ನವದೆಹಲಿ: ಭಾರತದಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗು ಮತ್ತೆ ಮತ್ತೆ ತಾನಿರುವುದನ್ನು ಎಚ್ಚರಿಸುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 7240 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇದೇ ಅವಧಿಯಲ್ಲಿ 8 ಮಂದಿ ಮಹಾಮಾರಿ ಯಿಂದ ಪ್ರಾಣ ಬಿಟ್ಟಿದ್ದರೆ, 3,591 ಸೋಂಕಿತರು ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 43,197,522ಕ್ಕೆ ಏರಿಕೆಯಾಗಿದೆ. ಇದುವರೆಗೂ 42,640,301 ಸೋಂಕಿತರು ಗುಣಮುಖರಾಗಿದ್ದು, 524,723 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ ಏರಿಕೆಯಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಡಿಮೆ ಆಯ್ತು ಎನ್ನುವಷ್ಟರಲ್ಲೇ ಮಹಾ ಮಾರಿ ಆಟ ಶುರು ಮಾಡಿದೆ. ಕಳೆದ 95 ದಿನಗಳ ನಂತರದಲ್ಲಿ ಕೋವಿಡ್-19 ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 7,000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಿಲಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ ಏರಿಕೆ ಆಗುವಂತೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಅಪಾಯ ತಪ್ಪಿದ್ದಲ್ಲ ಎನ್ನುವುದನ್ನು ಪ್ರಕರಣಗಳ ಸಂಖ್ಯೆಯು ಪದೇ ಪದೆ ಎಚ್ಚರಿಸುತ್ತಿವೆ. ಕಳೆದ 24 ಗಂಟೆಗಳಲ್ಲೇ 376 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.