Monday, 25th November 2024

ಹಿಂದಿ ರಾಷ್ಟ್ರ ಭಾಷೆಯಲ್ಲ, ಸಂಪರ್ಕ ಸಾಧನ

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಹಿಂದಿ ಭಾಷೆ ಕುರಿತ ಹೇಳಿಕೆ ದೇಶದಲ್ಲಿ ವಿಪಕ್ಷಗಳಿಂದ ಭಾರಿ ಆಕ್ರೋಶಕ್ಕೆ ಒಳಗಾಗಿದೆ. ಮೊನ್ನೆ ದೆಹಲಿಯಲ್ಲಿ ನಡೆದ 37ನೇ ಸಂಸದೀಯ ಅಧಿಕೃತ ಭಾಷಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ‘ಬೇರೆ ಬೇರೆ ರಾಜ್ಯಗಳ ಜನರು ತಮ್ಮ ನಡುವಿನ ಸಂಪರ್ಕ ಸಾಧನವಾಗಿ ಇಂಗ್ಲೀಷ್ ಬದಲು ಹಿಂದಿ ಭಾಷೆಯನ್ನು ಬಳಸಬೇಕು.

ಹಿಂದಿ ಭಾಷೆಯು ಆಂಗ್ಲ ಭಾಷೆಗೆ ಪರ್ಯಾಯವಾದ ಭಾಷೆಯಾಗಿ ಬೆಳೆಯಬೇಕೇ ವಿನಾ ಪ್ರಾದೇಶಿಕ ಭಾಷೆಗಳಿಗಲ್ಲ’ ಎಂದರು. ಅಮಿತ್ ಶಾ ಅವರ ಈ ಹೇಳಿಕೆಗೆ ವಿಶೇಷವಾಗಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದ ಭಾರಿ ವಿರೋಧ ತೋರಿ ಬಂದಿದೆ. ’ಹಿಂದಿ ಹೇರಿಕೆ ಭಾರತದ ಏಕತೆಗೆ ಧಕ್ಕೆಯನ್ನುಂಟು ಮಾಡುತ್ತದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ತಮ್ಮ ಆಕ್ರೋಶ ಹೊರ ಹಾಕಿ ದ್ದರೆ, ಕಾಂಗ್ರೆಸ್ ಅದನ್ನು ’ಸಾಂಸ್ಕೃತಿಕ ಭಯೋತ್ಪಾದನೆ’ ಎಂದು ಬಿಂಬಿಸಹೊರಟಿದೆ.

ಅಷ್ಟಕ್ಕೂ ರಾಷ್ಟ್ರೀಯ ಭಾಷೆಯ ಆವಶ್ಯಕತೆ ಒಂದು ರಾಷ್ಟ್ರಕ್ಕೆ ಅನಿವಾರ್ಯವೇ? ಒಂದು ಭಾಷೆ ವಿವಾದದ ಸುಳಿಯಲ್ಲಿ ಏಕೆ ಸಿಲುಕುತ್ತದೆ? ಯಾಕೆ ಈ ವಿವಾದ? ಏನಿದರ ಒಳ ಹೊರಗು?

ಸಂವಿಧಾನದಲ್ಲಿ ಹಿಂದಿ ಕುರಿತೇನಿದೆ?

ಭಾರತೀಯರಿಗೆ ಸಂವಿಧಾನದ ಮಾತೇ ಕೊನೆ. ಅದೇ ಅವರಿಗೆ ವೇದವಾಕ್ಯ. ಎಲ್ಲ ಸಂದ ರ್ಭಗಳಲ್ಲೂ, ಎಂತಹದೇ ಪರಿಸ್ಥಿತಿ ಯಲ್ಲೂ ಸಂವಿಧಾನಕ್ಕೆ ಅಬದ್ಧರಾಗಿ ನಡೆಯು ವವರು ಭಾರತದ ಪ್ರಜೆಗಳಾಗಿರಲಿಕ್ಕೆ ಸಾಧ್ಯವಿಲ್ಲ ಎಂಬ ಮಾತು ಇಲ್ಲಿ ಮಾನ್ಯತೆ ಪಡೆದುಕೊಂಡಿದೆ.

