ಸುಪ್ತ ಸಾಗರ
rkbhadti@gmail.com
ಆಚಾರ್ಯ ಪಿ.ಸಿ.ರೇ ಹಾಗೂ ಡಾ. ಬಿ.ಸಿ.ರಾಯ್ ಇಬ್ಬರೂ ಬೆಂಗಾಳದವರೇ. ಒಂದು ತಿಂಗಳು ಒಂದು ದಿನ ಹಿಂದೆ ಮುಂದೆ ಹುಟ್ಟಿದ ಈ ಇಬ್ಬರನ್ನು ಭಾರತ ಎಂದಿಗೂ ಮರೆಯಲಾಗದು. ಒಬ್ಬರು ಜೀವ ಉಳಿಸುವ ವೈದ್ಯರು ಇನ್ನೊಬ್ಬ ರು ಜೀವ ರಕ್ಷಕ ಔಷಧ ಜನಕರು. ಭಾರತ ಇಂದು ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ವಾಗಿ ಎಲ್ಲರ ಗಮನ ಸೆಳೆಯುತ್ತಿದ್ದರೆ ಅದಕ್ಕೆ ಈ ಇಬ್ಬರ ಕೊಡುಗೆ ಅವಿಸ್ಮರ ಣೀಯ.
ಜಗತ್ತಿನಲ್ಲಿ ಕೊರೋನಾ ವೈರಸ್ ರುದ್ರ ತಾಂಡವವಾಡುತ್ತಿರುವಾಗ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದೆದುರು ಮಂಡಿಯೂರಿ ಮಲೇರಿಯಾ ನಿಯಂತ್ರಕ ಔಷಧಿ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳನ್ನು ಕೊಡುವಂತೆ ಗೋಗರೆದವು. ಎಂದಿ ನಂತೆ ಭಾರತ ತನ್ನ ಔದಾರ್ಯ ಮೆರೆದು, ಮಾರಕ ವೈರಸ್ ವಿರುದ್ಧದ ಹೋರಾಟಕ್ಕೆ ಮಿತ್ರರಿಗೆ ನೆರವು ನೀಡಲು ಭಾರತ ಸಿದ್ಧವಾಯಿತು. ಅಷ್ಟಕ್ಕೂ ಈ ಮಲೇರಿಯಾ ಮಾತ್ರೆಗಳು ಬೇರೆ ದೇಶಗಳಲ್ಲಿ ಸಿಗುವುದಿಲ್ಲವೇ? ಎಲ್ಲರೂ ಭಾರತದತ್ತಲೇ ಮುಖ ಮಾಡಿದ್ದೇಕೆ? ವಿಶೇಷ ಗೊತ್ತೇ, ಅಂದು ತಿರಸ್ಕಾರದಿಂದ ನೋಡಿದ್ದ ಅದೇ ಯೂರೋಪಿಯನ್ ಹಾಗೂ ಅಮೆರಿಕನ್ ರಾಷ್ಟ್ರಗಳು ಎರಡು ವರ್ಷಗಳ ಹಿಂದೆ ಭಾರತೀಯ ರಾಸಾಯನಿಕ ಕ್ಷೇತ್ರದ ಸಾಧನೆಯೆದುರು ಬೊಗಸೆಯೊಡ್ಡಿದವು. ಏನಿದರ ಗುಟ್ಟು?
***
ಅದು ಹಾಗಿರಲಿ, ಮತ್ತೊಂದು, ಇತಿಹಾಸದ ಘಟನೆಯನ್ನು ನೆನಪಿಸಿಕೊಳ್ಳೋಣ. ಮನೆಯ ಮುಂದೆ ಭವ್ಯ ವೇದಿಕೆ ಸಜ್ಜಾಗುತ್ತಿತ್ತು. ಬಣ್ಣ ಬಣ್ಣದ ಬ್ಯಾನರ್, ಬಂಟಿಂಗ್ಸ್ ಕಟ್ಟುತ್ತಿದ್ದರು. ಭಾರೀ ದೀಪಾಲಂಕಾರವನ್ನೂ ಮಾಡಿದ್ದರು. ಮಂದ ಸಂಗೀತವೂ ಉಲಿಯು ತ್ತಿತ್ತು. ಎಲ್ಲೆಡೆಯೂ ಕಾರ್ಯಕರ್ತರ ಗಡಿಬಿಡಿಯ ಓಡಾಟ. ಎದುರಾದವರಿಗೆಲ್ಲರೂ ಆ ಮುಂಜಾನೆ ಶುಭ ಕೋರುತ್ತ ಮುಗುಳ್ನಕ್ಕೂ ಆ ವ್ಯಕ್ತಿ ವಾಯುವಿಹಾರ ಮುಗಿಸಿ ಖಾಸಗಿ ಕಚೇರಿಗೆ ಹೋದರು.
