Sunday, 15th December 2024

ಯಕ್ಷಗಾನದೊಳಗೊಂದು ಡಿಜಿಟಲ್‌ ಕ್ರಾಂತಿ

ಯಕ್ಷಗಾನ ಕಲೆ ಇಂದು ಡಿಜಿಟಲೀಕರಣ ಆಗುತ್ತಿದೆ. ಇದೂ ಒಂದು ಸ್ಥಿತ್ಯಂತರದ ಸ್ಥಿತಿ.

ರವಿ ಮಡೋಡಿ ಬೆಂಗಳೂರು

ಯಕ್ಷಗಾನ ನಮ್ಮ ನಾಡಿನ ಸಾಂಸ್ಕೃತಿಕ ಸಲ್ಲಕ್ಷಣಗಳಲ್ಲಿ ಒಂದು. ಬಹು ಹಿಂದೆ ಎತ್ತಿನಗಾಡಿ ಅಥವಾ ತಲೆಯ ಮೇಲೆ ಪೆಟ್ಟಿಗೆ ಯನ್ನು ಹೊತ್ತು ಊರಿನಿಂದ ಊರಿಗೆ ತಿರುಗಾಟ ಮಾಡಿ, ಗದ್ದೆ, ಬಯಲಿನಲ್ಲಿ ರಂಗ ಸ್ಥಳವನ್ನು ಕಟ್ಟಿಕೊಂಡು, ಸಾವಿರಾರು ಮನಸ್ಸುಗಳಿಗೆ ನಿತ್ಯವೂ ಕಲಾ ಸಾಕ್ಷ್ಯಾತ್ಕಾರ ವನ್ನು ಉಣಬಡಿಸುತ್ತಿರುವ ಈ ಮಾಧ್ಯಮ ನೂರಾರು ವರುಷಗಳಿಂದ ಬೆಳೆಯು ತ್ತಲೇಯಿದೆ.

ಇದಕ್ಕೆ ಪೂರಕವಾಗಿ ಹಳ್ಳಿಗರು ತಲೆತಲೆಮಾರುಗಳ ಕಾಲದಿಂದ ಇದನ್ನು ಬೆಳೆಸಿದರು, ಪೋಷಿಸಿದರು. ಕನ್ನಡ ಶ್ರೇಷ್ಠ ಸಾಹಿತಿ ಗಳಾದ ಡಾ.ಶಿವರಾಮ ಕಾರಂತರಂತವರು ಈ ಕಲೆಯ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅದಕ್ಕೆ ತಮ್ಮದೇಯಾದ ಆಯಾಮ ಗಳನ್ನು ನೀಡಿದರು. ಹೀಗೆ ಸಾಗಿ ಬಂದಿರುವ ಕಲೆ ಯಾವತ್ತು ಕೂಡ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೇ, ವಿಸ್ತರಿಸಿಕೊಳ್ಳುತ್ತ, ಕಾಲಕ್ಕೆ ತಕ್ಕಂತೆ ಹರವಿಕೊಳ್ಳುತ್ತ, ಚಲನಶೀಲ ಗುಣವನ್ನು ಹೊಂದಿದ್ದರಿಂದಲೇ ಅದು ಈ ಹೊತ್ತಿಗೂ ಕೂಡ ಪ್ರಸ್ತುತ ವಾಗಿದೆ.

