Saturday, 14th December 2024

ರಾಜ್ಯ ಇಬ್ಬಾಗದ ಮಾತು ಸರಿಯಲ್ಲ

ದೇಶದಲ್ಲಿ ಹೊಸದಾಗಿ 50 ರಾಜ್ಯಗಳನ್ನು ರಚಿಸುವ ಕುರಿತು ಪ್ರಧಾನಿ ನೇತೃತ್ವದಲ್ಲೇ ಚರ್ಚೆ ನಡೆಯುತ್ತಿದ್ದು, ಇದರಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಕೂಡ ಖಂಡಿತ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ರಾಜ್ಯವನ್ನು ಇಬ್ಭಾಗ ಮಾಡುವ ಚರ್ಚೆ ಪ್ರಧಾನಿ ಮೋದಿ ಅವರ ಮಟ್ಟದಲ್ಲಿಯೇ ನಡೆಯುತ್ತಿದೆ ಎಂದು ಯಾವುದೇ ಆಧಾರವಿಲ್ಲದೇ, ಒಬ್ಬ ಜವಾಬ್ದಾರಿಯುತ ಸ್ಥಾನ ದಲ್ಲಿರುವವರು ಹೇಳುವುದು ಸರಿಯಲ್ಲ. ಅಥವಾ ಆ ಬಗ್ಗೆ ಸೂಕ್ತ ಆಧಾರಗಳಿದ್ದರೆ ಅವುಗಳನ್ನು ಮುಂದಿಟ್ಟು ಮಾತನಾಡಬೇಕು.

ಇಲ್ಲವಾದರೆ ಆ ಮಾತಿಗೆ ಸರಕಾರ ಸ್ಪಷ್ಟನೆ ನೀಡಬೇಕಾಗುತ್ತದೆ. ಸುಗಮ ಆಡಳಿತ, ರಾಜಕೀಯ ಲಾಭದ ಕಾರಣಗಳನ್ನಿಟ್ಟುಕೊಂಡು, ಸಾವಿರಾರು ಹಿರಿಯ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು-ನುಡಿಗೆ ಬಗೆವ ದ್ರೋಹ. ಸಚಿವ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಹಾಕುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅನೇಕ ಬಾರಿ ಈ ಬಗ್ಗೆ ಮಾತನಾಡಿದರೂ ಯಾರೊ ಬ್ಬರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದ್ದರಿಂದಲೇ ಅವರು ತಮ್ಮ ವರಸೆಯನ್ನು ಮುಂದುವರಿಸಿದ್ದಾರೆ.

ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತ್ಯೇಕ ರಾಜ್ಯದ ವರಸೆ ಎತ್ತಿರುವ ಸಚಿವ ಉಮೇಶ್ ಕತ್ತಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಾಡಿನ ಏಕತೆಗೆ ಧಕ್ಕೆ ತರುವ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರಬೇಕು. ಇಲ್ಲವಾದಲ್ಲಿ, ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕವೆಂಬ ಭೇದ-ಭಾವ
ಶುರುವಾಗುವ ಅಪಾಯ ಎದುರಾಗುತ್ತದೆ. ಈಗಾಗಲೇ ಈ ಕುರಿತು ಅನೇಕ ಸಂಘಟನೆಗಳೂ ಹುಟ್ಟಿಕೊಂಡಿವೆ, ಅವರಿಗೆಲ್ಲ ಕತ್ತಿಯಂತಹ ಒಬ್ಬ ಮುಖಂಡ ಸಿಕ್ಕರೆ ಆ ಸಣ್ಣಪುಟ್ಟ ಸಂಘಟನೆಗಳು ಚಿಗುರಿಕೊಂಡು ರಾಜ್ಯ ಇಬ್ಭಾಗ ಮಾಡಲು ಮುಂದಾಗುವ ಅಪಾಯವಿದೆ.

ಭಾಷಾ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿಯೇ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದರಿಂದ ನೆರೆ ರಾಜ್ಯಗಳ ಬಾಯಿಗೆ ಆಹಾರವಾದಂತಾಗುತ್ತದೆ. ಆದ್ದರಿಂದ ಜವಾಬ್ದಾರಿ ಸ್ಥಾನಗಳಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡದಂತೆ ಸರಕಾರ ಕ್ರಮ ಕೈಗೊಳ್ಳಬೇಕು.