ರಂಗಿತರಂಗದಲ್ಲಿ ಪ್ರೇಕ್ಷಕರ ಮನರಂಜಿಸಿದ ನಿರೂಪ್ ಭಂಡಾರಿ ರಾಜರಥದಲ್ಲಿ ಪಯಣಿಸಿದರು. ಈಗ ವಿಂಡೋಸೀಟ್ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು, ನಿರೂಪ್ ಭಂಡಾರಿ ವಿಂಡೋಸೀಟ್ ಚಿತ್ರದ ಮೂಲಕ ತೆರೆಯಲ್ಲಿ ಮಿಂಚು ತ್ತಿದ್ದಾರೆ.
ಈ ಹಿಂದಿನ ಸಿನಿಮಾಗಳಲ್ಲಿ ಚಾಕಲೇಟ್ ಬಾಯ್ ಆಗಿ ಮಿಂಚಿದ್ದ ನಿರೂಪ್, ಈ ಬಾರಿ ರಗಡ್ ಲುಕ್ ತಾಳಿದ್ದಾರೆ. ಅಷ್ಟಕ್ಕೂ ಏನಿದು ವಿಂಡೋಸೀಟ್, ಅದರಲ್ಲಿ ಕುತೂಹಲಭರಿತ ಅಂಶಗಳೇನಿವೆ ಎಂಬ ಬಗ್ಗೆ ನಿರೂಪ್ ಭಂಡಾರಿ ವಿ.ಸಿನಿಮಾಸ್ನೊಂದಿಗೆ ಮಾತನಾಡಿದ್ದಾರೆ.
ವಿ.ಸಿನಿಮಾಸ್: ಏನಿದು ವಿಂಡೋಸೀಟ್ ಸಾಕಷ್ಟು ಕುತೂಹಲ ಕೆರಳಿಸುತ್ತಿದೆಯಲ್ಲಾ?
ನಿರೂಪ್: ವಿಂಡೋಸೀಟ್ ರೋಮ್ಯಾಂಟಿಕ್ ಥ್ರಿಲ್ಲರ್ ಕಥೆಯ ಸಿನಿಮಾ. ಒಂದು ಸುಂದರ ತಾಣದಲ್ಲಿ ಜರ್ನಿಯ ಜತೆಯಲ್ಲಿ ಸಾಗುವ ಪೇಮ ಕಥೆಯೂ ಚಿತ್ರದಲ್ಲಿದೆ. ಹಾಗಂತ ಇದು ಲವ್ ಸ್ಟೋರಿಗೆ ಸೀಮಿತವಾಗಿಲ್ಲ. ಇಲ್ಲಿ ಥ್ರಿಲ್ಲರ್ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಸೆಂಟಿಮೆಂಟ್ಗೂ ಆದ್ಯತೆ ಕೊಡಲಾಗಿದೆ. ನೀವು ಸಿನಿಮಾ ನೋಡಿ ಥೀಯೇಟರ್ನಿಂದ ಆಚೆ ಬಂದ ಮೇಲೂ ಚಿತ್ರದ ಕಥೆ ನಿಮ್ಮನ್ನು ಬಿಡದೆ ಕಾಡುತ್ತದೆ.
ವಿ.ಸಿ: ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ?
ನಿರೂಪ್: ಈ ಚಿತ್ರದಲ್ಲಿ ನಾನು ರಘು ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರಘು ಸಂಗೀತ ಪ್ರಿಯ. ತಾಳಗುಪ್ಪ ಆತನ
ಊರು. ನೌಕರಿಗಾಗಿ ತನ್ನೂರಿನಿಂದ ಸಾಗರಕ್ಕೆ ದಿನನಿತ್ಯ ಪ್ರಯಾಣ ಮಾಡುತ್ತಾನೆ. ಈ ಪಯಣದಲ್ಲಿ ಸಂಗೀತ ನುಡಿಸುತ್ತಾ ಸಾಗುತ್ತಾನೆ. ಅದರಲ್ಲೂ ತಾನು ಕೂರಲು ವಿಂಡೋಸೀಟ್ ಅನ್ನೇ ಬಯಸುತ್ತಾನೆ. ಅಷ್ಟಕ್ಕೂ ರಘು ಆಸಿನನಾಗಲು ವಿಂಡೋ ಸೀಟ್ ಅನ್ನೇ ಯಾಕೆ ಬಯಸುತ್ತಾನೆ ಎಂಬುದೇ ಚಿತ್ರದ ಇಂಟರೆಸ್ಟಿಂಗ್ ಅಂಶ. ಅದನ್ನು ನೀವು ತೆರೆಯಲ್ಲಿಯೇ ನೋಡ ಬೇಕು. ಹೀಗೆ ಕಥೆ ಸಾಗುತ್ತಲೇ ಒಂದು ಕೊಲೆ ನಡೆಯುತ್ತದೆ. ಆ ಕೊಲೆಗೂ ನಾಯಕನಿಗೂ ಏನು ಸಂಬಂಧ, ಆ ಕೊಲೆಗೆ ಕಾರಣ ಯಾರು ಎಂಬ ವಿಚಾರಗಳು ಕುತೂಹಲ ಕೆರಳಿಸುತ್ತಾ ಸಾಗುತ್ತವೆ.