ಸಾಲುಗಟ್ಟಿ ಕುಳಿತಿದ್ದ ರೋಗಿಗಳಲ್ಲರ ತಪಾಸಣೆ, ಚಿಕಿತ್ಸೆ, ಔಷಧೋಪಚಾರ ಎಲ್ಲವೂ ಮುಗಿಯಿತು. ಹಾಗೆಂದು ಅವರು ಸಾಮಾನ್ಯ ವೈದ್ಯರಲ್ಲ. ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಹ ಹೌದು. ಸಹಜವಾಗಿ ರಾಜ್ಯದ ಆಗುಹೋಗುಗಳ ನಿರ್ವಹಣೆಯ ಹೊಣೆಯೂ ತಲೆಯ ಮೇಲಿತ್ತು. ಸಂಪುಟ ಸದಸ್ಯರ ಜತೆ, ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ‘ಬ್ರಹ್ಮೋಗೀತ’ ಪಠಣ. ಅಂದು ಅವರ 80 ನೇ ಹುಟ್ಟು ಹಬ್ಬ. ಆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಜನಸಾಗರವೇ ಹರಿದು ಬಂದಿತ್ತು.
ದುರದೃಷ್ಟವಶಾತ್, ಒಂದೇ ಕ್ಷಣದಲ್ಲಿ ಆ ಸಂಭ್ರಮಗಳೆಲ್ಲವೂ ಮರೆಯಾಗಿ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತ
ಹೊರಡಬೇಕಾಯಿತು. ಅವರು ವಾಸಿಸುತ್ತಿದ್ದ ಮನೆಯನ್ನೇ ಅವರ ತಾಯಿಯ ಸ್ಮರಣಾರ್ಥ ಆಸ್ಪತ್ರೆಗಾಗಿ ಸಮರ್ಪಿಸಿದ್ದ ಆ ವ್ಯಕ್ತಿ ಬೇರಾರೂ ಅಲ್ಲ ಪಶ್ಚಿಮ ಬಂಗಾಳದ ಶಿಲ್ಪಿ, ಭಾರತ ರತ್ನ ಡಾ.ಬಿ.ಸಿ.ರಾಯ.
***
ಮತ್ತೆ ಮಲೇರಿಯಾ ಮಾತ್ರೆಯ ವಿಚಾರಕ್ಕೆ ಬರೋಣ. ವಿಶ್ವದಲ್ಲಿಯೇ ಅತಿ ಹೆಚ್ಚಿನ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಉತ್ಪಾದಿಸುವ ದೇಶವಿದ್ದರೆ ಅದು ಭಾರತ ಮಾತ್ರ. ಅಷ್ಟೇ ಅಲ್ಲ, ಅದರ ಜನಕನೂ ಭಾರತೀಯನೇ. ಹೈಡ್ರಾಕ್ಸಿ ಕ್ಲೊರೋಕ್ವಿನ್ ಎಂಬುದನ್ನು ಜಗತ್ತಿಗೆ ಪರಿಚಯಿಸಿದ್ದೇ ದೇಶದ ಸಾರ್ವಜನಿಕ ವಲಯದ ಏಕೈಕ ಹಾಗೂ ಜಗತ್ತಿನ ಅತ್ಯಂತ ಪುರಾತನ ಔಷಧ ಉತ್ಪಾದಕ ಕಂಪನಿ ಬೆಂಗಾಲ್ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯುಟಿಕಲ್ಸ್ ಲಿ.(ಬಿಸಿಪಿಎಲ್).
ಬೆಂಗಾಲ್ ಕೆಮಿಕಲ್ಸ್ ನ ಬೆನ್ನ ಹಿಂದೆಯೇ ಅದರ ಸ್ಥಾಪಕ ಆಚಾರ್ಯ ಪ್ರಫುಲ್ಲಚಂದ್ರ ರೇ (ಪಿ.ಸಿ.ರೇ) ಅವರನ್ನು ನೆನಪಿಸಿ ಕೊಳ್ಳಲೇಬೇಕು. ಮಲೇರಿಯಾ ಔಷಧವನ್ನಷ್ಟೇ ಅಲ್ಲ ಹಾವಿನ ನಂಜು ನಿವಾರಕ ಔಷಧದ ಉತ್ಪಾದನೆಯಲ್ಲೂ ಬೆಂಗಾಲ್ ಕೆಮಿಕಲ್ಸ್ ಹೆಸರುವಾಸಿ. ಆಚಾರ್ಯ ಪಿ.ಸಿ.ರೇ ಹಾಗೂ ಡಾ. ಬಿ.ಸಿ.ರಾಯ್ ಇಬ್ಬರೂ ಬೆಂಗಾಳದವರೇ. ಒಂದು ತಿಂಗಳು ಒಂದು ದಿನ ಹಿಂದೆ ಮುಂದೆ ಬರುವ ಈ ಇಬ್ಬರ ಜನ್ಮದಿನ ಭಾರತದ ಪಾಲಿಗೆ ಎಂದಿಗೂ ಮರೆಯಲಾಗದ್ದು. ಬಿ.ಸಿ.ರಾಯ್ ಹುಟ್ಟಿದ್ದು ಜುಲೈ 1-ರಾಷ್ಟ್ರೀಯ ವೈದ್ಯರ ದಿನ.
