ರಷ್ಯಾ-ಉಕ್ರೇನ್ ಯುದ್ಧ ಮತ್ತು ಚೀನಾದಲ್ಲಿನ ಕೋವಿಡ್ ಸಮಸ್ಯೆಯಿಂದ ಜಾಗತಿಕವಾಗಿ ಮುದ್ರಣ ಕಾಗದದ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಈ ಬಾರಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕಗಳು ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.
ಮುದ್ರಣ ಕಾಗದದ ಬೆಲೆ ಗಗನಮುಖಿಯಾಗಿದ್ದು, ಪಠ್ಯ ಪುಸ್ತಕ ಮುದ್ರಣಕ್ಕೂ ಅಗತ್ಯವಿರುವಷ್ಟು ಕಾಗದವು ಮುದ್ರಕರಿಗೆ ಪೂರೈಕೆ ಆಗುತ್ತಿಲ್ಲ. ಕೆಲವು ದಿನಗಳ ಹಿಂದೆ ಒಂದು ಕೆ.ಜಿ ಮುದ್ರಣ ಕಾಗದದ ಬೆಲೆ ?೬೨ ಇತ್ತು. ಈಗ ಅದು ?೮೦ ಕ್ಕೆ ತಲುಪಿದೆ. ಶೈಕ್ಷಣಿಕ ವರ್ಷವೊಂದಕ್ಕೆ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಸುಮಾರು ೧೫ ಸಾವಿರ ಟನ್ ಕಾಗದ ಅಗತ್ಯವಿರುತ್ತದೆ. ಪ್ರತಿಯೊಬ್ಬ ಮುದ್ರಕನಿಗೆ ದಿನಕ್ಕೆ ತಲಾ ೩೫೦ ಟನ್ ಕಾಗದ ಅಗತ್ಯವಿದೆ. ಆದರೆ, ಈಗ ಮುದ್ರಕರಿಗೆ ಸಿಗುತ್ತಿರುವುದು ದಿನಕ್ಕೆ ೫೦ ರಿಂದ ೬೦ ಟನ್ ಮಾತ್ರ. ರಾಜ್ಯದಲ್ಲಿ ಪಠ್ಯಪುಸ್ತಕಗಳ ೨೭ ಮುದ್ರಕ ರಿದ್ದು, ಶೇ.೨೦ ರಿಂದ ಶೇ.೩೦ ರಷ್ಟು ಮಾತ್ರ ಮುದ್ರಣವಾಗಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಶಿಕ್ಷಣ ಇಲಾಖೆ ಗುಡುವು ನೀಡಿರುವ ಮೇ ೧೫ಕ್ಕೆ ಪಠ್ಯಪುಸ್ತಕಗಳನ್ನು ಮುದ್ರಿಸಿ ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ. ಈ ನಡುವೆ ಭಾರತದ ಮುದ್ರಣ ಕಾಗದ ತಯಾರಿಕಾ ಕಂಪನಿಗಳು ಹೆಚ್ಚಿನ ಬೆಲೆಗೆ ಕಾಗದವನ್ನು ವಿದೇಶಗಳಿಗೆ ರಫ್ತು ಮಾಡುತ್ತಿವೆ. ದೇಶೀ ಮಾರುಕಟ್ಟೆ ಯಲ್ಲಿ ಮಾರಾಟವಾಗಿ ಉಳಿದ ಕಾಗದವನ್ನು ವಿದೇಶಕ್ಕೆ ರಫ್ತು ಮಾಡುವಂತೆ ಸರಕಾರ ಆದೇಶಿಸಬೇಕಿದೆ. ಕನಿಷ್ಠ ಪಠ್ಯಪುಸ್ತಕಗಳ ಮುದ್ರಣಕ್ಕೆ ಅಗತ್ಯ ವಿರುವಷ್ಟಾದರೂ ಮುದ್ರಣ ಕಾಗದ ಸರಬರಾಜು ಮಾಡಲು ನಿರ್ದೇಶಿಸಬೇಕಿದೆ. ಆ ಮೂಲಕ ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣದಿಂದ ಪಠ್ಯ ಪುಸ್ತಕಗಳಿಂದ ದೂರ ವಾಗಿದ್ದ ವಿದ್ಯಾರ್ಥಿಗಳು ಮತ್ತೆ ಪುಸ್ತಕಗಳಿಂದ ವಂಚಿತರಾಗುವುದನ್ನು ತಪ್ಪಿಸಬೇಕಿದೆ.
ಮುದ್ರಣ ಕಾಗದದ ಕೊರತೆ ಮತ್ತು ಬೆಲೆ ಏರಿಕೆಯಿಂದ ಪುಸ್ತಕೋದ್ಯಮಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದಷ್ಟು ಬೇಗ ಸರಕಾರ ಮಧ್ಯೆ ಪ್ರವೇಶಿಸಿ ವಿದೇಶಕ್ಕೆ ರಫ್ತಾಗುತ್ತಿರುವ ಕಾಗದವನ್ನು ದೇಶಿ ಮಾರುಕಟ್ಟೆಯಲ್ಲೇ ಮಾರಾಟವಾಗುವಂತೆ ನೋಡಿಕೊಳ್ಳಬೇಕಿದೆ.