ಶಾಂತಿಯ ನಾಡಾಗಿದ್ದ ಕರ್ನಾಟಕದಲ್ಲಿ ದಿನಬೆಳಗಾದರೆ ಒಂದಿಲ್ಲೊಂದು ವಿವಾದ, ಧರ್ಮ ಸಂಘರ್ಷ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಸಂಘರ್ಷ ತಾರಕಕ್ಕೇ ಏರುವ ಮೊದಲೇ ಪೊಲೀಸರು ನಿಯಂತ್ರಿಸಿರುವುದು ಸಮಾಧಾನಕರ ವಿಷಯವಾದರೂ, ವರ್ಷ ಎಲ್ಲ
ದಿನವೂ ಇದೇ ರೀತಿ ಪೊಲೀಸ್ ರಕ್ಷಣೆಯಲ್ಲಿ ಶಾಂತಿಯನ್ನು ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರಕಾರ ಈ ಬಗ್ಗೆ ಎಚ್ಚರವಹಿಸ ಬೇಕಿದೆ.
ಇದರೊಂದಿಗೆ ಈ ರೀತಿಯ ದಾಂದಲೆಯ ನಡೆದ ಕೆಲ ದಿನಗಳ ಕಾಲ ಭಾರಿ ಸದ್ದಾಗುತ್ತದೆ. ಆ ಸಮಯದಲ್ಲಿ ಕೆಲ ದಿನಗಳ ಕಾಲ ಆಡಳಿತ-ವಿರೋಧ ಪಕ್ಷ ದವರು ಪರ-ವಿರೋಧ ಹೇಳಿಕೆ ನೀಡಿಕೊಂಡು ವಾಕ್ಸಮರ ನಡೆಸುತ್ತಾರೆ ಹೊರತು, ಪ್ರಕರಣದ ಹೂರಣವನ್ನು ಕೈಬಿಡುತ್ತಾರೆ. ಈ ರೀತಿಯ ಹೋರಾಟಗಳಿಂದ ಯಾವುದೇ ಪ್ರಯೋಜನವಿಲ್ಲ.
ಹುಬ್ಬಳ್ಳಿಯಲ್ಲಿ ನಡೆದ ವಿವಾದವಿರಬಹುದು, ಡಿಜೆ ಹಳ್ಳಿ-ಕೆಜೆ ಹಳ್ಳಿ ವಿವಾದವಿರಬಹದು. ಈ ವಿವಾದಗಳು ತಾರ್ತಿಕ ಅಂತ್ಯ ಕಾಣುವ ತನಕ ಸರಕಾರ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಧರ್ಮ ಸಂಘರ್ಷಗಳು ನಡೆದರೂ, ಅದು ರಾಜ್ಯದ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ.
ಏಕೆಂದರೆ ಯಾವುದೇ ಹೂಡಿಕೆದಾರರು ರಾಜ್ಯಕ್ಕೆ ಬರುವುದು, ರಾಜ್ಯದ ಶಾಂತಿ ಯನ್ನು ನೋಡಿಕೊಂಡು. ಆದ್ದರಿಂದ ಇಂತಹ ಸೂಕ್ಷ್ಮ ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸ ಬೇಕು. ಪ್ರತಿಪಕ್ಷಗಳು ಇಂತಹ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬದಲು, ರಾಜ್ಯದ ಕಾನೂನು ಸುವ್ಯವಸ್ಥೆಗೆ ಅಗತ್ಯ ಸಹಕಾರ ನೀಡಬೇಕು.
ಹುಬ್ಬಳ್ಳಿ ಗಲಭೆ ಪ್ರಕರಣವನ್ನೇ ನೋಡುವುದಾದರೆ, ಈ ಗಲಭೆ ಆರಂಭವಾಗಿರುವುದು ಚಿಕ್ಕ ವಿಷಯದಿಂದ. ಆದರೆ ಪ್ರತಿಪಕ್ಷ ಕಾಂಗ್ರೆಸ್
ಆಸ್ಪತ್ರೆ, ಸಾರ್ವಜನಿಕ ಸ್ಥಳದ ಮೇಲಾದ ಕಲ್ಲುತೂರಾಟದ ಬಗ್ಗೆ ಮಾತನಾಡುವ ಬದಲು, ಹಿಂದುಗಳಿಂದಲೇ ಈ ರೀತಿಯ ದಾಂಧಲೆಗೆ ಪ್ರಚೋದನೆ ಸಿಕ್ಕಿದೆ ಎನ್ನುವ ವಾದವನ್ನು ಮಂಡಿಸುತ್ತಿದೆ. ಈ ರೀತಿಯ ಮನಸ್ಥಿತಿಯಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ತಗೆದುಕೊಳ್ಳುವ ಜತೆಗೆ, ಶಾಂತಿ ಸಭೆಗಳನ್ನು ಪಕ್ಷ ಮೀರಿ ಮಾಡುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಮುಂದಾಗಬೇಕಿದೆ.