ಸುಪ್ತ ಸಾಗರ
rkbhadti@gmail.com
‘ಸೂಕಿಯೇ ಬರ್ಮಾದ ಮುಂದಿನ ಪ್ರಧಾನಿ’ ಎಂಬ ಹವಾ ಎಲ್ಲೆಡೆ ಹರಿದಾಡಿತು. ಆದರೆ, ಜುಂಟಾ ಎಂಬ ಮಹಾನುಭಾವ ಆ ಅವಕಾಶ ವನ್ನೇ ಕಿತ್ತುಕೊಂಡ. ಫಲಿತಾಂಶವನ್ನೇ ತಡೆಹಿಡಿದು, ಅಧಿಕಾರ ನೀಡಲು ಒಪ್ಪಲೇ ಇಲ್ಲ.
ಆ ಹಕ್ಕಿಗೀಗ ‘77 ವರ್ಷದ ಜವ್ವನ’!. ಆಕೆಯ ಮೇಲೆ ಇಂದಿಗೂ ವಿಚಾರಣಾ ಹಂತದಲ್ಲಿ ಉಳಿದಿರುವುದು ಸುಮಾರು ಹನ್ನೆರಡು ಪ್ರಕರಣಗಳು. ಎಲ್ಲದರಲ್ಲೂ ಶಿಕ್ಷೆಯಾದರೆ ಗರಿಷ್ಠ 100 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೀವನದ ಅತ್ಯಮೂಲ್ಯ ದಿನಗಳಲ್ಲಿ ಹೆಚ್ಚಿನ ಭಾಗವನ್ನು ಒಂದೇ ಜೈಲಿನಲ್ಲಿ ಅಥವಾ ಗೃಹಬಂಧನದಲ್ಲಿ ಕಳೆದಿರುವ ಆ ಹಕ್ಕಿಗೆ ಮೊನ್ನೆ ಮೊನ್ನೆಯಷ್ಟೇ ಒಂದು ಪ್ರಕರಣದಲ್ಲಿ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಾಗೆಂದು ರೆಕ್ಕೆ ಬಿಚ್ಚಿ ಹಾರುವ ಸ್ವಾತಂತ್ರ್ಯಕ್ಕಾಗಿನ ಹೋರಾಟವನ್ನೇನೂ ಈ ಹಕ್ಕಿ ನಿಲ್ಲಿಸಿಲ್ಲ. ಬರ್ಮಾದ ಸ್ವಾತಂತ್ರ್ಯಕ್ಕಾಗಿ ಆಕೆ ನಡೆಸಿದ ಶಾಂತಿ ಹೋರಾಟಕ್ಕೆ ನೊಬೆಲ್ ಪ್ರಶಸ್ತಿಯೂ ಸಿಕ್ಕಿದೆ. ಹೌದು, ನೀವಂದುಕೊಂಡಂತೆಯೇ ಆಕೆ ಆಂಗ್ ಸಾನ್ ಸೂಕಿ. ಕೇವಲ ಬರ್ಮಾದ ಹೆಣ್ಣಲ್ಲ, ಬ್ರಹ್ಮಾಂಡದ ಹೆಣ್ಣು. ಒಂದು ಬಾರಿ ಬರ್ಮಾದ ಈ ಹಕ್ಕಿಯ ಹಾರಾಟದ ಪಥವನ್ನು ಹಿಂತಿರುಗಿ ನೋಡುವು ದಾದರೆ… ಆಕೆಯ ಪತಿ ಮೈಕೆಲ್ ಆರಿಸ್, ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ಹಾಸಿಗೆ ಹಿಡಿದಿದ್ದ.
