Monday, 25th November 2024

ಕಾಣಿಸದೆ ಕಲ್ಲು ಕಲ್ಲಿನಲಿ ಕಂದಗಿರಿ

ಅಲೆಮಾರಿಯ ಡೈರಿ

mehandale100@gmail.com

ಒಡಿಶಾದ ಭುವನೇಶ್ವರದಿಂದ ಹತ್ತಿರವಾಗುವ ಕುಮಾರಿ ಪರ್ವತ ಶ್ರೇಣಿಯಲ್ಲಿರುವ ಕಂದಗಿರಿ ಪಕ್ಕದ ಬೆಟ್ಟ ಉದಯಗಿರಿ. ಅಂದರೆ ಉದಯಿಸುವ ಬೆಳಗಿನ ಸೂರ್ಯನ ಕಿರಣ ಎಂದರ್ಥ. ಇಲ್ಲಿ ಬೆಳಗಿನ ಮೊದಲ ಸೂರ್ಯನ ಕಿರಣ ಪ್ರಕಾಶಿಸುವ ಕಾರಣ ಇದಕ್ಕೆ ಆ ಹೆಸರು.

ಇಲ್ಲಿ ಇದ್ದದ್ದು ಸುಮಾರು ನೂರು ಚಿಲ್ಲರೆ ಗುಹೆಗಳು. ಕೈಗೆ ದಕ್ಕಿದ್ದು, ಸಿಕ್ಕಿದ್ದು ಮತ್ತು ಉಳಿದದ್ದು ಮೂವತ್ತು ಚಿಲ್ರೆ ಮಾತ್ರ. ಉಳಿದವೂ ಇವೆ, ಆದರೂ ಜೀರ್ಣವಾದ ಹೊಡೆತಕ್ಕೆ ಮತ್ತು ಕಾಲನ ತೆಕ್ಕೆಯಲ್ಲಿ ಹುಗಿದು ಹೋಗಿ ಅಡಿ ಮೇಲಾಗಿವೆ. ಅಷ್ಟಕ್ಕೂ ಆನೆಗುಹೆಯಲ್ಲಿ ಒಂದು ಬುಡ ಮೇಲೆ ಮಾಡಿಕೊಂಡು ಬಿದ್ದಿದ್ದ ಲಿಪಿ ಕೈಗೆ ಹತ್ತದಿದ್ದರೆ ಬಹುಶಃ ನಮ್ಮ ಪ್ರಾಚೀನ ಶಾಸ್ತ್ರ ಮಾಹಿತಿಗೆ ಇದು ದಕ್ಕುತ್ತಲೇ ಇರಲಿಲ್ಲ. ಆದರೆ ಅಚಾನಕ್ ಆಗಿ ಆ ತಿರುಗಿ ಬಿದ್ದಿದ್ದ ಕಲ್ಲಿನ ಹಿಂದೆ ಇದ್ದ ಆನೆಗುಹೆಯ ಒಳಭಾಗದ ಗೋಡೆಗಳಲ್ಲಿ ಬರೆಯಲಾಗಿದ್ದ ಪ್ರಾಕ್ತನ ಮತ್ತು ಸಂಸ್ಕೃತ ಲಿಪಿ, ಆಗಿನ ಕಾಲದ ಕಳಿಂಗ ರಾಜ ಖರವೇಲನ ಸಂಪೂರ್ಣ ಇತಿಹಾಸ ತೆರೆದಿಡುವುದ ರೊಂದಿಗೆ, ಕಂದಗಿರಿ ಮತ್ತು ಉದಯಗಿರಿಗಳ ಬೆಳಕಿಗೆ ಬಂದವು.

