Sunday, 24th November 2024

ಶುಗರ್‌ಲೆಸ್‌ನಲ್ಲಿದೆ ಸಿಹಿ ಪಾಕ

ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ಕೆ.ಎಂ.ಶಶಿಧರ್ ಈಗ ಶುಗರ್ ಲೆಸ್ ಚಿತ್ರದ ಮೂಲಕ ನಿರ್ದೇಶಕರೂ ಆಗಿದ್ದಾರೆ.

ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿರುವ ಚಿತ್ರ ಇದಾಗಿದೆ. ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಚಿತ್ರದ ಟೈಟಲ್ ಅಷ್ಟೇ ಶುಗರ್ ಲೆಸ್.

ಸಿನಿಮಾದಲ್ಲಿ ಸಿಹಿ ಪಾಕವೇ ಇದೆ. ನಮ್ಮ ಜೀವನದ ಶೈಲಿ ಬದಲಾಗಬೇಕು ಎಂಬುದೇ ಚಿತ್ರದ ಆಶಯವಾಗಿದೆ. ಚಿಕ್ಕ ವಯಸ್ಸಿಗೆ ಸಕ್ಕರೆ ಕಾಯಿಲೆಯಿಂದ ಬಳಲುವ ಯುವಕನ ಕಥೆ ವ್ಯಥೆ ಈ ಚಿತ್ರದಲ್ಲಿ ಬಿಂಬಿತವಾಗಿದೆ.

ಅದನ್ನು ಬಲು ಹಾಸ್ಯಮಯವಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ ಎಂದು ಸಂತಸದಿಂದ ನುಡಿಯುತ್ತಾರೆ ಪೃಥ್ವಿ ಅಂಬರ್. ಜೀವಾನುಭವದ ಕಥೆ: ಇದೊಂದು ವಿಶೇಷವಾದ ಸಿನಿಮಾ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು ನಾನಾ ರೋಗಗಳು ನಮ್ಮನ್ನು ಕಾಡುತ್ತಿವೆ.

ಅವುಗಳಲ್ಲಿ ಮಧುಮೇಹ ಕೂಡ ಒಂದು. ನಾವು ಆರೋಗ್ಯವಾಗಿರಬೇಕೆಂದರೆ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಇದು ಒಂದೇ ವರ್ಗಕ್ಕೆ ಸೀಮಿತವಾದ ಸಿನಿಮಾವಲ್ಲ ಪ್ರತಿ ಯೊಬ್ಬರೂ ಕೂಡ ಚಿತ್ರವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು ನಿರ್ದೇಶಕ ಶಶಿಧರ್.

ಹಿರಿಯ ನಿರ್ದೇಶಕ ಎಸ್. ನಾರಾಯಣ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ದತ್ತಣ್ಣ ಈ ಚಿತ್ರದಲ್ಲಿಯೂ ಎಲ್ಲರನ್ನು ನಗಿಸುತ್ತಾರೆ. ಅನೂಪ್ ಸೀಳಿನ್ ಸಂಗೀತ, ಲವಿತ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯಾ ಶಶಿಧರ್ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.