ಚಲನ ಶೀಲ ಬದುಕು
ಕಲಾವಿದನ ಬದುಕೇ ಚಲನ ಶೀಲ. ತನ್ನೊಳಗಿನ ಸುಪ್ತ ಪ್ರತಿಭೆಯನ್ನು ಸದಾ ಪ್ರದರ್ಶಿಸುವುದಕ್ಕೆ ಹಪಹಪಿಸುತ್ತಿರುತ್ತಾನೆ. ಆದರೆ ಕರೋನ ಕಾಲದಲ್ಲಿ ಅಂತಹ ಅವಕಾಶಗಳು ದೊರೆಯದೆ ಮಾನಸಿಕವಾಗಿ ಜರ್ಜರಿತನಾಗಿದ್ದ. ರಂಗಮಂದಿರಗಳು ಬಂದ್
ಆಗಿದ್ದವು, ಮೇಳಗಳನ್ನು ನಿಲ್ಲಿಸಬೇಕಾಗಿತ್ತು, ಜನರ ಸಂಚಾರವಿರಲಿಲ್ಲ. ನೂರಾರು ಕೋಟಿ ವಹಿವಾಟನ್ನು ನಡೆಸುತ್ತಿದ್ದ ಕಲಾ ಜಗತ್ತು, ಒಮ್ಮೇಲೆ ನಿಂತು, ಇದನ್ನೇ ನಂಬಿದ್ದವರ ಬದುಕು ತಲ್ಲಣಗೊಂಡಿದ್ದವು. ಇದು ಕಲಾವಿದರ ಸ್ಥಿತಿಯಾದರೆ, ಕರೋನದ ಬಗೆಗಿನ ಋಣಾತ್ಮಕ ಮಾತುಗಳು,ಆಪ್ತರ ಅಗಲುವಿಕೆ ಇತ್ಯಾದಿ ಕಾರಣದಿಂದ ನೊಂದಿದ್ದ ಪ್ರೇಕ್ಷಕರು ಅದರಿಂದ ಹೊರಬರಲು
ಮಾರ್ಗಗಳನ್ನು ನೋಡುತ್ತಿದ್ದರು.

ಇಂತಹ ಸಂದರ್ಭದಲ್ಲಿ ಯಕ್ಷಗಾನದಂತಹ ರಂಗಮಾಧ್ಯಮವನ್ನು ಡಿಜಿಟಲ್ ಮಾಧ್ಯಮವಾಗಿ ನೋಡುವ ಪ್ರಯೋಗಕ್ಕೆ ಚಾಲನೆ ದೊರೆಯಿತು. ಯಾವುದೋ ಸ್ಥಳದಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಅಲ್ಲಿಂದ ನೇರವಾಗಿ ಸಾಮಾಜಿಕ ಜಾಲತಾಣದ ಮೂಲಕ ವಾಗಿ ಪ್ರಸಾರ ಮಾಡುತ್ತ, ಹೊಸ ದಾರಿಯನ್ನು ಪ್ರೇಕ್ಷಕರಿಗೆ ತೋರಿಸಿದರು. ಅನಿವಾರ್ಯ ಸ್ಥಿತಿಯಲ್ಲಿದ್ದ ಸಿದ್ಧ ಪ್ರೇಕ್ಷಕರು ಇದನ್ನು ಒಪ್ಪಿ ಅಪ್ಪಿ ಮುನ್ನಡೆಸಿದರು. ಮುಕ್ತವಾಗಿ ಅದನ್ನು ಸ್ವೀಕರಿಸುತ್ತ ಪ್ರೋತ್ಸಾಹಿಸಿದರು. ಈ ಬೆಳವಣಿಗೆಯಲ್ಲಿ ಕಳೆದ ಎರಡು ವರುಷಗಳಲ್ಲಿ ಸಾವಿರಾರು ಕಾರ್ಯಕ್ರಮಗಳು ಡಿಜಿಟಲ್ ವೇದಿಕೆಯಲ್ಲಿ ಸಂಪನ್ನವಾಗಿರುವುದು ಅದರ ಜನಪ್ರಿಯತೆಯನ್ನು
ಸಾಕ್ಷೀಕರಿಸುತ್ತದೆ.