ಇತಿಹಾಸ ಜಾಲಾಡಿದರೆ ಶ್ರೀಮಂತ ಜೈನ ಸಂಸ್ಕೃತಿ ಮತ್ತು ಸನ್ಯಾಸಿಗಳ ಪರಂಪರೆಗಾಗಿ ನೂರಾರು ವಾಸಯೋಗ್ಯ ಗುಹೆಗಳನ್ನು ಇಲ್ಲಿ ನಿರ್ಮಿಸಿದ್ದು, ಪುರಾತತ್ವ ಇಲಾಖೆಗೆ ಎದ್ದು ಕೂಡಲು ಇಷ್ಟು ಸಾಕಿತ್ತು. ಕಂದಗಿರಿಯ ನಸೀಬು ಬದಲಾಗಿz ಆವತ್ತಿಂದ. ಭಾರತದ ಪ್ರಾಚೀನ ಇತಿಹಾಸ ಮತ್ತು ಪ್ರವಾಸಿ ಜನರಿಗೆ ಒಡಿಶಾದ ಹೊಸ ಮಜಲಿನ ಪ್ರದೇಶವೊಂದು ಬೆರಳಿಗೆ ತಗುಲಿತ್ತು. ಕ್ರಿ.ಪೂ.ನೆ ಶತಮಾನದ ರಾಜ ಖರವೇಲನ ಆಳ್ವಿಕೆಯಲ್ಲಿ ಅವನ ಆಸ್ಥಾನ ಮತ್ತು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಯ ಚಿತ್ರಣಗಳ ಸಮೇತ ಏಕಶಿಲಾ ವಿನ್ಯಾಸದಲ್ಲಿ ಕೊರೆದಿರುವ ಗುಹೆಗಳ ಸಾಲಿನಲ್ಲಿ ಕೆಲವೊಂದು ಅಕ್ಷರಶಃ ಮಹಲಿನ ವಿನ್ಯಾಸದ ರೀತಿಯಲ್ಲಿ ನಿರ್ಮಿತವಾಗಿದ್ದು, ಎರಡ್ಮೂರು ಕೋಣೆಗಳ ಮಹಲಿನ ವಿನ್ಯಾಸದ ಗುಹೆಗಳಲ್ಲಿ ಪ್ರತಿ ಗೋಡೆಗಳೂ ಅಲಂಕಾರಿಕ ಕೆತ್ತನೆಯ ರೂಪದಲ್ಲಿ ಇತಿಹಾಸ ವನ್ನು ಉಳಿಸಿಡಲಾಗಿದೆ.

ರಾಜನ ವಿಜಯದ ಸೈನ್ಯದ ಪರಾಕ್ರಮದ ಸಾಲು, ಸಾಲು ಕೆತ್ತನೆಗಳು ಮತ್ತು ರಾಣಿವಾಸದ ಚಿತ್ರಗಳ ಸಮೇತ ಆಯಾ ಕಾಲಾವಧಿಯ ಸಾಂಸ್ಕೃತಿಕ, ಸಾಮಾಜಿಕ ಚಿತ್ರಗಳನ್ನು ಹೊಂದಿವೆ. ಮಾಹಿತಿಯ ಭಂಡಾರವೇ ಪ್ರತಿ ಕೆತ್ತನೆಯಲ್ಲೂ ಅಡಗಿದ್ದು ಕಂದಗಿರಿಯ ಶಿಲ್ಪ ಮತ್ತು ಸಾಮಾಜಿಕ ಶ್ರೀಮಂತಿಕೆಗೆ ದ್ಯೋತಕ ವಾಗಿವೆ. ಯುದ್ಧ, ಸೈನ್ಯ ಸಮಾಜದ ಹಲವು ಸ್ತರದಲ್ಲಿ ಇದ್ದ ಕಾರ್ಮಿಕರು ಮತ್ತು ಶ್ರಮಿಕರ ಕೆಲಸದ ವೈಖರಿಗಳು, ಬ್ರಾಹ್ಮಣರ ದಿನವಹಿ ಚಟುವಟಿಕೆ ಹೀಗೆ ಪ್ರತಿ ಸಾಮಾ ಜಿಕ ವ್ಯವಸ್ಥೆಗಳ ಚಿತ್ರಣ ಕಲ್ಲಿನ ಮೇಲೆ ಕೊರೆಯಲಾಗಿದ್ದು, ಇದೆಲ್ಲ ಏಕಶಿಲಾ ಯೋಜನೆ ಯಾಗಿದ್ದರಿಂದ ಕಂದಗಿರಿ ಆಶ್ಚರ್ಯ ಮೂಡಿಸುತ್ತದೆ.

