ಸುಪ್ತ ಸಾಗರ
rkbhadti@gmail.com
ಬಿದಿರು ರೈತರ ಆಶಾಕಿರಣ. ಮುಂದಿನ ದಿನಗಳಲ್ಲಿ ಬಿದಿರು ನಮ್ಮ ರೈತರ ಬದುಕಿನ ಹೊಸ ಆಶಾಕಿರಣ ಎನ್ನಿಸಿ ಕೊಳ್ಳಲಿದೆ.. ನಮ್ಮ ರಾಜ್ಯದ ಅಗರಬತ್ತಿ ಉದ್ಯಮಗಳು ಬಳಸುವ ಬಿದಿರುಕಡ್ಡಿಯನ್ನು ಚೀನಾ ಮತ್ತು ವಿಯೆಟ್ನಾಂ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿವೆ.
ನಾಡಿನ ಕೆಲವೇ ಅಪರೂಪದ ಪ್ರಯೋಗಶೀಲ ಕೃಷಿಕರಲ್ಲಿ ನಾಗೇಂದ್ರ ಸಾಗರ್ ಒಬ್ಬರು. ಮಲೆನಾಡ ಮಡಿಲು ಸಾಗರದಂಥ ಪುಟ್ಟ ಪಟ್ಟಣದಲ್ಲಿದ್ದೂ ಜಗತ್ತಿನಾದ್ಯಂತ ಕೃಷಿಯ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ.
ಪಾರಂಪರಿಕ ಕೃಷಿಯ ಜತೆಗೆ ಜೇನು ಸಾಕಣೆ, ಹಲಸಿನ ಮೌಲ್ಯವರ್ಧನೆ ಹೀಗೆ ಒಂದಲ್ಲ ಒಂದು ಪ್ರಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಇರುವವರು. ವಿಶೇಷವೆಂದರೆ ಎಲ್ಲದರಲ್ಲೂ ರೈತರ ಲಾಭ ವನ್ನು ಹುಡುಕುತ್ತಾರೆ ಮತ್ತು ಅದನ್ನು ಸ್ವತಃ ತಾವೇ ಸಾಧಿಸಿ ತೋರಿಸುತ್ತಾರೆ. ಇತ್ತೀಚಿಗೆ ಅವರ ಗಮನ ಹರಿದದ್ದು ಬಿದಿರಿನ ಕಡೆಗೆ. ಬಿದಿರಿನ ನಾಟಿಯಿಂದ ಕೃಷಿಕರಿಗೆ ಇರುವ ಲಾಭಗಳ ಬಗ್ಗೆ ಸ್ವತಃ ಅವರ ಅನುಭವ ದೊಂದಿಗೆ ಹಂಚಿಕೊಂಡಿರುವ ಲೇಖನದ ಸಾರಾಂಶ ಇಲ್ಲಿದೆ.
***
ಶ್ರೀಗಂಧ, ತೇಗ, ಅಗರ್‌ವುಡ್, ಅದೂ ಇದೂ ಮತ್ತೊಂದು, ಮಗದೊಂದು ಎಂದು ಬಣ್ಣದ ಮಾತುಗಳಿಗೆ ಮರುಳಾಗಿ ಬೆಳೆದು ಕೈ ಸುಟ್ಟುಕೊಂಡಿದ್ದೇವೆ. ಆದರೆ, ಬೀಳು ಬಿಟ್ಟ ಖುಷ್ಕಿಯಲ್ಲಿ, ಮರೆತೇ ಬಿಟ್ಟಿರುವ ಭತ್ತದ ಗದ್ದೆಗಳಲ್ಲಿ, ಹೊಲದ ಬದುಗಳ ಸುತ್ತ, ಮನೆಯ ಹಿತ್ತಲುಗಳಲ್ಲಿ ಬಿದಿರಿಗೆ ನೆಲೆಯಿತ್ತರೆ ಕೃಷಿಕರಿಗೆ ಬದುಕು ಕಟ್ಟಿಕೊಳ್ಳಲು ಖಂಡಿತಾ ಆಸರೆ ಆದೀತು.
‘ಬಿದಿರು ಬೆಳೆದು ಚಟ್ಟ ಕಟ್ಟಲಿಕ್ಕೆ ಸರಿಯಾಗುತ್ತದೆ’ ಎಂದು ಕೆಲವು ರೈತರು ನನ್ನ ಮೇಲೆ ಹರಿ ಹಾಯ್ದದ್ದುಂಟು. ಆದರೆ ಬಿದಿರನ್ನು ಅವುಗಳಿಗೆ ಹೋಲಿಸುವುದು ಬೇಡ. ಬಿದಿರು ನಮ್ಮನ್ನ ಕೋಟ್ಯಧೀಶರನ್ನಾಗಿ ಮಾಡುವುದಿಲ್ಲ. ಐಷಾರಾಮಿ ಬದುಕು ನೀಡುವು ದಿಲ್ಲ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲಕ್ಕೆ ಮೋಸ ಮಾಡುವುದಿಲ್ಲ. ಬಿದಿರು ಬೆಳೆದರೆ ರೈತ ತಾನೂ ಬೆಳೆಯುವುದರ ಜತೆಗೆ ಸಮಾಜದ ಒಂದಷ್ಟು ಜನರ ಬದಕು ಬೆಳೆಯುವುದಕ್ಕೂ ಕಾರಣ ಆಗುತ್ತಾನೆ.
