Thursday, 12th December 2024

ಹೆಚ್ಚುತ್ತಿರುವ ಮಕ್ಕಳ ಬೆಳವಣಿಗೆಯ ವೇಗ

ಅಶ್ವಿನಿ ಸುನೀಲ್

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅವರ ವಯಸ್ಸಿಗೂ ಮೀರಿದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ಕಾಣುತ್ತಿರುವುದು ಸಾಮಾನ್ಯವಾಗಿದೆ. ಮಕ್ಕಳಲ್ಲಿ ಅವರ ವಯಸ್ಸಿಗೆ ಇರಬೇಕಾದ ಮುಗ್ಧತೆಯು ಕಳೆದುಹೋಗಿ ಬೇಗನೆ ಪ್ರೌಢರಾಗುತ್ತಿರುವುದು ಯೋಚಿಸಬೇಕಾದ ವಿಷಯವೇ ಆಗಿದೆ. ನಮ್ಮ ಮಕ್ಕಳ ಬಾಲ್ಯವನ್ನು ನಮ್ಮದೇ ಬಾಲ್ಯದ ಜತೆ ಹೋಲಿಸಿ ನೋಡಿದಾಗ ಖಂಡಿತವಾಗಿಯೂ ಈ ವ್ಯತ್ಯಾಸದ ಅರಿವಾಗುತ್ತದೆ. ಬಾಲ್ಯ ದಲ್ಲಿ ನಮ್ಮಲ್ಲಿದ್ದ ಅದೇ ಮುಗ್ದತೆಯು ಇಂದಿನ ಮಕ್ಕಳಲ್ಲಿಯೂ ಇದೆಯೇ? ಮಾನಸಿಕ ವಾಗಿ ಮಾತ್ರವಲ್ಲ ದೈಹಿಕ ವಾಗಿಯೂ ವಯಸ್ಸಿಗೆ ಮೀರಿದ ಬೆಳವಣಿಗೆ ಕಂಡುಬರುತ್ತಿದೆ ಎಂದು ಅನ್ನಿಸುತ್ತಿಲ್ಲವೇ?

ಹಲವಾರು ಸಂಶೋಧನೆಗಳು ಇಂದಿನ ಮಕ್ಕಳಲ್ಲಿ ಬೆಳವಣಿಗೆಯ ವೇಗ ಹೆಚ್ಚಾಗಿರುವುದನ್ನು ದೃಢ ಪಡಿಸಿದೆ. ಮಕ್ಕಳಲ್ಲಿ ವಯಸ್ಸಿಗೂ ಮೀರಿದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣಗಳು ಹಲವಾರು.ಇಂದು ಸ್ಥೂಲತೆ ಎಂಬುದು ಹದಿಹರೆಯದ ಮಕ್ಕಳನ್ನು ಕಾಡುವ ಸಮಸ್ಯೆಯಾದರೆ ಮಾನಸಿಕ ಖಿನ್ನತೆಯು ಕೂಡ ಮಕ್ಕಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಈ ರೀತಿ ಅಸಹಜ ಬೆಳವಣಿಗೆಗಳಿಗೆ ಕಾರಣಗಳೇನು? ಅನಾರೋಗ್ಯಕರ ಜೀವನಶೈಲಿ ಮತ್ತು ದೈಹಿಕ ವ್ಯಾಯಾಮದ ಕೊರತೆಯೇ ಮುಖ್ಯ ಕಾರಣಗಳೆಂದು ಹೇಳಬಹುದು. ಹಾರ್ಮೋನ್ ಇಂಜೆಕ್ಷನ್ ಗಳನ್ನು ನೀಡಿದಂತಹ ಹಸುವಿನ ಹಾಲಿನ ಸೇವನೆ, ಹಾರ್ಮೋನ್ ಇಂಜೆಕ್ಷನ್ ಗಳಿಗೆ ಒಡ್ಡಿ ಕೊಂಡಂತಹ ಪ್ರಾಣಿಗಳ ಮೊಟ್ಟೆ, ಮಾಂಸ, ಇತರ ಪೌಲ್ಟ್ರಿ ಆಹಾರಗಳ ಸೇವನೆಯು ಮಕ್ಕಳಲ್ಲಿ ಹಾರ್ಮೋನ್ ಗಳ ವ್ಯತ್ಯಾಸಕ್ಕೆ ಕಾರಣ ವಾಗುತ್ತಿವೆ.

ಅನಾರೋಗ್ಯಕರ ಆಹಾರ ಪದ್ಧತಿ : ಅತಿಯಾದ ಜಂಕ್ ಫುಡ್, ರೆಡಿ ಟು ಈಟ್ ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆಯು ಮಕ್ಕಳಲ್ಲಿ ಕಂಡು ಬರುವ ಸ್ಥೂಲತೆಗೆ ಕಾರಣವಾಗಿದೆ ಬಿಪಿಎ ಯುಕ್ತ ಪ್ಲಾಸ್ಟಿಕ್ ಗಳ ಬಳಕೆ ಹೈಬ್ರಿಡ್ ತರಕಾರಿಗಳು, ಕೀಟ ನಾಶಕಗಳ ಬಳಕೆ, ರಾಸಾಯನಿಕಗಳನ್ನು ಬಳಸಿ ಬೆಳೆಸಿದ ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳ ಬಳಕೆ. ಅತಿಯಾದ ಟಿವಿ ಹಾಗೂ ಮೊಬೈಲ್ ಗಳ ಬಳಕೆ, ಮಕ್ಕಳಿಗೆ ವಯಸ್ಸಿಗೂ ಮೀರಿದ ವಿಷಯ ಗಳು ಸುಲಭವಾಗಿ ನೋಡಲು ಸಿಗುವುದು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ವ್ಯತ್ಯಾಸ ತರುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿದ ಒತ್ತಡಗಳು ಕೂಡ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತಿದೆ.