ಆಚಾರ್ಯ ರೇ ಹುಟ್ಟಿದ್ದು ಆಗಸ್ಟ್ 2- ಭಾರತದ ರಾಸಾಯನಿಕ ವಿಜ್ಞಾನದ ಮಹತ್ವದ ದಿನ. ಒಬ್ಬರು ವೈದ್ಯರು ಇನ್ನೊಬ್ಬರ
ಔಷಧ ಜನಕರು. ಭಾರತ ಇಂದು ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕವಾಗಿ ಎಲ್ಲರ ಗಮನ ಸೆಳೆಯುತ್ತಿದ್ದರೆ ಅದಕ್ಕೆ ಈ ಇಬ್ಬರ ಕೊಡುಗೆ ಅವಿಸ್ಮರಣೀಯ.
***
ಡಾ.ಬಿದನ್ ಚಂದ್ರ ರಾಯ್ ಹುಟ್ಟಿದ್ದು 1ನೇ ಜುಲೈ 1882ರಂದು; ಬಂಕೀಪೊರ್‌ನಲ್ಲಿ. ತಂದೆ ಪ್ರಕಾಶ್ ಚಂದ್ರರಾಯ್ ಡೆಪ್ಯೂಟಿ ಕಲೆಕ್ಟರ್ ಆಗಿದ್ದರು. ತಾಯಿ ಅಘೋರ್ಕಾಯಿನಿದೇವಿ. 1901ರಲ್ಲಿ ಬಿ.ಎ (ಆನರ್ಸ್) ಪದವಿಯನ್ನು ಪಡೆದು, ಬೆಂಗಾಲ್ ಎಂಜಿನಿ ಯರಿಂಗ್ ಕಾಲೇಜ ಮತ್ತು ಕೋಲ್ಕತಾ ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯಲು ಅರ್ಜಿ ಹಾಕಿದರು. ಏಕಕಾಲಕ್ಕೆ ಎರಡಕ್ಕೂ ಆಯ್ಕೆಯಾದರು. ಆಗ ಜನಸೇವೆ ಮಾಡುವ ಉದ್ದೇಶದಿಂದ ವೈದ್ಯಕೀಯ ಕ್ಷೇತ್ರ ಆರಿಸಿಕೊಂಡರು. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡು 1909 ರಲ್ಲಿ ಎಲ್ಎಂಎಸ್ ಪದವಿಯನ್ನು ಪಡೆದರು.
1908 ರಲ್ಲಿ ಕೋಲ್ಕತಾ ವಿಶ್ವವಿದ್ಯಾಲಯದಿಂದ ಎಂ.ಡಿ.ಪದವಿಯನ್ನೂ ಪಡೆದರು. ಫೆಬ್ರವರಿ 1909 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ಅಲ್ಲಿಯ ಸುಪ್ರಸಿದ್ಧ ಸೆಂಟ್ ಬಾರ್ಥೊಲೊಮ್ಯು ಆಸ್ಪತ್ರೆಗೆ ಸೇರಿಕೊಳ್ಳಬೇಕಾಗಿತ್ತು. ಏಷ್ಯಾದ ವಿದ್ಯಾ
ರ್ಥಿಗಳಿಗೆ ಪ್ರವೇಶ ನಿರಾಕರಿಸುತ್ತಿದ್ದರು ಅದರ ಡೀನ್. ಡಾ.ಬಿ.ಸಿ.ರಾಯ್‌ರ ಅರ್ಜಿಯನ್ನೂ ತಿರಸ್ಕರಿಸಿದರು. ಎದಿಗುಂದಲಿಲ್ಲ. ಪ್ರಯತ್ನ ಬಿಡಲಿಲ್ಲ. 30ನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಎಂಆರ್‌ಸಿಪಿ ಮತ್ತು
ಎಫ್ ಆರ್‌ಸಿಎಸ್ ಪದವಿಗಳನ್ನು ಏಕಕಾಲಕ್ಕೆ ಪಡೆದ ಕೀರ್ತಿ ಅವರದು.
