ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@gmail.com
ಅಹಮದಾಬಾದ್ ನಗರದಿಂದ 18 ಕಿ.ಮೀ. ದೂರದಲ್ಲಿರುವ ಎಡತಿರುವಿನಲ್ಲಿ ಒಂದೊಮ್ಮೆ ಕಾಡಂಚಿನಲ್ಲಿ ಇದ್ದಿರ ಬಹುದಾದ ಅಡಾಲಜ್ ವಾವ್ ಇವತ್ತು ಸಂರಕ್ಷಿತ ಸ್ಮಾರಕ. ಬಾವಿಯ ಮೇಲ್ಭಾಗದಲ್ಲೂ ವಿಹರಿಸುತ್ತಾ ಅಡಾಲಜ್ನ ಸೌಂದರ್ಯವನ್ನು ಸವಿಯಬಹುದಾಗಿದೆ.
ಸರಿಯಾಗಿ ಇದ್ದಿದ್ದರೆ ಅಥವಾ ದೊಡ್ಡ ಮಟ್ಟದ ಪ್ರಚಾರ ದೊರಕಿದ್ದರೆ, ಇದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗುತ್ತಿತ್ತು. ಯಾವ್ಯಾ ವುದೋ ವೆಬ್ ಸೈಟುಗಳಲ್ಲಿ ಜಾಗ ಪಡೆದಿರುತ್ತಿತ್ತು. ಆದರೆ ಆಗಿದ್ದು ಮಾತ್ರ ಕೇವಲ ಆಯಾ ಭಾಗದ ಪ್ರವಾಸಿ ಜಿಲ್ಲೆಗೆ ಮಾತ್ರ ಸೀಮಿತಗೊಂಡು ಬಿಟ್ಟಿದ್ದು, ಸಹಜ ನಿರ್ಲಕ್ಷ ತೆಗೂ ಒಳಗಾಗಿ ಅಕ್ಷರಶಃ ಅರಮನೆಯಂತೆ ರಾರಾಜಿಸಬೇಕಿದ್ದ ಪುರಾತನ ನಿಮಾರ್ಣ ವೊಂದು ಅಪರೂಪದ ಇತಿಹಾಸದ ಹೊರತಾಗಿಯೂ ಲೆಕ್ಕತಪ್ಪಿ ಮೂಲೆಗುಂಪಾಗಿದೆ.
ಇದು ನಿಜಕ್ಕೂ ಕಲಾತ್ಮಕ ಮತ್ತು ತಾಂತ್ರಿಕವಾಗಿ ಅತ್ಯಂತ ಶ್ರಿಮಂತ ಪರಂಪರೆಯ ಸಂಕೇತವಾಗಿ ಬದುಕಿದ್ದು, ನೂರಾರು ವರ್ಷ ಗಳಿಂದ ಯಾವ ಮುತುವರ್ಜಿ ಇಲ್ಲದಿ ದ್ದರೂ ವಿಪರೀತ ಗಾಳಿ ಮಳೆಗೆ ಮುಖವೊಡ್ಡಿಯೂ ಚದುರದೆ ನಿಂತಿದೆ ಎಂದರೆ ಅದರ ನಿಮಾರ್ಣದ ಹಿಂದಿನ ತಾಂತ್ರಿಕತೆ ಎಂಥದ್ದಿರಬೇಕು ಊಹಿಸಿ. ಕಾರಣ ಯಾವ ಒಂದು ಕಲ್ಲನ್ನು ಜರುಗಿಸಲಾಗದ, ತಾನಾಗೇ ಬಿದ್ದು ಹೋಗದ ಶಿಲಾಬಂಧ ಇದರ ಹಿಂದಿರುವ ನಿರ್ಮಾಣ ರಹಸ್ಯ. ಬಹುಶಃ ಹಳೆಯ ಶಿಲ್ಪ ಶಿಲಾಶಾಸದ ರಹಸ್ಯ ಇದರ ಹಿಂದಿನ ಶಕ್ತಿ. ಕಾರಣ ಈಗಿನ ಕಲಾಕೃತಿಗಳಂತೆ ಜೋಡಣೆ ಎದ್ದು ಕಾಣುವ ಅಥವಾ ಎಲ್ಲಿ ಹೇಗೆ ಬಂಧ ನಿರ್ಮಿಸಲಾಗಿದೆ ಎಂದು ಸುಲಭಕ್ಕೆ ಗೊತ್ತಾಗುವ ನಿರ್ಮಾಣ ಇದಲ್ಲ.
