ಸಂಗೀತ ಕ್ಷೇತ್ರದ ಮೇರು ಪ್ರತಿಭೆ ಇಳಯರಾಜ ಸಂಗೀತ ನೀಡಿರುವ ಪ್ರೀತ್ಸು ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಮಧುರ ಸಂಗೀತದ ಮೂಲಕ ಸಿನಿಪ್ರಿಯರನ್ನು ಸೆಳೆ ದಿವೆ.
ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗಣೇಶನ್ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ನವಭಾರತ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿ ತೆರೆಗೆ ತಂದಿದ್ದೇನೆ. ಈಗ ವಿಭಿನ್ನ ಕಥೆಯುಳ್ಳ ಪ್ರೀತ್ಸು ಚಿತ್ರವನ್ನು ನಿರ್ದೇಶನ ಮಾಡಿದ್ದೀನಿ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ನೀಡಿರುವುದು ಚಿತ್ರಕ್ಕೆ ಶಕ್ತಿತುಂಬಿದೆ ಎಂದು ಗಣೇಶನ್ ಸಂತಸ ವ್ಯಕ್ತಪಡಿಸಿ ದರು.
ಮಲೇಷಿಯಾಗೆ ಬಂದಾಗ ಗಣೇಶನ್ ಈ ಕಥೆ ಹೇಳಿದ್ದರು. ಕಥೆ ಬಲು ಇಷ್ಟವಾಯಿತು. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ಇಡೀ ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಚಿತ್ರವಿದು ಎಂದರು ನಿರ್ಮಾಪಕ ಗಾನ ವಿನೋದನ್. ಸುಭಾಷ್ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ನೇಹಾ ಬಣ್ಣಹಚ್ಚಿದ್ದಾರೆ. ಉಳಿದಂತೆ ಗಣೇಶನ್, ಮನೋಬಲ, ಸ್ವಾಮಿನಾಥ, ಮನೋಹರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಎ.ಸಿ.ಮಹೇಂದ್ರನ್ ಛಾಯಾಗ್ರಹಣ, ಸಂಜೀವ ಸಂಕಲನ ಹಾಗೂ ಜಾನ್ ಪೀಟರ್ ಕಲಾ ನಿರ್ದೇಶನ ಪ್ರೀತ್ಸು ಚಿತ್ರಕ್ಕಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.