Thursday, 12th December 2024

ರಾಷ್ಟ್ರಪತಿ ಹುದ್ದೆಗೆ ಸೂಕ್ತ ವ್ಯಕ್ತಿ ಆಯ್ಕೆಯಾಗಲಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಮುಗಿಯಲಿದ್ದು, ನೂತನ ರಾಷ್ಟ್ರಪತಿಗಳ ಆಯ್ಕೆಗಾಗಿ
ಜುಲೈ 18 ಮತದಾನ ನಡೆಯಲಿದೆ.

ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಅಭ್ಯರ್ಥಿ ಆಯ್ಕೆ ಕುರಿತು ತೀವ್ರ ಕಸರತ್ತು ನಡೆಸಿದ್ದಾರೆ. ದೇಶದ ಪ್ರಥಮ ಪ್ರಜೆಯ ಆಯ್ಕೆಗಾಗಿ ಈಗಾಗಲೇ ಕೇಳಿಬಂದಿರುವ ಹೆಸರುಗಳೆಲ್ಲವೂ ರಾಜಕೀಯ ಹಿನ್ನೆಲೆಯುಳ್ಳವರದ್ದೇ ಆಗಿದೆ. ರಾಜಕೀಯ ಹುದ್ದೆಗಳನ್ನು ಅಲಂಕರಿಸಿದವರು ರಾಷ್ಟ್ರಪತಿ ಹುದ್ದೆ ಅಲಂಕರಿಸುವುದರಲ್ಲಿ ತಪ್ಪಿಲ್ಲ, ಆದರೆ ಬಹುತೇಕ ರಾಜಕಾರಣಿಗಳು ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾತಿ, ಮತಗಳ ಜಂಜಾಟ ದಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತಾರೆ.

ರಾಷ್ಟ್ರಪತಿ ಎಂಬ ಈ ಸಾಂವಿಧಾನಿಕ ಪದವಿಗೆ ಜಾತಿ, ಪಕ್ಷ, ಅನುಕೂಲಕರ ಸ್ವಭಾವ ದವರು ಎಂಬ ಅಂಶಗಳನ್ನು ಪರಿಗಣಿಸಿದರೆ ದೇಶದ ಹಿತ ಕಾಯ್ದಂತೆ ಆಗುವುದಿಲ್ಲ. ಸಂವಿಧಾನದ ಪ್ರಕಾರ ರಾಷ್ಟ್ರಪತಿ ಹುದ್ದೆಗೇರಿದ ನಂತದ ಯಾವುದೇ ಪಕ್ಷದ ಪರ, ವಿರೋಧವಾಗಿ ವರ್ತಿಸು ವಂತಿಲ್ಲ. ಸರಕಾರದ ಕ್ರಮಗಳ ಬಗೆಗೆ ಪ್ರತಿಪಕ್ಷಗಳು ದೂರು ಸಲ್ಲಿಸಿದರೆ ಪರಿಶೀಲಿಸುವ ಸೌಜನ್ಯವನ್ನಾದರೂ ತೋರಬಲ್ಲ ವ್ಯಕ್ತಿ ಆ ಹುದ್ದೆಯಲ್ಲಿ ಇರಬೇಕಾಗುತ್ತದೆ.

ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ದೂರದೃಷ್ಟಿಯ ನಿಲುವು ತಾಳುವುದು ಅತ್ಯಗತ್ಯ. ರಾಷ್ಟ್ರಪತಿ ಸ್ಥಾನಕ್ಕೆ ರಾಜಕೀಯ ಹೊರತು ಪಡಿಸಿ ವಿಜ್ಞಾನ, ಸಾಹಿತ್ಯ, ಕಲೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿರುವವರಿಗೂ ಅವಕಾಶ ಕೊಡಬೇಕು. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರವಿದ್ದಾಗಿ ವಿಜ್ಞಾನಿ ಡಾ.ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಮೂಲಕ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದರು. ಅವರು ತಮ್ಮ ಅಧಿಕಾರವಧಿಯನ್ನು ಯಶಸ್ವಿಯಾಗಿ ನಿಭಾಯಿಸಿ ಆ ಹುದ್ದೆಗೆ ಗೌರವ ತಂದು ಕೊಟ್ಟಿದ್ದರು.

ಫಕ್ರುದ್ದೀನ್ ಅಲಿ ಅಹಮದ್ ಅವರು ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ ತುರ್ತು ಪರಿಸ್ಥಿತಿ ಘೋಷಣೆಗೆ ಸುಲಭವಾಗಿ ಸಹಿ ಹಾಕಿದ್ದರಿಂದ
ಕುಪ್ರಸಿದ್ಧರಾಗಿದ್ದರು. ಹೀಗೆ ಆ ಸ್ಥಾನ ನಿಭಾಯಿಸಿದವರಲ್ಲಿ ಸುಪ್ರಸಿದ್ಧರು ಕುಪ್ರಸಿದ್ಧರೂ ಇದ್ದಾರೆ. ರಾಷ್ಟ್ರಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಪ್ರಜೆಗಳಿಗೆ ನೇರವಾಗಿ ಭಾಗವಹಿಸಲು ಅವಕಾಶವಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಜನರ ಮನಸ್ಸಿನಲ್ಲಿರುವ ವ್ಯಕ್ತಿಯನ್ನೇ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕು.