Saturday, 23rd November 2024

ಆ ಸೋಲು ನನಗೆ ದೊಡ್ಡ ಗೆಲುವು ತಂದುಕೊಟ್ಟಿತು

Prashanth Neel

ಪ್ರಶಾಂತ್.ಟಿ.ಆರ್

ಪ್ರಶಾಂತ್ ನೀಲ್ ಮನದಾಳದ ಮಾತು

ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿತು. ಕನ್ನಡಕ್ಕೆ ಸೀಮಿತವಾಗದೆ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬಂದಿತು. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿತು. ಈ ಚಿತ್ರದ ಸೃಷ್ಟಿಕರ್ತ ಪ್ರಶಾಂತ್ ನೀಲ್, ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದರು.

ಸ್ಟಾರ್ ಡೈರೆಕ್ಟರ್ ಸಾಲಿಗೆ ಸೇರಿದರು. ಹಾಗಂತ ಈ ಪಟ್ಟ ಅವರಿಗೆ ಸುಲಭವಾಗಿ ಬರಲಿಲ್ಲ. ಉಗ್ರಂ ಚಿತ್ರದ ಸೋಲು ಅವರನ್ನು ಬಹುವಾಗಿ ಕಾಡಿತ್ತು. ಸೋಲನ್ನೇ ಮೆಟ್ಟಿ ನಿಲ್ಲುವ ಧೃಡಮನಸು ಮಾಡಿದರು. ಅದರಂತೆ ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸೃಷ್ಟಿಯಾಯಿತು. ಈಗ ಕೆಜಿಎಫ್ ಚಾಪ್ಟರ್ ೨ ತೆರೆಗೆ ಬರುತ್ತಿದೆ. ಈ ಚಿತ್ರದ ಕುರಿತಂತೆ ಪ್ರಶಾಂತ್ ನೀಲ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿ : ಕೆಜಿಎಫ್ ಎನ್ನುವ ಚಿನ್ನದ ಗಣಿ ಸೃಷ್ಟಿಯಾಗಿದ್ದು ಹೇಗೆ ? 
ಪ್ರಶಾಂತ್ ನೀಲ್: ಮೊದಲು ನಾನು ಉಗ್ರಂ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದೆ. ಆದರೆ ಅಂದುಕೊಂಡ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ. ಚಿತ್ರ ಸೋತಿತು ನನ್ನನ್ನು ಬಾಧಿಸಿತು. ಹಾಗಂತ ನಾನು ಚಿತ್ರರಂಗದಿಂದ ಹೊರ ನಡೆಯುವ ನಿರ್ಧಾರ ಮಾಡಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಚಿತ್ರಕ್ಕಾಗಿ ನಾನು ಮಾಡಿಕೊಂಡಿದ್ದ ತಯಾರಿ ಸರಿಯಿಲ್ಲ ಎಂಬ ಅರಿವು ನನಗಾಯಿತು. ಹಾಗಾಗಿ ಪೂರ್ವ ತಯಾರಿ ಮಾಡಿಕೊಂಡು ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ. ಒಂದು ಚಿಕ್ಕ ಕಥೆ ಮನದಲ್ಲಿ ಹೊಳೆಯಿತು. ಕಥೆ ಬರೆಯುತ್ತಾ ಹೋದಂತೆ ದೊಡ್ಡದಾ ಯಿತು. ಇಷ್ಟು ದೊಡ್ಡ ಕಥೆ ಸಿನಿಮಾವಾದರೆ ಸರಿಯೇ ಎಂಬ ಅಳುಕು ನನ್ನಲ್ಲಿತ್ತು. ಅದೇ ಹೊತ್ತಿಗೆ ಟಾಲಿ ವುಡ್‌ನಲ್ಲಿ ಬಾಹುಬಲಿ ಸಿನಿಮಾ ತೆರೆಗೆ ಬಂತು. ಅದು ಎರಡು ಭಾಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬಂತು. ಅಂತೆಯೇ ಕೆಜಿಎಫ್ ಎರಡು ಭಾಗದಲ್ಲಿ ಬರಲು ಸೂರ್ತಿಯಾಯಿತು.