ಈಗ್ಗೆ ಎರಡು ವರ್ಷಗಳಿಂದ ನಾನು ಮತ್ತು ಗೆಳೆಯ ಲಕ್ಷ್ಮೀನಾರಾಯಣ್ ಈ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದೇವೆ. ಬಿದಿರು ನೆಟ್ಟವರ ಅನುಭವದ ಮಾತುಗಳನ್ನು ಕೇಳಿದ್ದೇವೆ. ಫೀಲ್ಡ ಸ್ಟಡಿಗಳನ್ನು ಮಾಡಿದ್ದೇವೆ. ಯುನಿವರ್ಸಿಟಿಗಳಿಗೆ ಹೋಗಿ ಸಬ್ಜೆಕ್ಟ್ ಎಕ್ಸಪರ್ಟ್ ಗಳೊಂದಿಗೆ ಚರ್ಚಿಸಿದ್ದೇವೆ. ಅಂತರ್ಜಾಲವನ್ನು ಜಾಲಾಡಿದ್ದೇವೆ. ಭವಿಷ್ಯದಲ್ಲಿ ಬಿದಿರಿಗಿರುವ ಬೇಡಿಕೆಯೇನು? ಭವಿಷ್ಯವೇನು? ಮಾರುಕಟ್ಟೆಯ ಒಳಗೂ ಹೊರಗಿನ ಕುರಿತು ಸಾಕಷ್ಟು ತಿಳಿದುಕೊಂಡು ಊರಿಗೆಲ್ಲ ಹೇಳುವ ಮೊದಲು ನಾವು ಮೊದಲು ಊರಬೇಕು ಎಂದು ತೀರ್ಮಾನಿಸಿದೆವು.
ಬಹುಶಃ ಬೆಳೆಯೂರಿನ ಅರುಣಾಚಲರನ್ನು ಬಿಟ್ಟರೆ ಮಲೆನಾಡಿನಲ್ಲಿ ಬಿದಿರು ನೆಟ್ಟ ಮೊದಲಿಗರು ನಾವು. ಬಿದಿರು ಕೃಷಿಯ ಅಧ್ಯಯನಕ್ಕೆ ಹೊರಡುವ ಮುನ್ನ ಇದು ಕೆಲವು ನಿರ್ದಿಷ್ಟ ಉದ್ದೇಶಗಳಿಗಷ್ಟೇ ಉಪಯೋಗಿಸಲಾಗುತ್ತೆ ಅಂತಲೇ ಲೆಕ್ಕಿಸಿzವು.. ಬುಟ್ಟಿ, ಚಾಪೆ ಹೆಣೆಯುವ ಮೇದಾರರಿಗೆ, ಊದಿನಕಡ್ಡಿ ಕಾರ್ಖಾನೆಗಳಿಗೆ, ಕಾಗದ ಕಾರ್ಖಾನೆಗಳಿಗೆ, ಕನಸ್ಟ್ರಕ್ಷನ್ ಕೆಲಸಗಳಿಗೆ
ಬಿದಿರಿನ ಅಗತ್ಯವಿದೆ ಎಂದೇ ತಿಳಿದಿದ್ದೆವು. ಆದರೆ ಜಾಲಾಡುತ್ತ ಹೋದಂತೆ ಬಿದಿರಿಗೆ ಬಲು ದೊಡ್ಡ ಬೆಲೆ ಇರುವುದನ್ನು ಮನ ಗಂಡೆವು.. ಬಿದಿರಿನಲ್ಲಿ ಇಥೆನಾಲ್ ತೆಗೆಯಬಹುದು. ಭವಿಷ್ಯದಲ್ಲಿ ಬಿದಿರು ಕ್ರಾಂತಿಗೆಇದೊಂದೇ ಬೇಡಿಕೆ ಸಾಕು. ಸಕ್ಕರೆ ಕಾರ್ಖಾನೆ ಗಳಿಗೆ ವಿದ್ಯುತ್ ಉತ್ಪಾದನೆಗೆ ಬಿದಿರು ಬೇಕು.
ಅಲ್ಲದೇ ಸಿಮೆಂಟ್ ಕಾರ್ಖಾನೆಗಳಿಗೆ ಕೂಡ ಎಷ್ಟೇ ಬಿದಿರಿದ್ದರೂ ಬೇಕು. ಆಹಾರವಾಗಿ ತೆಗೆದುಕೊಂಡರೂ ಕಳಲೆ(ಬಿದಿರಿನ
ಮೊಳಕೆ)ಗೆ ಇರುವ ಮಾರುಕಟ್ಟೆ ಊಹಾತೀತ.. ಕಳಲೆ ಸ್ಪೆಷಲ್ ಬಿದಿರು ನೆಟ್ಟರೆ ದೇಶ ವಿದೇಶಗಳ ಗ್ರಾಹಕರನ್ನು ಸೆಳೆಯಬಹುದು. ಕಳಲೆಯಲ್ಲಿ ಇರುವ ಔಷಧಿಯ ಮತ್ತು ಪೌಷ್ಟಿಕಾಂಶಗಳ ವಿಶೇಷ ಗುಣಗಳ ಕಾರಣದಿಂದ ಬಿದಿರು ಬೆಳೆ ಮಹತ್ವದ್ದಾಗಿ ನನಗೆ ಕಂಡಿದೆ.. ಕೇವಲ ಕೃಷಿ ಮಾತ್ರವಲ್ಲ ಸಣ್ಣ ಸಣ್ಣ ಸಂಸ್ಕರಣಾ ಘಟಕವನ್ನೂ ಆರಂಭಿಸಬಹುದು.