ಹಾಗಾದರೆ ಸಂವಿಧಾನದಲ್ಲಿ ಹಿಂದಿ ಭಾಷೆಯ ಜಾಗವೆಲ್ಲಿ? ವಿಧಿ 351ರ ಪ್ರಕಾರ ’ಭಾರತದ ಸಂಮಿಶ್ರ ಸಂಸ್ಕ್ರತಿಯ ಎಲ್ಲ ಮೂಲ ತತ್ವಗಳ ಅಭಿವ್ಯಕ್ತಿ ಮಾಧ್ಯಮವಾಗಿರುವಂತೆ ಹಿಂದಿ ಭಾಷೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಪಸರಿಸುವುದು ಕೇಂದ್ರ ಸರಕಾರದ ಕರ್ತವ್ಯ.’

ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ಉಲ್ಲೇಖ ಸಂವಿಧಾನದಲ್ಲೂ ಇಲ್ಲ. ಆದರೆ ಭಾರತದ ಸಂಮಿಶ್ರ ಸಂಸ್ಕೃತಿಯಯನ್ನು
ಅಭಿವ್ಯಕ್ತಗೊಳಿಸಲು ಹಿಂದಿ ಭಾಷೆ ಒಂದು ಮಾಧ್ಯಮವಾಗಿ ಅಥವಾ ಸಾಧನವಾಗಿ ಕೆಲಸ ಮಾಡಬೇಕೆನ್ನುವುದು ಸಂವಿಧಾನದ ಆಶಯ. ಸಂವಿಧಾನದ ಈ ಆಶಯ ಪೂರೈಕೆಗೆ ಯಾವ ಪ್ರಾದೇಶಿಕ ಭಾಷೆಗಳೂ ತಮ್ಮ ತಲೆ ಕೊಡಬೇಕಾದ್ದಿಲ್ಲ. ಹಾಗಾಗಿ ವಿಪಕ್ಷ ಗಳು ಹೊರಹಾಕುತ್ತಿರುವ ಆತಂಕಕ್ಕೆ ಸಂವಿಧಾನ ಯಾವ ಅವಕಾಶವನ್ನೂ ಕೊಡುವುದಿಲ್ಲ.

ಅಭಿವ್ಯಕ್ತಿ ಭಾಷೆ ಹಿಂದಿಯೇ ಆಗಬೇಕೆ?

ಒಂದು ರಾಷ್ಟ್ರವೆಂದ ಮೇಲೆ ಅದು ಹಲವು ಸಂಸ್ಕ್ರತಿ, ಅನೇಕ ಭಾಷೆಗಳ ನಾಡು. ಅದರಲ್ಲೂ ಭಾರತದ ವಿವಿಧತೆಗೆ ಮೇರೆಯಿಲ್ಲ. ಇಲ್ಲಿ ಒಟ್ಟು 22 ಅಧಿಕೃತ ಮಾನ್ಯತೆ ಪಡೆದ ಭಾಷೆಗಳಿವೆ. ಆಗುವುದಾದರೆ ಇವುಗಳ ಯಾವುದಾದ ರೊಂದು ರಾಷ್ಟ್ರೀಯ ಸಂಪರ್ಕಕ್ಕೆ ಸಾಧನವಾಗಬೇಕು.

ಎಷ್ಟೇ ಅಳೆದು ತೂಗಿ ನೋಡಿದರೂ ಉಳಿದೆಲ್ಲ ಭಾಷೆಗಳಿಗಿಂತ ಹಿಂದಿ ಭಾಷೆ ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಾದ್ಯಂತ  ಸಂಪರ್ಕ ಸಾಧನವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ಒಂದು ವೇಳೆ ಅದೇ ರೀತಿ ಕನ್ನಡ ಬಳಕೆಯಲ್ಲಿದ್ದಿದ್ದರೆ, ತೆಲಗು, ತಮಿಳು, ಗುಜರಾತಿ ಇತ್ಯಾದಿ ಭಾಷೆಗಳು ಬಳಕೆಯಲ್ಲಿದ್ದಿದ್ದರೆ ಅವುಗಳ ಒಂದು ಇವತ್ತು ಸಂವಿಧಾನದ ಅಧಿಕೃತ ಭಾಷೆ (official language) ಆಗಿರುತ್ತಿತ್ತು.

