ಗ್ಲಾಮರ್ ಬೆಡಗಿ ಅನಿತಾ ಭಟ್ ಇಂದಿರಾಳಾಗಿ ತೆರೆಗೆ ಬಂದಿದ್ದಾರೆ. ಹಾಗಂತ ಈ ಬಾರಿ ನಟಿಯಾಗಿ ಮಾತ್ರವಲ್ಲ ನಿರ್ಮಾಪಕಿ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಇಂದಿರಾ ಶೀರ್ಷಿಕೆ ಕೇಳಿದಾಕ್ಷಣ ಇದು ಐತಿಹಾಸಿಕ ಕಥೆಯ ಚಿತ್ರವೇ ಅನ್ನಿಸುತ್ತದೆ. ಆದರೆ ಸಿನಿಮಾದ ಪೋಸ್ಟರ್, ಟ್ರೇಲರ್ ನೋಡಿದ ಬಳಿಕ ಇಂದಿರಾ ವಿಭಿನ್ನ ಕಥೆಯ ಚಿತ್ರ ಎನ್ನುವುದು ಮನದ ಟ್ಟಾಗುತ್ತದೆ. ಇಂದಿರಾ ಚಿತ್ರದ ಬಗ್ಗೆ ಅನಿತಾ ಭಟ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.
ವಿ.ಸಿನಿಮಾಸ್ : ಚಿತ್ರದ ಶೀರ್ಷಿಕೆ ಕೇಳಿದರೆ ಐತಿಹಾಸಿಕ ಕಥೆಯ ಸಿನಿಮಾ ಅನ್ನಿಸುತ್ತದೆಯಲ್ಲ ?
ಅನಿತಾ ಭಟ್: ಇಲ್ಲ, ಇದು ಐತಿಹಾಸಿಕ ಕಥೆಯ ಸಿನಿಮಾವಲ್ಲ. ಇಂದಿರಾ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಯ ಚಿತ್ರ. ಕಥೆಗೆ ಹೊಂದಾಣಿಕೆಯಾಗುತ್ತದೆ ಎಂದು ಈ ಶೀರ್ಷಿಕೆಯನ್ನು ಇಟ್ಟಿದ್ದೇವೆ. ಕನ್ನಡದಲ್ಲಿ ಇದುವರೆಗೂ ಬಂದಿರದ ಕಥೆ ಈ ಚಿತ್ರದಲ್ಲಿದೆ. ಇಂದಿರಾ ಖಂಡಿತಾ ಪ್ರೇಕ್ಷಕರಿಗೆ ಹಿಡಿಸುತ್ತದೆ. ಹೊಸತನ ತರುತ್ತದೆ ಎಂಬ ನಂಬಿಕೆ ನನಗಿದೆ.
ವಿ.ಸಿ: ಇಂದಿರಾ ಸಿನಿಮಾದ ಕಥೆ ಹುಟ್ಟಿದ್ದು ಹೇಗೆ ?
ಅನಿತಾ: ಸಮುದ್ರಂ ಚಿತ್ರದಲ್ಲಿ ನಟಿಸಿದ ಬಳಿಕ ಕನ್ನಡದಲ್ಲಿ ಹೊಸಬಗೆಯ ಚಿತ್ರಗಳು ಬರಬೇಕು ಎಂದುಕೊಂಡಿದ್ದೆ. ಅದೇ
ಸಮಯಸದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯ ಬಗ್ಗೆ ಯೋಚಿಸಿದೆವು. ನಿರ್ದೇಶಕ ರಿಷಿಕೇಶ್ ಒಳ್ಳೆಯ ಕಥೆಯನ್ನು ಹೆಣೆದಿದ್ದರು. ಕಥೆ ಕೇಳಿ ನನಗೂ ಮೆಚ್ಚುಗೆಯಾಯಿತು. ಅಂದೇ ಚಿತ್ರ ನಿರ್ಮಾಣಕ್ಕೆ ಸಂತಸದಿಂದಲೇ ಒಪ್ಪಿದೆ.
ವಿ.ಸಿ: ಚಿತ್ರದ ಒನ್ ಲೈನ್ ಸ್ಟೋರಿ ಹೇಳುವುದಾದರೆ ?