ಕಳಲೆ ಸಂಸ್ಕರಣಾ ಘಟಕದ ಮಾತಿರಲಿ, ಬಿದಿರು ಸಂಸ್ಕರಣೆ, ಮೌಲ್ಯವರ್ಧನೆಯ ಸಾಧ್ಯತೆ ಇದೆ. ಬಹುಶಃ ಕೊವಿಡ್ ನಂತರದ ದಿನಗಳಲ್ಲಿ ಬಿದಿರು ದುಡಿವ ಕೈಗಳಿಗೆ ದೊಡ್ಡ ಪ್ರಮಾಣದಲ್ಲಿ ಸ್ವ ಉದ್ಯೋಗ ನೀಡಬಹುದು. ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುವ ಪರಿಸ್ಥಿತಿ ಯನ್ನು ಬಿದಿರು ಆಧಾರಿತ ಉದ್ದಿಮೆಗಳು ಸುಧಾರಿಸಬಹುದು.
ಉದ್ಯೋಗ ಸೃಷ್ಟಿ ಮಾತ್ರವಲ್ಲ ಪರಿಸರ ಸಮತೋಲನದಲ್ಲೂ ಬಿದಿರು ದೊಡ್ಡ ಪಾತ್ರ ವಹಿಸೀತು.. ಬಿದಿರು ಬೆಳೆಯುವುದರಿಂದ ಮಣ್ಣಿನ ಸವಕಳಿ ತಡೆಯುತ್ತದೆ. ಮಳೆ ನೀರು ಧಾರಾಳವಾಗಿ ಇಂಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ವಿದ್ಯುತ್ ಉತ್ಪಾದನೆ ಗಾಗಿ ಪರಿಸರ ನಾಶದ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ.. ಕೆಲವು ಉದ್ದಿಮೆಗಳಲ್ಲಿ ಬಿದಿರಿನ ಪರ್ಯಾಯ ಬಳಕೆಯಿಂದ ವಾತಾವರಣದ ಪ್ರದೂಷಣೆ ತಗ್ಗುತ್ತದೆ.
ತರಕಾರಿ, ಹಣ್ಣು ಹಂಪಲು, ರೇಷ್ಮೆ, ಕಬ್ಬು ಮುಂತಾದ ಪೆರಿಷೆಬಲ್ ಬೆಳೆಗಳಿಗೆ ಅದರದೇ ಆದ ತಾಪತ್ರಯಗಳಿದ್ದು ಬೆಲೆಯ ಏರಿಳಿತದ ತೂಗುಗತ್ತಿ ಸದಾ ಬೆಳೆಗಾರನ ನೆತ್ತಿಯ ಮೇಲೆ ಓಲಾಡುತ್ತಿರುತ್ತದೆ. ಆದರೆ ಬಿದಿರಿನ ಮಟ್ಟಿಗೆ ಹಾಗಲ್ಲ. ಈ ವರ್ಷ ದರ ಸಿಗಲಿಲ್ಲವೋ ಬೆಳೆ ತನ್ನ ಪಾಡಿಗೆ ತಾನು ಮೆಳೆಯಲ್ಲಿ ಇರುತ್ತದೆ. ಬೆಲೆ ಬಂದಾಗ ಕತ್ತರಿಸಿ ಕೊಟ್ಟರಾಯಿತು.
ಕೃಷಿ ವಿಧಾನ, ತಳಿ ಆಯ್ಕೆ ಮುಖ್ಯ ಎಂಬುದು ನನ್ನ ಅನುಭವ. ಬಿದಿರು ಬೆಳೆಯಲು ಮುಂದಾಗುವವನು ತನ್ನ ಜಮೀನಿಗೆ ಸೂಕ್ತ ತಳಿ ಆಯ್ಕೆ, ನೆಡುವ ವಿಧಾನ, ಕೃಷಿ, ಮತ್ತು ಎಲ್ಲಕಿಂತ ಮುಖ್ಯವಾಗಿ ಖಾತರಿಯ ಸಸಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.. ನೆಟ್ಟ ಕೆಲವೇ ವರ್ಷಗಳಲ್ಲಿ ಕಟ್ಟೆ ಬರುವಂತ ಗಿಡ ನೆಟ್ಟರೆ ತಲೆಯ ಮೇಲೆ ಕೈ ಹೊತ್ತು ಕೊಳ್ಳುವ ಪರಿಸ್ಥಿತಿ ಬರಲೂ ಬಹುದು. ಈ ಬಗ್ಗೆ ತುಂಬಾ ಎಚ್ಚರ ಅಗತ್ಯ. ನಮ್ಮ ನಮ್ಮ ಹವಾಗುಣ, ಮಣ್ಣು ಮತ್ತು ಬೇಡಿಕೆಗೆ ಅನುಗುಣವಾಗಿ ಬಿದಿರು ತಳಿಗಳನ್ನು ಆಯ್ಕೆ
ಮಾಡಿಕೊಳ್ಳಬಹುದು. ಸುಧಾರಿತ ತಳಿಯ ಗಿಡಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ..