ನಿಸ್ಸಂಶಯವಾಗಿ ಅದನ್ನೇ ಕೇಂದ್ರ ಸರಕಾರವೂ ಕೂಡ ಅಭಿವ್ಯಕ್ತಿ ಸಾಧನವಾಗಿ ಬಳಸಲು ಒತ್ತು ನೀಡುತ್ತಿತ್ತು. ಹಿಂದಿ ಹಿಂದಿ ನಿಂದಲೂ ಅಷ್ಟಿಷ್ಟಾದರೂ ರಾಜ್ಯಗಳ ಗಡಿಗಳ ಎಲ್ಲೇ ಮೀರಿ ಬಳಕೆಯ ವ್ಯಾಪ್ತಿಯಲ್ಲಿರುವುದರಿಂದ ಅದನ್ನು ಬಳಸಿದರೆ ತಪ್ಪಿಲ್ಲ ಎನ್ನುವುದೇ ಸಂವಿಧಾನದ ಒಳ ಆಶಯವೂ ಹೌದು.

ಇಂಗ್ಲೀಷ್ ಅಭಿವ್ಯಕ್ತಿ ಮಾಧ್ಯಮ ಆಗಕೂಡದೆ?
ಆಗಬಾರದು ಎಂದಲ್ಲ. ಆದರೆ ಅದೇನು ಘನ ಅಪರಾಧವೂ ಅಲ್ಲ. ಕಲಿಕೆ ಅವರವರ ಸ್ವಾಧ್ಯಾಯದ ಆಸಕ್ತಿಗೆ ಬಿಟ್ಟದ್ದು. ಇಂಗ್ಲೀಷ್ ಕಲಿತರೆ ನಷ್ಟವಂತೂ ಇಲ್ಲ. ಲಾಭವೇನಾದರೂ ಇದೆಯೇ? ಖಂಡಿತವಾಗಿಯೂ ಇದೆ. ಆ ಲಾಭದ ರುಚಿಯನ್ನು
ಭಾರತದಲ್ಲೂ, ಭಾರತದಾಚೆಯೂ ನಾವು ಸವಿಯಬಹುದಾಗಿದೆ. ಬ್ರಿಟಿಷರ ಬಹುಕಾಲದ ಆಳ್ವಿಕೆಯ ಪರಿಣಾಮ ಭಾರತದಲ್ಲಿ ಹಿಂದಿಯಷ್ಟೇ (ಸ್ವಲ್ಪ ಹೆಚ್ಚೂ ಇರಬಹುದು) ಇಂಗ್ಲೀಷ್ ಕೂಡ ಜನಮಾನಸದ ಭಾಷೆಯಾಗಿದೆ.

ಪ್ರಾದೇಶಿಕ ಭಾಷೆ ಬಿಟ್ಟರೆ ಈ ಎರಡು ಭಾಷೆಗಳು ಭಾರತದ ಜನ ಸಮೂಹವನ್ನು ಒಟ್ಟು ತಂದಿದ್ದವು. ಇಂದಿಗೂ ವ್ಯಾಪಕವಾಗಿ ಇಂಗ್ಲೀಷ್ ಬಳಕೆಯಲ್ಲಿದೆ. ಆದರೆ ಒಂದಂತೂ ಸತ್ಯ. ಅದು ಈ ನೆಲದ ಸ್ವಾದವಿರುವ ಭಾಷೆ ಅಲ್ಲ ಎನ್ನುವುದು. ಆ ಕಾರಣ ಮಾತ್ರ ದಿಂದಲೇ ದೇಶ ಭಾಷೆಯಾಗಿರುವ ಮತ್ತು ಆಂಗ್ಲವನ್ನು ಬಿಟ್ಟರೆ ವ್ಯಾಪಕ ಬಳಕೆಯಲ್ಲಿರುವ ಹಿಂದಿಯನ್ನು ರಾಷ್ಟ್ರ ಸಂಪರ್ಕದ ಮಾಧ್ಯವನ್ನಾಗಿ ಬಳಸುವುದು ಸರ್ವದೃಷ್ಟಿಯಿಂದಲೂ ಒಳಿತೆಂದೆನಿಸುತ್ತದೆ. ಇಂಗ್ಲೀಷ್ ಭಾಷೆಯಿಂದ ನಮ್ಮ ದೇಶಕ್ಕೆ ಮಹದು ಪಕಾರವಾಗಿದೆ ಎನ್ನುವುದು ಒಪ್ಪಬೇಕಾದ್ದೇ. ಆ ಕಾರಣದಿಂದ ಅದಕ್ಕೆ ಸಲ್ಲಬೇಕಾದ ಗೌರವ ಸಲ್ಲಲಿ.

