Monday, 28th October 2024

ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸೋಣ: ಸತೀಶ್ ಜಾರಕಿಹೊಳಿ

ವಿಜಯಪುರ : ಬಿಜೆಪಿಯ ಅಂಧ ಭಕ್ತರು 2 ರೂಗೆ ಕೆಲಸ ಮಾಡುತ್ತಿದ್ದಾರೆ, ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕೆಲಸ ಮಾಡುತ್ತಾರೆ, ನಾವು ಹಾಗೆ ಮಾಡುವುದು ಬೇಡ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುವ ಪ್ರಯತ್ನ ಮಾಡೋಣ, ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕಾಂಗ್ರೆಸ್ ನವ ಸಂಕಲ್ಪ ಚಿಂತನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾಗುವುದಕ್ಕಿಂತ ಮುಂಚೆ ಅದಾನಿ ಅವರ ಆಸ್ತಿ 30 ಸಾವಿರ ಕೋಟಿ ಇತ್ತು. ಮೋದಿ ಪ್ರಧಾನಿ ಆದಮೇಲೆ ಅವರ ಆಸ್ತಿ 5 ಲಕ್ಷ ಕೋಟಿ ತಲುಪಿದೆ, ಇದು ಮೋದಿಯವರು 24 ಗಂಟೆ ಕೆಲಸ ಮಾಡಿದ ಪ್ರತಿಫಲ ಎಂದು ವ್ಯಂಗ್ಯ ವಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಂಕಲ್ಪ ಮಾಡೋಣ : ಭವಿಷತ್ತಿನಲ್ಲಿ ಬಿಜೆಪಿ ಪಕ್ಷವನ್ನು ಯಾವರೀತಿಯಾಗಿ ಎದುರಿಸಬೇಕು ಎಂಬುದನ್ನು ತಿಳಿಯಲು ಇದು ಅನುಕೂಲವಾಗಲಿದೆ. ಪ್ರತಿ ತಾಲೂಕಿನಲ್ಲಿಯೂ ಸೇವಾದಳದ ಶಿಬಿರಗಳಾಗಬೇಕು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದರು.

ಕಾಂಗ್ರೆಸ್ ಕೆಡರ್ ಬೆಸ್ ಪಕ್ಷವಾಗಬೇಕು : ನಮ್ಮ ಕಾಂಗ್ರೆಸ್ ಪಕ್ಷ ಕೆಡರ್ ಬೆಸ್ ಪಾರ್ಟಿ ಆಗಬೇಕು. ಬಿಜೆಪಿ ಪಕ್ಷದ ಕಾರ್ಯಕರ್ತರು ಯಾವರಿಟಿಯಾಗಿ ಕೆಡರ್ ಬೆಸ್ ಕೆಲಸ ಮಾಡುತ್ತಾರೋ ನಾವು ಆ ರೀತಿಯಾಗಿ ಕಾಂಗ್ರೆಸ್ ಪಕ್ಷವನ್ನು ತಯಾರು ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಅಗ್ನಿಪಥ್ ವಿರುದ್ಧ ಹರಿಹಾಯ್ದ ಜಾರಕಿಹೊಳಿ : ಅಗ್ನಿಪಥ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದ ಸತೀಶ್ ಜಾರಕಿಹೊಳಿ, ಯುವಕರನ್ನು ಉದ್ಯೋಗ ವಂಚಿತರಾಗಿ ಮಾಡಲು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಹೊಸ ಶಿಕ್ಷಣ ನೀತಿಯ ಬಗ್ಗೆಯ ವಾಗ್ದಾಳಿ : ಶಿಕ್ಷಣ ವಂಚಿತರನ್ನಾಗಿ ಮಾಡುವ ಹುನ್ನಾರ, ಹಳೆ ಉದ್ಯೋಗಕ್ಕೆ ನಿಮ್ಮನ್ನು ದೂಡುವ ಉದ್ದೇಶ ಹೊಸ ಶಿಕ್ಷಣ ನೀತಿಯಿಂದ ಯಾರಿಗೂ ಉಪಯೋಗವಿಲ್ಲ ಎಂದರು. ಸರ್ಕಾರಿ ಶಾಲೆಗಳನ್ನು ಹೆಚ್ಚು ಕಡಿಮೆ ಮುಚ್ಚುವ ಪರಿಸ್ಥಿತಿ ಬಂದಿದೆ, ಹಿಂದುಳಿದವರು, ಬಡವರು ಶಿಕ್ಷಣ ಕಲಿಯಬಾರದು ಎನ್ನುವುದು ