋಜು ನಡೆದಿರುತ್ತದೆ. ಆದರೆ ಬಂಡೆಗಳ ಅಂಚಿಗೆ ನಿಲ್ಲುವ ಫೋಟೊಕ್ಕೆ ವಿವಿಧ ಭಂಗಿಗೆ ಮುಖ ನೀಡುವ ಆತುರದಲ್ಲಿ ಕಾಲ್ತಪ್ಪುವ ಪ್ರವಾಸಿಗರು ವರ್ಷಕ್ಕೊಮ್ಮೆಯಾದರೂ ಈ ಜಲಪಾತದ ಪ್ರಸಿದ್ಧಿಗೆ ಕಪ್ಪು ಚುಕ್ಕೆಯಾಗುತ್ತಾರೆ.
ತನ್ಮೂಲಕ ಗೀರಾದೂದ್ ಆಗೀಗ ಸೌಂದರ್ಯದ ಜತೆಗೆ ಭರ್ಜರಿ ಸುದ್ದಿಗೆ ಈಡಾಗುತ್ತದೆ. ವರ್ಷದಲ್ಲಿ ನಾಲ್ಕಾರು ತಿಂಗಳು ತನ್ನ
ಪಾಡಿಗೆ ಭೋರ್ಗರೆದು ಸುರಿದು ಮೌನವಾಗುವ ಧಾರೆ. ಡಾಂಗ್ ಜಿಲ್ಲೆಯ ಕಾಡಿನ ಸೌಂದರ್ಯವನ್ನು ಹೆಚ್ಚಿಸಿದೆ. ಮಳೆ ಬಿದ್ದಾಗ ಇದ್ದ ಬದ್ದ ಹಸಿರಿನ ಮಧ್ಯೆ ರಭಸಕ್ಕೆ ಮುದಗೊಳ್ಳುವ ಪ್ರವಾಸಕ್ಕೆ ಇದು ಜೂನ್‌ನಿಂದ ಆಗಸ್ಟ್ ವರೆಗೆ ಹೇಳಿ ಮಾಡಿಸಿದ ಪ್ರದೇಶ. ಆದರೆ ದಾರಿ ತೀರ ಕೊರಕಲು ಮತ್ತು ಸ್ಥಳೀಯ ವಾಹನವನ್ನೇ ಬಳಸಿಕೊಳ್ಳುವ ವ್ಯವಸ್ಥೆ ಸ್ವಲ್ಪ ಕಿರಿಕಿರಿ ಮಾಡುವುದು ನಿಜವೇ ಆದರೂ ಜನಕ್ಕೆ ಅದೇ ಅಭ್ಯಾಸವಾದ ಕಾರಣ ನಮ್ಮ ವಾಹನಗಳನ್ನು ಅಲ್ಲಲ್ಲೇ ಸೇಫಾಗಿ ನಿಲ್ಲಿಸುವ ನೆಮ್ಮದಿಯೂ ದಕ್ಕುತ್ತದೆ.
ಹೆಚ್ಚಿನ ಸುತ್ತಲಿನ ಅರಣ್ಯವಾಸಿಗಳು ಮತ್ತು ಡಾಂಗ್ ಬುಡಕಟ್ಟುಗಳ ಯುವಕರಿಗೆ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ದಿನವಿಡಿ
ಕೆಲಸ ಕೈತುಂಬ ಸಂಬಳ. ಹಾಗಾಗಿ ಅವರವರ ವ್ಯವಸ್ಥೆ ತಪ್ಪೆನಿಸುವುದಿಲ್ಲ. ಆದರೆ ಪ್ಲಾಸ್ಟಿಕ್ ಹಾವಳಿಗೆ ಇಲ್ಲಿ ಕಡಿವಾಣ ಹಾಕುವ ಮನಃಸ್ಥಿತಿ ಖಚಿತವಾಗಿ ಬೇಕೇ ಬೇಕು. ಇಲ್ಲದಿದ್ದರೆ ಡಾಂಗ್‌ನ ಅರಣ್ಯ ಸಂಸ್ಕೃತಿ ಎಲ್ಲೆಲ್ಲೂ ಗಬ್ಬೇಳುವುದಕ್ಕೆ ಹೆಚ್ಚು ಸಮಯ ಬೇಕಾಗಲಿಕ್ಕಿಲ್ಲ. ಆದರೂ ಸಿಸನಲ್ ಸಿಟ್ ಮಾಡುವವರು ಡಾಂಗ್ ಅರಣ್ಯದ ಜತೆಗೆ ಸುತ್ತಲಿಗೂ ಒಂದಷ್ಟು ಸಮಯ ಇರಿಸಿ ಕೊಂಡರೆ ನಯಾಗರ ನಿಮ್ಮದು.