ನಾಫ್ತಲಿನ್ ಬಾಲ, ಏರ್ ಫ್ರೆಶನರ್, ಟಾಯ್ಲೆಟ್ ಕ್ಲೀನರ್, ಸಾಬೂನು ಹಾಗೂ ಸೌಂದರ್ಯವರ್ಧಕ ಹೀಗೆ ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುಗಳು ರಾಸಾ ಯನಿಕಯುಕ್ತ ವಾಗಿದ್ದು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಅಕಾಲ ಪ್ರೌಢತೆ ಯನ್ನು ತಡೆಗಟ್ಟುವುದು ಹೇಗೆ? ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಕ್ಕಳು ಅಕಾಲ ಪ್ರೌಢತೆಗೆ ಒಳಗಾಗುವುದನ್ನು ಕಡಿಮೆಗೊಳಿಸಬಹುದು.

ಆದಷ್ಟು ಹಾರ್ಮೋನ್ ಇಂಜೆಕ್ಷನ್ ಗಳಿಗೆ ಒಡ್ಡಿಕೊಂಡಂತಹ ಹಾಲು, ಮೊಟ್ಟೆ, ಮಾಂಸ ಸೇವನೆಯಿಂದ ದೂರವಿರಬೇಕು. ದೇಸಿ ಹಸುಗಳ ಹಾಲು ಸೇವನೆ ಒಳ್ಳೆಯದು. ಬಿಪಿಎ ಯುಕ್ತ ಪ್ಲಾಸ್ಟಿಕ್ ಸಾಮಾಗ್ರಿಗಳು, ಮಕ್ಕಳ ಆಟಿಕೆಗಳ ಬಳಕೆಯನ್ನು ಕಡಿಮೆಗೊಳಿಸಿ. ಆಹಾರ ವನ್ನು ಶೇಖರಿಸಲು ಪ್ಲಾಸ್ಟಿಕ್ ಡಬ್ಬದ ಬದಲು ಗಾಜಿನ ಡಬ್ಬಗಳನ್ನು ಬಳಸಿ. ರೆಡಿ ಟು ಈಟ್, ಸಂಸ್ಕರಿತ ಆಹಾರ ಬಳಕೆಯನ್ನು ಕಡಿಮೆಗೊಳಿಸಿ, ಒಳ್ಳೆಯ ಪೋಷಕಾಂಶಯುಕ್ತ ಆಹಾರವನ್ನು ಮ ಕ್ಕಳಿಗೆ ನೀಡಬೇಕು. ಹಣ್ಣು-ತರಕಾರಿಗಳನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ಸ್ವಚ್ಛಗೊಳಿಸಿ, ಅದರಲ್ಲಿರುವ ರಾಸಾಯ ನಿಕಗಳು, ಕೀಟನಾಶಕಗಳನ್ನು ಚೆನ್ನಾಗಿ ತೊಳೆದು ಬಳಸಬೇಕು.

ದೇಹಕ್ಕೆ ವ್ಯಾಯಾಮದ ಕೊರತೆಯು ಮಕ್ಕಳಲ್ಲಿ ಸ್ಥೂಲತೆಗೆ ಕಾರಣವಾಗುತ್ತಿದೆ. ಮಕ್ಕಳನ್ನು ಆದಷ್ಟು ಹೊರಾಂಗಣ ಆಟವಾಡಲು ಪ್ರೇರೇಪಿಸಿ. ಇತ್ತೀಚಿನ ಸಮೀಕ್ಷೆ ಗಳಲ್ಲಿ ಬಹಿರಂಗವಾಗಿರುವ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಅಕಾಲ ಪ್ರೌಢತೆಗೆ ಒಳಗಾಗುತ್ತಿರುವ ಮಕ್ಕಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗಿಂತ ನಗರದ ಮಕ್ಕಳಲ್ಲಿಯೇ ಹೆಚ್ಚು. ಇದಕ್ಕೆ ನಗರ ಪ್ರದೇಶದ ಜನರ, ಜೀವನ ಶೈಲಿಯೇ ಮುಖ್ಯ ಕಾರಣವೆಂದು ಖಂಡಿತವಾಗಿಯೂ ಹೇಳಬಹುದು.

ಬದಲಾದ ಜೀವನ ಶೈಲಿಯಲ್ಲಿ ಸ್ವಚ್ಛವಾದ, ರಾಸಾಯನಿಕ ಮುಕ್ತವಾದ , ಆಹಾರ ಪದಾರ್ಥಗಳು ದೊರಕುವುದು ಬಹಳ ಕಷ್ಟ. ಆದರೂ ಮಕ್ಕಳ ಹಿತಕ್ಕಾಗಿ ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಮೊಗ್ಗೊಂದು ಅರಳಲು ತನ್ನದೇ ಸಮಯ ಬೇಕಾಗುತ್ತದೆ. ಹೆತ್ತವರು ತೆಗೆದುಕೊಳ್ಳುವ ಸಕಾಲಿಕ ನಿರ್ಧಾರವು ಅರಳುತ್ತಿರುವ ಮೊಗ್ಗು ಬಾಡದಂತೆ ತಡೆಗಟ್ಟಬಹುದು.