1911ರಲ್ಲಿ ತಾಯ ನಾಡಿಗೆ ಮರಳಿದರು. ಕೋಲ್ಕತಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸೇರಿ ಕೊಂಡರು. ಬಿಟ್ಟರು. ಕ್ಯಾಂಬೆಲ್ ವೈದ್ಯಕೀಯ ಮಹಾವಿದ್ಯಾಲಯದ ಮೆಟ್ಟಲು ಹತ್ತಿದರು. ಇಳಿದರು. ಕೊನೆಗೆ ಕಾರ್ಮೆಕಲ್
ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಮಾರು 30 ವರ್ಷಗಳ ಕಾಲ ವೈದ್ಯಶಾಸ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾ ಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಿರಂತರ ಸೇವೆಯನ್ನು ಸಲ್ಲಿಸಿದರು. 1942 ರಲ್ಲಿ ಕೋಲ್ಕತಾ ವಿಶ್ವವಿದ್ಯಾಲಯದ ಕುಲಪತಿ ಗಳಾದರು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು.
ಮಾರ್ಗದರ್ಶಕರಾಗಿದ್ದರು. ವೈದ್ಯಕೀಯವನ್ನು ವೃತ್ತಿಯಾಗಿ, ಪ್ರವೃತ್ತಿಯಾಗಿ ಆಯ್ಕೆ ಮಾಡಿಕೊಂಡು ರೋಗಿಗಳ ಶ್ರೇಯಸ್ಸನ್ನು ಬದುಕಿನ ಸರ್ವಸ್ವ ಎಂದು ಭಾವಿಸಿದವರು. ಗಾಂಧೀಜಿಯವರ ಆಪ್ತರಾಗಿದ್ದಯ ರಾಯ್, ಅವರ ಮಾತಿಗೆ ಮಣಿದು, 1925ರಲ್ಲಿ ರಾಜಕೀಯಕ್ಕೆ ಧುಮುಕಿದರು. ಬಂಕೀಪೊರ್ ಮತಕ್ಷೇತ್ರದಿಂದ ಸ್ಪರ್ಧಿಸಿದರು. ಗ್ರ್ಯಾಂಡ ಓಲ್ಡ ಮ್ಯಾನ್ ಬೆಂಗಾಲ್ ಖ್ಯಾತಿಯ ಸತ್ಯೇಂದ್ರನಾಥ ಬ್ಯಾನರ್ಜಿರವರನ್ನು ಸೋಲಿಸಿದರು. ನಂತರ ರಾಜಕೀಯ ಜೀವನದಲ್ಲಿ ಅವರೆಂದೂ ಹಿಂತಿರುಗಿ ನೋಡಲಿಲ್ಲ.
ವೃತ್ತಿ ಪ್ರೇಮ ಮಾತ್ರ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ಪಶ್ಚಿಮ ಬಂಗಾಳದ ಜನಪ್ರಿಯ ಮುಖ್ಯಮಂತ್ರಿಯಾಗಿ 14 ವರ್ಷಗಳ ಅಮೋಘ ಸೇವೆ ಸಲ್ಲಿಸಿದರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದರು. ವೈದ್ಯರಾಗಿ, ವೈದ್ಯ ಶಿಕ್ಷಕರಾಗಿ, ರಾಜಕೀಯ ನಾಯಕರಾಗಿ ಹಲವು ಹತ್ತು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ದುಡಿದ ಧೀಮಂತ ವ್ಯಕ್ತಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ಪಶ್ಚಿಮ ಬಂಗಾಳದ ಜನಪ್ರಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಭಾರತದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ಮುಡಿಗೇರಿಸಿ ಕೊಂಡವರು.
***
ಅವತ್ತು ಆಚಾರ್ಯ ಪಿ.ಸಿ.ರೇ ಅವರ ಇಚ್ಛಾಶಕ್ತಿಯ ಪರಿಣಾಮ ತಲೆ ಎತ್ತಿದ ಔಷಧ ಕಂಪನಿ, ಇಂದು ಇಡೀ ಜಗತ್ತಿಗೆ ಕಂಟ ವಾಗಿರುವ ಕೊರೊನಾ ವೈರಸ್‌ಗೆ ಸಂಜೀವಿನಿ ಎನಿಸಿದ ಔಷಧವೊಂದನ್ನು ಪೂರೈಸುತ್ತಿದೆ. ‘ಭಾರತೀಯ ರಾಸಾಯನಿಕ ವಿಜ್ಞಾನದ ಪಿತಾಮಹ’ ಎಂದು ಹೇಳಲಾಗುವ ಆಚಾರ್ಯ ಪಿ.ಸಿ.ರೇ ಅವರು ರಾಸಾಯನಿಕ ತಜ್ಞ, ಶಿಕ್ಷಣವೇತ್ತ, ಇತಿಹಾಸಕಾರ, ಕೈಗಾರಿಕೋ ದ್ಯಮಿ.
