Monday, 25th November 2024

ಸಂವಹನೆಯಲ್ಲಾಗುವ ನಿತ್ಯ ನಷ್ಟ !

ರಾವ್ ಭಾಜಿ

journocate@gmail.com

ನಿತ್ಯನಷ್ಟವನ್ನು ಬೌದ್ಧಿಕ ದಿವಾಳಿಗಳಾದ ಪಠ್ಯಪುಸ್ತಕ ಪರಿಷ್ಕರಣೆಯ ವಿರೋಧಿ ಗಳು ಅನುಭವಿಸುತ್ತಿದ್ದಾರೆ. ಜ್ಞಾನದ ಅಭಾವ ದಿಂದಲೂ, ವಿಜ್ಞಾನದ ಅರಿವುಗೇಡಿತನದಿಂದಲೂ ಅನುಭವಿಸುತ್ತಿರುವ ನಷ್ಟವದು. ಎಷ್ಟು ಹೇಳಿದರೂ, ಅದು ಅವರನ್ನು ಮುಟ್ಟುವುದೇ ಇಲ್ಲ.

ಕೃಷ್ಣರಾಜಸಾಗರ ಅಣೆಯಿಂದ ಬಿಡುಗಡೆಯಾದ ಕಾವೇರಿ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಸೇರುವ ಮುನ್ನ ಬಿಡುಗಡೆಯಾದ ನೀರಿನ ಪ್ರಮಾಣವನ್ನು ಉಭಯ ರಾಜ್ಯಗಳ ಸರಹದ್ದಿನಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ಪರಿವೀಕ್ಷಿಸಲಾಗುತ್ತದೆ. ಕೃಷ್ಣರಾಜಸಾಗರದಲ್ಲಿ ಬಿಡುಗಡೆಯಾದ ನೀರಿನ ಪ್ರಮಾಣಕ್ಕೂ ಬಿಳಿಗುಂಡ್ಲುವನ್ನು ತಲಪುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲ. ಅದಕ್ಕೆ ಕಾರಣ ಮಾರ್ಗಮಧ್ಯದಲ್ಲಿ ಆವಿ ಮುಂತಾದ ರೂಪದಲ್ಲಿ ಸಂಭವಿಸುವ ನಷ್ಟ.
ಇದಕ್ಕೆ ಟ್ರಾನ್ಸ್‌ಮಿಷನ್ ಲಾಸ್ (transmission loss) ಎನ್ನಲಾಗುತ್ತದೆ.

ಉಗಮ-ಗಮ್ಯ ಸ್ಥಾನಗಳ ನಡುವೆ ಇಂಥ ನಷ್ಟಗಳು ಸಂಭವಿಸುತ್ತಲೇ ಇರುತ್ತದೆ. ಅದು ಪ್ರಕೃತಿ ನಿಯಮ. ಉತ್ಪಾದನಾ ಘಟಕ ದಿಂದ ಬಳಕೆದಾರರನ್ನು ತಲಪುವ ವೇಳೆಗೆ ವಿದ್ಯುತ್ ಸೋರಿಕೆಯಾಗುತ್ತದೆ. ಸಾರ್ವತ್ರಿಕ ವಾಗಿರುವ ಭ್ರಷ್ಟಾಚಾರವಲ್ಲದೆ ತಾಂತ್ರಿಕ ಕಾರಣಗಳಿಗೂ ವಿದ್ಯುತ್ ಸೋರಿಕೆಯಾಗುತ್ತದೆ.

