Sunday, 5th January 2025

ಮಹಾ ಘಟನಾವಳಿಗಳು ಉಸಿರುಗಟ್ಟಿಸುವಂತಿದೆ

ಸಂಗತ

ವಿಜಯ್‌ ದರಡಾ

ರಾಜಕೀಯವಾಗಿ ಎಷ್ಟೇ ವಿರೋಧಗಳಿದ್ದರೂ ವೈಯ್ಯಕ್ತಿಕ ಮಿತೃತ್ವ ಕ್ಕೆ ಅದರಿಂದ ಕಿಂಚಿತ್ತೂ ಧಕ್ಕೆ ಆಗುತ್ತಿರಲಿಲ್ಲ. ವಿಧಾನ ಮಂಡಲದಿಂದ ಹೊರ ನಡೆದ ನಂತರದಲ್ಲಿ ಅವರು ರಾಜಕೀಯ ವೈರುಧ್ಯಗಳನ್ನು ಮರೆತು ಎಲ್ಲರೊಂದಿಗೆ ಸ್ನೇಹಿತರಂತೆ ಬೆರೆಯುತ್ತಿದ್ದರು. ರಾತ್ರಿ ಒಟ್ಟಿಗೆ ಊಟ ಮಾಡುತ್ತಿದ್ದರು.

ಮಹಾರಾಷ್ಟ್ರದ ರಾಜಕೀಯ ವಿಪ್ಲವ ಇಡೀ ದೇಶದ ಗಮನ ಸೆಳೆದಿದೆ. ನೀವೂ ಬೇರೆ ರಾಜ್ಯಗಳ ತರಹ ವರ್ತಿಸಲು ಪ್ರಾರಂಭಿಸಿದ್ದೀರಾ ಎಂದು ಬೇರೆ ರಾಜ್ಯಗಳ ನನ್ನ ಮಿತ್ರರು ಕರೆ ಮಾಡಿ ಪ್ರಶ್ನಿಸುತ್ತಿದ್ದಾರೆ. ಈ ಸಂದಿಗ್ಧ ಸ್ಥಿತಿ ಎಂದು ಕೊನೆಯಾಗುತ್ತದೆ ಮತ್ತು ಅದರ ಪರಿಣಾಮಗಳೇನು ಎಂದು ಎಲ್ಲರೂ ಕೇಳುತ್ತಿದ್ದಾರೆ.

ಉದ್ಧವ ಠಾಕ್ರೆ ಅಧಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗುವರೇ, ವಿಫಲರಾಗುವರೇ? ದೇವೇಂದ್ರ ಫಡ್ನವೀಸರು ಮರಳಿ ಮುಖ್ಯಮಂತ್ರಿಯಾಗುವರೇ? ಏಕನಾಥ ಶಿಂಧೆಯವರ ರಾಜಕೀಯ ಭವಿಷ್ಯ ಏನಾಗಲಿದೆ? ಶಿವಸೇನಾ ಇಬ್ಭಾಗವಾಗ ಲಿದೆಯೇ? ಪವಾರ್ ಸಾಹೇಬರ ಪಾತ್ರವೇನು? ಈ ಎಲ್ಲ ಘಟನಾವಳಿಗಳಲ್ಲಿ ಕಾಂಗ್ರೆಸ್ ಪಾತ್ರವಿದೆಯೇ? ಈ ಎಲ್ಲ ಪ್ರಶ್ನೆಗಳು ಏಕಕಾಲಕ್ಕೆ ಉದ್ಭವಿಸಿವೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಈ ರಾಜಕೀಯ ಮೇಲಾಟ ಮತ್ತು ವ್ಯಕ್ತಿಗತ ದ್ವೇಷದ ಸಂಗತಿಗಳ ಬಗ್ಗೆ ಪ್ರಶ್ನೆ ಗಳನ್ನು ಕೇಳುತ್ತಲೇ ಇರುತ್ತಾರೆ. ಇದು ಮಹಾ ರಾಷ್ಟ್ರದ ಸಂಸ್ಕೃತಿಯೇ? ಮಹಾರಾಷ್ಟ್ರದ ರಾಜಕೀಯ ವಿದ್ಯಮಾನಗಳಿಂದ ನನಗೂ ನೋವಾಗಿದೆ ಎಂದು ನನ್ನ ಮಿತ್ರರಿಗೆ ಹೇಗೆ ಹೇಳಲಿ? ಇದಕ್ಕೆ ಮುನ್ನ ಮಹಾರಾಷ್ಟ್ರದಲ್ಲಿ ಇಂತಹದೊಂದು ರಾಜಕೀಯ ವಿಪ್ಲವ ನಡೆದೇ ಇರಲಿಲ್ಲ. ಮಹಾರಾಷ್ಟ್ರದ ರಾಜಕೀಯ ಕ್ಷೇತ್ರದಲ್ಲಿ ಪ್ರೀತಿ ವಿಶ್ವಾಸ ಮತ್ತು ಸೌಹಾರ್ದತೆ ಇತ್ತು. ನನ್ನ ತಂದೆ, ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ ದರಡಾ ಒಂದು ಕಾಲದಲ್ಲಿ ಮಹಾರಾಷ್ಟ್ರ ರಾಜಕೀಯದ ಉತ್ತುಂಗ ದಲ್ಲಿದ್ದವರು.