ಬಹಳ ಬೇಡಿಕೆ ಇರುವ ಬರ್ಮಾ (ಮಹಾ) ಬಿದಿರು ಮಲೆನಾಡಿಗೆ ಸೂಕ್ತ. ಸೆಮೆ ಮತ್ತು ವಾಟೆ ಬಿದಿರಿನ ಸುಧಾರಿತ ತಳಿಗಳು ಬಂದಿವೆ. ತರಕಾರಿಯಾಗಿ ಬೇಡಿಕೆ ಇರುವ ಕಳಲೆ ಬಿದಿರಿದೆ.. ಸ್ಟ್ರಾ ಉದ್ದೇಶಕ್ಕೆ ಬೆಳೆಸುವ ಬಿದಿರೂ ಇದೆ. ಭೀಮ ಬಿದಿರು ಮಲ್ಟಿ ಪರ್ಪಸ್ ಬಿದಿರಾಗಿದ್ದು ಅರೆ ಮಲೆನಾಡು, ಬಯಲು ಪ್ರದೇಶಕ್ಕೆ ಸೂಕ್ತವಾಗಿದೆ. ಎಥೆನಾಲ್ ಉದ್ದೇಶಕ್ಕೇ ಬೆಳೆಸಲಾಗುವ ಬಿದಿರಿನ ಫೀಲ್ಡ್ ರಿಪೋರ್ಟ್ ಇನ್ನೂ ಬರಬೇಕಿದೆ.
ಮೊದಲ ಮೂರ್ನಾಲ್ಕು ವರ್ಷ ಚೆನ್ನಾಗಿ ನೋಡಿಕೊಂಡರೆ ಬಿದಿರು ಒಂದು ತಲೆಮಾರು ನಮ್ಮನ್ನು ನೋಡಿಕೊಳ್ಳುತ್ತದೆ.. ನೀರಾವರಿ ಬೇಕಂತಿಲ್ಲ, ಒಳಸುರಿಯ ಬಗ್ಗೆ ತೀರಾ ತಲೆಕೆಡಿಸಿಕೊಳ್ಳ ಬೇಕಿಲ್ಲ.. ತಲೆ ಹೋಗುವಂತಹ ರೋಗ ರುಜಿನಗಳಿಲ್ಲ.. ಆನೆಯೊಂದನ್ನು ಹೊರತು ಪಡಿಸಿ ಕಾಡುಪ್ರಾಣಿಗಳ ಕಾಟವಿಲ್ಲ.. ಕಳ್ಳತನದ ತೊಂದರೆ ಇರದು. ಬಿದಿರನ್ನು ಪ್ಲಾಂಟೇಷನ್ನಾಗಿ ಬೆಳೆಯಬಹುದು. ಅಥವಾ ಬದುವಿನ ಸುತ್ತಲೂ ಬೆಳೆಯಬಹುದು. ಖುಷ್ಕಿ ಜಮೀನು ಅಲ್ಲದೇ ಬೀಳು ಬಿಟ್ಟ ಗದ್ದೆಗಳಲ್ಲಿ ಕೂಡ ಏರುಮಡಿಯಾಗಿ ಬೆಳೆಯ ಬಹುದಾಗಿದೆ.
ಮೊದಲು ಐದಾರು ವರ್ಷ ಅಂತರ ಬೇಸಾಯ ಮಾಡಬಹುದು. ನೇರ ಹೋಗುವ ಇತರ ಅರಣ್ಯ ಜಾತಿಯ ಗಿಡಗಳನ್ನೂ ಕೂಡ
ಬೆಳೆಯ ಬಹುದು. ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಬಿದಿರು ಇದ್ದರೆ ಮಾತ್ರ ಉದ್ದಿಮೆದಾರರು ಹುಡುಕಿ ಬರುತ್ತಾರೆ. ಹಾಗಂತ ದೊಡ್ಡ ಬೆಳೆಗಾರರು ಮಾತ್ರ ಇದಕ್ಕೆ ಕೈ ಹಾಕ ಬೇಕಂತಿಲ್ಲ.. ಸಣ್ಣ ಪ್ರಮಾಣದಲ್ಲಿ ಬೆಳೆವವರು ಒಂದು ಸಂಘ ಮಾಡಿಕೊಂಡು
ಸಹಕಾರ ತತ್ವದಲ್ಲಿ ಬೆಳೆಯಬೇಕು. ರೈತ ಉತ್ಪಾದಕ ಕಂಪನಿಗಳನ್ನೂ ಮಾಡಬಹುದು. ಆಗ ನಮ್ಮ ಬೆಳೆಗೆ ಸೂಕ್ತ ಬೆಲೆಯನ್ನು ಡಿಮ್ಯಾಂಡ್ ಮಾಡಬಹುದು.