ಹಾಗೆನ್ನುವುದಕ್ಕಿಂತಲೂ ಇನ್ನೇನು ಕೊನೆಯ ದಿನಗಳನ್ನು ಎಣಿಸುತ್ತಿದ್ದ. ಆ ಕ್ಷಣದಲ್ಲಿ ಕೈ ಹಿಡಿದವಳ ಸಾಮೀಪ್ಯ ಬಯಸುವುದು ಎಂಥವ ನಿಗಾದರೂ ಸಹಜ. ಹಾಗೆ ಹೆಂಡತಿಯ ತೊಡೆ ಮೇಲೆ ಕಣ್ಮುಚ್ಚುವ ಮನಸ್ಸಾಗಿತ್ತು ಮೈಕೆಲ್‌ಗೆ. ಬರ್ಮಾದ ಪ್ರಜಾಪ್ರಭುತ್ವ ಹೋರಾಟ ದಲ್ಲಿ ಬ್ಯುಸಿಯಾಗಿದ್ದ ಹೆಂಡತಿ ಆಂಗ್ ಸಾನ್ ಸೂಕಿಗೂ ನಿಮಿಷ ಬಿಡುವಿಲ್ಲ. ಪತಿ ಭೂತಾನ್ ಪ್ರಜೆ ಯಾಗಿದ್ದ ಕಾರಣ ಮತ್ತು ಅಂಥ ಘೋರ ಕ್ಯಾನ್ಸರ್‌ಗೆ ನಮ್ಮಲ್ಲಿ ವೈದ್ಯ ಸೌಲಭ್ಯವಿಲ್ಲ ಅಂತ ಬರ್ಮಾ ಸರ್ಕಾರವೂ ಮೈಕೆಲ್ ಆರಿಸ್‌ನನ್ನು ದೇಶದೊಳಕ್ಕೆ ಬಿಟ್ಟು ಕೊಳ್ಳಲಿಲ್ಲ. ಸೂಕಿ ಮೇಲಿನ ಸೇಡನ್ನೆಲ್ಲ ಸರಕಾರ ಇಂಥ ಮೊಂಡುವಾದ ಮಂಡಿಸಿ ತೀರಿಸಿಕೊಳ್ಳುವ ಹುನ್ನಾರದಲ್ಲಿತ್ತು. ಹೆಂಡತಿಯ ಮುಖವನ್ನು ಎರಡು ವರ್ಷದ ಹಿಂದೆ ಅಂದರೆ 1995ರಲ್ಲಿ ನೋಡಿದ್ದೇ ಕೊನೆ.
ಬರ್ಮಾ ಸರಕಾರಕ್ಕೆ ವಿಶ್ವಸಂಸ್ಥೆಯೂ ಬುದ್ಧಿ ಹೇಳಿತು, ವ್ಯಾಟಿಕನ್ ಸಿಟಿಯಲ್ಲಿ ಕೂತ ಪೋಪ್ ಜಾನ್‌ಪಾಲ್ 11 ಕೂಡ ಮನವಿಯ ಒಂದು ದೀರ್ಘ ಪತ್ರ ಕಳುಹಿಸಿದ್ದರು. ಆದರೂ ಆರಿಸ್‌ನನ್ನು ಗುಣಪಡಿಸುವಂಥ ತಂತ್ರಜ್ಞಾನ ನಮ್ಮಲ್ಲಿಲ್ಲ ಎಂಬ ತರ್ಕವನ್ನು ಸರಕಾರ ಬಿಡಲೇ ಇಲ್ಲ. ವೀಸಾವೇ ಸಿಗದಿದ್ದರೆ ಇನ್ನು ಆರಿಸ್ ಬರ್ಮಾ ಪ್ರವೇಶಿಸುವುದಾದರೂ ಹೇಗೆ? ಬೇಕಾದರೆ ಹೋರಾಟದಲ್ಲಿರುವ ಸೂಕಿಯೇ ದೇಶ ಬಿಟ್ಟು ಹೋಗಲಿ ಎಂದು ಆರ್ಡರ್ ಮಾಡಿತು. ಸೂಕಿಯ ಮುಂದೆ ಈಗ ಎರಡು ಆಯ್ಕೆ; ಒಂದು ಪತಿ, ಇನ್ನೊಂದು ದೇಶ. ಆರಿಸ್‌ನನ್ನು ನೋಡಲು ಒಮ್ಮೆ ಬರ್ಮಾ ಬಿಟ್ಟರೆ ಮತ್ತೆ ವಾಪಸ್ ಬರಲು ಈ ನಿರಂಕುಶವಾದಿಗಳು ಅನುಮತಿ ಕೊಡುವುದಿಲ್ಲ ಎಂಬುದು ಸೂಕಿಗೆ ಸೂಚ್ಯವಾಗಿಯೇ ಗೊತ್ತಿತ್ತು.
‘ಪತಿಗಿಂತ ದೇಶವೇ ಮುಖ್ಯ’ ಎಂಬ ಅವಳ ಪಬ್ಲಿಕ್ ಸ್ಟೇಟ್‌ಮೆಂಟ್ ಇಡೀ ಬರ್ಮಾ ಜನರಲ್ಲಿ ಕರುಣೆಯ ಕಡಲು ಉಕ್ಕೇರುವಂತೆ ಮಾಡಿತು. ದುರ್ದೈವ, 1999ರ ಮಾರ್ಚ್ 27ರಂದು ಮೈಕೆಲ್ ಆರಿಸ್ ಬಾರದ ಲೋಕಕ್ಕೆ ಹೋದರು. ಆ ಸೂತಕದಲ್ಲೂ ಸೂಕಿ ಬರ್ಮಾದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದಳು. ಸೂಕಿ ಏನೆನ್ನುವುದಕ್ಕೆ ಇದೊಂದು ಘಟನೆ ಸಾಕೇನೋ? ಬಿಡಿ, ಆಕೆಯನ್ನು ವ್ಯಾಖ್ಯಾ ನಿಸುವುದೇ ಕಷ್ಟ. ಅವಳೆಂದರೆ ‘ಸ್ವಾತಂತ್ರ್ಯ’.