ಹಾಗಾಗಿ ಎಳವೆಯಿಂದಲೇ ಇಲ್ಲಿನ ರಾಜಕೀಯ ಚಟುವಟಿಕೆಗಳನ್ನು ಸಮೀಪದಿಂದ ಅವಲೋಕನ ಮಾಡುವ ಅವಕಾಶ ನನಗೆ
ಸಿಕ್ಕಿತ್ತು. ನಮ್ಮಪ್ಪನೊಂದಿಗೆ ವಿರೋಧ ಪಕ್ಷಗಳ ನಾಯಕರು ಕೂಡ ಸೌಹಾರ್ದ ಸಂಬಂಧ ಹೊಂದಿದ್ದರು. ರಾಜಕೀಯವಾಗಿ ಎಷ್ಟೇ ವಿರೋಧಗಳಿದ್ದರೂ ವೈಯ್ಯಕ್ತಿಕ ಮಿತೃತ್ವ ಕ್ಕೆ ಅದರಿಂದ ಕಿಂಚಿತ್ತೂ ಧಕ್ಕೆ ಆಗುತ್ತಿರಲಿಲ್ಲ. ಪರಸ್ಪರ ಸುಖ-ದುಃಖಗಳನ್ನು ಹಂಚಿಕೊಳ್ಳುವ ಪರಿಪಾಠವಿತ್ತು. ವಿಧಾನಮಂಡಲದಿಂದ ಹೊರನಡೆದ ನಂತರದಲ್ಲಿ ಅವರು ರಾಜಕೀಯ ವೈರುಧ್ಯಗಳನ್ನು ಮರೆತು ಎಲ್ಲರೊಂದಿಗೆ ಸ್ನೇಹಿತರಂತೆ ಬೆರೆಯುತ್ತಿದ್ದರು. ರಾತ್ರಿ ಒಟ್ಟಿಗೆ ಊಟ ಮಾಡುತ್ತಿದ್ದರು.

ಇದು ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿ. ಅಂತಹ ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಬಂದಿರುವ ಬೆರಳೆಣಿಕೆಯ
ರಾಜಕೀಯಸ್ಥರು ಇಂದು ಕೂಡ ಮಹಾರಾಷ್ಟ್ರದಲ್ಲಿದ್ದಾರೆ. ನಾನು ಈ ಪರಿಪಾಠವನ್ನು ಸದಾ ಗೌರವಿಸುತ್ತೇನೆ. ಆದರೆ ಇಂದು ಅಧಿಕಾರದ ದಾಹದಿಂದಾಗಿ ಮಹಾರಾಷ್ಟ್ರದಲ್ಲಿ ರಾಜಕೀಯ ವಿದ್ಯಮಾನಗಳು ವಿಷಮ ಸ್ಥಿತಿಯನ್ನು ತಲುಪಿವೆ. ಈಗ ರಾಜಕಾರಣಿ ಗಳು ತನ್ನ ವೈರಿ ರಾಜಕಾರಣಿಯ ರಕ್ತಕ್ಕಾಗಿ ತಹತಹಿಸುವವರಂತೆ ವರ್ತಿಸುತ್ತಿದ್ದಾರೆ. ತತ್ವಗಳೆಲ್ಲವೂ ಹಿಂದಕ್ಕೆ ಸರಿದಿವೆ.