ವಿ.ಸಿ: ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಆಲೋಚನೆ ಮೊದಲೇ ಇತ್ತೆ?
ಪ್ರಶಾಂತ್ ನೀಲ್ : ಖಂಡಿತಾ ಇರಲಿಲ್ಲ. ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮುಗಿಸುವ ಯೋಚನೆ ಇತ್ತು. ಚಿತ್ರದ ಚಿತ್ರೀಕರಣ ಮುಗಿಸಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮುಗಿದಾದ ಮೇಲೆ ಚಿತ್ರತಂಡವರೆಲ್ಲಾ ಸೇರಿ ಸಿನಿಮಾ ವೀಕ್ಷಿಸಿದೆವು. ಯಶ್ ಚಿತ್ರ ನೋಡಿ ಸಂತಸಗೊಂಡರು. ಇದನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲಿಸ್ ಮಾಡೋಣ ಎಂದು ಹಠ ಹಿಡಿದರು. ಆದರೆ ನನಗೆ ಅದು ಸಾಧ್ಯವೇ ಎನ್ನಿಸಿತು. ಬೇರೆ ಭಾಷೆಗೆ ಹೋದರೆ ಒಪ್ಪುತ್ತಾರಾ ಎನ್ನುವ ಭಯವೂ ಇತ್ತು. ಪ್ಯಾನ್ ಇಂಡಿಯಾ ಬಗ್ಗೆ ತಿಳಿದು ಬಳಿಕ ಯೋಚಿಸುವಂತೆ ಯಶ್‌ಗೆ ಹೇಳಿದ್ದೆ. ಈ ನಡುವೆ ಯಶ್ ಜತೆ ಮಾತು ಬಿಟ್ಟಿದ್ದೆ. ಹಾಗಂತ ಮನಸ್ಥಾಪದಿಂದಲ್ಲ, ಸಿನಿಮಾದ ವಿಚಾರವಾಗಿ ಅಷ್ಟೇ. ಮುಂದೆ ಯಶ್ ಶ್ರಮದಿಂದ ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿಯೇ ಮೂಡಿಬಂತು. ಇದಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಅಭಿನಂದನೆ ಹೇಳಲೇಬೇಕು.

ವಿ.ಸಿ : ಕೆಜಿಎಫ್ಗೆ ಯಶ್ ಅವರೇ ಮೊದಲ ಆಯ್ಕೆಯಾಗಿತ್ತೆ?
ಪ್ರಶಾಂತ್ ನೀಲ್ : ಯಶ್, ಗೂಗ್ಲಿ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಮಿಂಚಿದರೂ ಮಾಸ್ ಆಗಿ ಕಂಗೊಳಿಸಿದರು. ಅವರ ನಟನೆ ನನಗೆ ಇಷ್ಟವಾಯಿತು. ಹಾಗಾಗಿ ಅವರನ್ನೇ ಗಮನದಲ್ಲಿಟ್ಟುಕೊಂಡು ಕಥೆ ಬರೆದೆ. ಅವರೇ ನನ್ನ ಮೊದಲ ಆಯ್ಕೆಯಾಗಿದ್ದರು. ನಿರ್ಮಾಪಕರಿಗೆ ಕಥೆ ಹೇಳಿದಾಗ ಮೆಚ್ಚಿದರು. ನನ್ನನ್ನು ನಂಬಿ ಹಣ ಹೂಡಿದರು. ಈ ಚಿತ್ರಕ್ಕಾಗಿ ಯಶ್, ಅನೇಕ ಸಿನಿಮಾಗಳನ್ನು ಬಿಟ್ಟು ಹಲವು ವರ್ಷ ನನಗಾಗಿ ಸಮಯ ಮೀಸಲಿಟ್ಟರು.