ಮೇಲ್ನೋಟಕ್ಕೆ ಸಾಬೀತುಗೊಳ್ಳುವುದೇ ಇದೇ ಒಂದು ಪದ. ಹಾಗೆಯೇ, ಅವಳು ಶಾಂತಿಯ ಪಾರಿವಾಳ. 21 ವರ್ಷದ ಗೃಹಬಂಧನದಲ್ಲಿ ಆಕೆ ಎಂದೂ ಚೀರಾಡಿದ್ದಿಲ್ಲ. ಗಾಂಧಿ ಹೇಗೆ ಮೌನದಲ್ಲೇ ಎಲ್ಲರನ್ನೂ ಗೆದ್ದರೋ, ಅದೇ ಮಾರ್ಗದ ಅಭೂತಪೂರ್ವ ಮೈಲುಗಲ್ಲು ನೆಟ್ಟವಳು ಆಂಗ್ ಸಾನ್ ಸೂಕಿ. ವಿಶ್ವದ ಅದೆಷ್ಟೋ ನಿರಂಕುಶರ ನಾಡಿನಲ್ಲಿ ಸೂಕಿ ನಾಡಗೀತೆಯಾಗಿದ್ದಾಳೆ. ಆ ದೇಶದ ಬಾವುಟದೊಂದಿಗೆ ಸೂಕಿಯ ಭಾವಚಿತ್ರಗಳೂ ಹೋರಾಟದ ಕಿಡಿಗಳಂತೆ ಕಂಗೊಳಿಸುತ್ತವೆ.
ನಾಡಿದ್ದು ಹತ್ತೊಂಬತ್ತಕ್ಕೆ ಆಕೆಯ ಹುಟ್ಟಿದ ಹಬ್ಬ ಎನ್ನುವುದಕ್ಕಾಗಿ ಆಕೆ ಮತ್ತೆ ನೆನಪಾಗಿದ್ದಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75ರ ಸಂಭ್ರಮದಲ್ಲಿದ್ದೇವೆ. ಹಾಗೆ ನೋಡಿದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಎರಡು ವರ್ಷದ ಮುಂಚೆಯೇ ಬರ್ಮಾದಲ್ಲಿ ಸ್ವಾತಂತ್ರ್ಯದ
ಹಕ್ಕಿಯ ಜನನವಾಗಿತ್ತು. ಸೂಕಿ ಹುಟ್ಟಿದ್ದು, 1945ರ ಜೂನ್ 19ರಂದು. ರಂಗೂನ್ ಆಕೆಯ ಹುಟ್ಟೂರು. ಸೂಕಿಗೆ ಇಬ್ಬರು ಸಹೋದರರು. ಅದರಲ್ಲಿ ಒಬ್ಬಾತನಿಗೆ ಅಕ್ಕನ ಯಶೋಗಾಥೆಯನ್ನು ನೋಡುವ ಯೋಗವಿರಲಿಲ್ಲವೋ ಏನೋ, ಚಿಕ್ಕಂದಿನಲ್ಲೇ ಕೆರೆಯಲ್ಲಿ ಮುಳುಗಿ ಪ್ರಾಣಬಿಟ್ಟ.
ಇನ್ನೊಬ್ಬ ಸಹೋದರನಿದ್ದಾನೆ, ಆಂಗ್ ಸಾನ್ ಓ. ಗ್ರೀನ್‌ಕಾರ್ಡ್ ಜೇಬಿನಲ್ಲಿಟ್ಟುಕೊಂಡು ಸದ್ಯ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾನೆ. ಆಂಗ್ ಸಾನ್ ಎಂಬುದು ಸೂಕಿಯ ಅಪ್ಪನ ಹೆಸರು. ಸೂಕಿಯ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರಿಂದ ತನ್ನೊಂದಿಗೆ ಅವರ ಹೆಸರನ್ನೂ ಅಂಟಿಸಿಕೊಂಡಳು. ಭಾರತದಲ್ಲಿ ಬ್ರಿಟಿಷರ ವಿರುದ್ಧ ಧಂಗೆಯೆದ್ದಾಗ, ಅತ್ತ ಬರ್ಮಾವೂ ತನ್ನ ಮುಕ್ತಿಗಾಗಿ ಮಂತ್ರ ಜಪಿಸು ತ್ತಿತ್ತು. ಆಧುನಿಕ ಬರ್ಮೀಸ್ ಆರ್ಮಿ ಕಟ್ಟಿದ ಮಹನೀಯರಲ್ಲಿ ಸೂಕಿಯ ಅಪ್ಪನೂ ಒಬ್ಬರು. ಬ್ರಿಟಿಷರ ವಿರುದ್ಧ ಏನೇ ಮಾಡುವುದು ಅದು ದೇಶದ್ರೋಹದ ಕೆಲಸ.