ಮಾತ್ರವಲ್ಲ ಮಹಾನ್ ರಾಷ್ಟ್ರೀಯವಾದಿ. ಎಲ್ಲ ಮಹಾನ್ ಸಂಸ್ಥೆಗಳಂತೆಯೇ ಸತತ ಏಳು ಬೀಳುಗಳೊಂದಿಗೆ ಬೆಳೆದು ನಿಂತದ್ದು ಬೆಂಗಾಲ್ ಕೆಮಿಕಲ್ಸ್. 1892ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಈ ಕಂಪನಿಯ ಆರಂಭಿಕ ಬಂಡವಾಳವೆಷ್ಟು ಗೊತ್ತೇ? ಕೇವಲ 700 ರೂಪಾಯಿ. ಹುಟ್ಟಿದ್ದು ಅಂದಿನ ಅವಿಭಜಿತ ಬಂಗಾಳದ ರರೂಲಿ ಕತಿಪುರ (ಈಗ ಬಾಂಗ್ಲಾದೇಶ ) ಎಂಬಲ್ಲಿ; 1861ರ ಆಗಸ್ಟ್ 2ರಂದು. ಸುಶಿಕ್ಷಿತ ಮತ್ತು ಸುಸಂಸ್ಕೃತ ಕುಟುಂಬ. ತಂದೆ ಹರಿಶ್ ಚಂದ್ರರು ಜಮೀನುದಾರರು. ರಾಷ್ಟ್ರ ಸೇವೆ ಇವರಿಗೆ ರಕ್ತಗತವಾಗಿ ಬಮದ ಬಳುವಳಿ. ಇವರ ತಂದೆ ಗಳಿಕೆಯನ್ನೆಲ್ಲ ಗ್ರಂಥಾಲಯ ಕಟ್ಟಲು ಬಳಸಿದ್ದರಂತೆ.
ಇವರ ಮುತ್ತಜ್ಜ ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲಿ ದಿವಾನ್ ಆಗಿದ್ದವರು. ಒಂಬತ್ತನೆ ವಯಸ್ಸಿನ ವರೆಗೂ ತಂದೆಯ
ಶಾಲೆಯ ಕಲಿತವರು. ಹೆಚ್ಚಿನ ವಿದ್ಯಾಭ್ಯಾಸವೆಲ್ಲ ಕೋಲ್ಕತಾದಲ್ಲಿ. ಮೂಲತಃ ಸಾಹಿತ್ಯ ಪ್ರೇಮಿ. ಶೇಕ್ ಪಿಯರ್ ಕಾವ್ಯ, ಮಹಾ ಪುರುಷರಾ ಜೀವನಚರಿತ್ರೆಗಳಲ್ಲಿ ಮುಳುಗಿ ಹೋಗಿದ್ದ ಯುವಕ ರೇ ಅವರನ್ನು ಅತ್ಯಂತ ಪ್ರಭಾವಿಸಿದ್ದವರು ಪ್ರಸಿದ್ಧ ರಸಾಯನ ಶಾಸ್ತ್ರದ ಉಪನ್ಯಾಸಕ ಪ್ರೊಫೆಸರ್ ಅಲೆಕ್ಸಾಂಡರ್ ಪೆಡ್ಲೆರ್.
ಪ್ರಫುಲ್ಲರನ್ನು ಸಾಹಿತ್ಯದ ಪ್ರಭಾವದಿಂದ ರಸಾಯನಶಾಸ್ತ್ರದೆಡೆ ಕೊಂಡಯ್ದವರೇ ಪ್ರೋ.ಪೆಡ್ಲೆರ್. 1882ರಲ್ಲಿ ಬ್ರಿಟನ್‌ನ ಎಡಿನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗೆ ತೆರಳಿದ ಬಳಿಕ ಮತ್ತೆ ಹಿಂತಿರುಗಿ ನೋಡಲಿಲ್ಲ ಆಚಾರ್ಯ ರೇ.
1887ರಲ್ಲಿ ಡಿಎಸ್ ಪದವಿ ಬಳಿಕ ೧೮೮೮ರಲ್ಲಿ ಭಾರತಕ್ಕೆ ಹಿಂದಿರುಗಿ ಪ್ರೆಸಿಡೆನ್ಸಿ ಕಾಲೇಜ್‌ನಲ್ಲಿ ರಾಸಾಯನಶಾಸ್ತ್ರ
ಅಧ್ಯಾಪನಕ್ಕೆ ಇಳಿದರು.