ಕೋವಿಡ್ ಕಾರಣದಿಂದ ಆನ್‌ಲೈನ್ ಶಾಪಿಂಗ್ ಮತ್ತಷ್ಟು ಜನಪ್ರಿಯವಾಗಿದೆ. ಫೋನಲ್ಲೇ ಆರ್ಡರ್ ಮಾಡಿ ತರಿಸುವ ಖಾದ್ಯ ಪದಾರ್ಥಗಳ, ಹಣ್ಣು-ತರಕಾರಿಗಳ ತೂಕವನ್ನು ಮನೆ ಬಾಗಿಲಲ್ಲಿ ಅಳೆಯುವ ಪರಿಪಾಠವಿಲ್ಲದ ಕಾರಣ ಆನ್‌ಲೈನ್ ಕಂಪನಿಗಳು ಮೂಲದ ತೂಕದಲ್ಲಿ ವ್ಯತ್ಯಯ ಮಾಡುವುದನ್ನು ಟ್ರಾನ್ಸ್‌ಮಿಷನ್ ಲಾಸ್ ಎನ್ನಲಾಗುವುದಿಲ್ಲ. ಡೆಲಿವರಿಗಾಗಿ ನೇಮಕಗೊಂಡ ವರೇ ನಾದರೂ ಅಪರ-ತಪರ ಮಾಡುತ್ತಿದ್ದರೆ ಅದನ್ನು ಸಂವಹನೆಯಲ್ಲಿನ ನಷ್ಟವೆಂದು ಕರೆಯಲು ಅಡ್ಡಿಯಿಲ್ಲ. ಝಮ್ಯಾಟೋ ಡೆಲಿವರಿ ಯುವಕನೊಬ್ಬ ಗಿರಾಕಿಗೆ ತಲಪಿಸಬೇಕಿದ್ದ ತಿನಿಸನ್ನು ಮಾರ್ಗಮಧ್ಯದಲ್ಲಿ ತಾನೇ ಸವಿದದ್ದನ್ನು ಈ ರೀತಿಯ ಲುಕ್ಸಾ ನೆಂದು ಪರಿಗಣಿಸಬಹುದು.

ಸೀಮೆ ಎಣ್ಣೆಯನ್ನು ಅಳೆಯುವಾಗ ಮೇಲ್ಭಾಗವನ್ನು ನೊರೆಯ ತುಂಬಿಸಿ ಸುರಿವುದು, ಪೆಟ್ರೋಲ-ಡೀಸೆಲ್ ಹಾಕುವಾಗ ಗಿರಾಕಿ ಯ ಗಮನವನ್ನು ಬೇರೆಡೆಗೆ ಸರಿಸಿ ಮಾಪನವನ್ನು ಸಹಜಸ್ಥಿತಿಗೆ ತರುವುದು, ತಕ್ಕಡಿಗೆ ಸೇಬನ್ನು ಧೊಪ್ಪನೆ ಹಾಕಿ ಅವಸರದಲ್ಲಿ ಗಿರಾಕಿಗೆ ಕೊಡುವುದು ಇತ್ಯಾದಿ ಕಣ್ಕಟ್ ಆಟಗಳೆಲ್ಲವೂ ಟ್ರಾನ್ಸ್‌ಮಿಷನ್ನದ ನಷ್ಟವೇ. ಅಕ್ಕಸಾಲಿ ಚಿನ್ನಬೆಳ್ಳಿ ಕರಗಿಸುವಾಗ ಗಿರಾಕಿಗಳಿಗೆ ಸೇರಿದ ಒಂದು ಭಾಗವನ್ನೂ ಅವರ ಕಣ್ಣಿಗೆ ಕಾಣದಂತೆ ಕರಗಿಸಿಟ್ಟಿಕೊಳ್ಳುವ ಕಲೆ ತಿಳಿದದ್ದೆ.

ಹಾಗೆಯೇ, ಜೇನು ಕೀಳುವವನು ಅಂಗೈ ನೆಕ್ಕದಿರುತ್ತಾನೆಯೇ ಎಂಬ ನಾಣ್ಣುಡಿ ಹುಟ್ಟಿದ್ದೂ ಎಲ್ಲರಿಗೂ ಕಾಣುವ ಟ್ರಾನ್ಸ್‌ಮಿಷನ್ ಲಾಸ್‌ನಿಂದಲೇ. ಎಲ್ಲರೂ ಉಂಡೆದ್ದ ಮೇಲೆ ಖಾಲಿಯಾದ ಪಲ್ಯದ ಪಾತ್ರೆಯ ತಳಕ್ಕೆ ಅಂಟಿದ ಮಸಾಲೆ ಟ್ರಾನ್ಸ್‌ಮಿಷನ್ ಲಾಸ್‌ಗೆ ಮತ್ತೊಂದು ಉದಾಹರಣೆ. ಅನ್ನವನ್ನು ಬಳಿದು ಅದರ ಪರಿಮಾಣವನ್ನು ಕಡಿಮೆಗೊಳಿಸಬಹುದಷ್ಟೆ, ಸಂಪೂರ್ಣವಾಗಿ ನಿವಾ ರಿಸಲು ಸಾಧ್ಯವಿಲ್ಲ. ಹಾಲು-ಮೊಸರಿನ ಪಾತ್ರೆಗಳ ಕತೆಯೂ ಇದೇನೆ.