ಬ್ರಿಟಿಷರು ಇದೊಂದೇ ನೆಪ ಮುಂದಿಟ್ಟುಕೊಂಡು ಸೂಕಿಯ ತಂದೆ ಆಂಗ್ ಸಾನ್ ಅವರ ಜೀವ ತೆಗೆದಿದ್ದರು. ಆದರೆ, ಸೂಕಿಗಿದು ನೋವಿನ
ಸಂಗತಿ ಅಲ್ಲವೇ ಅಲ್ಲ. ದೇಶಕ್ಕಾಗಿ ಪ್ರಾಣವನ್ನಲ್ಲದೆ ಏನನ್ನೇ ಕಳೆದುಕೊಳ್ಳುವುದು ಅದು ತ್ಯಾಗವೇ ಹೊರತು ನೋವಿನ ಸಂಗತಿಯಲ್ಲ ಎಂಬ ನಂಬಿಕೆ ಸೂಕಿಯದ್ದು. ಸ್ವಾಂತಂತ್ರ್ಯದ ಹೊಸ್ತಿಲಲ್ಲೇ ಆತ ಪ್ರಾಣ ತ್ಯಜಿಸಿದ್ದರು.
ಬಾಲ್ಯದಲ್ಲೇ ಅಪ್ಪನ ಪ್ರೀತಿ ಕಾಣಲಿಲ್ಲ ಸೂಕಿ. ಹಾಗಂತ, ಅವಳ ತಾಯಿ ಆಕೆಗೇನೂ ಕಡಿಮೆ ಮಾಡಲಿಲ್ಲ. ಆಗಿನ ಕಾಲಕ್ಕೆ ಚೆನ್ನಾಗಿಯೇ ಓದಿದ್ದ ಆಕೆಯ ತಾಯಿ ಖಿನ್ ಕ್ಯೀ ಮಗಳಲ್ಲೂ ಲೋಕಜ್ಞಾನ ತುಂಬಿದರು. ಸೂಕಿಯ ಪ್ರಾಥಮಿಕ ಶಿಕ್ಷಣ ಡಾಗೋನ್‌ನ ಮೆಥಡಿಸ್ಟ್ ಇಂಗ್ಲಿಷ್ ಹೈಸ್ಕೂಲಿನಲ್ಲಾಯಿತು. ಶಾಲೆಯಲ್ಲಿ ಆಕೆ ಯಾವಾಗಲೂ ಟಾಪ್. ಇತರೆ ಭಾಷೆಗಳನ್ನು ಕಲಿಯೋದು ಅಂದರೆ ಸೂಕಿಗೆ ಕಲ್ಲುಸಕ್ಕರೆ ತಿಂದಹಾಗೆ.
1960ರಲ್ಲಿ ಸೂಕಿ ಮನೆಯ ಭಾಗ್ಯದ ಬಾಗಿಲು ತೆರೆಯಿತು. ಆಗ ತಾನೇ ರಚನೆಯಾದ ಹೊಸ ಸರಕಾರ ಸೂಕಿ ಅವರ ತಾಯಿಯ ಪ್ರತಿಭೆ ಗುರುತಿಸಿತು. ಖಿನ್ ಕ್ಯೀ ಮುಂದೆ ಹೆಸರಾಂತ ರಾಜಕಾರಣಿಯಾಗಿ ಗುರುತಿಸಿಕೊಂಡರು. ಭಾರತ ಹಾಗೂ ನೇಪಾಳ ದೇಶಗಳ ರಾಯಭಾರಿ ಯಾಗಿಯೂ ಖಿನ್ ನೇಮಕಗೊಂಡರು. ಸೂಕಿ ಎಂದರೆ ಭಾರತೀಯರಲ್ಲೂ ಸಂಚಲನ ಮೂಡುತ್ತದೆ. ಅಂಥ ಅಗಾಧ ನಂಟು ಆಕೆಯೊಂದಿಗೆ ನಮಗಿದೆ. ಅಂದಹಾಗೆ, ಸೂಕಿ ತನ್ನ ಬಹುತೇಕ ಶಿಕ್ಷಣ ಮುಗಿಸಿದ್ದು ಭಾರತದಲ್ಲಿಯೇ. ನವದೆಹಲಿಯ ಜೀಸಸ್ ಮತ್ತು ಮೇರಿ ಸ್ಕೂಲ್‌ನಲ್ಲಿ ಸೂಕಿಯ ಹೆಸರು ಇಂದಿಗೂ ಅಮರ.