ಇಲ್ಲದಿದ್ದರೆ ಸರಿಯಾದ ನಿರ್ವಹಣೆಯೂ ಇಲ್ಲದೆ, ಯಾವುದೋ ಪೋಕರಿಗಳ ಹೊಡೆತಕ್ಕೆ ಸಿಕ್ಕು, ಇದರ ಒಂದೆರಡು ಕಂಬಗಳು ಜರುಗಿದ್ದರೂ ಸಂಪೂರ್ಣ ಕಲಾಕೃತಿ ಕುಸಿಯುತ್ತಿದ್ದುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಹಲವು ರೀತಿಯ ಕಾರ್ಯಕ್ರಮ ಮತ್ತು ಪ್ರಯೋಗಗಳಿಗೆ ಇದರ ಹಜಾರಗಳನ್ನು ಬಳಸಿ ಅದ್ಭುತ ನಿರೂಪಣೆಗಳಿಗೆ ಬಳಸಬಹುದಾದ ಸಾಧ್ಯತೆಗಳನ್ನು ಕೂಡ ಸ್ಥಳೀಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗತ್ತು ಕಲಾತ್ಮಕ ಕ್ರಿಯಾತ್ಮಕ ಯೋಜನೆ ರೂಪಿಸದೇ ಕಡೆಗಣಿಸಿದ್ದೂ ಕೂಡ ಎದ್ದು ಕಾಣುತ್ತದೆ.
ಅಲ್ಲಿ ರಾಜ ಪರಿವಾರ ಕುಳಿತುಕೊಂಡು ಸೌಂದರ್ಯವನ್ನು ಆಸ್ವಾದಿಸುವ ವಿಶಾಲವಾದ ಇಣುಕು ಕೋಣೆಗಳು ಆರಡಿ ಎತ್ತರದಲ್ಲಿ ರಾರಾಜಿಸುತ್ತಿವೆ. ಪ್ರತಿ ಹನ್ನೆರಡಡಿ ಅಂತರದಲ್ಲಿ ಎರಡೂ ಕಡೆಗಳಲ್ಲಿ ಗೋಡೆಗೆ ಆವರಣಾಕೃತಿಯಲ್ಲಿ ಸಾಲು ಸಾಲು ಸಾಲ ಭಂಜಿಕೆಯರನ್ನು, ಚಕ್ರಾರ್ಕವಾದ ವಿನ್ಯಾಸಗಳನ್ನೂ ನಿರ್ಮಿಸಲಾಗಿದೆ. ಅಗಾಧ ಅಳತೆಯ ಕಲ್ಲಿನ ಕಂಬಗಳು ಪ್ರತಿ ಹಂತದಲ್ಲೂ ಚಚ್ಚೌಕಕ್ಕೆ ಸಮಾನವಾಗಿ ವಿನ್ಯಾಸಿಸಲಾಗಿದೆ.