ದೊರೆಯಬೇಕಾದ ಮನ್ನಣೆ ದೊರೆಯಲಿ. ಆದರೆ ಆ ಮನ್ನಣೆ ದೇಶ ಭಾಷೆಗೆ ಸಿಕ್ಕ ನಂತರ ಸಿಗುವುದು ಒಳ್ಳೆಯದೆನ್ನುವುದು
ಕೇಂದ್ರ ಸಚಿವರ ಮಾತಿನ ಒಳಾರ್ಥ ವಿದ್ದಂತಿದೆ.

ಹಿಂದಿ ಹೇರಿಕೆ ಮಾತನಾಡಿದರೆ ಸಚಿವರು?
ಗೃಹ ಸಚಿವ ಅಮಿತ್ ಶಾ ಅವರು ಏನು ಹೇಳಿದರು ಎನ್ನುವ ಪ್ರಮುಖಾಂಶಗಳನ್ನು ಮೇಲೆಯೇ ನೋಡಿಯಾಗಿದೆ. ಅದರಲ್ಲಿ ಎಲ್ಲೂ ಹಿಂದಿ ಹೇರಿಕೆ ಇದ್ದಂತೆ ಕಾಣುವುದಿಲ್ಲ. ಹಾಗಾದರೆ ಹಿಂದಿ ಹೇರಿಕೆ ಯಾವಾಗ ಆಗುತ್ತದೆ? ಒಂದು ಉದಾ: ಕರ್ನಾಟಕದ
ಜಿಯೊಂದರಲ್ಲಿ ಕೇಂದ್ರ ಸರಕಾರದ ಕಾರ್ಯಕ್ರಮ. ಆ ಕಾರ್ಯಕ್ರಮಕ್ಕೆ ಬರುವ ಕೇಂದ್ರ ಸಚಿವರೊಬ್ಬರು ಕಡ್ಡಾಯವಾಗಿ ಅಲ್ಲಿ ಹಿಂದಿ ಬ್ಯಾರ್ನ ಗಳಿರಬೇಕು.

ಕನ್ನಡದೊಟ್ಟಿಗೆ ಹಿಂದಿಯಲ್ಲೂ ಕಾರ್ಯಕ್ರಮದ ಕಲಾಪಗಳೆಲ್ಲ ನಡೆಯಬೇಕು ಎನ್ನುವ ತಾಕೀತು ಮಾಡಿದರೆ ಅದು ಹಿಂದಿ ಹೇರಿಕೆ. ಶಾಲಾ ಕಾಲೇಜುಗಳಲ್ಲಿ ಪ್ರಾದೇಶಿಕ ಭಾಷೆಗಿಂತ ಹೆಚ್ಚು ಹಿಂದಿ ಭಾಷೆಗೆ ಒತ್ತು ಕೊಡುವುದು ಕಡ್ಡಾಯ ಮಾಡಿದರೆ ಅದು
ಹಿಂದಿ ಹೇರಿಕೆ. ಇದ್ಯಾವುದನ್ನೂ ಸ್ವಭಾಷಾ ಪ್ರೇಮಿಗಳು ಸಹಿಸಲೂ ಕೂಡದು. ಆದರೆ ಅಮಿತ್ ಶಾ ಅವರು ಎಲ್ಲೂ ಪ್ರಾದೇಶಿಕ ಭಾಷೆಗಳಿಗೆ ಪರ್ಯಾಯವಾಗಿ ಹಿಂದಿ ಬಳಸಬೇಕೆಂದು ಹೇಳಲಿಲ್ಲ. ಹಾಗೆ ಅವರೇನಾದರೂ ಹೇಳಿದ್ದಿದ್ದರೆ ಸಾಮಾನ್ಯ ಜ್ಞಾನ
ಇರುವ ಎಲ್ಲರೂ ಅವರ ಬಗ್ಗೆ ಮರುಕ ಪಡಬೇಕಿತ್ತು. ಅದೆಂದಾದರೂ ಸಾಧ್ಯವೆ ಎಂದು!