ವಿದ್ಯಾರ್ಥಿ ಜೀವನದಲ್ಲೇ ‘ಕೆಮಿಕಲ್ ಸೊಸೈಟೀ ಆಫ್ ದಿ ಯೂನಿವರ್ಸಿಟಿ’ ಯ ಉಪಾಧ್ಯಕ್ಷರಾಗಿದ್ದವರವರು. ಅವತ್ತಿನ ಕಾಲದಲ್ಲಿ ವಿದೇಶಿಯೊಬ್ಬ ಅದರಲ್ಲೂ, ಭಾರತೀಯ ವಿದ್ಯಾರ್ಥಿ ಈ ಹುದ್ದೆಗೇರುವುದು ಸಣ್ಣ ಮಾತಾಗಿರಲಿಲ್ಲ. ಮುಂದೆ ಬೆಂಗಲ್ ಕೆಮಿಕಲ್ಸ್ ಆರಂಭಿಸಿದ ಬಳಿಕ ಇಂಗ್ಲೆಂಡ್‌ನ ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಸಂಸ್ಥೆಯ ‘ಕೆಮಿಕಲ್ ಲ್ಯಾಂಡ್ ಮಾರ್ಕ್ ಫಲಕ’ದ ಗೌರವ ಪಡೆದ ಮೊದಲ ಯುರೋಪಿಯನೇತರ ವ್ಯಕ್ತಿ ಸಹ ಆಚಾರ್ಯರೇ ಅವರೇ.
ಸಾಧನೆ, ಸಾಹಸಗಳು ಆಚಾರ್ಯ ರೇ ಅವರ ಸ್ವಭಾವ ಸಹಜವಾಗಿತ್ತು. ೧೮೮೭ರಲ್ಲಿ ಇವರ ಸಂಶೊಧನಾ ಪ್ರಬಂಧಕ್ಕೆ ಡಾಕ್ಟೊ ರಲ್ ಪದವಿ ಪಡೆಯುತ್ತಾರೆ. ಅದು ಆ ವರ್ಷದ ಪ್ರತಿಷ್ಠಿತ ಹೊಪ್ ಪ್ರಶಸ್ತಿಗೆ ಪಾತ್ರವಾದದ್ದು ಸಹ ಹೆಗ್ಗಳಿಕೆಯ ಸಂಗತಿ. ಮೂಲತಃ ರಾಷ್ಟ್ರೀಯವಾದಿಯಾಗಿದ್ದರೇ ಅವರು ಬ್ರಿಟಿಷರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಭಾರತೀಯ ಅಭಿವೃದ್ಧಿ ಮತ್ತು ಶಿಕ್ಷಣಗಳ ಬಗ್ಗೆ ಸಾಲು ಸಾಲು ಲೇಖನಗಳು, ಪ್ರಬಂಧಗಳು ಬಂದವು.
ಬ್ರಿಟನ್ ನಲ್ಲಿದ್ದಾಗಲೇ ಇವುಗಳನ್ನು ಬರೆದು, ಪ್ರಕಟಿಸಿ ಭಾರತಿಯ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದರೆಂಬುದು ಗಮನಾರ್ಹ ಸಂಗತಿ. ಬರಹ ಆಗಿನಿಂದಲೇ ಅವರಿಗೆ ಕರಗತವಾದ ಕಲೆ. ಅವರು ಉದ್ಯಮಿಯಾದ ನಂತರ ವೇದ ಕಾಲದ ರಾಸಾ ಯನಿಕ ಜ್ಞಾನದ ಬಗ್ಗೆ ಬರೆದ ‘ಹಿಸ್ಟರಿ ಆಫ್ ಹಿಂದೂ ಕೆಮಿಸ್ಟ್ರಿ ಫ್ರಮ್ ಅರ್ಲೀಯಸ್ಟ್ ಟೈಮ್ಸ್ ಟು ಮಿಡಲ್ ಆಫ್ ಸಿಕ್ಸ್‌ಟೀನ್ತ್ ಸೆಂಚುರಿ ಎಡಿ’ ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಮೈಲುಗಲ್ಲು.