ಕಾರಣ ಏಕಶಿಲಾ ನಿರ್ಮಾಣ ಏನಿದ್ದರೂ ಮೊದಲೇ ಯೋಜಿಸಿ ಕೆತ್ತನೆ ಮಾಡಬೇಕಾಗುತ್ತದೆಯಲ್ಲ. ಅಲ್ಲಿಗೆ ಸಂಪೂರ್ಣ ಗುಹಾ ಸಮೂಹದ ಅಂದಾಜು ಚಿತ್ರಣ ಮೊದಲಿಗೇ ನಿರ್ಧರಿತವಾಗಿರಬೇಕೆಂದರೆ ಆ ಶಿಲ್ಪಿಗೆ ವಿನ್ಯಾಸದ ತಾಂತ್ರಿಕತೆ ಅದ್ಯಾವ ಮಟ್ಟದಲ್ಲಿದ್ದೀತು ಊಹಿಸಿ. ಖರವೇಲನ ಕಾಲದ ನೆಟಿವಿಟಿಯ ಮಾಹಿತಿ ನೀಡುವ ಸಾಲುಸಾಲು ಗುಹೆಗಳ ಸಮೂಹದಲ್ಲಿ ಹೀಗೆ ಎರಡ್ಮೂರು ಅಂತಸ್ತಿನ ಅತ್ಯಂತ ಖಚಿತ ಲೆಕ್ಕಾಚಾರದ ನಿರ್ಮಾಣ ಸುಲಭವಲ್ಲ. ಮೊದಲನೆ ನೋಟಕ್ಕೆ
ನಮ್ಮನ್ನು ಆಕರ್ಷಿಸುವುದು ಅದರ ಗಾಳಿ ಮತ್ತು ಬೆಳಕಿನ ವ್ಯವಸ್ಥೆ. ನಿರ್ಮಾಣ ತಾಂತ್ರಿಕತೆ ಜತೆಗೆ ಖಚಿತತೆ.

