Monday, 25th November 2024

ಜೂ.26, 27ರಂದು ಜರ್ಮನಿ, ಯುಎಇಗೆ ಮೋದಿ ಭೇಟಿ

ನವದೆಹಲಿ: ಜೂ.26 ಮತ್ತು 27ರಂದು ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂ.28ರಂದು ಯುಎಇಗೆ ಭೇಟಿ ನೀಡಲಿದ್ದಾರೆ.

ಜಿ-7 ಶೃಂಗಸಭೆಗಾಗಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಲ್ಲಿನ ಸ್ಕ್ಲೋಸ್ ಎಲ್ಮೌಗೆ ತೆರಳುತ್ತಿದ್ದಾರೆ. ಈ ಸಮಯದಲ್ಲಿ ಎರಡು ಅಧಿವೇಶನಗಳಲ್ಲಿ ಪ್ರಧಾನಿ ಮಾತನಾಡುವ ನಿರೀಕ್ಷೆಯಿದೆ. ಪರಿಸರ, ಇಂಧನ, ಹವಾ ಮಾನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವ ವಿಷಯದ ಬಗ್ಗೆ ಭಾಷಣ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಜಿ-7 ಶೃಂಗಸಭೆಗೆ ಆಹ್ವಾನಿಸಲಾಗಿದೆ.

ಜೂ.28ರಂದು ಯುಎಇಗೆ ಪ್ರಯಾಣಿಸಲಿದ್ದಾರೆ. ಈ ಸಂದರ್ಭ ಇತ್ತೀಚಿಗೆ ನಿಧನರಾದ ಯುಎಇ ಮಾಜಿ ಅಧ್ಯಕ್ಷ ಮತ್ತು ಅಬು ಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಜೊತೆಗೆ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ಮೋದಿ ಅಭಿನಂದಿಸಲಿದ್ದಾರೆ. ಅದೇ ದಿನ ರಾತ್ರಿ ಯುಎಇಯಿಂದ ಭಾರತಕ್ಕೆ ಹಿಂದಿರುಗಲಿದ್ದಾರೆ.