ಇಂದು ಕರೋನ ಮರೆಯಾಗಿ ಎಲ್ಲರ ಬದುಕು ಎಂದಿನಂತೆ ಸಾಗುತ್ತಿದೆ. ಸಾಂಸ್ಕೃತಿಕ ಲೋಕದಲ್ಲಿ ಮತ್ತೆ ಕಾರ್ಯಕ್ರಮಗಳು
ಆಯೋಜನೆಗೊಳ್ಳುತ್ತಿವೆ. ಜನರು ಕೂಡ ಎಂದಿನಂತೆ ಕಾರ್ಯಗಳಲ್ಲಿ ಖುದ್ದಾಗಿ ಭಾಗವಹಿಸುತ್ತಿದ್ದಾರೆ. ಆದರೆ ಇನ್ನು ಕೂಡ ಹೊರಗಿನ ಪ್ರೇಕ್ಷಕರು ಕಾರ್ಯಕ್ರಮದ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಯಸುತ್ತಿರುವುದು ಹೊಸ ಬೆಳವಣಿ ಯಾಗಿದೆ. ಈ ಕಾರಣಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕ್ರಮಗಳು ಇಂದಿಗೂ ಡಿಜಿಟಲ್ ಮಾಧ್ಯಮದಲ್ಲಿ ನೇರ ಪ್ರಸಾರ ವಾಗುತ್ತಿವೆ. ಜೊತೆಗೆ ಸಾಕಷ್ಟು ಒಳ್ಳೆಯ ಪ್ರೋತ್ಸಾಹವೂ ಸಿಗುತ್ತಿದೆ . ಈಗ ಸಂಘಟಕರು ತಮ್ಮ ಕಾರ್ಯಕ್ರಮವನ್ನು ನೋಡಿದವರ ಸಂಖ್ಯೆಯನ್ನು ಡಿಜಿಟಲ್ ಮಾಧ್ಯಮವನ್ನು ಸೇರಿಸಿ ಹೇಳಬೇಕಾಗಿದೆ!

ಯಕ್ಷಗಾನದಲ್ಲಿ ಪ್ರದರ್ಶನಗಳನ್ನು ನೇರ ಪ್ರಸಾರ ಮಾಡುವ ಹಲವಾರು ಸಂಸ್ಥೆಗಳಿವೆ. ಕೋಸ್ಟಲ್ ಲೈವ್ಸ್, ನಮ್ಮ ಕುಡ್ಲ, ಮಲ್ಯಾಡಿ ಲೈವ್ಸ್ ಇತ್ಯಾದಿ ಸಂಸ್ಥೆಗಳು ದಿನನಿತ್ಯವೂ ಹಲವು ಕಾರ್ಯಕ್ರಮಗಳನ್ನು ಡಿಜಿಟಲ್ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿವೆ. ಈ ಬಗ್ಗೆ ಮಲ್ಯಾಡಿ ಲೈವ್ಸ್ ಮುಖ್ಯಸ್ಥರಾದ ಪ್ರಶಾಂತ್ ಮಲ್ಯಾಡಿಯವರನ್ನು ಮಾತನಾಡಿಸಿದಾಗ, ಕಳೆದ ಎರಡು ವರುಷಗಳಲ್ಲಿ ಮುನ್ನೂರಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಸಂಯೋಜಿಸಿರುವುದಾಗಿ ತಿಳಿಸುತ್ತಾರೆ. ಜೊತೆಗೆ ಅವರ ಚಾನೆಲ್ ನ ಅನಾಲಿಟಿಕ್ಸ್ ಈ ಮಾಧ್ಯಮದ ಸಾಧ್ಯತೆಗಳನ್ನು ನಮ್ಮ ಮುಂದೆ ಪೂರ್ಣವಾಗಿ ತೆರೆದಿಡುತ್ತದೆ.