ಆರೈಕೆ ಇಲ್ಲದೇ ಆದಾಯ ಇದ್ದರೆ ಅದು ಬಿದಿರಿನಂಥ ಬೆಳೆಗಳಲ್ಲಿ ಮಾತ್ರ. ನನ್ನದೇ ಅನುಭವ ನೋಡಿ, ಅಂದೊಂದು ಸಂಜೆ ಸಂಘಕ್ಕೆ ಹಾಲು ಹಾಕಲು ಹೋಗುವ ಹೊತ್ತಿಗೆ ವರದಾಮೂಲದ ಏರಿನಲ್ಲಿ ಉzನುದ್ದದ ಸೆಮೆ ಬಿದಿರು ಹೊತ್ತಿದ್ದ ಗೂಡ್ಸ ಆಟೋಗಳು ಏದುಸಿರು ಬಿಡುತ್ತಿದ್ದವು. ಸಂಘದ ಬಾಗಿಲಿನಲ್ಲಿ ಕೈ ಅಡ್ಡ ಹಾಕಿ ಯಾವೂರಿನವರು, ನಮ್ಮಲ್ಲೂ ಬಿದಿರಿದೆ. ಯಾವ ರೇಟಿಗೆ ಖರೀದಿ ಮಾಡುತ್ತೀರಿ ಎಂದು ಕೇಳಿದೆ. ಚನ್ನಗಿರಿ ಹತ್ತಿರದವರು, ಮಾತೇನಿದ್ದರೂ ನಮ್ಮಣ್ಣನದು, ಅವರನ್ನೇ ಕೇಳಿ ಎಂದು ಫೋನ್ ನಂ. ಕೊಟ್ಟು ಹೋದ. ಮನೆಗೆ ಬಂದವನೇ ಫೋನಾಸಿದೆ. ಹೌದು ಎಷ್ಟಿದ್ದರೂ ಕೊಳ್ಳುತ್ತೇವೆ. ಬಿದಿರು ನೋಡಿಯೇ ಮಾತು, ನಾಕು ದಿನ ಬಿಟ್ಟು ಬರುತ್ತೇನೆ ಎಂದಿದ್ದ. ಸುಮಾರು ಹತ್ತು ವರ್ಷಗಳ ಹಿಂದೆ ಬಂಧುವೊಬ್ಬರ ಮನೆಯಿಂದ ಸೆಮೆ ಗಳ ಎಂದು ಕರೆವ ಬಿದಿರು ಹಿಳ್ಳೊಂದನ್ನು ತಂದು ನೆಟ್ಟು ಮರೆತು ಬಿಟ್ಟಿದ್ದೆ ಎನ್ನಬಹುದು.
ನಮ್ಮ ಮಲೆನಾಡಿನಲ್ಲಿ ಹಿತ್ತಲಲ್ಲಿ ಸಣ್ಣ ಪುಟ್ಟ ಕೃಷಿ ಕೆಲಸಗಳಿಗೆ, ಅದೂ ಇದೂ ಬಳಕೆಗೆ ಬರುತ್ತದೆ ಎಂದು ಇದನ್ನು ನೆಟ್ಟು ಕೊಂಡಿರುತ್ತೇವೆ. ನೆಡುವಾಗ ಆಸರೆಗೊಂದು ಮರ ಇರುವಂತೆ ನೋಡಿ ಕೊಳ್ಳುತ್ತೇವೆ. ಹಾಗೆ ಮಾಡಿದರೆ ಬಿದಿರು ಬಾಗದೆ,
ಬಳುಕದೆ ನೇರ ಹೋಗುತ್ತವೆ.. ನಲವತ್ತು ಅಡಿಯ ತನಕ ಎತ್ತರ ಹೋಗುತ್ತವೆ. ಮುಷ್ಟಿ ಗಾತ್ರದವರೆಗೆ ದಪ್ಪ, ಅನುಕೂಲದ ವಾತಾವರಣ ಇದ್ದರೆ ಒಂದಡಿ ತನಕದ ಗಣ್ಣು, ಒಳಗೆ ಟೊಳ್ಳು ಹೇಳುವಂತಹದ್ದಲ್ಲ. ಚಪ್ಪರಕ್ಕೆ, ದೋಟಿಗೆ, ಟೆಂಪರ್ವರಿ ಮಾಡಿಗೆ, ಅಡಿಕೆ ಹರಗುವ ಚಾಪೆಗೆ, ಬೇಲಿಗೆ, ದಣಪೆಗೆ, ಅದಕ್ಕೆ ಇದಕ್ಕೆ ಎಂದು ಉಪಯೋಗ. ಹೆಚ್ಚಿದ್ದರೆ ಮನೆ ಬಾಗಿಲಿಗೆ ಬರುವ ಮೇದಾರರಿಗೆ ಸಣ್ಣ ಚೌಕಾಸಿಯಲ್ಲಿ ಮಾರಾಟ. ಕೈ ಕಾಸು. ನಗಣ್ಯದ ಲೆಕ್ಕ.