ಮೂಲತಃ ಒಡಿಶಾ ಒಂದು ಮಿಶ್ರ ವಾತಾವರಣದ ನೆಲ. ಅದರಲ್ಲೂ ಭುವನೇಶ್ವರ ಉರಿ ಬಿಸಿಲಿಗೆ -ಮಸ್ಸು. ಆದರೆ ಈ ಗುಹಾ ಸಮೂಹದಲ್ಲಿ ಸೆಕೆಯ ಕಾಲದಲ್ಲೂ ಹೇರಳ ಗಾಳಿ ಮತ್ತು ತಂಪಿನಿಂದಾಗಿ ಒಳ ಪ್ರವೇಶಿಸಿದರೆ ಹೊರಕ್ಕೆ ಬರಲೇ ಮನಸ್ಸಾಗದಷ್ಟು ಕೂಲ್ ಕೂಲ್. ಕಂದಗಿರಿಯ ಅಡಿಯಲ್ಲಿ ಹೊರ ಜಗತ್ತು ಮರೆಯು ವುದು ನಿಶ್ಚಿತ. ಕಳಿಂಗ ವಂಶಕ್ಕೆ ಸೇರಿದ್ದ ಈ ಖರವೇಲನ ಕಾಲಾವಧಿ ಖಚಿತವಾಗಿ ಗುರುತಿಸಲು ಸಾಧ್ಯವಾಗಿದ್ದೇ ಇಲ್ಲಿನ ಲಿಪಿಗಳಿಂದ ಮತ್ತು ಮಾಹಿತಿಗಳಿಂದ. ಅಷ್ಟಕ್ಕೂ ಈ ಲಿಪಿಗಳೇಕೆ ಇಷ್ಟೊಂದು ಫೇಮಸ್ಸಾದವು? ಕಾರಣ ನಮ್ಮ ನೆಲ ಜಲದ ವಾತಾವರಣದಲ್ಲಿ ಹೀಗೆ ಆದಿ ಅನಾದಿ ಕಾಲದಿಂದಲೂ ಅಲ್ಲಲ್ಲಿ ಕೆತ್ತಿಡುವುದು ಮತ್ತು ಬರಹಗಳನ್ನು ಮುಂದಿನ ತಲೆ ಮಾರಿಗೆ ದಾಟಿಸುವುದು ಅದಕ್ಕಾಗಿ ಹಲವು ರೀತಿಯ ಸಂಶೋಧನೆಗಳು ಇತ್ಯಾದಿ ಹೊಸದೇನಲ್ಲ. ಅದರೆ ಇಲ್ಲಿ ಲಿಪಿಗಳು ಹಲವು ಕಾಲದಿಂದ ಲೆಕ್ಕಕ್ಕೆ ಸಿಗದೆ ಒಗಟಾಗಿಯೇ ಉಳಿದಿದ್ದವು.

ಅದರಲ್ಲೂ ಬ್ರಾಹ್ಮಿ ಲಿಪಿ ಓದುವುದೇನೂ ನಮ್ಮ ಎಕ್ಸ್‌ಪರ್ಟ್‌ಗಳಿಗೆ ಹೊಸದಾಗಿರಲಿಲ್ಲವಾದರೂ ಇದಾವ ಲಿಪಿ ಎಂದೇ ಕೈಗೆಟುಕಿರಲಿಲ್ಲ. ತೀರ ವಿಚಿತ್ರ ತಿರುವು ಮುರುವಿನ ಲಿಪಿ ತನ್ನ ರಹಸ್ಯ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಕಾಲಾನುಕ್ರಮಣಿಕೆಯಲ್ಲಿ ಶಾಸನವಾಗಿಸಿದ ಈ ಪದ್ಧತಿಯನ್ನು ಪ್ರತಿಫಲಿತ ಲಿಪಿಯಾಗಿ ಗುರುತಿಸುವು ದರೊಂದಿಗೆ ಇತಿಹಾಸದ ಮತ್ತೊಂದು ಮಜಲು ಚಾಲ್ತಿಗೆ ಬಂದಿತ್ತು. ಕ್ರಿ.ಪೂ ೨ನೆ ಶತಮಾನದ ಬಾಹ್ಮಿಲಿಪಿಯನ್ನು ಪ್ರತಿಫಲಿತ ಚಿತ್ರಣದ ರೀತಿಯಲ್ಲಿ ಕೆತ್ತಲಾಗಿತ್ತು. ಹಾಗಾಗಿ ಯಾರಿಗೂ ಅರ್ಥವಾಗದೆ ಹೋದ ಕಾರಣ ಕಂದಗಿರಿಯ ಶಾಸನ ಬೆಳಕಿಗೆ ಬಂದಿರಲಿಲ್ಲ.