ಪಟ್ಟಿಗೆ ಇನ್ನಷ್ಟು ಸೇರಿಸುತ್ತಾ ಹೋಗಬಹುದು. ಗೋಡಂಬಿಯನ್ನೋ, ಕಡಲೆಬೀಜವನ್ನೋ, ಕೊಬ್ಬರಿಯನ್ನೋ ತಿಂದ ನಂತರ ದವಡೆಯಲ್ಲಿ ಉಳಿದುಕೊಳ್ಳುವ ಉಳಿಕೆಯೂ ಟ್ರಾನ್ಸ್‌ಮಿಷನ್ ಲಾಸೇ!. ಕೆಲವರು ಆ ನಷ್ಟದ ಪರಿಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತೋರು ಬೆರಳನ್ನು ಎಗ್ಗಿಲ್ಲದೆ ಬಾಯಿಗೆ ಹಾಕಿ ಒಸಡಿಗಂಟಿದ ಕಣಕವನ್ನು ತೆಗೆದು ನಾಲಗೆ ಎಂಬ ಕನ್ವೇಯರ್ ಬೆಲ್ಟ ಮೇಲಿಟ್ಟು ಕೃತಃಕೃತ್ಯರಾಗುತ್ತಾರೆ.

ಆದರೆ, ನಷ್ಟವನ್ನು ಸಂಪೂರ್ಣವಾಗಿ ತಡೆಯಲಾಗುವುದಿಲ್ಲ. (ಎಲ್ಲರೆದುರಲ್ಲಿ ಹಾಗೆ ಮಾಡುವುದರಿಂದಾದ ಮಾನ ಮುಕ್ಕಾಗು ವುದರ ಪ್ರಸ್ತಾಪ ಇದಲ್ಲ.) ಅದನ್ನು ಇನ್ನಷ್ಟು ತಗ್ಗಿಸಲು ನೀರನ್ನು ಕುಡಿದು ಲಕಲಕನೆ ಬಾಯಿಮುಕ್ಕಳಿಸಿ ಮುಕ್ಕಳಿಸಿದ ನೀರಿ ನಿಂದ ಅಳಿದುಳಿದ ಜಲಪಿಷ್ಟಕ್ಕೆ ಉದರದರ್ಶನ ಮಾಡಿಸುವವರೂ ಎಷ್ಟರ ಮಟ್ಟಿಗೆ ಶೂನ್ಯ ನಷ್ಟ ಸಾಧಿಸಬಲ್ಲರೋ ಕಾಣೆ.
ಜಸ್ಪ್ರೀತ್ ಬುಮ್ರಾನ ಕೈಯಿಂದ ಎಸೆಯಲ್ಪಟ್ಟ ಚೆಂಡೂ ಕಾಲಕ್ರಮೇಣ ವೇಗವನ್ನು ಕಳೆದುಕೊಳ್ಳುತ್ತದೆ. ಎಷ್ಟೇ ಲಕ್ಷುರಿ
ಕಾರಿದ್ದರೂ ಅದರ ಹೆಡ್‌ಲೈಟ್‌ನಿಂದ ಹೊರಟ ಬೆಳಕು ಒಂದು ದೂರದವರೆಗೂ ಸಂಚರಿಸಿ ನಂತರ ಮುಗ್ಗರಿಸುತ್ತದೆ.

ನಾವು ಕಾಣುತ್ತಿರುವ ಡಿಜಿಟಲ್ ಕ್ರಾಂತಿ ಒಂದು ರೀತಿಯಲ್ಲಿ ಇಂತಹ ನಷ್ಟಕ್ಕೆ ಪರಿಹಾರ ಒದಗಿಸುತ್ತಿದೆ. ಶಬ್ದ ಮತ್ತು ಛಾಯಾ ಲೋಕದಲ್ಲಿ ಮೂಲವಸ್ತುವಿಗೆ ಅಪಚಾರ ಬಾರದಂತೆ, ಯಶಸ್ವೀ ಪ್ರಯತ್ನಗಳು ನಡೆದು ಪಕ್ವ ಪುನರ್ ಸೃಷ್ಟಿ ಸಾಧ್ಯವಾಗಿದೆ. ಕಲಾರಸಿಕರಿಗೆ ಇದೊಂದು ವಾರ. ನವತಾಂತ್ರಿಕತೆ ಶುದ್ಧ ಸಂಗೀತದ ಪರಿಕಲ್ಪನೆಗೆ ಹೊಸ ಆಯಾಮವನ್ನೊದಗಿಸಿದೆ.