ವಿ.ಸಿ : ಕೆಜಿಎಫ್ ನ ಕಲ್ಪನೆ ಹುಟ್ಟಿದ್ದು ಹೇಗೆ ?
ಪ್ರಶಾಂತ್ ನೀಲ್ : ಈ ಕಥೆಯಲ್ಲಿ ಮೊದಲು ಹುಟ್ಟಿದ್ದು ರಾಕಿ. ರಾಕಿಗೆ ಒಂದು ದೊಡ್ಡ ಪ್ರಪಂಚ ಕಟ್ಟಿಕೊಡಬೇಕು ಎಂದಾಗ ಕೆಜಿಎಫ್ ಹೊಳೆಯಿತು. ಅದಕ್ಕಾಗಿ ಕೆಜಿಎಫ್ ಗೆ ಹೊರಟೆವು. ಅಲ್ಲಿನ ಚಿನ್ನದ ಗಣಿ ನೋಡಿ ಅಚ್ಚರಿಯಾಯಿತು. ಅಲ್ಲಿನ ಜನ ಚಿನ್ನದ ಗಣಿಯ ಬಗ್ಗೆ ಒಂದಷ್ಟು ಕಥೆಗಳನ್ನು ಹೇಳಿ ದರು. ಅದನ್ನು ಕೇಳಿ ರೋಮಾಂಚನವಾಯಿತು. ಪ್ಯಾಂಟಸಿ ಬಗ್ಗೆ ಯೋಚನೆ ಮಾಡಿದೆವು. ಅಲ್ಲಿಂದ ಕೆಜಿಎಫ್ ನಲ್ಲಿ ನರಾಚಿಯ ಸಾಮ್ರಾಜ್ಯವೇ ಸೃಷ್ಟಿ ಯಾಯಿತು. ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ತಂತ್ರಜ್ಞರ ಶ್ರಮವೇ ಕಾರಣ.

ವಿ.ಸಿ : ಕೆಜಿಎಫ್ ಚಾಪ್ಟರ್ ೨ನಲ್ಲಿ ಮಾಸ್‌ಗೆ ಹೆಚ್ಚು ಒತ್ತು ನೀಡಿದ್ದೀರ ?
ಪ್ರಶಾಂತ್ ನೀಲ್ : ಕೆಜಿಎಫ್ ಮಾಸ್ ಸಿನಿಮಾ ಅನ್ನುವದಕ್ಕಿಂತ ಸೆಂಟಿಮಂಟ್ ಸಿನಿಮಾ ಎನ್ನಬಹುದು. ಕೆಜಿಎಫ್ ನಲ್ಲಿ ಹ್ಯೂಮನ್ ಎಮೋಷನ್ ಇದೆ. ಅದನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಎಮೋಷನ್ ಅಂಶವನ್ನು ಕೊನೆಗೆ ಇಡುತ್ತೇವೆ. ಆದರೆ ಇಲ್ಲಿ, ಮೊದಲೇ ತೋರಿಸಿದ್ದೇವೆ. ತಾಯಿ ಮಗನ ಬಾಂಧವ್ಯದ ಕಥೆ ಚಿಕ್ಕದಾಗಿದ್ದರೂ ಅದು ಪ್ರೇಕ್ಷಕರ ಮನಮುಟ್ಟಿದೆ. ಕೆಜಿಎಫ್ ೨ ನೋಡಿದ ಮೇಲೆ ಇದು, ತಾಯಿ ಮಗನ ಬಾಂಧವ್ಯದ ಕಥೆ ಎಂಬುದು ನಿಮಗೆ ಸ್ಪಷ್ಟವಾಗುತ್ತದೆ.

