ನಿರೀಕ್ಷೆಯನ್ನು ಹೊತ್ತು ಬಂದ ಹೋಪ್ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಟ್ರೇಲರ್ ಮೂಲಕವೇ ಕುತೂಹಲ ಹುಟ್ಟಿಸಿರುವ
ಚಿತ್ರ ಅದಾಗಲೇ ಪ್ರೇಕ್ಷಕರ ಮನಗೆದ್ದಿದೆ.
ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ, ಅದರ ಸುತ್ತ ನಡೆಯುವ ರಾಜಕೀಯ ಆಟ, ಕಾನೂನು ಹೋರಾಟದ ಕಥಾಹಂದರ ವನ್ನು ಮನಕ್ಕೆ ಮುಟ್ಟುವಂತೆ ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ. ಚಿತ್ರರಂಗದಿಂದ ಒಂದಷ್ಟು ಗ್ಯಾಪ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾತ್ಸವ್ ಹೋಪ್ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.
ಈ ಚಿತ್ರದಲ್ಲಿ ಕೆಎಎಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರದ ಕಥೆ ನನಗೆ ತುಂಬಾ ಹತ್ತಿರವಾಗಿದೆ. ಹಾಗಾಗಿಯೇ ಚಿತ್ರದಲ್ಲಿ ನಟಿಸಲು ಒಪ್ಪಿದೆ. ವರ್ಗಾವಣೆಯಿಂದ ಜನ ಸಾಮಾನ್ಯರು ಅನುಭವಿಸುವ ವ್ಯಥೆಯನ್ನು ನಾನು ತೀರಾ ಹತ್ತಿರದಿಂದ ಬಲ್ಲೆ. ನಿರ್ದೇಶ ಕರು ನನಗೆ ಚಿತ್ರದ ಕಥೆ ಹೇಳಿದಾಗ, ವರ್ಗಾವಣೆಯಿಂದ ಸರಕಾರಿ ನೌಕರರು ಅನುಭವಿಸುತ್ತಿರುವ ಯಾತನೆ ನನ್ನ ಕಣ್ಣ ಮುಂದೆ ಬಂತು.
ಹಾಗಾಗಿ ಬಣ್ಣಹಚ್ಚಲು ಗ್ರೀನ್ ಸಿಗ್ನಲ್ ನೀಡಿದೆ ಎಂದರು ಶ್ವೇತಾ ಶ್ರೀವಾತ್ಸವ್. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಈಗಾಗಲೇ ಹಲವು ಕಲಾವಿದರು,ಗಣ್ಯರು ಚಿತ್ರ ವೀಕ್ಷಿಸಿದ್ದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಜಲ್ವಂತ ಸಿನಿಮಾವನ್ನು ನಿರ್ದೇ ಶನ ಮಾಡಿದ್ದ ನಿರ್ದೇಶಕ ಅಂಬರೀಶ್, ಈಗ ರಾಜ್ಯದಲ್ಲಿ ಜ್ವಲಂತ ಸಮಸ್ಯೆ ಯಾಗಿರುವ ವರ್ಗಾವಣೆಯ ಕುರಿತ ಕಥೆಯನ್ನು ತೆರೆಗೆ ತಂದಿದ್ದಾರೆ. ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್, ಹೋಪ್ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಎಸ್.ಹಲ್ಲೇಶ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.