ರವಿವರ್ಮನ ಕಲೆಯ ಅಪ್ಪಟ ಪ್ರತಿಕೃತಿಗಳು ಶ್ರೀಸಾಮಾನ್ಯನ ಮನೆಯ ಗೋಡೆಯನ್ನೂ ಅಲಂಕರಿಸುವ ದಿನಗಳು ಗಣನೆಗೆ ಸಿಗುತ್ತಿವೆ. We are creating a world of zero reproduction loss! ನಾನು ಬೆಳೆದ ಪರಿಸರ ಹೀಗಿತ್ತು. ತಿರುಪತಿಗೆ ಹೋಗುವುದಕ್ಕೆ ಈಗಿರುವಷ್ಟು ಸೌಕರ್ಯಗಳು ಇಲ್ಲದಿರುವ ದಿನಗಳಲ್ಲಿ, ತಿಮ್ಮಪ್ಪನಿಗೆ ಕಾಣಿಕೆಯಾಗಿ ಹುಂಡಿಯಲ್ಲಿ ಹಾಕಲು ಯಾತ್ರಿಯ ಕೈಯ ಒಂದಷ್ಟು ಹಣ ನೀಡುವ ಪದ್ಧತಿ ವ್ಯಾಪಕವಾಗಿತ್ತು. ಪಡೆದ ನೋಟನ್ನು ಭದ್ರಮಾಡಿ ಪ್ರತ್ಯೇಕವಾಗಿರಿಸಿ ಕೊಂಡು ಅದೇ ನೋಟನ್ನು ದೇವರಿಗೆ ಅರ್ಪಿಸುವಷ್ಟು ನಿಯತ್ತನ್ನು ಭಕ್ತಾದಿಗಳು ಇರಿಸಿಕೊಂಡಿದ್ದರು. (ಈಗಲೂ ಅಂಥವರಿದ್ದಾರೆ.)

ಅಲ್ಲಿಯೂ ಟ್ರಾನ್ಸ್ ಮಿಷನ್ ಲಾಸ್ ಅನ್ನುವುದು ಶೂನ್ಯ. ಒಂದು ವೇಳೆ ಎಚ್ಚರ ತಪ್ಪಿ, ಪಡೆದ ನೋಟು ಬೇರೆ ಖರ್ಚುಮಾಡಿದ್ದಲ್ಲಿ
ಅದೇ ಮೊತ್ತದ ಬೇರೊಂದು ನೋಟನ್ನು ಹಾಕಿದರೂ ಗಳಿಸಬಹುದಾದ ಪುಣ್ಯ ಅಚಾತುರ್ಯದಿಂದ ಲಾಸ್ ಆಗಿಹೋಯಿತೆಂದು ಪರಿತಪಿಸುವವರನ್ನು ನೋಡಿದ್ದೇನೆ. ಇಂತಹ ಧರ್ಮಸೂಕ್ಷ್ಮ ಜನರ ನಡುವೆಯೇ ನಮ್ಮ ಒಬ್ಬರು ಮಾಜಿ ಮುಖ್ಯಮಂತ್ರಿ ಯೊಬ್ಬರ ವಿತ್ತೀಯ ಕೈಚಳಕವನ್ನೂ ಕಂಡಿದ್ದೇವೆ. ಉನ್ನತ ಮೌಲ್ಯದ ನೋಟ್‌ಗಳನ್ನು ಅಮಾನ್ಯಗೊಳಿಸಿದ ನರೇಂದ್ರ ಮೋದಿ ಯನ್ನು ವಾಚಾಮಗೋಚರವಾಗಿ ಬೈಯುವ ಈ ವ್ಯಕ್ತಿ ತನ್ನ ಕಪ್ಪುಹಣವನ್ನು ಬಿಳಿಯಾಗಿಸಲು ಬಳಸಿಕೊಂಡ ಮಾರ್ಗ BESCOM.