ಒಂದು ಕೋಟಿ ವೀಕ್ಷಣೆ

ಇದರ ಪ್ರಕಾರ ಇದುವರೆಗೆ ಅವರ ಚಾನೆಲ್ ನ್ನು ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದಾರೆ. ಯ್ಯೂಟ್ಯೂಬ್, ಫೇಸ್ಬುಕ್ ಸೇರಿ). ಇದರಲ್ಲಿ ಯಕ್ಷಗಾನ ವಲಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಬೇರೆ ಊರಿನ, ಬೇರೆ ರಾಜ್ಯದ ಮತ್ತು ದೇಶದ ಪ್ರೇಕ್ಷಕರಿದ್ದಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಸುಮಾರು ೩೦ಕ್ಕಿಂತ ಅಧಿಕ ದೇಶಗಳಿಂದ ಈ ಕಾರ್ಯಕ್ರಮಗಳನ್ನು ನೋಡಿದ್ದಾರೆ. ಯಕ್ಷಗಾನದಿಂದ ಅನೇಕ ವರುಷಗಳಿಂದ ದೂರವಿದ್ದ ಪ್ರೇಕ್ಷಕರು, ಇದುವರೆಗೂ ಯಕ್ಷಗಾನವನ್ನೇ ನೋಡದ ಪ್ರೇಕ್ಷಕರು, ಡಿಜಿಟಲ್ ಮಾಧ್ಯಮದಲ್ಲಿ ಯಕ್ಷಗಾನವನ್ನು ನೋಡಿ, ಅದರ ಪ್ರೇಕ್ಷಕರಾಗುತ್ತಿರುವುದನ್ನು ತಮ್ಮ ಕಾಮೆಂಟ್ಸ್ ಮೂಲಕವಾಗಿ ತಿಳಿಸುತ್ತಿದ್ದಾರೆ. ಈಗಾಗಲೇ ಸಂಸ್ಥೆಯೂ ೫೦ ಸಾವಿರಕ್ಕೂ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು ಇವರಲ್ಲಿ ೨೫-೫೫ ವಯೋಮಾನದವರು ಶೇಕಡ ೬೭ರಷ್ಟಿದ್ದಾರೆ.

ಒಂದು ಸಂಸ್ಥೆಯ ಅನಾಲಿಟಿಕ್ಸ್ ಮಾತ್ರ. ಇಂತಹ ಮಾಹಿತಿ ಗಳು ಬೇರೆ ಬೇರೆ ಸಂಸ್ಥೆಗಳಿಂದಲೂ ಪಡೆದಾಗ ಡಿಜಿಟಲ್ ಮಾಧ್ಯಮದ ಗಾತ್ರ ಇನ್ನಷ್ಟು ಹಿರಿದಾಗಿ ಕಾಣಿಸುತ್ತದೆ. ಯಕ್ಷಗಾನದ ಡಿಜಟಲ್ ಮಾಧ್ಯಮಕ್ಕೆ ತನ್ನದೇಯಾದ ಸಾಧ್ಯತೆ,
ಕುಂದುಕೊರತೆಗಳು, ಮಿತಿಗಳಿವೆ ಎಂಬುದನ್ನು ಯಾವಾಗಲೂ ಮರೆಯಬಾರದು. ಸಾಮಾನ್ಯವಾಗಿ ಕಲಾವಿದ ತನ್ನ ಪ್ರದರ್ಶನ ಗಳನ್ನು ಮಾಡುವಾಗ ಪ್ರೇಕ್ಷಕರ ಭಾವವನ್ನು, ಚಪ್ಪಾಳೆ, ಪ್ರೋತ್ಸಾಹವನ್ನು ನಿರೀಕ್ಷಿಸುತ್ತಾನೆ. ಅದನ್ನು ಗುರುತಿಸಿ, ಅದಕ್ಕೆ ತಕ್ಕಂತೆ ತನ್ನ ಪ್ರದರ್ಶನಗಳನ್ನು ಬದಲಾಯಿಸಿಕೊಳ್ಳುತ್ತ ಉತ್ಸಾಹವನ್ನು ಹೆಚ್ಚಿಸಿಕೊಳ್ಳುತ್ತಾನೆ.