ನಾನು ಕಳೆದ 50-55 ವರುಷಗಳಿಂದ ರಾಜಕೀಯವನ್ನು ಅತ್ಯಂತ ಹತ್ತಿರದಿಂದ ಅವಲೋಕನ ಮಾಡುತ್ತ ಬಂದಿದ್ದೇನೆ. ನಾನು ಭಾರತದ ಸಂಸತ್ತಿನಲ್ಲಿ ಹದಿನೆಂಟು ವರುಷ ಕಳೆದಿದ್ದೇನೆ. ಪಂಡಿತ ಜವಾಹರಲಾಲ ನೆಹರೂ, ಇಂದಿರಾಗಾಂಧಿ, ರಾಜೀವ ಗಾಂಧಿ, ಮೊರಾರ್ಜಿ ದೇಸಾಯಿ, ವಿ.ಪಿ.ಸಿಂಗ್, ಚಂದ್ರಶೇಖರ, ಪಿ.ವಿ.ನರಸಿಂಹ ರಾವ್, ಎಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ, ಅಟಲ ಬಿಹಾರಿ ವಾಜಪೇಯಿ ಮತ್ತು ಮನಮೋಹನಸಿಂಗರನ್ನು ಹತ್ತಿರದಿಂದ ಕಂಡಿದ್ದೇನೆ. ಸಂಸತ್ತಿನಲ್ಲಿದ್ದು ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವ ಸಂಪ್ರದಾಯ ಆಗ ಇತ್ತು.

ಪಾರ್ಲಿಮೆಂಟಿನಲ್ಲಿ ಚರ್ಚೆ ಮಾಡುತ್ತ ಆರೋಪಗಳ ಸುರಿಮಳೆಯನ್ನೇ ತಮ್ಮ ಎದುರಾಳಿಯ ವಿರುದ್ಧ ಸುರಿಸುತ್ತಿದ್ದರೂ ಕೂಡ ಸಂಸತ್ತಿನಿಂದ ಹೊರಗಡೆ ಅವರ ಸ್ನೇಹಾಚಾರಕ್ಕೆ ಯಾವ ಧಕ್ಕೆಯೂ ಇರುತ್ತಿರಲಿಲ್ಲ. ವಿರಳ ಸನ್ನಿವೇಶಗಳಲ್ಲಿ ಅಸಭ್ಯ ಮಾತುಗಳ ವಿನಿಮಯವಾದದ್ದೂ ಇದೆ, ಇಲ್ಲವೆಂದಲ್ಲ. ಆದರೆ ಆ ಬಗ್ಗೆ ಅವರೇ ನಂತರ ವಿಷಾದ ವ್ಯಕ್ತಪಡಿಸುತ್ತಿದ್ದರು. ಒಮ್ಮೆ ದೇವಕಾಂತ್ ಬರೂವಾ ಕೆಟ್ಟಮಾತುಗಳಿಂದ ಪಂಡಿತಜೀ ಯವರನ್ನು ನಿಂದಿಸಿದ್ದರು. ಸಿಟ್ಟಾಗಬೇಕಿದ್ದ ಪಂಡಿತ್ ಜೀ ಶಾಂತವಾಗಿ ಬರೂವಾ ಅವರನ್ನೇ ಚಹಾಕೂಟಕ್ಕೆ ಕರೆದು, ನೀವ್ಯಾಕೆ ಕೆಲವೊಮ್ಮೆ ಆತುರಕ್ಕೆ ಒಳಗಾಗುತ್ತೀರಿ ಎಂದು ಕೇಳಿದ್ದರು.

