ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ಗಳಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮಾ ಧರಿಸುವುದು
ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಈ ನಡುವೆ ರಾಜ್ಯದಲ್ಲೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಗುರುವಾರ ಒಂದೇ ದಿನ ರಾಜ್ಯದಲ್ಲಿ 100 ಕೋವಿಡ್ ವೈರಸ್ ಪ್ರಕರಣಗಳು ಪತ್ತೆ ಯಾಗಿದ್ದು, ಬೆಂಗಳೂರು ನಗರದಲ್ಲೇ 91 ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೋವಿಡ್ ಪ್ರಕರಣ ಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಮಾ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಪಾಲನೆ ಮಾಡುವುದನ್ನು ಜನರು ಮರೆತು ಬಿಟ್ಟಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಕೋವಿಡ್ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಿದ್ದಾರೆ. ಮಾ ಧರಿಸದೆ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿ ಕೊಂಡವರಿಗೆ ದಂಡವನ್ನೂ ಹಾಕಲಾಗುತ್ತಿಲ್ಲ. ಹೀಗಾಗಿ ಮೊಟ್ಟ ಮೊದಲಿಗೆ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ತಪಾಸಣೆಯನ್ನು ಕೈಗೊಳ್ಳುವ ಜತೆಗೆ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕಿದೆ. ಅಲ್ಲದೆ, ಇನ್ನೂ ಅನೇಕರು ಎರಡು ಮತ್ತು ಮೂರನೇ ಡೋಸ್ ಲಸಿಕೆಯನ್ನು ಪಡೆದಿಲ್ಲ.
ಕೋವಿಡ್ ತಡೆಗೆ ಲಸಿಕೆಯೊಂದೇ ಮಾರ್ಗ ಎಂಬುದು ಈ ಹಿಂದೆಯೇ ಸಾಬೀತಾಗಿದೆ. ಹೀಗಾಗಿ ಎಲ್ಲರೂ ಎರಡನೇ ಡೋಸ್ ಮತ್ತು
ಮೂರನೇ ಡೋಸ್ ಪಡೆಯಬೇಕಿದೆ. ಅನೇಕ ಕಡೆ ಸರಕಾರ ಆಸ್ಪತ್ರೆಗಳಲ್ಲಿ ಮೂರನೇ ಡೋಸ್ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದುಡ್ಡು ಕೊಟ್ಟು ಲಸಿಕೆ ಪಡೆಯಬೇಕಾದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಲು ಅಸಡ್ಡೆ
ತೋರುತ್ತಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲೂ ಕೋವಿಡ್ ಲಸಿಕೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕಿದೆ.
ಶಾಲೆ-ಕಾಲೇಜುಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲು ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚಿಸಬೇಕಿದೆ. ಇಲ್ಲವಾದಲ್ಲಿ ಎರಡನೇ ಅಲೆಯಲ್ಲಿ ಸಂಭವಿಸಿದ ಸಾವು-ನೋವುಗಳನ್ನು ಮತ್ತೆ ಕಾಣುವ ಸ್ಥಿತಿ ಬಂದೀತು..!