ವಿ.ಸಿ: ಅಧೀರ, ಚಾಪ್ಟರ್ ೨ಗಾಗಿ ಸೃಷ್ಟಿಯಾದ ಪಾತ್ರವೇ?
ಪ್ರಶಾಂತ್ ನೀಲ್ : ಮೊದಲ ಭಾಗದ ಕಥೆಯನ್ನು ಬರೆಯುವಾಗಲೇ ಅಧೀರನ ಪಾತ್ರ ಸೇರಿಸಲಾಗಿತ್ತು. ಈ ಪಾತ್ರಕ್ಕಾಗಿ ಹಿಂದಿ ಮಾತನಾಡುವ ಧೃಡಕಾಯದ ವ್ಯಕ್ತಿ ಬೇಕಿತ್ತು. ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರಕ್ಕೆ ಮಹತ್ವ ತಂದು ಕೊಟ್ಟಿದೆ. ಇನ್ನು ರಮಿಕಾ ಸೇನ್ ಪಾತ್ರಕ್ಕೂ ರವೀನಾ ಟಂಡನ್ ಜೀವ ತುಂಬಿದ್ದಾರೆ.

ವಿ.ಸಿ : ಕೆಜಿಎಫ್ ಚಾಪ್ಟರ್ ೩ ಮೂಡಿಬರಲಿದೆಯೆ ?
ಪ್ರಶಾಂತ್ ನೀಲ್ : ಮೊದಲು ಕೆಜಿಎಫ್ ಚಾಪ್ಟರ್ ೨ ಸಿನಿಮಾ ನೋಡಿ, ಮುಂದಿನ ಭಾಗಬೇಕು ಎನಿಸಿದರೆ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇನೆ.

ವಿ.ಸಿ : ನಿಮ್ಮ ಮುಂದಿನ ಪ್ರೊಜೆಕ್ಟ್‌ಗಳ ಬಗ್ಗೆ ಹೇಳುವುದಾದರೆ ?
ಪ್ರಶಾಂತ್ ನೀಲ್ : ಸದ್ಯ ಸಲಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಆ ಬಳಿಕ ಜೂ.ಎನ್‌ಟಿಆರ್ ಅವರ ಜತೆ ಸಿನಿಮಾ ಮಾಡಲಿದ್ದೇನೆ. ಮುಂದೆ
ಯಾವ ಚಿತ್ರ ನೋಡಬೇಕು.

ವಿ.ಸಿ : ಮತ್ತೆ ಕನ್ನಡ ಸಿನಿಮಾಗಳ ನಿರ್ದೇಶನಕ್ಕೆ ಮರಳುತ್ತೀರ ?
ಪ್ರಶಾಂತ್ ನೀಲ್ : ಖಂಡಿತವಾಗಿ. ನನ್ನನ್ನು ಒಬ್ಬ ಒಳ್ಳೆಯ ನಿರ್ದೇಶಕನಾಗಿ ಗುರುತಿಸಿದ್ದೇ ಕನ್ನಡಿಗರು. ಅದಕ್ಕಾಗಿ ನಾನು ನಮ್ಮ ಕನ್ನಡಿಗರಿಗೆ ಸದಾ ಚಿರಋಣಿ. ಕೈಯಲ್ಲಿರುವ ಪ್ರೊಜೆಕ್ಟ್‌ಗಳು ಮುಗಿದ ಮೇಲೆ ಸ್ಯಾಂಡಲ್‌ವುಡ್‌ಗೆ ಮರಳುತ್ತೇನೆ. ಶ್ರೀಮುರಳಿಗಾಗಿ ಸಿನಿಮಾ ಮಾಡುತ್ತೇನೆ. ಈ ಬಗ್ಗೆ ಅವರಿಗೆ
ಈಗಾಗಲೇ ಮಾತುಕೊಟ್ಟಿದ್ದೇನೆ. ಯಶ್‌ಗಾಗಿ ಮತ್ತೊಂದು ಚಿತ್ರ ನಿರ್ದೇಶನ ಮಾಡುವ ಬಯಕೆ ಇದೆ.