ಅನಿತಾ: ಚಿತ್ರದ ನಾಯಕಿ ಮರೆಗುಳಿ. ಜತೆಗೆ ಅಂಧಳು ಕೂಡ. ಈ ನಡುವೆಯೇ ಒಂದು ಕೊಲೆಯಾಗುತ್ತದೆ. ಈ ಕೊಲೆಯನ್ನು
ಯಾರು ಮಾಡಿದರು. ಅದಕ್ಕೂ ನಾಯಕಿಗೂ ಏನು ಸಂಬಂಧ ಎಂಬ ಕುತೂಹಲ ಕೊನೆಯವರೆಗೂ ಕಾಡುತ್ತದೆ. ಇದರ ಜತೆಗೆ
ಪ್ರತಿ ಪಾತ್ರಗಳೂ ಕಥೆಗೆ ಟ್ವಿಸ್ಟ್ ಕೊಡುತ್ತಾ ಸಾಗುತ್ತವೆ. ಸಿನಿಮಾದಲ್ಲಿ ಸುಹಾನಿ ಎಂಬ ಎರಡು ಪಾತ್ರಗಳಿವೆ. ಇದರಲ್ಲಿ ನಿಜವಾದ ಸುಹಾನಿ ಯಾರು ಎಂಬುದು ಸಿನಿಮಾದ ಕ್ಲೈಮ್ಯಾಕ್ ವರೆಗೂ ತಿಳಿಯುವುದೇ ಇಲ್ಲ. ಸುಹಾನಿ ಪಾತ್ರದಲ್ಲಿ ನೀತು ಶೆಟ್ಟಿ ಹಾಗೂ ಅಂಕಿತಾ ಗೌಡ ನಟಿಸಿದ್ದಾರೆ.
ವಿ.ಸಿ: ನಿಮ್ಮ ಪಾತ್ರದ ತಯಾರಿ ಹೇಗಿತ್ತು ?
ಅನಿತಾ ಭಟ್: ನನಗೆ ವಿಭಿನ್ನ ಕಥೆಯ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಅದರಲ್ಲೂ ಸೈಕಾಲಜಿಕಲ್ ಥ್ರಿಲ್ಲರ್ ಕಥೆಗಳು ಎಂದರೆ ಅಚ್ಚುಮೆಚ್ಚು. ಚಿತ್ರದ ಕಥೆ ಕೇಳಿದ ತಕ್ಷಣ ಬಲು ಖುಷಿಯಾಯಿತು. ಕಥೆಯ ಕುರಿತಂತೆ ವೈದ್ಯರು, ಸ್ನೇಹಿತರ ಜತೆಗೆ ಚರ್ಚಿಸಿದೆ. ಸಲಹೆ ಪಡೆದುಕೊಂಡೆ. ನನ್ನ ಪಾತ್ರಕ್ಕೆ ತಕ್ಕಂತೆ ಸಿದ್ಧತೆ ನಡೆಸಿದೆ. ನಾನು ಈ ಹಿಂದಿನ ಚಿತ್ರದಲ್ಲಿ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ್ದೆ. ಈಗ ಇಂದಿರಾಳಾಗಿ ಬೋಲ್ಡ್ ನಟನೆ ತೋರಿದ್ದೇನೆ. ನನ್ನ ಜತೆಯಾಗಿ ಬಹುಭಾಷಾ ನಟ ಶಫಿ ನಟಿಸಿದ್ದಾರೆ. ಉಳಿದಂತೆ ನೀತು, ಅಂಕಿತಾ, ಚಕ್ರವರ್ತಿ ಚಂದ್ರಚೂಡ್, ರೆಹಮಾನ್, ಜೈದೇವ್, ಸತ್ಯ ಮತ್ತಿತರರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
***
ಇಂದಿರಾ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯ ಸಿನಿಮಾ. ಈ ಚಿತ್ರವನ್ನು ಒಟಿಟಿಗಾಗಿಯೇ ನಿರ್ಮಿಸಿದ್ದೆವು. ಅಂತೆಯೇ ಒಟಿಟಿ ಯಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡಿದ್ದೇವೆ. ಮನರಂಜನಾತ್ಮಕ ಸಿನಿಮಾ ಇದಾಗಿದ್ದು ಪ್ರೇಕ್ಷಕರು ನಮ್ಮ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ನನಗಿದೆ.