ವಿ.ಸಿ: ಈ ರೀತಿಯ ಕಥೆಗಳನ್ನು ಆಯ್ದುಕೊಳ್ಳಲು ಕಾರಣ?
ನಿರೂಪ್: ರಂಗಿತರಂಗ ಥ್ರಿಲ್ಲರ್ ಕಥೆಯನ್ನು ಒಳಗೊಂಡಿತ್ತು. ಅದಾಗಿ ಐದು ವರ್ಷಗಳು ಕಳೆದಿದ್ದವು. ಇದೇ ವೇಳೆ ನಿರ್ದೇಶಕರು ಬಂದು ಕಥೆ ಹೇಳಿದರು. ಕಥೆ ವಿಭಿನ್ನವಾಗಿತ್ತು. ಮೆಚ್ಚುಗೆಯೂ ಆಯಿತು. ಅದಕ್ಕೂ ಮುಖ್ಯ ವಾಗಿ ಇಲ್ಲಿ ಪಾತ್ರಕ್ಕೆ ಜೀವ ತುಂಬಲು
ಅವಕಾಶವಿತ್ತು. ಹಾಗಾಗಿ ಚಿತ್ರದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿದೆ.
ವಿ.ಸಿ: ಚಿತ್ರದ ತಾರಾಗಣದ ಬಗ್ಗೆ ಹೇಳುವುದಾದರೆ?
ನಿರೂಪ್: ಈ ಚಿತ್ರದಲ್ಲಿ ನನ್ನ ಜತೆಯಾಗಿ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಹಿರಿಯ ನಟ ರವಿಶಂಕರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಲೇಖಾ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದು, ಅವರ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ಅಭಿನಯಿಸಿದ್ದಾರೆ.
ಮಲೆ ನಾಡಿನ ಸುಂದರ ತಾಣ ಗಳು ಹಾಗೂ ಹೈದರಾಬಾದ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ.
ವಿ.ಸಿ: ಈ ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?
ನಿರೂಪ್: ನಾನು ಅಭಿನಯಿಸುವ ಚಿತ್ರಗಳಿಗೆ ತಯಾರಿ ನಡೆಸುತ್ತೇನೆ. ಅಂತೆಯೇ ಈ ಚಿತ್ರಕ್ಕೂ ಸಿದ್ಧತೆಗಳು ಒಂದಷ್ಟು ಜಾಸ್ತಿಯೇ ಇತ್ತು. ಕಥೆಯ ಬಗ್ಗೆ ಒಂದಷ್ಟು ಚರ್ಚೆ ನಡೆಸಿದೆ. ಅದಕ್ಕೆ ತಕ್ಕಂತೆ ಒಂದಷ್ಟು ಕಲಾವಿದರೊಂದಿಗೆ ಸೇರಿ ರಿಹಾರ್ಸೆಲ್ ನಡೆಸಿದೆ. ೨ ತಿಂಗಳ ಬಳಿಕ ಚಿತ್ರೀಕರಣಕ್ಕೆ ತೆರಳಿದೆ. ಹಾಗಾಗಿ ಚಿತ್ರದಲ್ಲಿ ಅಂದು ಕೊಂಡಂತೆ ನಟಿಸುವುದು ಸಾಧ್ಯವಾಯಿತು.
***
ವಿಂಡೋಸೀಟ್ ವಿಭಿನ್ನತೆಯ ನೆಲೆಗಟ್ಟಿನಲ್ಲಿ ಮೂಡಿಬಂದಿರುವ ಚಿತ್ರ. ನಾನು ಈ ಚಿತ್ರದ ಭಾಗವಾಗಿರುವುದು ಖುಷಿ ತಂದಿದೆ. ನಿರೂಪ್ ಜತೆಯಾಗಿ ಬಣ್ಣಹಚ್ಚುತ್ತಿದ್ದು, ಈ ಚಿತ್ರ ನನಗೆ ಮತ್ತೊಂದು ತಿರುವು ನೀಡುತ್ತದೆ ಎಂಬ ನಂಬಿಕೆ ನನಗಿದೆ.
-ಸಂಜನಾ