Saturday, 23rd November 2024

ಶ್ರೀಲಂಕಾ ನೆರವಿಗೆ ಧಾವಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ಅಕ್ಕಿ, ಹಾಲಿನ ಪುಡಿ ಮತ್ತು ಜೀವರಕ್ಷಕ ಔಷಧಿಯನ್ನು ಮೊದಲ ಹಂತದಲ್ಲಿ ದ್ವೀಪ ರಾಷ್ಟ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಮುಖ್ಯ ಮಂತ್ರಿ ಎಂ.ಕೆ ಸ್ಟಾಲಿನ್‌ ಮಂಗಳವಾರ ಹೇಳಿದ್ದಾರೆ. ಈ ಮೂಲಕ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಶ್ರೀಲಂಕಾದ ಜನರ ನೆರವಿಗೆ ತಮಿಳುನಾಡು ಸರ್ಕಾರ ಧಾವಿಸಿದೆ.

ಸರ್ಕಾರದ ಈ ಉದ್ದೇಶಕ್ಕೆ ನಾಗರಿಕರೂ ದೇಣಿಗೆ ನೀಡುವ ಮೂಲಕ ನೆರವಾಗಬಹುದು ಎಂದು ಸ್ಟಾಲಿನ್‌ ಹೇಳಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಿ ಶ್ರೀಲಂಕಾಕ್ಕೆ ತಲುಪಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ತಮಿಳುನಾಡು ಶೀಘ್ರದಲ್ಲಿಯೇ ಶ್ರೀಲಂಕಾಕ್ಕೆ 40,000 ಟನ್ ಅಕ್ಕಿ, 500 ಟನ್ ಹಾಲಿನ ಪುಡಿ ಮತ್ತು ಜೀವರಕ್ಷಕ ಔಷಧಿಯನ್ನು ಕಳುಹಿಸಲಿದೆ ಎಂದು ಹೇಳಿದರು.

ಕೊಲಂಬೋದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ವಾಸಿಸುತ್ತಿರುವ ತಮಿಳರಿಗೆ ಆಹಾರ ಧಾನ್ಯ, ತರಕಾರಿ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತು ಗಳನ್ನು ರವಾನಿಸಲು ರಾಜ್ಯಕ್ಕೆ ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಇತ್ತೀಚೆಗೆ ಮನವಿ ಮಾಡಿತ್ತು.