ಗಣಿತದ ಅಷ್ಟೂ ಸೂತ್ರಗಳ ಅನ್ವಯ ಎದ್ದು ಕಾಣುವ ನಿರ್ಮಿತಿಗೆ ಒತ್ತುಕೊಟ್ಟಿದ್ದು, ಕಾಲಮಾನ ಮತ್ತು ಶಾಸ್ತ್ರಸಹಿತ, ನವಗ್ರಹ ಗಳ ಮಹತ್ವ ಮತ್ತು ಅವುಗಳ ನಿಖರ ಅಸ್ತಿತ್ವವನ್ನು ತೋರಿಸುವ ಸಚಿತ್ರ ಲೇಖನಗಳಿವೆ. ಕೊರೆಯಲಾಗಿರುವ ಶಿಲಾ ದೃಶ್ಯಗಳು ಅಲ್ಲ ನಿಂತು ನೋಡುವಂತೆ ಮಾಡುತ್ತವೆ. ಅಷ್ಟಭುಜಾಕೃತಿಯ ಪ್ರವೇಶದ್ವಾರ ಅರಮನೆಯ ನೆಲಮಾಳಿಗೆಗೆ ಇಳಿಯುತ್ತಿರುವ ಸೂಚನೆ ನೀಡುತ್ತದೆ. ಐದಂತಸ್ತಿನ ನೆಲದಾಳದಲ್ಲಿ ಇಳಿದು ಹೋಗುವ ಅರಮನೆಯ ಬದಲಾಗಿ ನೀರು ಗೋಚರಿಸಿದಾಗಲೇ ಗೊತ್ತಾಗುತ್ತದೆ. ಇದು ಅರಮನೆಯ ನೆಲಮಾಳಿಗೆಯಲ್ಲ ಬಾವಿ ಎಂದು. ಬಹುಶಃ ಅರಮನೆಯ ಮಾದರಿಯಲ್ಲಿ ಬಾವಿಗೂ ಕಲೆಯ ಸ್ಪರ್ಶ ನೀಡಿರುವ ಅಪರೂಪದ ಕೆಲವೇ ಕೆಲವು ನಿರ್ಮಾಣದಲ್ಲಿ ಇದ್ದ ರಾಜಮರ್ಯಾದೆ ಸಲ್ಲಲೇಬೇಕಿದೆ.
ಅನಾಮತ್ತು ನೂರು ಅಡಿಗಿಂತಲೂ ಮಿಗಿಲು ಆಳದಲ್ಲಿ ಈಗಲೂ ನೀರಿನ ಒರತೆ ಮತ್ತು ಸಾಕಷ್ಟು ಗಲೀಜಿನೊಂದಿಗೆ ಪುರಾತನ ವೈಭವಕ್ಕೆ ಸಾಕ್ಷಿಯಾಗಿ ನಿಂತಿರುವ, ಎಪ್ಪತ್ತೈದು ಮೀ. ಉದ್ದದ ಅಡಾಲಜ್ ಎಂಬ ವೈಭವೋಪೇತ ಬಾವಿಯ ಕತೆ ಇದು. ಪೂರ್ತಿ ಭಾರತದ ಯಾಕೆ ವಿಶ್ವದ ಇಂತಹ ವರ್ಣ ಸದೃಶ್ಯ, ಕಲೆಗಾರಿಕೆಯ ಅರಮನೆಯನ್ನು ಹೋಲುವ ಬಾವಿ ಇನ್ನೊಂದಿಲ್ಲ. ಇದು ಆಗಿನ ಕಾಲದಲ್ಲಿ ಕುಡಿಯುವ ನೀರಿಗಿದ್ದ ಮಹತ್ವ ಮತ್ತು ಅದಕ್ಕೆ ನೀಡುತ್ತಿದ್ದ ಪ್ರಾಶಸ್ತ್ಯದ ಅರಿವಾಗುತ್ತದೆ. ಮಕ್ಕಾಗದ, ಉದುರದ, ಪುಡಿಯಾಗದ ಕೆಂಪು ಕಲ್ಲಿನ ನಿರ್ಮಾಣ ಕಲರ್ ಫುಲ್.