ಲೇಡಿ ಶ್ರೀರಾಂ ಕಾಲೇಜಿನಲ್ಲಿ 1964ರಲ್ಲಿ ರಾಜ್ಯಶಾಸ ಪದವಿ ಪಡೆದ ಸೂಕಿ ಮುಂದೆ ಆಕ್ಸ್ ಫರ್ಡ್‌ನ ಸೆಂಟ್ ಹ್ಯೂಜ್’ಸ್ ಕಾಲೇಜಿನಲ್ಲಿ ತತ್ವಶಾಸ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲೂ ಡಿಗ್ರಿ ಗಿಟ್ಟಿಸಿಕೊಂಡಳು. ಅವಳು ಹೋರಾಟದ ಸ್ಫೂರ್ತಿ ಹೌದು. ಸೂಕಿಯಲ್ಲೂ
ಪ್ರೀತಿ ಪ್ರಣಯದ ರೇಕುಗಳಿದ್ದವು. ಆಕ್ಸ್ ಫರ್ಡ್‌ನಲ್ಲಿ ಓದುತ್ತಿದ್ದಾಗ ತಾರಿಕ್ ಹೈದರ್ ಎಂಬ ಪಾಕಿಸ್ತಾನದ ವಿದ್ಯಾರ್ಥಿಯನ್ನು ಪ್ರೇಮಿಸಿ ದ್ದಳು. ಆದರೆ, ಒಳಗೆ ಉರಿಯುತ್ತಿದ್ದ ದೇಶಸೇವೆಯ ದೀಪದ ಮುಂದೆ ಈ ಪ್ರೇಮವೇಕೋ ಮಂಕಾದಂತೆ ಕಂಡಿರಬೇಕು.
ಹೀಗಾಗಿ, ಇವರ ಲವ್ವು ಹೆಚ್ಚು ದಿನ ಬಾಳಲಿಲ್ಲ. ಅಂದಹಾಗೆ, ಪದವಿಯ ನಂತರ ಸೂಕಿ ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ ಉದ್ಯೋಗಿ
ಯಾಗಿಯೂ ಕೆಲಸ ಮಾಡಿದ್ದರು. ನಂತರ ಸೂಕಿಯ ವಿವಾಹ 1971ರಲ್ಲಿ ಭೂತಾನ್‌ನ ಮೈಕೆಲ್ ಆರಿಸ್‌ನೊಂದಿಗಾಯಿತು. ಈ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗನ ಹೆಸರು ಅಲೆಕ್ಸಾಂಡರ್ ಆರಿಸ್, ಇನ್ನೊಬ್ಬನ ಹೆಸರು ಕಿಮ್. 1985ರಲ್ಲಿ ಸೂಕಿಯ ಪಿಎಚ್‌ಡಿ ಮುಗಿಯಿತು. ಲಂಡನ್ ವಿವಿಯ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಅಧ್ಯಯನ ವಿಷಯದ ಮೇಲೆ ಗಳಿಸಿದ ಅತ್ಯುನ್ನತ ಗರಿಯಿದು.
1990ರಲ್ಲಿ ಅವರು ಹಾನರರಿ ಫೆಲೋ ಗೌರವಕ್ಕೂ ಪಾತ್ರರಾದರು. ಬಳಿಕ ಶಿಮ್ಲಾದಲ್ಲಿರುವ ಭಾರತೀಯ ಮುಂದುವರಿದ ಅಧ್ಯಯನಗಳ ಸಂಸ್ಥೆಯಲ್ಲಿ ಎರಡು ವರ್ಷಗಳ ಫೆಲೋ ಆಗಿದ್ದರು. 1988ನೇ ಇಸವಿ. ಬರ್ಮಾಕ್ಕೆ ಕ್ರಾಂತಿಯ ಕಾಲ. ಅಲ್ಲಿನ ನಿರಂಕುಶ ಪ್ರಭುತ್ವದ ವಿರುದ್ಧದ ಹೋರಾಟಕ್ಕೆ ಸೂಕಿಯ ನೇತೃತ್ವ ಸಿಕ್ಕಿತು. ಇದಕ್ಕೆ ಶಿಕ್ಷೆಯಾಗಿ ಗಂಡನನ್ನೇ ದೂರ ಮಾಡಿತು ಸರಕಾರ. 1989ರಲ್ಲಿ ಸೂಕಿಗೆ ಗೃಹಬಂಧನಕ್ಕೆ ದೂಡಿತು ಬರ್ಮಾ. ಬಹುಶಃ ಆ ಹತ್ತು ವರ್ಷದಲ್ಲಿ (1989-99) ಗಂಡನ ಮುಖ ಆಕೆ ನೋಡಿದ್ದು ಕೇವಲ ೫ ಬಾರಿ! ಆ ಅವಽಯಲ್ಲಿ ಹೆತ್ತ ಮಕ್ಕಳನ್ನು ನೋಡಿದ್ದು ದಾಖಲೆಯಲ್ಲೇ ಇಲ್ಲ.