ಕನ್ನಡಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಮರು ಚಿತ್ರಣವಾಗಿ ಕಾಣಿಸುತ್ತಿದ್ದ ಶಾಸನ ಹಲವು ವಿಸ್ಮಯಗಳಿಗೂ ಪ್ರತಿಫಲಿತ ಮಿರರ್ ಇಮೇಜ್ ಟೆಕ್ನಾಲಜಿಯ ಆಗಿನ ವೈeನಿಕತೆಯನ್ನೂ ತೆರೆದಿಟ್ಟಿತ್ತು. ಖರವೇಲನ ನಂತರ ಬಂದ ಕುದೇಪಸಿರಿ ಕೂಡ ಯಶಸ್ವಿ ರಾಜನಲ್ಲದೆ ಇದೇ ಗುಹಾ ಸಂಸ್ಕೃತಿಯನ್ನು ಮುಂದುವರಿಸಿದ್ದ. ಅವನ ರಾಣಿಯರ ಹೆಸರಿನಲ್ಲೂ ದೇವರ ಹೆಸರಿನಲ್ಲೂ ವಿವಿಧ ರೀತಿಯ ಆಚಾರ ವಿಚಾರಗಳ ಮಾಹಿತಿಗಾಗಿಯೂ ಗುಹಾ ನಿರ್ಮಾಣ ಸಂಸ್ಕೃತಿಯನ್ನು ಮುಂದು ವರಿಸಿದ ನಲ್ಲದೆ, ಹಲವು ದೇವನಾಗರಿ ಲಿಪಿಯ ಅತ್ಯಂತ ಸ್ಪಷ್ಟ ಸಾಲುಗಳನ್ನು ಬರೆಸಿ ಇರಿಸಿದ ಪರಿಣಾಮ ಕಳಿಂಗ ಸಾಮ್ರಾಜ್ಯದ ವಂಶಸ್ಥರ ಮಾಹಿತಿಯ ಮೇಲೂ ಬೆಳಕು ಚೆಲ್ಲುವ ಕಾರ್ಯ ಸುಲಭವಾಗಿದೆ ಎನ್ನಲಾಯಿತು.

ಆಯಾ ಕಾಲಾವಧಿಯ ಮತ್ತು ಅದರದೇ ಲೆಕ್ಕಾಚಾರದ ಮೇಲೆ ಹಲವು ವಿಭಿನ್ನ ಹೆಸರುಗಳ ಮೂಲಕ ಗುರುತಿಸುವ ಕಂದಗಿರಿಯ ಮಾಹಿತಿಯಲ್ಲಿ ತೋಟವಾ, ಅನಂತ, ತೆಂಟುಲಿ, ಕಂದಗಿರಿ-೧, ನವಮುನಿ, ಬಹುಭುಜ, ತ್ರಿಶೂಲ, ಅಂಬಿಕಾ ಮತ್ತು ಲಲಾತೆಂಡು, ಅಲಕಪುರಿ, ಜಯ ವಿಜಯ, ಪ್ರಾಣ, ಪಾಟಲಿಪುತ್ರ, ಸ್ವರ್ಗ ಪುರಿ, ಗಣೇಶ, ಜಂಬೇಶ್ವರ, ವ್ಯಾಘ್ರ, ಆನೆ, ಹರಿದಾಸ, ಧನಾಗಾರ ಹೀಗೆ ಹಲವು ಹೆಸರಿಟ್ಟು ಗುರುತಿಸಿ ಪ್ರತಿ ಗುಹೆಗಳನ್ನು ವರ್ಗೀಕರಣ ಮಾಡಲಾಗಿದ್ದು, ವಾಸ್ತು ಶಿಲ್ಪ ಮತ್ತು ಅಧ್ಯಯನ ಆಸಕ್ತರಿಗೆ ಹೇಳಿ ಮಾಡಿಸಿದ ಜಾಗ. ನೈಜವಾಗಿ ನಮ್ಮ ಬದಾಮಿ ಗುಹೆಗಳ ಶೈಲಿಯನ್ನು ಹೋಲುವ ಸಾಲು ಗುಹೆಗಳಲ್ಲಿ ಮತ್ತು
ನಿರ್ಮಾಣದ ಅಂದಚೆಂದ ಈಗಿನ ಸೆಲಿ ಜಮಾನಕ್ಕೆ ಮತ್ತೊಂದು ಹಾಟ್‌ಸ್ಪಾಟ್ ಕೂಡ.

