Sunday, 15th December 2024

ಮುಗುಳ್ನಗೆಯ ಚೆಲುವಿನ ಕಥೆ

ಗಾಳಿಯಲಿ ಬೆರೆತ ಸುಗಂಧದಂತೆ ತೇಲಿ ಬಂತು ಪ್ರೀತಿಯ ಅಲೆ!

ಆನಂದ ಜೇವೂರ್ ಕಲಬುರಗಿ

ನನ್ನ ಲವ್ ಸ್ಟೋರಿಯ ಮೊದಲ ಭಾಗವನ್ನು ಹೇಳುವುದಾದರೆ, ಕಾಲೇಜಲ್ಲಿ ಒಬ್ಬಳು ಚೆಲುವೆ ನನ್ನ ಮನಸ್ಸನ್ನು ಕದ್ದಳು, ನೋಡಿದ ಮೊದಲ ನೋಟದಲ್ಲಿಯೇ ಕ್ರಶ್ ಆಗಿ ಅವಳ ಬಳಿ ಮಾತನಾಡಬೇಕೆಂದರೆ ಆಗಿರಲಿಲ್ಲ. ಮಾತಾಡಿಸದೆ ಹಾಗೇ ಬಂದಿದ್ದೆ. ಮಾತನಾಡುತ್ತೇನೆ ಎಂಬ ಧೈರ್ಯ, ಮಾತನಾಡುವ ತವಕ ಎರಡು ಇದ್ದುಕೊಂಡು, ಮನಸ್ಸಿನಲ್ಲಿ ಕಾತುರದಿಂದ ಕಾಯು ತ್ತಿದ್ದೆ. ಈ ಅನುಭವವು ‘ವಿವಾಹ’ ಪುರವಣಿಯಲ್ಲಿ ಪ್ರಕಟವಾದ ನಂತರ ಗೆಳೆಯರಿಂದ, ಅಮ್ಮನಿಂದ ಒಳ್ಳೆಯ ರೆಸ್ಪಾನ್ಸ್ ಬಂತು.

‘ಆನಂದಗೆ ಲವ್ವಾಗಿದೆ, ಸೂಪರ್ ಲವ್ ಸ್ಟೋರಿ’ ಅಂತ ಹೇಳ್ತಿದ್ರು. ಈ ಸಮಯದಲ್ಲಿ ಸೆಮಿಸ್ಟರ್ ಎಕ್ಸಾಮ್ ಪ್ರಾರಂಭವಾಗಿತ್ತು. ಹಾಗೆ ನನಗೆ ಆಕೆಯ ಹೆಸರು ತಿಳಿದಿರಲಿಲ್ಲ, ಹೇಗೆ ಹುಡುಕಾಡುವುದು ಗೊತ್ತಾಗಿಲ್ಲ. ಕಾಲೇಜಿನಲ್ಲಿ ಎಕ್ಸಾಮ್ ಸಮಯ ಆಗಿದ್ದರಿಂದ ಪರೀಕ್ಷೆಗೆ ಸಿದ್ಧನಾಗಿ ಹೋಗುತ್ತಿದ್ದೆ. ನಮಗೆ ಪರೀಕ್ಷೆಗೆ ೫ ವಿಷಯದ ಇದ್ದಿದ್ದು, ಮೊದಲೆ ರಡು ಪೇಪರ್ ಚೆನ್ನಾಗೇ ಬರೆದಿದ್ದೆ. ಮೂರನೇ ಪೇಪರ್ ಶುಕ್ರವಾರ.

ಪರೀಕ್ಷೆಗೆ ಸಿದ್ಧನಾಗಿ ಹೋಗುವ ಮುನ್ನ ಅಮ್ಮನ ಕರೆ ಬಂತು. ‘ನಿನಗೆ ಒಂದು ಗುಡ್ ನ್ಯೂಸ್ ಇದೆ. ಸ್ಕಾಲರ್ಶಿಪ್ ಹಣ ಬ್ಯಾಂಕಿಗೆ ಹಾಕಿದ್ದಾರೆ’ ಅಂದ್ರು. ಪಕ್ಕದಲ್ಲೇ ಕುಳಿತ ಆ ಹುಡುಗಿ ಅದೇ ಖುಷಿಯಲ್ಲಿ ಆ ದಿನ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದೆ. ಮುಂಚೆಯೇ ಲೇಖನ ಓದಿದ್ದ ಗೆಳೆಯ ಅಕ್ಷಯ್ ‘ಎಕ್ಸಾಮ್ ಹಾಲ್‌ನಲ್ಲಿ ಅವಳು ಸಿಗಬಹುದು, ನಿಮ್ಮ ಪಕ್ಕದಲ್ಲಿಯೆ’ ಅಂತ ಹೇಳಿದ್ದ.