ಗೃಹಬಂಧನಕ್ಕೂ ಮುಂಚೆ ಆಡಳಿತ ನಡೆಸುತ್ತಿದ್ದವ ಮಿಲಿಟರಿ ನಾಯಕ ಜನರಲ್ ನೆ ವಿನ್. ಅಂವ ಅಧಿಕಾರ ಬಿಟ್ಟಿದ್ದೇ ಬಿಟ್ಟಿದ್ದು ಬರ್ಮಾದಲ್ಲಿ ಗಲಾಟೆ ಆರಂಭ. 1988ರ ಆಗಸ್ಟ್ ೮ರಂದು ಸೂಕಿ ಪ್ರಜಾಪ್ರಭುತ್ವ ಹೋರಾಟಕ್ಕೆ ಟೊಂಕ ಕಟ್ಟಿದರು. ಸುಮಾರು 5 ಲಕ್ಷ ಮಂದಿ ಮುಂದೆ ಸೂಕಿ ಭರ್ಜರಿ ಭಾಷಣ ಮಾಡಿದ್ದರು. ಅಂದಿನ ದಿನವನ್ನು ಇಂದಿಗೂ ‘8888 ಕ್ರಾಂತಿ ದಿನ’ (ತಿಂಗಳು 8-
ದಿನಾಂಕ 8- ಇಸವಿ 88) ಎಂದೇ ಕರೆಯಲಾಗುತ್ತದೆ.
ಎಂಥ ದುರಂತ ನೋಡಿ. ಅಲ್ಲೂ ಸೂಕಿಯ ಕಾಲನ್ನು ಎಳೆಯುವವರಿದ್ದರು. ಆ ಹೋರಾಟವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳೂ ಸರಕಾರದ ಕಡೆಯಿಂದ ನಡೆದವು. ಆದರೆ ಆಗ ಸೂಕಿ ಮಹಾತ್ಮಾ ಗಾಂಽ ಅವರ ಅಹಿಂಸಾವಾದಕ್ಕೆ ಬಲವಾಗಿ ಜೋತುಬಿದ್ದರು. ಸರಕಾರ ಎಷ್ಟೇ ಪ್ರಹಾರ ನಡೆಸಿದರೂ ಸೂಕಿ ಅದಕ್ಕೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಅಳುಕದೆ ಹೋರಾಟದ ಹೆಜ್ಜೆ ಇಟ್ಟಳು. ಸುದೈವ, ಅಂದಿನ ಹೋರಾಟ ಸೂಕಿಯನ್ನು ಪರಿಪೂರ್ಣ ನಾಯಕಿಯನ್ನಾಗಿ ರೂಪಿಸಿತು. ಹೋರಾಟದ ಮೂಲಕವೇ ರಾಜಕೀಯ ಪ್ರವೇಶಿಸಿದರಿಂದ
ನಿರಂಕುಶವಾದಿಗಳು ಮೂಗಿನ ಮೇಲೆ ಬೆರಳಿಟ್ಟರು. ಆಗ ಸೂಕಿ ಸ್ಥಾಪಿಸಿದ್ದೇ ರಾಷ್ಟ್ರೀಯ ಲೀಗ್ ಫಾರ್ ಡೆಮಾಕ್ರೆಸಿ ಪಾರ್ಟಿ. ಅದೇ ವರ್ಷದ ಸೆಪ್ಟೆಂಬರ್ 27ರಲ್ಲಿ ಈ ಪಕ್ಷದ ಉದಯವಾಯಿತು.
ಆದರೆ, 1989ರ ಜುಲೈ 20ರಂದು ಮಿಲಿಟರಿ ಆಡಳಿತ ಸೂಕಿ ಅವರನ್ನು ಗೃಹ ಬಂಧನಕ್ಕೆ ದೂಡಿತು. 1990ರಲ್ಲಿ ಮಿಲಿಟರಿ ಅಧಿಕಾರಿ ಜುಂಟಾ ದೇಶದಲ್ಲಿ ಚುನಾವಣೆ ನಡೆಸಿದರು. ಆಗ ಸೂಕಿ ಪಕ್ಷ ಎನ್ ಎಲ್‌ಡಿ ಶೇ.59 ಮತ ಗಳಿಸಿತು. ಅಲ್ಲದೆ, ಸಂಸತ್‌ನ ಶೇ.80ಸ್ಥಾನ ಗೆಲ್ಲುವ ಎಲ್ಲ ಸೂಚನೆಗಳನ್ನೂ ನೀಡಿತ್ತು. ‘ಸೂಕಿಯೇ ಮುಂದಿನ ಪ್ರಧಾನಿ’ ಎಂಬ ಹವಾ ಎಲ್ಲೆಡೆ ಹರಿದಾಡಿತು. ಆದರೆ, ಜುಂಟಾ ಆ ಅವಕಾಶವನ್ನೇ ಕಿತ್ತು ಕೊಂಡ. ಫಲಿತಾಂಶವನ್ನೇ ತಡೆಹಿಡಿದು, ಅಽಕಾರ ನೀಡಲು ಒಪ್ಪಲೇ ಇಲ್ಲ. ಪ್ರಭಾವಿಯಾಗಿ ಬೆಳೆಯುತ್ತಿದ್ದ
ಸೂಕಿಯೆಂಬ ಶಾಂತಿದ್ಯೋತಕ ಬಿಳಿ ಪಾರಿವಾಳವನ್ನು ಗೃಹಬಂಧನದ ಪಂಜರದೊಳಗೆ ನೂಕಲಾಯಿತು.
