ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಇದೇನಿದು ಅಂತ
ಅಚ್ಚರಿಗೊಳ್ಳಬೇಡಿ. ನೈಜ ಘಟನೆ ಆಧರಿಸಿ ಸಿದ್ಧವಾಗುತ್ತಿರುವ ತನುಜಾ ಚಿತ್ರದಲ್ಲಿ ಸುಧಾಕರ್ ನಟಿಸುತ್ತಿದ್ದಾರೆ. ಶೂಟಿಂಗ್‌ನಲ್ಲಿ
ಲವಲವಿಕೆಯಿಂದಲೇ ಪಾಲ್ಗೊಂಡು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ದ್ದಾರೆ.
ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ ಅಸಹಾಯಕಳಾಗಿದ್ದಳು. ಈ ಸಂದರ್ಭ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಈಶ್ವರ್ ಪ್ರದೀಪ್ ತನುಜಾ ಕುರಿತು ಸರಕಾರದ ಗಮನಸೆಳೆದಿದ್ದರು. ಇದನ್ನು ಗಮನಿಸಿದ ಅಂದಿನ ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ ಸುಧಾಕರ್, ತನುಜಾಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು.
ತನುಜಾ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಪಡೆಯುವಲ್ಲಿ ಯಶಸ್ವಿಯಾದಳು. ಇದೇ ಘಟನೆಯನ್ನು ಆಧರಿಸಿ ತನುಜಾ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸೇರಿದ್ದ ಯಡಿಯೂರಪ್ಪ ತಮ್ಮ ಭಾಗದ ಶೂಟಿಂಗ್ ಅನ್ನು ಮುಗಿಸಿಕೊಟ್ಟಿದ್ದಾರೆ. ಈಗ ಸಚಿವ ಡಾ.ಕೆ ಸುಧಾಕರ್ ಚಿತ್ರತಂಡ ಸೇರಿದ್ದು, ಚಿತ್ರೀಕರಣದಲ್ಲಿ ಲವಲವಿಕೆ ಯಿಂದಲೇ ಪಾಲ್ಗೊಂಡಿದ್ದಾರೆ.
ಅನುಭವಿ ಕಲಾವಿದರ ರೀತಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಅದ್ಭುತವಾಗಿ ನಟಿಸಿ ದ್ದಾರೆ. ಜತೆಗೆ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ವಿಶೇಷವಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಬಿಯಾಂಡ್ ವಿಷನ್ ಸಿನಿಮಾ ಬ್ಯಾನರ್‌ನಲ್ಲಿ ತನುಜಾ ಚಿತ್ರ ನಿರ್ಮಾಣವಾಗುತ್ತಿದೆ. ಶಿವಮೊಗ್ಗ ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ತನುಜಾ ಪಾತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್ ಬಣ್ಣಹಚ್ಚಿದ್ದಾರೆ. ಉಳಿದಂತೆ ಹಿರಿಯ ನಟರಾದ ರಾಜೇಶ್ ನಟರಂಗ, ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರದ್ಯೋತನ ಸಂಗೀತ ನಿರ್ದೇಶನ, ರವೀಂದ್ರನಾಥ್ ಹಾಗೂ ಮೋಹನ್.ಎಲ್ ರಂಗಕಹಳೆ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಆರ್.ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ.ಪ್ರಹ್ಲಾದ್
ಸಂಭಾಷಣೆ ಬರೆದಿದ್ದಾರೆ.