ಮಾತಿನಂತೆ ಮೂರ್ತಿ ಎಂಬ ಮೇದಾರಿಕೆ ವೃತ್ತಿಯ ಯುವಕ ಹೆಂಡತಿಯೊಂದಿಗೆ ಬಂದು ನಮ್ಮ ಬಿದಿರನ್ನು ಓಕೆ ಮಾಡಿದ. ಈತನದು ಚನ್ನಗಿರಿ ತಾಲೂಕಿನ ನೆಲ್ಲೂರು. ನಮ್ಮದಲ್ಲದೆ ಬಳಗದ ಸ್ನೇಹಿತರ ಲೀಸ್ಟು ಕೊಟ್ಟೆ. ರೇಟು ನೂರರ ಎಡ ಬಲ. ನಮ್ಮದಕ್ಕೆ ನೂರಿಪ್ಪತ್ತು ಕೊಡುವೆನೆಂದ. ನಿನ್ನೆ ಕಟಾವಾಯಿತು. ಮೂವತ್ತೇಳು ಗಳ ಸಿಕ್ಕಿತು. ನಾಕೂವರೆ ಸಾವಿರ ರೂಪಾಯಿ ಎಣಿಸಿಟ್ಟ. ಬೇರೆ ಕಡೆಯದು ಈ ಸೈಜು ಇರಲಿಲ್ಲ, ಹಾಗಾಗಿ ಸ್ವಲ್ಪ ಕಡಿಮೆ ಕೊಟ್ಟೆ ಎಂದ.. ಗಳವನ್ನು ಬುಟ್ಟಿ, ಚಾಪೆ ಹೆಣೆಯಲು ಬಳಸುವೆ ಎಂದಿದ್ದಾನೆ.. ಅದರಲ್ಲೂ ನಲವತ್ತು ಅಡಿ ಬರುವ ಗಳವನ್ನು ದೊಡ್ಡ ದೊಡ್ಡ ಲಾರಿಗಳು ಮಳೆ ರಕ್ಷಣೆಗೆ ಬಳಸುವ
ಕಮಾನು ಮಾಡಿಗೆ ಬಳಕೆ ಆಗುತ್ತೆ ಎಂದ.
ಇದರಲ್ಲಿ ತಾನು ಎಕ್ಸಪರ್ಟ್ ಆದ್ದರಿಂದ ಯಾವಾಗಲೂ ಆರ್ಡರ್ ಇರುತ್ತೆ. ಎಂಟು ಹತ್ತು ಬಿದಿರು ಬಳಸಿ ೪೦೩೦ರ ಚಾಪೆ ಸಿದ್ದ
ಆಗುತ್ತೆ. ಮೂರೂವರೆ ಸಾವಿರಕ್ಕೆ ಹೋಗುತ್ತೆ. ಎಂಟತ್ತು ಜನಕ್ಕೆ ಕೈ ತುಂಬ ಕೆಲಸವಿದೆ ಎಂದ. ಬೇಲಿ ಬದಿಗೆ ಊರಿರುವ ನಗಣ್ಯದ ಬಿದಿರು ಹೀಗೊಂದು ಬದುಕು ಕಟ್ಟಿಕೊಳ್ಳಲು ಕಾರಣ ಆಗಿರುವ ಪರಿಗೆ ನನಗೆ ಆಶ್ಚರ್ಯವೂ ಆಯಿತು. ಖುಷಿಯೂ ಆಯಿತು..
ಬಿದಿರಿನ ದೊಡ್ಡ ಪ್ರಮಾಣದ ಕೃಷಿಗೆ ಹೊರಟ ನನಗೆ ಇದರಲ್ಲಿ ದೊಡ್ಡ ಲಾಭ ಇರುವ ಖಾತ್ರಿ ದೊರೆಯಿತು.
ನನ್ನ ಸೆಮೆ ಬಿದಿರಿನ ಲೆಕ್ಕವನ್ನೇ ತೆಗೆದು ಕೊಳ್ಳಿ. ಈಗ ಮೂವತ್ತೇಳು ಗಳ ಕೊಟ್ಟಿದ್ದೇನೆ.. ಆಗಾಗ ಕಡಿದ ಗಳ ಐವತ್ತು ಮೀರಿದ್ದೀತು. ಬಿದಿರಕ್ಕಿ ಬರುವ ಸಾಧ್ಯತೆ ಇರುವ ಕಾರಣ ಎರಡು ಮೂರು ತಿಂಗಳು ಬಿಟ್ಟು ಬರುತ್ತೇನೆ. ಸಾರಾ ಸಗಟು ಕಡಿಯೋಣ ಆಗ ಇಷ್ಟೇ ಗಳ ಸಿಗುತ್ತೆ’ ಎಂದಿದ್ದಾನೆ. ಅಂದರೆ ಈ ಬಿದಿರು ಮೆಳೆ ನನಗೆ ಹದಿನೈದು ಸಾವಿರ ರೂಪಾಯಿ ಆದಾಯ ಕೊಟ್ಟಿದೆ. ಮೂರ್ತಿಗೆ ಇದರದೇ ಪ್ಲಾಂಟೇಷನ್ ಮಾಡುವವರಿದ್ದೇವೆ ಕೊಳ್ಳುವವರು ಇದ್ದಾರೆಯೇ ಅಂದೆ. ನನಗೂ ನನ್ನ ಸರೀಕರಿಗೆ ಎಷ್ಟಿದ್ದರೂ ಬೇಕು.. ದಿನಕ್ಕೆ ನೂರುಗಳ ಕೊಟ್ಟರೂ ಒಯ್ತೇನೆ ಎಂದ.