ದಕ್ಷಿಣ ಗುಜರಾತಿನ ಮುಖಭಾಗದ ಎದುರಾಗಿ ನಿಲ್ಲುವ ಅಡಾಲಜ್ ಮೂಲತಃ ರಾಜಮನೆತನದ ಕುಡಿಯುವ ನೀರಿಗೋಸ್ಕರ ನಿರ್ಮಿಸಿದ ವಾಘೇಲಾ ರಾಜನ ಅದ್ಭುತ ಶಿಲ್ಪಗಾರಿಕೆ. ಕ್ರಿ.ಶ. 1498ರಲ್ಲಿ ರಾಣಿ ವಾಘೇಲಾ ದೇವಿಗೋಸ್ಕರ ವೀರಸಿಂಹ ವಾಘೇಲಾ ವಿಖ್ಯಾತ ಶಿಲ್ಪಿಗಳನ್ನು ನಿಯಮಿಸಿ ಈ ಬಾವಿಯನ್ನು ನಿರ್ಮಿಸಲಾಗಿದ್ದು ಸಂಸ್ಕೃತದಲ್ಲಿ ಬರೆದು ಇರಿಸಿರುವ ಶಾಸನವೊಂದು ಈ ವಿಷಯವನ್ನು ದೃಢೀಕರಿಸಿದೆ. ಆದರೆ ಎಂದಿನಂತೆ ಮರಾಮೋಸದ ದಾಳಿ ಮಾಡುತ್ತಿದ್ದ ಮೊಘಲರ ಪದ್ಧತಿಗೆ ವಾಘೇಲಾ ರಾಜ ಕೂಡ ಬಲಿಯಾದ.
ಮುಸ್ಲಿಂ ದೊರೆಯಾದ ಮೊಹಮದ್ ಬೇಗ್ಡಾಲ, ವಾಘೇಲಾ ರಾಜಮನೆತನದ ವೀರಸಿಂಹನನ್ನು ಮೋಸದಿಂದ ಸೋಲಿಸಿ ಯುದ್ಧ ದಲ್ಲಿ ಕೊಲ್ಲಿಸಿದ. ಆಗ ಅವನ ಪಟ್ಟದ ರಾಣಿಯಾದ ರಾಣಿ ರೂಪವತಿ, ಅರಮನೆ ಮತ್ತು ಸಮಾಜ ತನ್ನ ಜನರನ್ನು ಉಳಿಸಿ ಕೊಳ್ಳುವ ಸಲುವಾಗಿ, ಬೇಗ್ಡಾನನ್ನು ಒಪ್ಪಿ ಕೊಳ್ಳುವ ಅನಿವಾರ್ಯತೆಗೆ ಸಿಲುಕುತ್ತಾಳೆ. ಇಲ್ಲದಿದ್ದರೆ ಸಂಪೂರ್ಣ ರಾಜ್ಯ ಕಣ್ಣೆದು ರಿನಲ್ಲೇ ಸುಖಾಸುಮ್ಮನೆ ಹುಡಿಯಾಗಲಿತ್ತು.
ಅದಕ್ಕಾಗಿ ಆಕೆ ವೀರಸಿಂಹನ ನೆನಪಲ್ಲಿ ಅರಮನೆಯಿಂದ ತುಸು ದೂರದ, ಆಕರ್ಷಕ ಮೈದಾನದಂತಹ ಪ್ರದೇಶ ‘ಅಡಾಲಜ’ ಎಂಬ ಸ್ಥಳದಲ್ಲಿ ನಿರ್ಮಿಸುತ್ತಿದ್ದ ಬಾವಿಯನ್ನು ಪೂರ್ತಿಗೊಳಿಸುವ ಶರತ್ತಿನ ಮೇರೆಗೆ ಅವನನ್ನು ವರಿಸುತ್ತಾಳೆ. ಅವಳ ರೂಪಕ್ಕೆ ಮಾರು ಹೋಗಿದ್ದ ಮೊಹಮದ್ ಬೇಗ್ಡಾ ಆಕೆಯ ಎಲ್ಲ ಶರತ್ತುಗಳನ್ನು ಒಪ್ಪಿ ರಾಜ್ಯ ಮತ್ತು ಜನರನ್ನು ಉಳಿಸಿ ಬಾವಿಯ ಕೆಲಸ ಮುಂದುವರಿಸಿ ಪೂರೈಸುತ್ತಾನೆ. ಅವಳ ಇಚ್ಛೆಯಂತೆ ಸ್ಥಳೀಯ ಶಿಲ್ಪಿಗಳಲ್ಲದೆ ಇನ್ನಷ್ಟು ಆಕರ್ಷಕವಾಗಿಸಲು ಆರು ಜನ ಅರೇಬಿಕ ಶಿಲ್ಪಿಗಳ ಸಹಾಯದಿಂದ ಅದನ್ನು ಅದ್ಭುತವಾಗಿ ವಿನ್ಯಾಸಗೊಳಿಸಿದ. ಹಾಗಾಗಿ ಅಡಾಲಜ್ ವಾವ್ (ಬಾವಿ) ಇಂಡೊಅರೇಬಿಕ್ ಶೈಲಿಯಲ್ಲಿ ಸಿದ್ಧವಾಯಿತು.