ಒಡಿಶಾದ ಭುವನೇಶ್ವರದಿಂದ ಹತ್ತಿರದಲ್ಲಿರುವ ಕುಮಾರಿ ಪರ್ವತ ಶ್ರೇಣಿಯಲ್ಲಿರುವ ಕಂದಗಿರಿ ಪಕ್ಕದ ಬೆಟ್ಟ ಉದಯಗಿರಿ. ಎಂದರೆ ಉದಯಿಸುವ ಬೆಳಗಿನ ಸೂರ್ಯನ ಕಿರಣ ಎಂದರ್ಥ. ಇಲ್ಲಿ ಬೆಳಗ್ಗಿನ ಮೊದಲ ಸೂರ್ಯನ ಕಿರಣ ಪ್ರಕಾಶಿಸುವ ಕಾರಣ, ಬೆಟ್ಟದ ಕಿರೀಟಕ್ಕೆ ಬಿದ್ದು ಪ್ರತಿಫಲಿಸುವ ಕಾರಣ ಇದಕ್ಕೆ ಉದಯ  ಗಿರಿ ಎಂದು ಕರೆದ ವಿನ್ಯಾಸಗಾರರು ಇದರ ಬುಡದಲ್ಲೂ ಸುಮಾರು ಎರಡು ಡಜನ್ ಗುಹೆಗಳನ್ನು ನಿರ್ಮಿಸಿದ್ದಾರೆ. ಆಗಿನ ಕಾಲಮಾನಕ್ಕೆ ತಕ್ಕಂತೆ ಊಹಿಸಿದರೆ ಪರಿಣತರ ಪ್ರಕಾರ ತುಂಬ ಅನುಕೂಲಕರ ಮತ್ತು ವಾಸ ಯೋಗ್ಯ ದೃಷ್ಟಿಯಿಂದ ನಿರ್ಮಿಸಲಾದ ಗುಹೆಗಳು ಎನ್ನಲಾಗುತ್ತಿದೆ.

ಮನೆಯ ಮತ್ತು ಸಾಮಾಜಿಕ ಜೀವನದ ಲೆಕ್ಕಾಚಾರಕ್ಕೆ ಹೋಲಿಸಿದರೆ ಕ್ರಿ.ಪೂ. ಕಾಲಾವಧಿಯಲ್ಲಿ ಬೆಟ್ಟ ಪರ್ವತದ ಗುಹೆಗಳಲ್ಲಿ ಬದುಕು ನಿರ್ಮಿಸಿಕೊಂಡು ಚಳಿಗಾಳಿ ಬಿಸಿಲಿನ ತಾಪದಿಂದ ಆಶ್ರಯ ಪಡೆಯಲು ಇವು ತುಂಬ ಅನುಕೂಲವಾಗಿದ್ದವೆನ್ನುವುದರಲ್ಲಿ ಎರಡು ಮಾತೇ ಇಲ್ಲ. ಅದಕ್ಕಾಗೇ ಬಹುಶಃ ರಾಜ ಮನೆತನದವರೂ ಕೂಡ ಇವುಗಳ ಬಳಕೆ ಮಾಡಿದ್ದಿರಬಹುದೇನೋ? ನಿರ್ಮಾಣ ಶ್ರೀಮಂತಿಕೆ ನೋಡಿದರೆ ಅಪ್ಪಟ ವೃತ್ತಿಪರತೆಯ ಗುಹೆಗಳು ಮತ್ತು ಬೆಟ್ಟವನ್ನು
ಆವರಿಸಿಕೊಂಡಿರುವ ಕಂದಕ ಅದರ ಸುತ್ತುವರಿದ ರಕ್ಷಣಾತ್ಮಕ ಪರಿಸರ ಎಲ್ಲ ಮೇಳೈಸುವಾಗ ಚಿತ್ರಣವೇ ಬದಲಾಗುತ್ತಿದೆ.