ವಿದ್ಯುತ್ ಬಳಕೆದಾರರು ಕಟ್ಟಿದ ದುಡಿದ ಹಣವನ್ನು ತಮ್ಮದನ್ನಾಗಿಸಿಕೊಂಡ ಈ ಮಾಜಿಯ ಟ್ರಾನ್ಸಿಟ್ ಲಾಸ್ (transit loss) ನಾಲ್ಕು ನೂರು ಕೋಟಿಯಷ್ಟು ಕಡಿಮೆಯಾಗಿದ್ದು ವರದಿಯಾಗಿತ್ತು. ಬೈಸಿಕಲ್ ತುಳಿಯುವಾಗ ವಿನಿಯೋಗವಾಗುವ ಶಕ್ತಿಯು
ಅದನ್ನು ಚಲಿಸಲು ಬಳಸಲ್ಪಡುವುದರ ಜತೆಗೆ ಅದನ್ನೇರಿದ ಸವಾರನ ಭಾರವನ್ನು ಹೊರಲೂ ಬಳಸಲ್ಪಡುತ್ತದೆ. ಯಂತ್ರ ವಿಜ್ಞಾನವನ್ನೋ ಅಥವಾ ಭೌತಶಾಸವನ್ನೋ ಅಭ್ಯಯಿಸಿರುವವರಿಗೆ ಇದು ತಿಳಿದಿರುತ್ತದೆ: ಕೈಗಾರಿಕಾ ಕ್ರಾಂತಿ ನಡೆದು ಎರಡು ಶತಮಾನದ ಮೇಲಾಯಿತಾದರೂ, ನೂರಕ್ಕೆ ನೂರು ಪಟುತ್ವ(ಕಾರ್ಯಕ್ಷಮತೆ) ಇರುವ ಯಂತ್ರವನ್ನಿನ್ನೂ ಕಂಡುಹಿಡಿಯ ಲಾಗಿಲ್ಲ.

ಅಷ್ಟೇ ಏಕೆ, ನಿಸರ್ಗದತ್ತವಾದ ಬುದ್ಧಿಯೂ ಅಂತಹ ಸಮರ್ಪಕವಾಗಿ ಕಾರ್ಯ ಸಾಧಿಸುವ ನಿದರ್ಶನಗಳು ಕಡಿಮೆಯೇ. ಸರಳ ವಾದ ಟೆ. ನೀವು ರೆಸ್ಟುರಾದಲ್ಲಿ ನೀಡುವ ಆರ್ಡರನ್ನು ಒಮ್ಮೆಗೇ ಸರಿಯಾಗಿ ಕೇಳಿಸಿಕೊಂಡು ಅದೇ ರೀತಿ ನೀವು ಆರ್ಡರ್ ಪೂರೈ ಸುವ ಸ್ಟೂವರ್ಡ್/ವೇಟರ್ ಎಷ್ಟು ಮಂದಿ ಸಿಕ್ಕಾರು? ಚುನಾವಣಾ ಅಭ್ಯರ್ಥಿಗಳು ನೀಡುವ ವಾಗ್ದಾನಗಳನ್ನು ಅವರು ನೆನಪಿಟ್ಟು ಕೊಳ್ಳುವ ಮಾತು ಬಿಡಿ, ಮತದಾರರೇ ಮರೆತುಬಿಡುವುದೂ ನುಡಿಯ ಸಂವಹನದಗುವ ನಷ್ಟದಿಂದಲೇ. ಇಂತಹದ್ದೇ ನಿತ್ಯ ನಷ್ಟವನ್ನು ಬೌದ್ಧಿಕ ದಿವಾಳಿಗಳಾದ ಪಠ್ಯಪುಸ್ತಕ ಪರಿಷ್ಕರಣೆಯ ವಿರೋಧಿಗಳು ಅನುಭವಿಸುತ್ತಿದ್ದಾರೆ.

ಜ್ಞಾನದ ಅಭಾವದಿಂದಲೂ, ವಿಜ್ಞಾನದ ಅರಿವುಗೇಡಿತನದಿಂದಲೂ ಅನುಭವಿಸುತ್ತಿರುವ ನಷ್ಟವದು. ಎಷ್ಟು ಹೇಳಿದರೂ, ಅದು ಅವರನ್ನು ಮುಟ್ಟುವುದೇ ಇಲ್ಲ. ವಿವೇಕದ ಕೊರತೆ ಅವರ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಸಂವಹನದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ರೂಪವಂತರ ಹೆಚ್ಚು ಎಂಬುದು ನಾನು ಲಾಗಾಯ್ತಿನಿಂದಲೂ ಅನಧಿಕೃತವಾಗಿ ನಡೆಸಿಕೊಂಡು ಬಂದಿರುವ ಸಂಶೋಧನೆಯಿಂದ ದೃಢಪಟ್ಟಿದೆ. ಆಕೆ ಒಂದು ಸೌಂದರ್ಯರಾಶಿ ಎಂದು ಕೊಂಡಾಡುವುದಿದೆ. ಆ ರಾಶಿಯನ್ನು ಅವಳು ಹೊತ್ತು ನಡೆಯುವುದಾದರೂ ಹೇಗೆ? ನಿಸರ್ಗದತ್ತ ಆ ಸೌಂದರ್ಯರಾಶಿಗೆ ಬಳಿದುಕೊಳ್ಳುವ ಮೇಕಪ್ಪಿನ ವಝನ್ನು.
ಆಭರಣಗಳ ಭಾರ ಮತ್ತಷ್ಟು.