ಅವರು ಹೇಳಿದ್ದು ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಬಳಸಬೇಕು ಎಂದು. ಅದರಲ್ಲಿ ತಪ್ಪೇನೂ ಇದ್ದಂತೆ ಕಾಣುವು ದಿಲ್ಲ. ಬೇಕಾದರೆ ಬಳಸಿ ಬೇಡವಾದರೆ ಬೇಡ ಅಷ್ಟೇ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಟ್ಟ ವಿಷಯ. ಮುಂದೆಂದಾದರೂ ಹಿಂದಿ ಹೇರಿಕೆ ಯಾವುದೇ ರೀತಿಯಿಂದಲೂ ನಡೆಯುತ್ತಿದೆ ಎಂದೆನಿಸಿದರೂ ಅದು ಖಂಡನಾರ್ಹವೇ.

ವಿಪಕ್ಷಗಳ ಗದ್ದಲವೇಕೆ?
ಡಿ.ಎಮ.ಕೆಯಿಂದ ಹಿಡಿದು ಕಾಂಗ್ರೆಸ್ಸನ್ನೂ ಒಳಗೊಂಡು ಟಿ.ಎಮ.ಸಿವರೆಗೂ ಎಲ್ಲ ವಿರೋಧ ಪಕ್ಷಗಳು ಯಾರೇ ಕೇಂದ್ರ ಸಚಿವರು ಹಿಂದಿ ಕುರಿತು ಏನೇ ಮಾತನಾಡಿದರೂ ಅದನ್ನು ಖಂಡತುಂಡವಾಗಿ ವಿರೋಧಿಸುತ್ತವೆ. ಅದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಒಂದು ಅವರ ಮಾತೃಭಾಷಾಪ್ರೇಮವೂ ಇದ್ದಿರಬಹುದು. ರಾಜಕೀಯ ಲಾಭದ ದೃಷ್ಟಿಯೂ ಇದೆ.

ಆದರೆ ಸಮಗ್ರ ಭಾರತದ ಒಟ್ಟು ಲಾಭದ ದೃಷ್ಟಿಯಿಂದ ನೋಡಿದಾಗ ಪ್ರಾದೇಶಿಕ ಭಾಷೆಗಳಿಗೆ ಹಾನಿಯಾಗುವ ಪ್ರಸಂಗವಿಲ್ಲದೆ ಇದ್ದರೆ ಹಿಂದಿಯನ್ನು ಸ್ವೀಕರಿಸುವ ಮನಸ್ಥಿತಿಯನ್ನು ವಿಪಕ್ಷಗಳು ಬೆಳಸಿಕೊಳ್ಳಬೇಕು. ಆಂಗ್ಲವನ್ನು ದೂರ ತಳ್ಳಿ ಎಂದು ಯಾರೂ ಹೇಳಿಲ್ಲ. ಅದೂ ಇರಲಿ. ಆದರೆ ಈ ದೇಶದ ಭಾಷೆಗೆ(ಹಿಂದಿ)ಸಿಕ್ಕ ನಂತರದ ಸ್ಥಾನ ಅದಕ್ಕೆ ಸಿಗಲಿ.