ಕಾಕತಾಳೀಯವಾಗಿ ಅದು ನಿಜವಾಯಿತು. ಎಕ್ಸಾಮ್ ರೂಮಿಗೆ ಮುಂಚಿತವಾಗಿಯೇ ಹೋಗಿದ್ದೆ. ಅವಳನ್ನು ಕಂಡು ಮನದ ಅನುರಾಗದ ಕವಿತೆಯಲ್ಲಿ ಸಾ ರೆ ಗ ಮ ಪ ಎಲ್ಲಾ ಸ್ವರಗಳು ನುಡಿಸಿದಂತೆ ಆಯ್ತು. ಅದರಲ್ಲೂ ಇಬ್ಬರು ಒಂದೇ ಡೆಸ್ಕಿನಲ್ಲಿ ಪರೀಕ್ಷೆ ಬರೆಯುತ್ತೇವೆ ಅಂತ ಅಂದುಕೊಂಡಿರಲಿಲ್ಲ. ಅವಳನ್ನು ಕಂಡ ಈ ಆನಂದನಿಗೆ ಆನಂದಮಯವಾಯಿತು.

ಮೊದಲು ‘ಹಾಯ, ಯಾವ ಪೇಪರ್ ಇವತ್ತು?’ ಅಂತ ಕೇಳಿದೆ. ಅದಕ್ಕೆ ಅವಳು ‘ಜನರಲ್ ಕೆಮಿಸ್ಟ್ರಿ’ ಅಂತ ಹೇಳಿದ್ಳು. ‘ನಿಮ್ದು
?’ ಅಂದಾಗ ಎಂ.ಎ ಜರ್ನಲಿಸಂ ಎಂದೆ. ನಂತರ ನಾನು ಮೊದಲೆರಡು ಪೇಪರ್ ಹೇಗಾಯಿತು ಅಂತ ಕೇಳಿದೆ. ‘ನಿಮ್ಮ ಹೆಸರು
ಏನು’ ಅಂತ ಕೇಳಿದಕ್ಕೆ ಮೆಲ್ಲನೆ ಆಕೆ ತನ್ನ ಹೆಸರು ಹೇಳಿದ್ದು ನನಗೆ ಕೇಳಿಸಲಿಲ್ಲ. ಈಕೆ ಕೇರಳದ ಹುಡುಗಿ ಆಗಿರಬಹುದು ಅಂತ
ನಾನು ಅಂದು ಕೊಂಡೆ. ಹೆಸರು ಗೊತ್ತಾಗದ ಕಾರಣ ‘ನಿಮ್ಮ ಹಾಲ್ ಟಿಕೆಟ್ ಕೊಡಿ’ ಅಂತ ಹಾಲ್ ಟಿಕೆಟ್ ತಗೊಂಡೆ.

ಅಲ್ಲಿತ್ತು ಅವಳ ಹೆಸರು. ‘ನಿಮ್ಮ ಹೆಸರು?’ ಎಂದಾಗ ಆನಂದ್ ಎಂದೆ. ‘ನೀವು ನಕ್ಕಾಗ ನನ್ನ ನೆನಪಿರಲಿ’ ಎಂದಾಗ ಆಕೆಯ ಮುಖದ ಮೇಲೆ ಮುಗುಳ್ನಗೆ ಮೂಡಿತು. ಅದೇ ರೂಮಿನಲ್ಲಿದ್ದ ನನ್ನ ಗೆಳೆಯರು ಇದನ್ನು ಕಂಡು ‘ತುಂಬಾ ಲಕ್ಕಿ ನೀನು’ ಎಂದರು. ಮೊದಲೆರಡು ಪರೀಕ್ಷೆಗಿಂತ ನನಗೆ ಆ ದಿನದ ಪರೀಕ್ಷೆ ಸಮಯಕ್ಕಿಂತ ಬೇಗನೆ ಮುಗಿಯಿತು. ಎಕ್ಸಾಮ್ ಕೊಠಡಿಯಿಂದ ಹೊರ ಬಂದು ನನ್ನ ಲೇಖನದ ಬಗ್ಗೆ ಅವಳ ಸ್ಪಂದನ ಏನಿರುತ್ತದೆ ಅಂತ ತಿಳಿದುಕೊಳ್ಳಬೇಕೆಂದು ಇನ್ಸ್ಟಾಗ್ರಾಮ್ ಐಡಿ ಅಥವಾ ಫೋನ್ ನಂಬರ್ ತಗೊಳ್ಳಬೇಕು, ಫ್ರೆಂಡ್ಸ್ ಆಗೋಣ ಅಂದುಕೊಂಡಿದ್ದೆ.

ಆದರೆ ಅಷ್ಟರಲ್ಲಿ ಅವಳ ಗೆಳತಿಯರು ಬಂದು ಆಕೆಯನ್ನು ಕರೆದುಕೊಂಡು ಹೊರಟುಹೋದರು. ಮುಂದಿನ ಬಾರಿ ಅವಳ ಸ್ಪಂದನೆಗಾಗಿ ಕಾಯುತ್ತಿರುವೆ.