ಪಂಡಿತ್ ನೆಹರೂ ಅವರ ನಿಧನಾ ನಂತರ ಅವರ ಪಾರ್ಥಿವ ಶರೀರವನ್ನು ದರ್ಶಿಸಲು ಬಂದ ಬರೂವಾ ಮೂರುಮೂರು ಬಾರಿ ಬಾಗಿ ನಮಸ್ಕರಿಸಿದರು. ಹೀಗೇಕೆ ಮಾಡುತ್ತಿದ್ದೀರಿ ಎಂದು ಬರೂವಾ ಅವರನ್ನು ಖ್ಯಾತ ಪತ್ರಕರ್ತ ಚಲಪತಿ ರಾವ್ ಕೇಳಿದಾಗ,
ನನ್ನ ಮೊದಲ ನಮಸ್ಕಾರ ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ, ಪ್ರಜಾಪ್ರಭುತ್ವವನ್ನು ಜಾಗೃತವಾಗಿಟ್ಟದ್ದಕ್ಕಾಗಿ
ಎರಡನೆಯ ನಮಸ್ಕಾರ, ಮತ್ತು ಮೂರನೆಯ ನಮಸ್ಕಾರ ಏಕೆಂದರೆ, ನಾನು ಮಾಡಿದ್ದ ತಪ್ಪನ್ನು ಕೂಡ ಮನ್ನಿಸಿದ್ದಕ್ಕೆ ಅವರಲ್ಲಿ ಕ್ಷಮೆ ಯಾಚಿಸುವಷ್ಟು ಧೈರ್ಯವೂ ನನ್ನಲ್ಲಿರಲಿಲ್ಲ ಎಂದು ಹೇಳಿದ್ದರು.

ಅಟಲಜೀಯವರು ಪಂಡಿತರ ಕಟ್ಟಾ ವಿಮರ್ಶಕರಾಗಿದ್ದವರು. ಆದರೆ ಅಟಲ್ ಜೀ ಚುನಾವಣೆಯಲ್ಲಿ ಸೋತಾಗ ಪಂಡಿತಜೀ ಅವರನ್ನು ಸಂಸತ್ತಿಗೆ ಕರೆತಂದಿದ್ದರು. ಆದರೂ ಅಟಲಜೀ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸುವುದನ್ನು ಬಿಟ್ಟಿರಲಿಲ್ಲ. ಹಾಗಂತ ಅವರು ಶಿಷ್ಟಾಚಾರಗಳ ಎಲ್ಲೆ ಮೀರಿರಲಿಲ್ಲ.ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಅಪಾರ ನಂಬಿಕೆ ಇತ್ತು. ಒಂದು ಪ್ರಕರಣ ವನ್ನು ಇಲ್ಲಿ ಹೇಳಲೇಬೇಕಿದೆ.

1977ರಲ್ಲಿ ರಚಿತವಾದ ಜನತಾ ಪಾರ್ಟಿ ಸರಕಾರದಲ್ಲಿ ಅಟಲ್ ಜೀ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು. ಆಗ ಸೌತ್ ಬ್ಲಾಕ್ ಕಟ್ಟದಲ್ಲಿದ್ದ ಪಂಡಿತ ನೆಹರೂ ಅವರ ಭಾವಚಿತ್ರವನ್ನು ಯಾರೋ ತೆಗೆಸಿದ್ದರು. ಒಂದು ದಿನ ಅಲ್ಲಿಗೆ ಬಂದ ಅಟಲಜೀ ನೆಹರೂ ಅವರ ಫೋಟೋ ಯಾಕೆ ತೆಗೆದಿರಿ? ಎಂದು ಪ್ರಶ್ನಿಸುತ್ತಾರೆ. ಯಾರೂ ಉತ್ತರಿಸುವುದಿಲ್ಲ. ಮಾರನೇ ದಿನವೇ ನೆಹರೂ ಅವರ ಆಯಿಲ್ ಪೈಂಟಿಂಗ್ ಚಿತ್ರ ಅಲ್ಲಿ ಮರುಸ್ಥಾಪನೆಯಾಯಿತು.

