Thursday, 12th December 2024

ಪಾಕ್ ಪರ ಘೋಷಣೆ: ಶಿಕ್ಷೆಯಾಗಲಿ

ಈದ್ ಉಲ್ ಫಿತ್ರ್ ಹಬ್ಬದಂದು ನಂಜನಗೂಡು ತಾಲೂಕಿನ ಕವಲಂದೆಯಲ್ಲಿ ಪ್ರಾರ್ಥನೆ ಸಲ್ಲಿಸಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು
ಹೊರಟಿರುವ ದೃಶ್ಯಕ್ಕೆ ವ್ಯಕ್ತಿಯೊಬ್ಬ ಹಿನ್ನೆಲೆಯಲ್ಲಿ ‘ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್’ ಎಂದು ಹೇಳಿರುವ 30 ಸೆಕೆಂಡ್‌ಗಳ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದೆ.

ಈದ್ ಉಲ್ ಫಿತ್ರ್ ದಿನ ಮೆರವಣಿಗೆಯಲ್ಲಿ ಹೊರಟ ಮುಸ್ಲಿಮರು ಈ ಘೋಷಣೆ ಕೂಗಿಲ್ಲ, ಬೇರೆ ವ್ಯಕ್ತಿಯೊಬ್ಬ ವಿಡಿಯೊಕ್ಕೆ ಈ ರೀತಿ ಧ್ವನಿ ನೀಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ವನ್ನು ಅಷ್ಟಕ್ಕೇ ಬಿಡದೇ ಆ ಘೋಷಣೆ ಕೂಗಿದವರು ಯಾರು ಎಂಬುದನ್ನು ಪತ್ತೆ ಹಚ್ಚ ಬೇಕಾದ ಅಗತ್ಯವಿದೆ. ಈ ದೇಶದ ಅನ್ನ, ನೀರು, ಗಾಳಿ ಸೇವಿಸಿ ಪಾಕಿಸ್ತಾನದ ಪರ ಘೋಷಣೆ ಕೂಗುವ ದೇಶ ದ್ರೋಹಿಗಳು ಅಲ್ಲಲ್ಲಿ ಅಡಗಿ ಕುಳಿತಿದ್ದಾರೆ.

ಇಂತಹ ಸಮಯ, ಸಂದರ್ಭ ನೋಡಿಕೊಂಡು ಅವರಲ್ಲಿನ ಪಾಕಿಸ್ತಾನದ ಪರ ಅಭಿಮಾನ ಹೊರಬರುತ್ತಲೇ ಇದೆ. ಈ ಹಿಂದೆಯೂ ಅನೇಕ ಜನರನ್ನು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕಾಗಿ ಬಂಧಿಸಿ, ವಿಚಾರಣೆ ನಡೆಸಿ, ಬಿಡುಗಡೆಗೊಳಿಸಲಾಗಿದೆ.

ಈವರೆಗೂ ಯಾರೊಬ್ಬ ರಿಗೂ ಕಠಿಣ ಶಿಕ್ಷೆಯಾದ ಪ್ರಕರಣಗಳು ಇಲ್ಲ. ಹೀಗಾಗಿಯೇ ಇಂದು ರಾಜಾ ರೋಷವಾಗಿ ವೈರಿ ರಾಷ್ಟ್ರದ ಪರ ಘೋಷಣೆ ಕೂಗುವುದನ್ನು ಚಾಳಿ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಲ್ಲಿ ಸಿಕ್ಕ ಆರೋಪಿಗಳಿಗೆ ಜೈಲಿನಲ್ಲಿ ಐಷಾರಾಮಿ ಹಾಸಿಗೆ, ಊಟ ಕೊಟ್ಟು ನೋಡಿಕೊಳ್ಳು ತ್ತಿರುವುದರಿಂದಲೇ ಭಯವಿಲ್ಲದಂತಾಗಿದೆ.

ಸಾಮಾಜಿಕ ಸಾಮರಸ್ಯಕ್ಕೆ ಕೊಳ್ಳಿ ಇಡಲು ಪ್ರಯತ್ನಿಸುವವರಿಗೆ ಪೊಲೀಸರು ತಮ್ಮ ಲಾಠಿ ಏಟಿನ ರುಚಿ ತೋರಿಸದಿದ್ದರೆ ಇಂತಹವರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ವಿಡಿಯೊವೊಂದನ್ನು ಸ್ಟೇಟಸ್ ಇಟ್ಟುಕೊಂಡಿದ್ದಕ್ಕೇ ಅಲ್ಲಿ ಏನಾಯಿತು ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಆ ಘಟನೆ ಮಾಸುವ ಮುನ್ನವೇ ಇದೀಗ ಕವಲಂದೆ
ವಿಡಿಯೊ ಹರಿಬಿಟ್ಟಿರುವುದು ಬೇಸರದ ಸಂಗತಿ. ಶಾಂತಿ, ಸಾಮರಸ್ಯಕ್ಕೆ ಹೆಸರಾದ ಕರ್ನಾಟಕದಲ್ಲಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿರುವುದು ಸರಿಯಲ್ಲ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘೋಷಣೆ ಕೂಗಿದವನನ್ನು ಪತ್ತೆ ಹಚ್ಚಿ, ತಕ್ಕ ಶಿಕ್ಷೆ ನೀಡಬೇಕು.