ಆಗಲೇ ಸೂಕಿಯ ಕೀರ್ತಿ ಜಗತ್ತಿನ ಉದ್ದಗಲ ಹರಡಿತ್ತು. ಆಕೆಯ ಸ್ವಾತಂತ್ರ್ಯದ ಚಿಂತನೆಗಾಗಿ ಸಖಾರೋವ್ ಪ್ರಶಸ್ತಿ 1990ರಲ್ಲೇ ಘೋಷಣೆಯಾಯಿತು. ಮರುವರ್ಷವೇ ಆಕೆಗೆ ನೊಬೆಲ್ ಶಾಂತಿ ಪುರಸ್ಕಾರವೂ ಸಿಕ್ಕಿತು. ಗೃಹಬಂಧನದಲ್ಲಿದ್ದ ಕಾರಣ ಮಕ್ಕಳಾದ ಅಲೆಕ್ಸಾಂಡರ್ ಮತ್ತು ಕಿಮ್ಸ್ ಪ್ರಶಸ್ತಿ ಸ್ವೀಕರಿಸಿದ್ದರು. ನೊಬೆಲ್ ಪ್ರಶಸ್ತಿ ರೂಪದಲ್ಲಿ ಬಂದ 1.3 ಮಿಲಿಯಲ್ ಡಾಲರ್ ಹಣವನ್ನು
ಬರ್ಮಾದ ಬಡವರ ಶಿಕ್ಷಣ ಮತ್ತು ಆರೋಗ್ಯ ಕಲ್ಯಾಣಕ್ಕಾಗಿ ಬಳಸಲಾಯಿತು.
ಇಂಥ ವೇಳೆಯಲ್ಲೂ ಸೂಕಿ ಮೇಲೆ ದಾಳಿಗಳಾದವು. 1996ರ ಟೈಮದು. ಕೆಲ ಗೂಂಡಾಗಳು ಕಲ್ಲು, ಚೈನು ಮತ್ತು ಇತರೆ ಆಯುಧ ಗಳಿಂದ ಸೂಕಿ ಮೇಲೆ ದಾಳಿ ನಡೆಸಿದರು. ಕಾರಿನ ಕಿಟಕಿ ಗ್ಲಾಸ್‌ಗಳೆಲ್ಲ ಒಡೆದು ಹೋದವು. ಯೂನಿಯನ್ ಸಾಲಿಡಾರಿಟಿ ಆಂಡ್
ಡೆವೆಲಪ್‌ಮೆಂಟ್ ಅಸೋಸಿಯೇಶನ್ ಈ ಕೆಲಸ ಮಾಡಿತು ಎಂಬ ಆಪಾದನೆಯಿದೆ. ಆದರೆ, ಅದರ ಬಗ್ಗೆ ತನಿಖೆ ಇವತ್ತಿನ ವರೆಗೂ ಆಗಿಲ್ಲ. ಆರೋಪಿಗಳಿಗೆ ಶಿಕ್ಷೆಯೂ ಆಗಿಲ್ಲ ಅನ್ನೋದು ಬರ್ಮಾದ ಸರ್ವಾಧಿಕಾರ ಬುದ್ಧಿಗೆ ಹಿಡಿದ ಕನ್ನಡಿ.
21 ವರ್ಷಗಳಲ್ಲಿ ಸೂಕಿ 15ವರ್ಷ ಗೃಹ ಬಂಧನದಲ್ಲಿದ್ದಳು. ಬಂಧನ ಮತ್ತು ಬಿಡುಗಡೆ ಮೇಲಿಂದ ಮೇಲೆ ನಡೆಯುತ್ತಲೇ ಇದ್ದವು. ಎಷ್ಟೋ ಬಾರಿ ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳು ಸೂಕಿ ಗೃಹಬಂಧನವನ್ನು ವಿರೋಧಿಸಿದ್ದಿದೆ. ಬರ್ಮಾ ಸರಕಾರವನ್ನು ಮನವೊಲಿಸಲು ಅನೇಕ ಗಣ್ಯರು ಯತ್ನಿಸಿದ್ದೂ ಇದೆ. ವಿಚಿತ್ರವೆಂದರೆ, ಗೃಹ ಬಂಧನದಲ್ಲಿ ಸೂಕಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿತ್ತು. ಆಗ ಸೂಕಿಗೆ ನೆಚ್ಚಿನ ಸಂಗಾತಿಗಳಾಗಿದ್ದು ಪುಸ್ತಕಗಳು.