ನನ್ನ ಲೆಕ್ಕದಲ್ಲಿ ಬೇಲಿ ಸಾಲಿಗೆ ಹತ್ತಡಿಗೊಂದರಂತೆ, ಪ್ಲಾಂಟೇಷನ್ ಆದರೆ ಹತ್ತಡಿ ಹತ್ತಡಿ ಅಂತರದಲ್ಲಿ ನೆಡಬಹುದು. ಅತಿ ಕಡಿಮೆ ವಾಗತ್ಯ(ಆರೈಕೆ) ಸಾಕು. ಸ್ವಲ್ಪ ನೀರು ಗೊಬ್ಬರ ಕೊಟ್ಟರಂತೂ ಇನ್ನೂ ಹೆಚ್ಚಿನ ಕಟಾವು ಸಾಧ್ಯ. ನನ್ನ ಮೆಳೆಯಲ್ಲಿ ಹದಿನೆಂಟು ಹೊಸ ಮೊಳಕೆಗಳು ಇದ್ದವು.. ಈ ಮೊಳಕೆ ಎರಡನೇ ವರ್ಷಕ್ಕೆ ಕಟಾವು ಸಾದ್ಯ. ನೂರಿಪ್ಪತ್ತರಂತೆ ಹದಿನೈದು ಗಳಕ್ಕೆ ಒಂದು ಸಾವಿರದ ಎಂಟು ನೂರು. ಇಂಟು ನಾನ್ನೂರು. ಖಂಡಿತ ದೊಡ್ಡ ಆದಾಯ ಇಲ್ಲವೇ? ಇದಕ್ಕೇ ಇನ್ನಷ್ಟು ಗಮನ ಹರಿಸಿದರೆ ಆದಾಯ ಒಂದೂವರೆ ಪಟ್ಟಾದರೂ ಹೆಚ್ಚಾದೀತು.. ಸುಧಾರಿತ ತಳಿ ಹಾಕಿದರೆ ಇನ್ನೂ ಹೆಚ್ಚು. ಮೇದಾರಿಕೆಯವರಿಗೆ ಕೊಟ್ಟರೇ ಈ ಲಾಭ.
ಇನ್ನು ಉದ್ದಿಮೆಗಳಿಗೆ ಸರಬರಾಜಾದರೆ ಇನ್ನಷ್ಟು ವರಮಾನ ಸಾಧ್ಯತೆ ಇದೆ. ಅನುಮಾನವೇ ಇಲ್ಲ, ಬಿದಿರು ರೈತರ ಆಶಾಕಿರಣ.
ಮುಂದಿನ ದಿನಗಳಲ್ಲಿ ಬಿದಿರು ನಮ್ಮ ರೈತರ ಬದುಕಿನ ಹೊಸ ಆಶಾಕಿರಣ ಎನ್ನಿಸಿ ಕೊಳ್ಳಲಿದೆ.. ನಿಮಗೆ ಗೊತ್ತೆ? ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ನಮ್ಮ ರಾಜ್ಯದ ಅಗರಬತ್ತಿ ಉದ್ಯಮಗಳು ಬಳಸುವ ಬಿದಿರುಕಡ್ಡಿಯನ್ನು ಚೀನಾ ಮತ್ತು ವಿಯೆಟ್ನಾಂ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಇದರ ವಹಿವಾಟು ಮೂರು ಸಾವಿರ ಕೋಟಿಯಾಗಿದೆ.
ಗುಜರಾತಿನಲ್ಲಿ ಗಾಳಿಪಟ ಹಾರಿಸುವುದು ಬಹು ದೊಡ್ಡ ಹಬ್ಬ. ಗಾಳಿಪಟ ತಯಾರಿಸುವುದು ಕೂಡ ಅಷ್ಟೇ ದೊಡ್ಡ ಉದ್ದಿಮೆ. ಅದನ್ನು ಮಾಡಲು ಬಳಸುವ ಬಿದಿರನ್ನು ಯಥಾ ಪ್ರಕಾರ ಚೀನಾದಂತಹ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಅದೂ ಕೂಡ ಸಾವಿರಾರು ಕೋಟಿ ವಹಿವಾಟು. ನಮ್ಮ ಕಾಗದ ಕಾರ್ಖಾನೆಗಳಿಗೆ, ಪ್ಲೈವುಡ್ ಇಂಡಸ್ಟ್ರಿಗಳಿಗೆ ಬೇಕಾದ ಬಿದಿರಿಗಾಗಿ ಹೊರದೇಶಗಳನ್ನು ನೆಚ್ಚಿಕೊಳ್ಳುವ ಪರಿಸ್ಥಿತಿ ಇದೆ.. ಅಷ್ಟೇ ಏಕೆ ಕಾಡಿನ ಬಿದಿರು ಕಟ್ಟೆ ಬಂದು ಹೋದ ಮೇಲೆ ಮೇದಾರರೂ ಕೂಡ ಬಿದಿರಿಗೆ ಬವಣೆ ಪಡುವ ಪರಿಸ್ಥಿತಿ ಬಂದಿದೆ.