ಇಂಥ ಕ್ರಾಂತಿಕಾರಿ ರೇ ಅಧ್ಯಾಪನಕ್ಕೆ ತೃಪ್ತರಾಗಲಿಲ್ಲ, ಮತ್ತಿನ್ನೇನೋ ಸಾಧಿಸುವ ಹಂಬಲ. ಬೆಂಗಾಲಿ ಯುವಕರಿಗಾಗಿ ತಾವಿ ನ್ನೇನೋ ಮಾಡಲೇಬೇಕೆಂಬ ತವಕ. ಆ ದಿನಗಳಲ್ಲಿ, ರಸಾಯನಶಾಸ್ತ್ರದ ಸಂಶೋಧನೆಗೆ ಭಾರತದಲ್ಲಿ ಹೆಚ್ಚಿನ ಪ್ರಯೋಗಾಲಯ ಗಳಿರಲಿಲ್ಲ. ಒಂದಲ್ಲಾ ಒಂದು ದಿನ ಸ್ವತಂತ್ರಗೊಳ್ಳುವ ಭಾರತಕ್ಕೆ ಹೆಚ್ಚಿನ ಸಂಶೊಧನಾ ಆಕರಗಳ ಅಗತ್ಯವನ್ನು ಪ್ರತಿಪಾದಿ ಸುತ್ತಲೇ ಬಂದಿದ್ದರು. ಅದಕ್ಕಾಗಿಯೇ ಮೊದಲ ರಸಾಯನಶಾಸ್ತ್ರದ ಪ್ರಯೊಗಾಲಯವನ್ನು ಪ್ರೆಸಿಡೆನ್ಸಿ ಕಾಲೆಜ್‌ನಲ್ಲಿ ನಿರ್ಮಿಸಿ ದರು.
ದೇಶದ ರಸಾಯನಶಾಸ್ತ್ರದ ಪ್ರಗತಿಗಳನ್ನು ಚರ್ಚಿಸಲು ಇಂಡಿಯನ್ ಕೆಮಿಕಲ್ ಸೊಸೈಟೀಯನ್ನೂ ಆರಂಭಿಸಿರು. ಭಾರತೀಯರ
ರಸಾಯನಶಾಸದ ಸಾಧನೆ, ಲೋಹವಿದ್ಯೆ ಮತ್ತು ಆಯುರ್ವೇದಗಳ ಪ್ರಗತಿಯ ಬಗ್ಗೆ ಹೆಮ್ಮೆಯಿಂದ ಇಲ್ಲಿ ಮನವರಿಕೆ ಮಾಡಿ ಕೊಡಲಾಗುತ್ತಿತ್ತು. ನಮ್ಮ ರಾಸಾಯನಿಕ ಅಧ್ಯಯನದ ಬಗ್ಗೆ ಸಂಶೋಧನೆಗಳ ಬಗೆಗೆ ತೀರಾ ತಿರಸ್ಕಾರದ ಭಾವನೆ ಇತ್ತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ. ಹೀಗಾಗಿ ಬ್ರಿಟಿಷ್ ಔಷಧಗಳನ್ನು ಬಹಿಷ್ಕರಿಸಿ, ಭಾರತದ ರಾಸಾಯನಿಕ ಔಷಧ ಕೈಗಾರಿಕೆಗಳ ಸ್ಥಾಪನೆಯ ಕನಸು ಕಂಡರು.
ಮಾತ್ರವಲ್ಲ ಸ್ಥಳಿಯ ಔಷಧಿಗಳ ಪ್ರಯೋಗ ನಡೆಸಲು ಮನೆಯ ಪ್ರಯೋಗಾಲಯ ನಿರ್ಮಿಸಿದರು. ಅಲ್ಲಿ ಯಶಸ್ವಿಯಾದ ಔಷಧಗಳನ್ನು ಸ್ವಂತ ಹಣ ಖರ್ಚು ಮಾಡಿ, ಮಾರುಕಟ್ಟೆಗೆ ತಲುಪಿಸುತ್ತಿದ್ದರು ರೇ. ಸ್ವತಃ ತಾವೇ ಪ್ರತಿ ಅಂಗಡಿಗಳೆದುರು ನಿಂತು ತಮ್ಮ ಔಷಧಗಳ ಉಪಯೊಗಗಳನ್ನು ವಿವರಿಸುತಿದ್ದರು. ಕೊನೆಗೊಮ್ಮೆ ಬೆಂಗಾಲ್ ಕೆಮಿಕಲ್ ಫಾರ್ಮಸ್ಯುಟಿಕಲ್ಸ್
ಆರಂಭಿಸಿಯೇ ಬಿಟ್ಟರು.
ಇವತ್ತಿಗೆ ಬೆಂಗಾಲ್ ಕೆಮಿಕಲ್ಸ್ ಕಂಪನಿ ಆರಂಭವಾಗಿ 120 ವರ್ಷಗಳಾಗಿವೆ. ಅವತ್ತಿನಿಂದಲೂ ಕ್ಲೊರೋಕ್ವಿನ್ -ಸೆಟ್
ಅನ್ನು ಕಂಪನಿ ಉತ್ಪಾದಿಸುತ್ತಲೇ ಇದೆ. ಹೈಡ್ರಾಕ್ಸಿಕ್ಲೊರೋಕ್ವಿನ್ ಸಲೆಟ್‌ನಲ್ಲಿನ ರಾಸಾಯನಿಕ ಘಟಕಗಳೇ ಕ್ಲೊರೋಕ್ವಿನ್ -ಸೆಟ್
ನಲ್ಲೂ ಇವೆ. ಹೀಗಾಗಿ ಒಂದೊಮ್ಮೆ ಇಂದು ಅನುಮತಿ ಸಿಕ್ಕರೆ ದಿನಕ್ಕೆ 10 ಲಕ್ಷ ಮಲೇರಿಯಾ ಮಾತ್ರೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಬೆಂಗಾಲ್ ಕೆಮಿಕಲ್ಸ್‌ಗೆ ಇದೆಯಂತೆ.