ದುರ್ದೈವ ಎಂದರೆ ಸೂಕಿ ವಿರುದ್ಧ ಶಾಂತಿ ಕದಡುವ ಆರೋಪ ಹೊರಿಸಿ ವಿಚಾರಣೆ ನಡೆಸದೆ ಜೈಲಿನಲ್ಲಿಡಬಹುದಾಗಿದ್ದ ಕಾನೂನು ಬಳಸಿದ್ದು! ಪತ್ರಕರ್ತರಿಗೂ ಪ್ರವೇಶ ಕೊಡದೆ, ಸಂದರ್ಶನಗಳಿಂದ ಆಕೆಯನ್ನು ದೂರವೇ ಇಟ್ಟರು. 2009ರಲ್ಲಿ ಸೂಕಿ ಬಿಡುಗಡೆಗೆ ವಿಶ್ವದ ಮೂಲೆ ಮೂಲೆಯಿಂದ ಒಕ್ಕೊರಲ ಒತ್ತಡ ಬಂತು. ಹೀಗಾಗಿ, 2010ರ ನವೆಂಬರ್ 13ರಂದು ಸೂಕಿ ಬಿಡುಗಡೆಯಾದರು. 2012 ಸೂಕಿಗೆ ಎಂದೂ ಮಾಸದ ವರ್ಷ. ಬರ್ಮಾ ಸಂಸತ್‌ಗೆ ನಡೆದ ಉಪಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಸೇರಿದಂತೆ ಅವರ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಕ್ಕೆ ವಿಶ್ವವೇ ಕುಣಿದಾಡಿತು. ಈ ಚುನಾವಣೆ ಮೇಲೆ ಅಂತಾರಾಷ್ಟ್ರೀಯ ಮಾಧ್ಯಮಗಳ ಕಣ್ಗಾವಲೂ ಇತ್ತು. ಹೀಗಾಗಿ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯದೇ ಸೂಕಿ ಪಕ್ಷ ಜಯಭೇರಿ ಬಾರಿಸಿತು. ಈ ಚುನಾವಣೆ ವೇಳೆ ಸೂಕಿಯ ಆರೋಗ್ಯವೂ ಕೈಕೊಟ್ಟಿತು.
ಆದರೂ ಎದೆಗುಂದದೇ ಸೂಕಿ ಅವರ ಎನ್ ಎಲ್‌ಡಿ ಪಕ್ಷ ಸೂಕಿಯ ಭಾಷಣ ಮುದ್ರಿಸಿಕೊಂಡು ರೇಡಿಯೋ ಸೇರಿದಂತೆ ನಾನಾ ಮಾಧ್ಯಮಗಳಲ್ಲಿ ಪ್ರಚಾರ ಮಾಡಿಸಿತು. ಅದೊಂದು ಮನಕಲಕುವಂಥ ಭಾಷಣ. ಸೂಕಿ ಪಕ್ಷದ 45 ಅಭ್ಯರ್ಥಿಗಳಲ್ಲಿ 43 ಅಭ್ಯರ್ಥಿಗಳು
ಚುನಾವಣೆಯಲ್ಲಿ ಗೆದ್ದು ದಾಖಲೆಯನ್ನೇ ನಿರ್ಮಿಸಿಬಿಟ್ಟರು. ಈ ಗೆಲುವು ಮುಂದಿನ ಚುನಾವಣೆಯ ದಿಕ್ಸೂಚಿ ಎಂದೇ ಬಣ್ಣಿಸಲಾಗಿದೆ. ಅಂದಹಾಗೆ, ಮತ್ತೊಮ್ಮೆ ಸ್ವಾಂತಂತ್ರ್ಯದ ಹಕ್ಕಿ ಸೂಕಿಯ ಜನ್ಮದಿನ ಬಂದಿದೆ. ಸೂಕಿಯೆಂಬ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಎದೆ ಯಲ್ಲಿಟ್ಟುಕೊಂಡು ಎಲ್ಲರಿಗೂ ಸೂಕಿ ಆತ್ಮಬಂಧುವೇ. ಆಕಿ ಬರೀ ಬರ್ಮಾಕ್ಕೇ ಅಲ್ಲ, ಬ್ರಹ್ಮಾಂಡಕ್ಕೇ ಸೂಕಿಯೊಬ್ಬಳು ಶಾಂತಿಯ ರಾಯಭಾರಿ!