Monday, 16th September 2024

ಜಿಲ್ಲೆಗಳಿಂದ ಕಬ್ಬಿಣದ ಅದಿರಿನ ರಫ್ತಿಗೆ ಸುಪ್ರೀಂ ಅನುಮತಿ

ನವದೆಹಲಿ: ಕರ್ನಾಟಕ ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಹೊರತೆಗೆಯಲಾದ ಕಬ್ಬಿಣದ ಅದಿರಿನ ರಫ್ತಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ರಫ್ತಿಗೆ ಅವಕಾಶ‌ ಕೋರಿ ಗಣಿ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎನ್.ವಿ. ರಮಣ‌ ನೇತೃತ್ವದ ಪೀಠವು, ಅದಿರು ರಫ್ತಿಗೆ 11 ವರ್ಷಗಳ ನಂತರ ಹಸಿರು ನಿಶಾನೆ‌ ನೀಡಿದೆ. ಇ- ಹರಾಜಿನ ಮೂಲಕ ಅದಿರು ಮಾರಾಟಕ್ಕೆ ಇದ್ದ ಕೆಲವು ಕಠಿಣ ನಿಯಮಗಳನ್ನು ಸಡಿಲ ಗೊಳಿಸಿ ನ್ಯಾಯ ಪೀಠ ಆದೇಶ ಹೊರಡಿಸಿದೆ.

ಇದರಿಂದಾಗಿ ಉಕ್ಕು ಉತ್ಪಾದನಾ ಘಟಕಗಳು ಸ್ಥಳೀಯವಾಗಿ ಅದಿರು ಖರೀದಿಸಲು ನಿಯಮಗಳಲ್ಲಿ ರಿಯಾಯಿತಿ ದೊರೆತಂತಾಗಿದೆ.

ರಾಜ್ಯದ ಗಣಿಗಳಿಂದ ಹೊರ ತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಸೂಚಿಸಿತ್ತು. ಇದಕ್ಕೆ‌ ಕಳೆದ ತಿಂಗಳು ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಸರ್ಕಾರ, ಅದಿರು ರಫ್ತಿನ ವಿರುದ್ಧ ತನ್ನ ನಿಲುವು ಸ್ಪಷ್ಟಪಡಿಸಿತ್ತು.

ಜಿಲ್ಲೆಗಳಲ್ಲಿನ ಗಣಿಗಳಿಂದ ಅದಿರು ರಫ್ರು ಮಾಡುವುದಕ್ಕೆ ಸುಪ್ರೀಂ ಕೋರ್ಟ್ 2011ರಿಂದ ನಿಷೇಧ ಹೇರಿತ್ತು.