ವಿಶೇಷ ಶಿಲಾಹಲಿಗೆಗಳು, ತಂತ್ರದ ಕಾರಣ ಶತಮಾನಗಳ ಕಾಲ ಬೀದಿಯಲ್ಲಿ ಬಾಯ್ದೆರೆದುಕೊಂಡಿದ್ದರೂ ಚೆಕ್ಕು ಚೆದುರದೆ ಉಳಿದುಕೊಂಡಿದೆ. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಉತ್ತರಕ್ಕೆ ಇಳಿಜಾರಾಗಿ ವಸ್ತುಶಃ ಭಾರತೀಯ ವಾಸ್ತು ವಿನ್ಯಾಸದಂತೆ ನಿರ್ಮಿಸ ಲಾಗಿರುವ ಅಡಾಲಜ್ ಬಾವಿಗೆ ಆರಂಭದಲ್ಲಿ ಪೂರ್ವದಿಂದ ಇಪ್ಪತೈದಡಿಗೂ ಅಗಲದಳತೆಯ ದ್ವಾರಗಳಿವೆ. ಪ್ರತಿ ಮೂಲೆಗೂ ಒಂದರಂತೆ ಎಂಟು ದಿಕ್ಕಿಗೂ ಅಗಾಧ ಕಲ್ಲಿನ ಕಂಬಗಳನ್ನು ಕಾಣದಂತೆ ಚಿತ್ರದಲ್ಲಿ ಮರೆಯಾಗಿಸಿ ನಿಲ್ಲಿಸಿರುವ ರೀತಿ ಅನನ್ಯ. ಅದಕ್ಕಾಗೇ ಎರಡೂ ಭಾಗದಲ್ಲಿ ಆರೆಂಟು ಜನರು ಕೂರಬಹುದಾದಷ್ಟು ವಿಶಾಲ ಕೋಣೆಗಳನ್ನು ನೆಲದಿಂದ ಮೇಲ್ಭಾಗಕ್ಕೆ ನಿರ್ಮಿಸಲಾಗಿದೆ.
ಪ್ರತಿ ಮಹಡಿಯಲ್ಲೂ ಶೃಂಗಾರಾತ್ಮಕ ಚಿತ್ರಗಳು, ಭೈರವ, ದೇವಾನುದೇವತೆಗಳು, ಭರತನಾಟ್ಯದ ಭಂಗಿಗಳು ಸೇರಿದಂತೆ ಹಲವು ಪಶು ಪಕ್ಷಿಗಳ ಚಿತ್ರಗಳನ್ನು ಶಿಲ್ಪಗಾರಿಕೆಯಲ್ಲಿ ನಿರ್ಮಿಸಲಾಗಿದ್ದು ಅಕ್ಷರಶಃ ಅರಮನೆಯೊಂದನ್ನು ಪ್ರವೇಶಿಸುವ ಅನುಭವ ನೀಡುತ್ತದೆ. ಮಳೆ ಕೊಯ್ಲು ಪದ್ಧತಿಯ ಸ್ಪಷ್ಟ ವಿನ್ಯಾಸ ಇದರ ವಿಶೇಷವಾಗಿದ್ದು ಸುತ್ತಲಿನ ಅಗಾಧ ಮೈದಾನದಲ್ಲಿ ಬೀಳಬಹು
ದಾಗಿದ್ದ ಸಂಪೂರ್ಣ ಮಳೆಯ ನೀರು ಇಲ್ಲಿ ಸಂಗ್ರಹವಾಗುವಂತೆ ನಿರ್ಮಿಸಿದ್ದ ಕಾರಣ ಇವತ್ತಿಗೂ ಈ ಬಾವಿಯಲ್ಲಿ ನೀರಿನ
ಸಂಗ್ರಹ ಕಾಣಬಹುದಾಗಿದೆ.