ಅದೆಲ್ಲದ್ದಕ್ಕಿಂತ ಮಿಗಿಲಾಗಿ ತಾನು ಸೌಂದರ್ಯವಲ್ಲಿಯೆಂಬ ಪರಿಜ್ಞಾನದ ತೂಕ. ಅದೇ ಮೈಮನಸ್ಸುಗಳ್ಳನ್ನಾವರಿಸಿ ಕೊಂಡಿ ರುತ್ತದೆ. ಮೇಕಪ್ಪು-ಆಭರಣಗಳನ್ನಾದರೋ ತೆರೆದಿಟ್ಟ ಕ್ಷಣವೇ ಭಾರ ಕಳೆಯುವುದು. ಇದಕ್ಕೆ ಸಮನಾದ ಭಾರವನ್ನು ನಮ್ಮ ಸುಮಾರು ರಾಜಕೀಯ ಧುರೀಣರು(?) ಸದಾ ಹೊತ್ತು ತಿರುಗುವುದನ್ನು ಕಾಣಬಹುದು. ಉದಾಹರಣೆಗೆ, ತಕ್ಷಣಕ್ಕೆ (ಎಂದಿನಂತೆ) ಸಿಗುವವರು ಮಾಧ್ಯಮಗಳಲ್ಲಿ ಹೆಚ್ಚು ಬಿಂಬಿತವಾಗುವ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಎಚ್.ಡಿ. ರೇವಣ್ಣ, ಜನಾರ್ಧನ ರೆಡ್ಡಿ, ಸೋನಿಯಾ ಗಾಂಧಿ, ವಿಜಯೇಂದ್ರ, ವಗೈರೆ. ಇವರುಗಳು ಇವರುಗಳಾಗಿರುವುದೇ ಮೇಲಿನವನು ಕರುನಾಡಿನ ಮೇಲೆ ಬೀರಿದ ಕೃಪಾಕಟಾಕ್ಷದಿಂದ ಎಂಬಂತೆ ಈ ಪ್ರತಿಯೊಬ್ಬರ ನಡೆ, ನುಡಿ.

ಅಹಮಿಕೆಯ ಮಣಭಾರವೇ ಸಾಕು ಇವರುಗಳ ವಿಚಕ್ಷಣೆಯ ಬಟ್ಟಲನ್ನು ಬರಿದುಮಾಡಲು. ಆರಂಭದಲ್ಲಿ ಹೇಳಿದ್ದನ್ನು ಮತ್ತೊಮ್ಮೆ ಹೇಳುತ್ತೇನೆ: ಉಗಮದಿಂದ ಗಮ್ಯದ ಕಡೆಗೆ(ವರೆಗೆ) ಚಲಿಸುವ ಪ್ರಕ್ರಿಯೆಯಲ್ಲಿ ವಿವಿಧ ಕಾರಣಗಳಿಗೆ ಸಂಭವಿಸುವ ನಷ್ಟವೇ ಟ್ರಾನ್ಸ್ ಮಿಷನ್ ಲಾಸ್. ಲಾವಣ್ಯವತಿಯರು (ರೂಪದರ್ಶಿಯೇ ಆಗಬೇಕೆಂದಿಲ್ಲ) ವಿಶೇಷ ಸಂದರ್ಭಗಳಲ್ಲಿ ನಡೆಯು ವಾಗ ಎಡವಿ ಬೀಳುವುದಕ್ಕೆ ಕಾರಣ ಅವರು ಧರಿಸಿದ (ಧರಿಸಿದ್ದರೆ), ನಡಿಗೆಗೆ ಅನುಕೂಲವಲ್ಲದ ಸ್ಟಿಲೆಟೊಗಿಂತ ಮುಖ್ಯವಾಗಿ ಅವರನ್ನಾವರಿಸಿದ ರೂಪಜನಿತ ಪ್ರe, ತನ್ನದೇ ಕಣ್ಣು ಕುಕ್ಕುವ ಸ್ವಮೋಹ.