1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಗಳಿಸಿದಾಗ ಅಟಲಜೀ ಯವರು ಇಂದಿರಾಗಾಂಧಿಯವರನ್ನು ದುರ್ಗಾ ಎಂದು
ಸಂಬೋಧಿಸಿದ್ದರು. 1994ರಲ್ಲಿ ಕಾಶ್ಮೀರ ವಿವಾದದ ಕುರಿತಂತೆ ಪಾಕಿಸ್ತಾನವು ಯುನೈಟೆಡ್ ನೇಶ ಸಮಾವೇಶದಲ್ಲಿ ಭಾರತದ ವಿರುದ್ಧ ಮುಗಿಬಿದ್ದಾಗ, ಅದಕ್ಕೆ ತಕ್ಕುದಾದ ಉತ್ತರ ನೀಡಿ ಭಾರತವನ್ನು ಪ್ರತಿನಿಽಸುವುದಕ್ಕೆ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ವಿರೋಧಪಕ್ಷದ ನಾಯಕ ಅಟಲಜೀಯವರನ್ನು ಜಿನೀವಾಗೆ ಕಳುಹಿಸಿದ್ದರು.

ಪರಸ್ಪರ ಪ್ರೀತ್ಯಾದರಗಳು ಹೇಗಿರುತ್ತವೆ ಎಂಬುದನ್ನು ವಿವರಿಸಲು ಇನ್ನೊಂದು ಘಟನೆಯನ್ನು ಹೇಳುತ್ತೇನೆ. 1988 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮೂತ್ರಪಿಂಡದ ಸಮಸ್ಯೆಯಿಂದ ತೀವ್ರ ಬಳಲಿಕೆಯಲ್ಲಿದ್ದಾಗ, ಅವರಿಗೆ ಅಮೆರಿಕದಲ್ಲಿ ವೈದ್ಯಕೀಯ ಶುಶ್ರೂಷೆ ಅಗತ್ಯವಿತ್ತು. ಅವರ ಬಳಿ ಸಾಕಷ್ಟು ಹಣವಿಲ್ಲದ ಕಾರಣ ಹೋಗಲಾಗಿರಲಿಲ್ಲ. ರಾಜೀವಗಾಂಧಿಯವರಿಗೆ ಈ ವಿಚಾರ ತಿಳಿದು ಅವರನ್ನು, ತಮ್ಮೊಂದಿಗೆ ನ್ಯೂಯಾರ್ಕಿನ ಸಮಾವೇಶಕ್ಕೆ ತೆರಳಬೇಕಿದ್ದ ತಂಡದೊಂದಿಗೆ ಕರೆದೊಯ್ದು, ಎಲ್ಲ ವ್ಯವಸ್ಥೆಗಳನ್ನು ಮಾಡಿ, ನೀವು ಶುಶ್ರೂಷೆ ಪೂರ್ಣವಾಗಿ ಪಡೆದ ನಂತರವೇ ವಾಪಾಸು ಬನ್ನಿ ಎಂದು ವಿನಂತಿಸಿಕೊಂಡಿದ್ದರು.

ಈ ವಿಚಾರವನ್ನು ಸ್ವತಃ ಅಟಲಜೀಯವರು ರಾಜೀವಗಾಂಧಿ ನಿಧನಾನಂತರದಲ್ಲಿ ಹೇಳಿದ್ದರು. ಅವರ ಸಹಕಾರ ಇಲ್ಲದಿದ್ದರೆ ನಾನಿಂದು ಬದುಕುಳಿಯುತ್ತಿರಲಿಲ್ಲ ಎಂದೂ ಹೇಳಿದ್ದರು. ಆ ಸಂದರ್ಭದಲ್ಲಿಯೇ ಅಟಲಜೀಯವರು ‘ಮೌಥ್ ಸೇ ಥಾನ್ ಗಯೀ’
ಎಂಬ ಕವನವನ್ನು ಬರೆದಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭಾ ಅವಧಿ ಮುಗಿಸಿ ಹೊರಬಂದ ಗುಲಾಮ್ ಆಝಾದರಿಗೆ ವಿದಾಯ ಕೋರುವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದರು. ಪರಸ್ಪರ ವಿಶ್ವಾಸ, ಸೌಹಾರ್ದ ಮತ್ತು ಸಹಕಾರದ ದ್ಯೋತಕವಾದ ಇಂತಹ ಹತ್ತಾರು ಉದಾಹರಣೆಗಳಿವೆ.