ಆದರೆ ಡಿಜಿಟಲ್ ಮಾಧ್ಯಮದಲ್ಲಿ ಪ್ರೇಕ್ಷಕರ ನಾಡಿಮಿಡಿತವನ್ನು, ಕಲಾವಿದರು ಆ ಕ್ಷಣದಲ್ಲಿ ಅರಿಯುವುದಕ್ಕೆ ಸಾಧ್ಯ ವಾಗುವು ದಿಲ್ಲ. ಹಾಗಾಗಿ ಈ ಮಾಧ್ಯಮಕ್ಕೆ ಕಲಾವಿದ ಹೊಂದಿಕೊಳ್ಳಬೇಕಾಗಿದೆ. ಇಲ್ಲಿ ತಮ್ಮನ್ನು ನೋಡುವ ಕಣ್ಣುಗಳು ಕೇವಲ
ಎದುರಿಗೆ ಕುಳಿತ ಪ್ರೇಕ್ಷಕರು ಮಾತ್ರವಲ್ಲದೇ, ಅಂಗೈಯಲ್ಲಿ ಜಂಗಮವಾಣಿಯನ್ನು ಹಿಡಿದವರು ಕೂಡ ಎನ್ನುವುದನ್ನು ಮರೆಯುವ ಹಾಗಿರುವುದಿಲ್ಲ.

ಡಿಜಿಟಲ್ ಮಾಧ್ಯಮದಲ್ಲಿ ಇಂದು ಕಾರ್ಯಕ್ರಮವನ್ನು ನೋಡುವುದಕ್ಕೆ ತಪ್ಪಿದ್ದರೂ ನಾಳೆ ಮತ್ತೆ ನೋಡುವ ಅವಕಾಶ ಸಂಪನ್ನವಾಗುತ್ತಿದೆ. ಎಲ್ಲ ಕಾರ್ಯಕ್ರಮಗಳು ಭವಿಷ್ಯದ ದಾಖಲೆಗಳಾಗುತ್ತವೆ. ನೂರು ವರುಷದ ನಂತರವೂ ಕೂಡ ಇಂದಿನ ಕಾರ್ಯಕ್ರಮದ ಪ್ರೇಕ್ಷಕರಾಗುವುದಕ್ಕೆ ಸಾಧ್ಯವಿದೆ. ಈ ಬಗೆಯಲ್ಲಿ ಕೂಡ ಕಲಾವಿದರು ಯೋಚಿಸಬೇಕಿದೆ. ಇನ್ನಷ್ಟು ಸೂಕ್ಷ್ಮವಾಗಿ ಕಲಾಪ್ರದರ್ಶನಗಳನ್ನು ಮಾಡುವ ಅನಿವಾರ್ಯತೆ ಎದುರಾಗುತ್ತಿದೆ.

ವಸ್ತು ನಿಷ್ಠ ಅಭಿಪ್ರಾಯ 
ಯಕ್ಷಗಾನವು ದೃಶ್ಯ ಮಾಧ್ಯಮವಾಗಿರುವುದರಿಂದ ಎಷ್ಟು ಪರಿಣಾಮಕಾರಿಯಾಗಿ ಡಿಜಿಟಲ್ ಮಾಧ್ಯಮದಲ್ಲಿ ಯಕ್ಷಗಾನದ ವಾತಾವರಣವನ್ನು ಸೃಜಿಸುತ್ತದೆ ಎನ್ನುವುದು ಚರ್ಚೆಯ ವಿಷಯ. ಇದರ ಜೊತೆಗೆ ಈ ಮಾಧ್ಯಮದ ಮೂಲಕವಾಗಿ ಯಕ್ಷಗಾನವು ಹೊರ ಪ್ರಪಂಚಕ್ಕೆ ಇನ್ನಷ್ಟು ಹತ್ತಿರವಾಗುತ್ತಿರುವುದರಿಂದ ಪ್ರೇಕ್ಷಕರ ವಸ್ತುನಿಷ್ಠ ಅಭಿಪ್ರಾಯವನ್ನು, ನೋಡುವ ರೀತಿಯನ್ನು ಕೂಡ ಅವಲೋಕಿಸಬೇಕಿದೆ. ಹಿಂದೆಲ್ಲ ಕಲಾವಿದರ ತಮ್ಮ ಪ್ರದರ್ಶನಗಳನ್ನು ತಾವೇ ವಿಮರ್ಶಿಸಿಕೊಳ್ಳುವುದಕ್ಕೆ ಸಾಧ್ಯ ವಾಗುತ್ತಿರಲಿಲ್ಲ.