ಬಹುಶಃ ನಾಲ್ಕನೆಯ ತರಗತಿಯಲ್ಲಿದ್ದಾಗ ಆಚಾರ್ಯ ರೇ ಅವರನ್ನು ಕಾಡಿದ್ದ ತೀವ್ರ ಅಜೀರ್ಣ ಸಮಸ್ಯೆಯೇ ಮುಂದೆ ಔಷಧ ಉತ್ಪಾದಿಸುವ ಕಂಪನಿಗೆ ಪ್ರೇರಣೆಯಾಯಿತೇನೋ?! ಅಂತೂ ರೇ ಅವರ ಛಲ, ದೂರದೃಷ್ಟಿ, ಬದ್ಧತೆಯಿಂದಾಗಿ ಕೇವಲ 700 ರೂ.ನಿಂದ ಆರಂಭವಾದ ಕಂಪನಿ ಹತ್ತೇ ವರ್ಷದಲ್ಲಿ 2 ಲಕ್ಷ ರೂ. ಬಂಡವಾಳದ ಕಂಪನಿಯಾಗಿ ಬೆಳೆದು ನಿಂತಿತ್ತು. 1905ರಲ್ಲಿ
ಕೋಲ್ಕತಾದ ಮಾಣಿಕ್‌ತಾಲದಲ್ಲಿ ಮತ್ತೊಂದು ಕಾರ್ಖಾನೆ ಆರಂಭವಾಗಿತ್ತು. 1908ರ ಹೊತ್ತಿಗೆ ಬಂಗಾಳ ಪ್ರಾಂತ್ಯದಲ್ಲಿ
ಮಾತ್ರವಲ್ಲ, ಇಡೀ ಭಾರತದಾದ್ಯಂತ ತನ್ನ ಪ್ರಭುತ್ವ ಸ್ತಾಪಿಸಿತ್ತು.
ರೇ ಅವರಿಗೆ ಪೈಪೋಟಿಯೇ ಇರಲಿಲ್ಲ. 1920ರಲ್ಲಿ ಪನಿಹಾಟಿಯಲ್ಲಿ, 1938ರ ಹೊತ್ತಿಗೆ ಮುಂಬಯಿಯಲ್ಲೂ ಕಂಪನಿ ತನ್ನ ಕಾರ್ಖಾನೆಗಳನ್ನು ಆರಂಭಿಸಿತು. ಎಲ್ಲ ಅಡ್ಡಿ-ಆತಂಕಗಳನ್ನು ಎದುರಿಸಿ ಅವೆಲ್ಲವನ್ನೂ ಮೀರಿ ಯಶಸ್ವಿಯಾದ ಆಚಾರ್ಯ ರೇ
936ರಲಿ ಅಂದರೆ ತಮ್ಮ 75ನೇ ವಯಸ್ಸಿನಲ್ಲಿ ನಿವೃತ್ತಿ ಆಗುವವರೆಗೂ ತಮ್ಮ ವೃತ್ತಿ ಜೀವನದುದ್ದಕ್ಕೂ ಒಂದು ನಯಾ ಪೈಸೆ ಸಂಬಳವನ್ನೂ ಕಂಪನಿಯಿಂದ ಪಡೆದವರಲ್ಲ.
ಭಾರತದ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ ಆರ್ಥಿಕ ಸ್ವಾತಂತ್ರ್ಯವನ್ನೂ ಗಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಲೇ ಬಂದ ಆಚಾರ್ಯ ರೇ ಅವರು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮುನ್ನ ಜೂನ್ 16, 1944 ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ನಿಧನ ರಾದರು. ಬಹುಶಃ ಅಮೆರಿಕ ಸೇರಿದಂತೆ ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳು ಇಂದು ಭಾರತದ ರಾಸಾಯನಿಕ ಪ್ರಗತಿಯ ಫಲ ವನ್ನುಣ್ಣಲು ಸೆರಗೊಡ್ಡಿ ನಿಂತಿರುವ ಕ್ಷಣಕ್ಕೆ ಆಚಾರ್ಯ ರೇ ಅವರು ಅಲ್ಲಿ ನಿಂತು ಬೀಗುತ್ತಿರಬಹುದು.