Sunday, 15th December 2024

ಮತದಾರರ ವಿಶ್ವಾಸ ಗಳಿಸಿ

ನಗರಾಡಳಿತ ಸಂಸ್ಥೆಗಳಲ್ಲಿ ಲಂಚ ನೀಡದೇ ಯಾವುದೇ ಸೇವೆ ಪಡೆಯುವುದು ದುಸ್ತರ ಎಂಬ ಸ್ಥಿತಿ ಇದೆ. ಸಣ್ಣ ಪುಟ್ಟ ನಗರಾಡಳಿತ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮಿತ ಪ್ರಮಾಣದಲ್ಲಿ ಇದ್ದರೆ, ರಾಜಧಾನಿಯ ಆಡಳಿತದ ಚುಕ್ಕಾಣಿ ಹಿಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭ್ರಷ್ಟಾಚಾರದ ಕೂಪವಾಗಿ ಬಿಟ್ಟಿವೆ.

ಬಿಬಿಎಂಪಿಯಲ್ಲಿನ ಯಾವುದೇ ಸೇವೆಯಲ್ಲಿನ ಭ್ರಷ್ಟಾಚಾರ ಒಂದು ಬಗೆಯದ್ದಾದರೆ, ಕಾಮಗಾರಿಗಳಲ್ಲಿ ನಡೆಯುವ ಭ್ರಷ್ಟಾಚಾರದ್ದು ಇನ್ನೊಂದು ಕರಾಳ ರೂಪ. ಈ ಪಾಲಿಕೆಯು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕಾಮಧೇನುವಿನಂತಿದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ತರಾತುರಿಯಲ್ಲಿ ನಿರ್ಮಾಣವಾದ ರಸ್ತೆಗಳು. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಾರೆ ಎಂಬ ಕಾರಣಕ್ಕೆ ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ತರಾತುರಿಯಲ್ಲಿ ? ೨೩ ಕೋಟಿ ಖರ್ಚು ಮಾಡಿ ಕೆಲವು ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು.

ಜ್ಞಾನಭಾರತಿ ಕ್ಯಾಂಪಸ್ ಬಳಿ ? ೬ ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ್ದ ರಸ್ತೆಯೂ ಅದರಲ್ಲಿ ಸೇರಿದ್ದು, ಮೂರೇ ದಿನಗಳಲ್ಲಿ ಆ ರಸ್ತೆ ಕುಸಿದು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಈ ಹಿಂದೆಯೂ ಅನೇಕ ಬಾರಿ ಬಿಬಿಎಂಪಿ ಯು ಇಂತಹ ಕಳಪೆ ಕಾಮಗಾರಿಗಳನ್ನು ಮಾಡಿ, ಸಾರ್ವಜನಿಕರ ಟೀಕೆಗೆ ಗುರಿ ಯಾಗಿತ್ತು. ಆದರೆ ಇದೀಗ ಚುನಾವಣೆಯ ಹೊಸ್ತಿಲಲ್ಲೇ ಇಂತಹ ಕಳಪೆ ಕಾಮಗಾರಿ ನಡೆದಿರುವುದರಿಂದ ಭಾರೀ ಚರ್ಚೆ ಶುರುವಾಗಿದೆ. ಪ್ರತಿ ಬಾರಿ ಮಳೆಗಾಲ ಬಂದಾಗಲೂ ನಗರದಲ್ಲಿ ನಡೆದ ಕಾಮಗಾರಿಗಳ ಬಣ್ಣ ಬಯಲಾಗುತ್ತದೆ. ಇವೆಲ್ಲವೂ ಬಿಬಿಎಂಪಿ ಕಾರ್ಯಗಳ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿವೆ.

ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಬಿಲ್ ಪಾವತಿಯಲ್ಲಿ ನಿಯಮ ಉಲ್ಲಂಘನೆ ಆಗಬಾರದು ಎಂಬ ಕಾರಣಕ್ಕೆ ಸಮಗ್ರ ಹಣಕಾಸು ನಿರ್ವ ಹಣೆ ವ್ಯವಸ್ಥೆ (ಐಎಫ್ ಎಂಎಸ್) ತಂತ್ರಾಂಶ ಜಾರಿಗೆ ತರಲಾಗಿದೆ. ಆದರೆ ಈ ಡಿಜಿಟಲ್ ವ್ಯವಸ್ಥೆಯ ಕಣ್ಣಿಗೂ ಮಣ್ಣೆರಚುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಕೇಂದ್ರದ ನಾಯಕರು ಬಂದಾಗಲೆಲ್ಲ ಅವರ ಓಲೈಕೆಗಾಗಿ ಈ ರೀತಿ ತರಾತುರಿಯಲ್ಲಿ ಕಳಪೆ ಕಾಮಗಾರಿ ಗಳನ್ನು ಕೈಗೊಳ್ಳುವ ಬದಲು ರಾಜ್ಯದ ಮತದಾರರ ವಿಶ್ವಾಸ ಗಳಿಸಲು ಶಾಶ್ವತ, ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡರೆ ಮಾತ್ರ ನಗರದ ಅಭಿವೃದ್ಧಿ ಸಾಧ್ಯ.