ಈ ಎಲ್ಲ ಕಾರಣದಿಂದ ಬಿದಿರಿನ ಮಹತ್ವವನ್ನು ಮನಗಂಡು ಕೇಂದ್ರ ಸರಕಾರಬಿದಿರಿನ ಮಹಾ ಯೋಜನೆ ಹಾಕಿಕೊಂಡಿದೆ. National Bamboo Mission ಯೋಜನೆ ಹಾಕಿಕೊಂಡಿದ್ದು ಬಿದಿರು ಕೃಷಿ, ಬಿದಿರಿನ ಸಂಸ್ಕರಣೆ, ಪೂರಕ ಉದ್ದಿಮೆ, ಕರಕುಶಲ ವಸ್ತುಗಳ ತಯಾರಿಕೆ, ಪೀಠೋಪಕರಣ, ಅಷ್ಟೇ ಏಕೆ ಬಿದಿರು ಬಳಸಿ ಇಥೆನಾಲ್ ಉತ್ಪಾದನೆ, ಇನ್ನು ಮುಂತಾದ ಕೆಲಸಗಳನ್ನು ಅನುಷ್ಠಾನಗೊಳಿಸಲು ಕಾರ್ಯತತ್ಪರವಾಗಿದೆ. ಖಾಸಗಿಯಾಗಿ ಬಿದಿರು ಬೆಳೆಯಲು ಮುಂದೆ ಬರುವ ರೈತರಿಗೆ ಹೆಕ್ಟೇರಿಗೆ ರೂ .50000 ಸಹಾಯಧನ ಕೂಡ ದೊರೆಯುತ್ತದೆ.
ಕಳೆದ ವರ್ಷ ನಾವು ಈಗಾಗಲೇ ಎಂಟತ್ತು ವರ್ಷಗಳಿಂದ ಖಾಸಗಿಯಾಗಿ ಬಿದಿರು ಬೆಳೆದ ತಾಕುಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಹೆಚ್ಚು ಗಮನ ಕೊಡದೆಯೂ ಬಿದಿರು ತಮಗೆ ಲಾಭದಾಯಕ ಅಂತನ್ನಿಸಿದೆ ಎಂದು ಈಗಾಗಲೇ ಬಿದಿರು ಬೆಳೆದ ರೈತರು ಹೇಳಿದರು. ಪೊನ್ನಂಪೇಟೆ ಅರಣ್ಯ ಕಾಲೇಜಿನ ಅಧ್ಯಾಪಕ ರಾಮಕೃಷ್ಣ ಹೆಗಡೆಯವರ ಪ್ರಕಾರ ಶೂನ್ಯ ಕೃಷಿಯಲ್ಲಿ ಕೂಡ ಬಿದಿರು ಬೆಳೆಯುತ್ತದೆ. ಎಂಟು ವರ್ಷಗಳ ಬಳಿಕ ವಾರ್ಷಿಕ ಎಕರೆಗೆ ಒಂದೂವರೆಯಿಂದ ಎರಡು ಲಕ್ಷ ಆದಾಯ
ಗಳಿಸ ಬಹುದು.
ಮುಂದಿನ ದಿನಗಳಲ್ಲಿ ಆದಾಯ ಹೆಚ್ಚು ನಿರೀಕ್ಷಿಸಬಹುದು. ಬಹು ವಿಧದ ಬಿದುರು ವಿಪುಲವಾಗಿ ಬೆಳೆದರೆ ಅದನ್ನು ಆಧರಿಸಿದ ಗೃಹೋದ್ದಿಮೆ, ಸಣ್ಣ ಸಣ್ಣ ಸಂಸ್ಕರಣಾ ಘಟಕಗಳನ್ನು ಆರಂಭಿಸುವ ಮುಖಾಂತರ ಉದ್ಯೋಗ ಸೃಷ್ಟಿಯ ಸಾಧ್ಯತೆಗಳೂ ಇವೆ.
***
ಬಿದಿರನ್ನು ಬೆಳೆಯುವ ಹಂತದಿಂದ ಹಿಡಿದು ಅದರ ಮಾರುಕಟ್ಟೆ, ಉದ್ದಿಮೆ ಸ್ಥಾಪನೆ ಇವೇ ಮುಂತಾದ ವಿಷಯಗಳ ಕುರಿತಂತೆ ಮಾಹಿತಿಗೆ : ೮೧೪೭೨೯೯೩೫೩ (ನಾಗೇಂದ್ರ ಸಾಗರ್), ೯೪೪೮೭೮೬೬೩೪(ಡಾ. ಟಿ.ಜೆ.ಲಕ್ಷ್ಮೀನಾರಾಯಣ್)