ಹಾಗಾಗಿ ಸಾಕಷ್ಟು ಸಮಯ ಪ್ರಬುದ್ಧತೆಯನ್ನು ಸಾಧಿಸುವುದಕ್ಕೆ ಬೇಕಾಗಿತ್ತು. ಆದರೆ ಈಗ ಡಿಜಿಟಲ್ ಮಾಧ್ಯಮದ ಕಾರಣದಿಂದ ತನ್ನ ಪ್ರದರ್ಶನಗಳನ್ನು ತಾನೇ ನೋಡಿಕೊಂಡು ಸ್ವಯಂ ವಿಮರ್ಶೆಯನ್ನು ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಪ್ರೇಕ್ಷಕರ ಭಾವ ಏನೆಂದು ಎಂದು ಅರಿತು ಮುಂದಿನ ಪ್ರದರ್ಶನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯ ವಾಗುವುದು ಕಲಾವಿದನ ದೃಷ್ಠಿಯಲ್ಲಿ ಇದು ಲಾಭದಾಯಕವೆನಿಸುತ್ತದೆ.

ಹವ್ಯಾಸಿ ಸಂಘಗಳು
ಇಂದು ವೃತ್ತಿ ಮೇಳಕ್ಕಿಂತ ಹೆಚ್ಚಾಗಿ ಹವ್ಯಾಸಿ ಸಂಘ, ಸಂಸ್ಥೆಗಳು, ತಾಳಮದ್ದಲೆಗಳು ಈ ಮಾಧ್ಯಮವನ್ನು ಅವಲಂಬಿಸಿರುವು
ದನ್ನು ಕಾಣಬಹುದು. ಆಟಗಳ ಪ್ರದರ್ಶನಗಳಿಗಿಂತಲೂ ತಾಳಮದ್ದಲೆಗಳು ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚು ಪೂರಕವಾಗಿದೆ.
ವಾಚಿಕವೇ ಪ್ರದಾನವಾಗಿರುವ ಕಾರಣಕ್ಕೆ ಅಲ್ಲಿ ದೃಶ್ಯದ ಹಂಗಿರುವುದಿಲ್ಲ. ಈ ನಿಟ್ಟಿನಲ್ಲಿ ಪ್ರೇಕ್ಷಕ ಆಟಗಳಿಗಿಂತಲೂ ಹೆಚ್ಚಾಗಿ ತಾಳಮದ್ದಲೆಯನ್ನು ಪೂರ್ಣವಾಗಿ ಆಸ್ವಾದಿಸುವುದಕ್ಕೆ ಸಾಧ್ಯವಿದೆ.

ಈ ಹಿಂದೆ ಕ್ಯಾಸೆಟ್ ಯುಗದಲ್ಲಿ ಇಂತಹ ಕ್ರಾಂತಿ ಯುಂಟಾಗಿ ಸಾವಿರಾರು ಕ್ಯಾಸೆಟ್ ಗಳು ಯಕ್ಷಗಾನದಲ್ಲಿ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂದು ಈ ಮಾಧ್ಯಮಕ್ಕೆ ಇಂದು ನೆಟ್ವರ್ಕ್ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಾರ್ಯಕ್ರಮಗಳು ಹೆಚ್ಚಾಗಿ ಹಳ್ಳಿಗಳಲ್ಲಿ ನಡೆಯುವುದರಿಂದ ಅಲ್ಲಿ ನೆಟ್ವರ್ಕ್ ಸಮಸ್ಯೆಗಳು ತಲೆದೊರುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ಅಳವಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಜೊತೆಗೆ ಪ್ರೇಕ್ಷಕನಿಗೂ ಕೂಡ kÃk thhg ನೆಟ್ವರ್ಕ್ ಇದ್ದರೆ ಮಾತ್ರ ಪ್ರದರ್ಶನದ ಪೂರ್ಣ ಸವಿಯನ್ನು ಸವಿಯುವುದಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಗಳಿಗೆ ಮುಂದೆ
ಪರಿಹಾರಗಳು ಸಿಗಬಹುದೆಂದು ಭಾವಿಸಬಹುದು.