ಆಯಾ ಕಾಲಾವಧಿಯ ಸ್ಥೂಲ ಚಿತ್ರ ನೀಡುವ ಅದರಲ್ಲೂ ಒಡಿಶಾದಂತಹ ಬುಡಕಟ್ಟುಗಳೇ ಆಗ ಹೆಚ್ಚಾಗಿದ್ದ ಕಾಲಾವಧಿಯ ಚಿತ್ರಣ ಇವತ್ತಿನ ಕಾಲಮಾನಕ್ಕೆ ದೊಡ್ಡ ಮಾಹಿತಿಯ ಭಂಡಾರವನ್ನೆ ತೆರೆದಿಡುತ್ತವೆ. ಅಷ್ಟಕ್ಕೂ ಕಟಕ್, ಭುವನೇಶ್ವರ, ಒಡಿಶಾ ಹೇಳಿ ಕೇಳಿ ಪ್ರವಾಸಿಗರಿಗೂ, ಇಂಥಾ ಆಸಕ್ತಿಕರ ವಿಷಯ ಅಭ್ಯಾಸಿ ಗರಿಗೂ ಹೇಳಿ ಮಾಡಿಸಿದ ಸ್ಥಳ. ಸಮುದ್ರದಾದಿಯಾಗಿ ಇತ್ತಲಿನ ಬೆಟ್ಟ ಪರ್ವತಗಳ ಸಾಲು ಸಾಲು ಅಪರೂಪದ ಹಳ್ಳಿಗಳ ಚೆಂದ ನಗರಗಳ ಒಡಿಶಾ ನಗರ ಕ್ಕಿಂತಲೂ ಮೂಲ ಜನಜೀವನದ ಸಂಸ್ಕೃತಿಯಿಂದ ಶ್ರೀಮಂತವಾಗಿದ್ದುದು ಎದ್ದು ಕಾಣುತ್ತದೆ. ಹಾಗಾಗಿ ಇವತ್ತಿಗೂ ಹಲವು ಸಂಶೋಧಕರು ಕಂದಗಿರಿ ಮತ್ತು ಉದಯಗಿರಿ ನೆತ್ತಿ ಏರಿಳಿಯುತ್ತಾ ಹುಡುಕಾಟದಲ್ಲಿದ್ದೇ ಇರುತ್ತಾರೆ.

ಯಾವ ಶಿಲಾ ಫಲಕದ ಗೆರೆಗಳು ಏನನ್ನು ಸೂಚಿಸುತ್ತವೆಯೋ ಯಾರಿಗೆ ಗೊತ್ತು. ಮುಂದೊಮ್ಮೆ ಮತ್ತೆ ಇದ್ದಕ್ಕಿದ್ದಂತೆ ಬೆಳಕಿಗೆ ಬಾಯ್ದೆರೆಯುವ ಯಾವುದೋ ಶಿಲಾಶಾಸನ ಮತ್ತೊಂದು ರಾಜವಂಶದ ಕತೆ ಹೇಳಿದರೂ ಅಚ್ಚರಿ ಇರಲಿಕ್ಕಿಲ್ಲ. ಅದರೂ ಪ್ರವಾಸಿ ನಕಾಶೆಯಲ್ಲಿ ಆ ಮಟ್ಟಿಗಿನ ಆಕರ್ಷಣೆ ಮತ್ತು ಹೆಸರು ಎರಡೂ ಇಲ್ಲದ ಉದಯಗಿರಿ ಮತ್ತು ಕಂದಗಿರಿಗಳು ಗೂಗಲ್‌ನಲ್ಲಿ ತೋರಿಸುವ ಮಾಹಿತಿಗೂ ಸ್ಥಳೀಯವಾಗಿ ಇರುವ ಸಾಧ್ಯತೆಗೂ ಅಜಗಜಾಂತರ ವ್ಯತ್ಯಾಸ ಇದೆ.