ತನ್ನ ರೂಪ-ಪಾಶದ ಕುಣಿಕೆ ಯಾರೆಲ್ಲ, ಎಷ್ಟೆಲ್ಲ ನೋಡುಗರಿಗೆ ಬಿದ್ದಿದೆಯೆಂಬ ಆಂತರಿಕ ಗುಣಾಕಾರದಲ್ಲಿ ಮನಮರೆತು ಕಾಲು ತೊಡರಿ ಬೀಳುತ್ತಾರೆ. ಸಮತೋಲನವನ್ನು ಕಾಪಾಡುವ ಟಿಂಪಾನಿಕ್ ಫ್ಲುಯಿಡ್ (tympanic fluid) ನಲ್ಲಿ ತನ್ನದೇ ರೂಪದ ಪ್ರತಿಬಿಂಬ ಬಿದ್ದುದರಿಂದ ಎದ್ದ ಅಲೆಯ ಉಂಗುರ ಪಾದಕ್ಕೆ ಸಿಕ್ಕಿ ತೊಡರಿದ್ದು. ಜೀವನದಲ್ಲಿ, ದುರಹಂಕಾರಿಗಳು ಎಡವಿ ಬೀಳುವುದಕ್ಕೂ ದುರಹಂಕಾರದಿಂದುಂಟಾದ ಪ್ರeಯ ನಷ್ಟವೇ ಕಾರಣ.

ಕೋಲಾರ ಮತ್ತು ಗುಬ್ಬಿಯ ಶಾಸಕರಿಗೆ ರವಾನೆಯಾದ ಜನತಾ ದಳದ ವಿಪ್ ನಲ್ಲಿ ಆದ ಟ್ರಾನ್ಸ್‌ಮಿಷನ್ ಲಾಸ್ ನಿಂದಾಗಿ ವರಿಷ್ಠ ರಿಗೆ ಮುಖಭಂಗವಾಗಿದೆ. ಉಗಮದಿಂದ ಗಮ್ಯದವರೆಗಿನ ಪಯಣವೆಂದರೆ ಜನನ ದಿಂದ ಮರಣದವರೆಗೆ ಸಾಗಿಸುವ ಬದುಕು. ಜೀವನವಿಡೀ ಟ್ರಾನ್ಸ್‌ಮಿಷನ್ ಲಾಸೇ!. ಭಾರತೀಯರಾದ ನಾವು ಕಳೆದುಕೊಂಡಿರುವುದು, ಕಳೆದುಕೊಳ್ಳುತ್ತಿರುವುದು  ಪಾರಂಪ ರಿಕ ಜ್ಞಾನ. ಮಾಪನಕ್ಕೊಳಪಡದ ನಷ್ಟವಿದು. ಬಹುತೇಕರು ನಾವು ಕೂಡಿಹಾಕುವುದು ರಾಶಿರಾಶಿ ಪಾಪವನ್ನೇ.

ಇಲ್ಲಿಂದ ಯಮಪುರಿಗೆ ಕರೆದೊಯ್ಯುವಾಗ ಮಾತ್ರ ಯಮಭಟರು ಜಾಗ್ರತೆಯಿಂದ ನಮ್ಮ ಪಾಪದ ಕೊಡ ತುಳುಕದಂತೆ ಎಳೆದೊ ಯ್ಯುತ್ತಾರೇನೋ. ಮಾರ್ಗದಲ್ಲಿ, ಕುಲುಕುತ್ತಾ ತುಳುಕುತ್ತಿದ್ದರೆ, ಕೊಡ ಅರ್ಧ ಖಾಲಿ! ಶಿಕ್ಷೆ ಕಡಿಮೆಯಾಗಿ ನಾವುಗಳು ಜಾಲಿಯೋ ಜಾಲಿ ಅನ್ನುವಂತಿಲ್ಲ. ಯಾಕೆಂದರೆ, ಅಂತಿಮ ಪಯಣದ ಆರಂಭದಲ್ಲಿಯೇ ತೂಕವಿಲ್ಲದ ಆತ್ಮ ನಿಕಾಲೆದ್ದಿರುತ್ತದೆ.