ಆದರೆ ಈಗ ಬದಲಾದ ಸನ್ನಿವೇಶದಲ್ಲಿ ರಾಜಕೀಯ ಸಂಬಂಧಗಳು ಹದಗೆಡುತ್ತ ಬಂದಿವೆ. ಪಕ್ಷವನ್ನು ತ್ಯಜಿಸುವುದು ಮತ್ತು ಅಧಿಕಾರಕ್ಕಾಗಿ ಇನ್ನೊಂದು ಪಕ್ಷಕ್ಕೆ ವಲಸೆ ಹೋಗುವುದು ಇದೇ ಮೊದಲೇನಲ್ಲ. ಶರದ್ ಪವಾರ್ ಅವರು ವಸಂತದಾದಾ ಪಾಟೀಲರ ಸರಕಾರದಲ್ಲಿ ಮಂತ್ರಿಯಾಗಿದ್ದ ದಮಯದಲ್ಲಿ, ರಾತ್ರೋರಾತ್ರಿ ರಾಜೀನಾಮೆ ಕೊಟ್ಟು ಹೊರಬಂದರು, ಸರಕಾರ ಬಿದ್ದೇ ಹೋಯಿತು. ಪವಾರ್ ಜತೆಗೆ ಪಿ.ಎ.ಸಂಗ್ಮಾ ಕೂಡ ಪಕ್ಷ ತೊರೆದರು. ತದ ನಂತರದಲ್ಲಿ ಅದೇ ಸಂಗ್ಮಾ ಪವಾರರ ಸಹವಾಸ ವನ್ನೂ ತೊರೆದರು. ಪಕ್ಷ ಬದಲಾಯಿಸಿದ ಹಲವಾರು ವ್ಯಕ್ತಿಗಳಿದ್ದಾರೆ.

ಆದರೆ ಶಿವಸೇನೆ ವಿಚಾರಕ್ಕೆ ಬರುವುದಾದರೆ 1991ರಲ್ಲಿ ಛಗನ್ ಭುಜಬಲ್ ಪಕ್ಷ ಬಿಟ್ಟಾಗಲೂ ಅದು ಅಧಿಕಾರದಲ್ಲಿರಲಿಲ್ಲ, 2005ರಲ್ಲಿ ನಾರಾಯಣ ರಾಣೆ ಬಿಟ್ಟಾಗಲೂ ಅಧಿಕಾರದಲ್ಲಿರಲಿಲ್ಲ. 2005ರಲ್ಲಿ ರಾಜ್ ಠಾಕ್ರೆ ಬಿಟ್ಟಾಗಲೂ ಕೂಡ ಅದೇ ಪರಿಸ್ಥಿತಿ ಇತ್ತು. ಈಗ ಶಿವಸೇನೆ ಅಧಿಕಾರದಲ್ಲಿರುವಾಗ ಅನೇಕ ಶಾಸಕರು ಏಕನಾಥ ಶಿಂಧೆ ನೇತೃತ್ವದಲ್ಲಿ ಪಕ್ಷವನ್ನು ಬಿಟ್ಟಿದ್ದಾರೆ. ಈ ಬೆಳವಣಿಗೆ ಸಾಕಷ್ಟು ಕಹಿಯನ್ನು ಸೃಷ್ಟಿಸಿದೆ. ಅವರುಗಳು ಪರಸ್ಪರ ಆಡುತ್ತಿರುವ ಮಾತುಗಳು ಅಸಹ್ಯಕರವಾಗಿವೆ. ರಾಜಕೀಯ ಕ್ಷೇತ್ರದಲ್ಲಿ ಶಿಷ್ಟಾಚಾರವಿರಬೇಕು, ಬಳಸುವ ಭಾಷೆ ಸಹನೀಯವಾಗಿ ರಬೇಕು ಎಂಬುದನ್ನೂ ಈ ಮಂದಿ ಮರೆತಂತೆ ಕಾಣುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಉಳಿವು ಹೇಗೆ ಸಾಧ್ಯ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ನಮ್ಮೆಲ್ಲರ ಮುಂದಿದೆ. ಈ ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ. ನನ್ನಂತಹ ವ್ಯಕ್ತಿಗಳು ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕು ವಂತಾಗಿದೆ.