ಮರಳು ಕಲ್ಲು ಎಂದೇ ಖ್ಯಾತವಾಗಿದ್ದ ಶಿಲ್ಪಕಲೆಗಾರಿಕೆಗೆ ಉಪಯೋಗಿಸುತ್ತಿದ್ದ ತಾಮ್ರವರ್ಣದ ಅಗಾಧ ಅಳತೆಯ ಶಿಲೆಗಳನ್ನು ಬಳಸಲಾಗಿದ್ದು ಸತತವಾಗಿ ಆರು ಶತಮಾನಗಳಿಂದಲೂ ಮಕ್ಕಾಗದೆ ನಿಂತಿರುವ ಅಡಾಲಜ್ ಇವತ್ತಿಗೂ ಆರ್ಕಿಟೆಕ್ಟ್ಗಳಿಗೆ ಕೌತುಕ ಮತ್ತು ಸವಾಲಿನ ನಿರ್ಮಾಣ. ಕಾರಣ ಸುಲಭಕ್ಕೆ ಕಲ್ಲುಗಳ ಜೋಡಣೆ ಇಲ್ಲಿ ಕಾಣಸಿಗದಂತಿದ್ದು ಅದೇ ಇವತ್ತಿಗೂ ಶಿಥಿಲಗೊಳ್ಳದ ವಿನ್ಯಾಸದ ರಹಸ್ಯವೂ ಆಗಿದೆ. ಹಲವು ರೀತಿಯಲ್ಲಿ ನವನವೀನ ತಂತ್ರeನದ ಮೂಲಕ ಹಲವು ವಾಸ್ತು ಶಿಲ್ಪಿಗಳು ಇದರ ವಿನ್ಯಾಸ ಮಾಹಿತಿ ಕೆದಕಲು ಯತ್ನಿಸಿ ವರ್ಷಾನುಗಟ್ಟಲೇ ಪ್ರಯತ್ನಿಸಿ ಕೈಬಿಟ್ಟಿದ್ದಾರೆ.
ಯಾವ ಮೂಲೆಯಲ್ಲೂ ಜೋಡಣೆಯ ಕುರುಹು ಕೊಡದ ಚೆಂದ ಅಷ್ಟೆ ಸುರಕ್ಷಾತ್ಮಕ ನಿರ್ಮಾಣ ಇವತ್ತಿಗೂ ಸವಾಲು. ಇನ್ನು
ಇತಿಹಾಸದ ಪ್ರಕಾರ, ನಿರ್ಮಾಣವಾದ ಮೇಲೆ ಅದರ ರಹಸ್ಯ ಯಾವತ್ತಿಗೂ ಬೇರೆ ಕಾಮಗಾರಿಗೆ ದಕ್ಕದಿರಲಿ ಎನ್ನುವ ಕಾರಣಕ್ಕೆ ನಿರ್ಮಾಣದ ಎಲ್ಲ ಶಿಲ್ಪಿಗಳ ಜತೆಗೆ ಕಾರ್ಮಿಕರನ್ನೂ ಬೆಗ್ಡಾ, ಈ ನಿರ್ಮಾಣದ ನಂತರ ಕೊಲ್ಲಿಸಿ ಇಂತಹ ಇನ್ನೊಂದು ಅಪೂರ್ವ ನಿರ್ಮಾಣ ಸಾಧ್ಯವಾಗದಂತೆ ಮಾಡಿದ. ಆದ್ದರಿಂದಲೇ ಗುಜಾರಾತಿನಲ್ಲಿ ಇದೇ ಮಾದರಿ ಹೋಲುವ ಹಲವು ಚಿಕ್ಕ ಪುಟ್ಟ ಬಾವಿ ಗಳಿದ್ದರೂ ಅಡಾಲಜ್ನಂತಹ ಇನ್ನೊಂದು ಬಾವಿ ನಿರ್ಮಾಣವಾಗಲೇ ಇಲ್ಲ. ಇದರ ಪ್ರತಿಕೃತಿಯಂತೆ ಹಲವು ನಿರ್ಮಾಣ ಗಳಿದ್ದರೂ ಉಹೂಂ ಅಡಾಲಜ್ಗೆ ಮತ್ತೊಂದು ಸಾಟಿಯಾಗಲಿಲ್ಲ.
