Sunday, 15th December 2024

ಅರಾಜಕತೆ ಸೃಷ್ಟಿಸುವ ಯತ್ನ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ.
ನೋಟಿಸ್ ನೀಡಿದ್ದನ್ನೇ ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದು ಪ್ರತಿಪಕ್ಷದ ದೌರ್ಬಲ್ಯ. ಅಭಿವೃದ್ಧಿ ಕಾರ್ಯಗಳಲ್ಲಿ ಸರಕಾರದ ಹಿನ್ನಡೆಯಾಗಿದ್ದರೆ ಸದನದ ಒಳಗೆ ಮತ್ತು ಹೊರಗೆ ಪ್ರತಿ ಭಟಿಸುವುದು ಪ್ರತಿಪಕ್ಷಗಳ ಕರ್ತವ್ಯ. ಆದರೆ

ಇಲ್ಲಿ ತಮ್ಮ ಪಕ್ಷದ ನಾಯಕರ ಕುಟುಂಬಕ್ಕೆ ಇ.ಡಿ.ನೋಟಿಸ್ ನೀಡಿದ್ದನ್ನೇ ತಪ್ಪೆಂದು ತಿಳಿದು ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಇದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ
ಪರಿ. ತಮ್ಮ ಮುಖಂಡರಿಗೆ ಇ.ಡಿ. ನೋಟೀಸ್ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರು ದೇಶದ ಕೆಲವೆಡೆ ರಸ್ತೆ ತಡೆ, ಮುತ್ತಿಗೆ ಮತ್ತಿತರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೂ ವಿನಾಕಾರಣ ತೊಂದರೆ ಕೊಟ್ಟಿದ್ದಾರೆ. ಈ ರಾಷ್ಟ್ರದ ಕಾನೂನಿಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ.

ಇದನ್ನು ಬಿಟ್ಟು ಶಕ್ತಿ ಬಲ, ತೋಳ್ಬಲಗಳಂತಹ ವಾಮಮಾರ್ಗ ಅನುಸರಿಸುವುದು ಯಾವುದೇ ಪಕ್ಷಕ್ಕೂ ಶೋಭೆ ತರುವಂತಹ ಬೆಳವಣಿಗೆಯಲ್ಲ. ವಿನಾಕಾರಣ ಪ್ರತಿಭಟ ನೆಯ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ. ಕೇವಲ ಇಬ್ಬರು ವ್ಯಕ್ತಿಗಳಿಗಾಗಿ, ಕೇವಲ ಒಂದು ಕುಟುಂಬಕ್ಕಾಗಿ ಕೆಲಸ ಕಾರ್ಯ ಬಿಟ್ಟು, ಜನಸಾಮಾನ್ಯರ ಕೆಲಸಕ್ಕೂ ಅಡ್ಡಿ ಮಾಡಿಕೊಂಡು, ರಸ್ತೆಗಿಳಿದರೆ ಜನರು ಆ ಪಕ್ಷವನ್ನು ಎಂದೂ ಮೆಚ್ಚಲಾರರು.

ದೇಶದಲ್ಲಿ ಉಗ್ರರ ದಾಳಿಯಾದಾಗ, ರೈತರ ಸರಣಿ ಆತ್ಮಹತ್ಯೆ ನಡೆದಾಗ ಪ್ರತಿಭಟಿಸದ ಪಕ್ಷವೊಂದು ಇಬ್ಬರು ವ್ಯಕ್ತಿಗಳಿಗಾಗಿ ಪಾದ ಯಾತ್ರೆ, ಪ್ರತಿಭಟನೆ ಮಾಡುವುದು ಸರಿಯಲ್ಲ. ಈ ನೆಲದ ಕಾನೂನಿಗೆ ವಿರುದ್ಧವಾಗಿ ನಡೆದವರನ್ನು ತನಿಖೆಗೊಳಪಡಿಸಿ, ಶಿಕ್ಷೆ ಕೊಡಿಸುವುದು ತನಿಖಾ ಸಂಸ್ಥೆಗಳ ಕರ್ತವ್ಯ. ಆ ತನಿಖಾ ಸಂಸ್ಥೆಗಳು ಮುಕ್ತವಾಗಿ ಕೆಲಸ ಮಾಡಲು ಬಿಡಬೇಕಾದ ಪ್ರತಿಪಕ್ಷ ಗಳೇ ಈ ರೀತಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಪರಾಧ.

ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಲ್ಲಿ ರಾಹುಲ್ ಗಾಂಧಿ ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ಇಲ್ಲವಾದರೆ ಆರೋಪಮುಕ್ತರಾಗುತ್ತಾರೆ. ಇದಕ್ಕಾಗಿ ಪ್ರತಿಭಟನೆ, ಧರಣಿ ಮಾಡುವ ಮೂಲಕ ಅರಾಜಕತೆ ಸೃಷ್ಟಿಸುವ ಅಗತ್ಯವಿಲ್ಲ