ಅಹಮದಾಬಾದ್ ನಗರದಿಂದ 18 ಕಿ.ಮೀ. ದೂರದಲ್ಲಿರುವ ಎಡತಿರುವಿನಲ್ಲಿ ಒಂದೊಮ್ಮೆ ಕಾಡಂಚಿನಲ್ಲಿ ಇದ್ದಿರಬಹುದಾದ ಅಡಾಲಜ್ ವಾವ್ ಇವತ್ತು ಸಂರಕ್ಷಿತ ಸ್ಮಾರಕ. ವ್ಯವಸ್ಥಿತ ವೀಕ್ಷಣೆಗೆ ಮೇಲ್ಭಾಗದಲ್ಲಿ ಕಬ್ಬಿಣದ ಬೇಲಿ ಮತ್ತು ಬಲೆಗಳನ್ನು ಹಾಕಿ ರಕ್ಷಿಸುವುದರೊಂದಿಗೆ ಕೇವಲ ಮೊದಲ ಹಂತದ ಕೆಳ ಮಹಡಿಯವರೆಗೆ ಮಾತ್ರ ವೀಕ್ಷಣೆಗೆ ಪ್ರವೇಶ ಕಲ್ಪಿಸಲಾಗಿದೆ. ನಂತರದಲ್ಲಿ ಬಾವಿಯ ಆಳ ಹೆಚ್ಚಾಗುವುದರೊಂದಿಗೆ ಅಲ್ಲಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.
ಜತೆಗೆ ನಿರ್ವಹಣೆ ಇಲ್ಲದಿದ್ದಾಗ ಆಗುತ್ತಿದ್ದ ಇನ್ನಿತರ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಪ್ರವೇಶದ ಹಲವು ಮಜಲು ಮತ್ತು ಸ್ಥಳಗಳನ್ನು ನಿಷೇಧಿಸಲಾಗಿದೆ. ಹಾಗಾಗಿ ದೂರದಿಂದಲೇ ಕಲಾತ್ಮಕತೆ ಕಣ್ತುಂಬಿಕೊಳ್ಳಬೇಕಿದೆ. 2009ರಲ್ಲಿ ನೀರು ಬೆರಳಿಗೆ ತಗಲುವಷ್ಟರ ಆಳದವರೆಗೆ ನಾನು ಇಳಿದು ಬಂದಿದ್ದೆ. ಈಗ ಕೇವಲ ಮೊದಲ ಸುತ್ತಿಗೆ ಮಾತ್ರ ಪ್ರವೇಶ. ಸುತ್ತಲೂ ರಕ್ಷಣಾತ್ಮಕ ಬೇಲಿ ಹಾಗೂ ಕಬ್ಬಿಣದ ಬಲೆಯ ಮೂಲಕ ಸುರಕ್ಷತೆಯನ್ನು ಒದಗಿಸಲಾಗಿದೆ. ಇದರಿಂದಾಗಿ ಬಾವಿಯ ಮೇಲ್ಭಾಗ ದಲ್ಲೂ ವಿಹರಿಸುತ್ತಾ ಅಡಾಲಜ್ನ ಸೌಂದರ್ಯವನ್ನು ಸವಿ ಯಬಹುದಾಗಿದೆ. ಗುಜರಾತಿನ ಶಿಲ್ಪಕಲೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅಡಾಲಜ್ ಸದ್ಯದ ಬಾವಿಗಳ ಇತಿಹಾಸದಲ್ಲಿ ರಾಣಿಯ ಸ್ಥಾನದಲ್ಲಿದೆ.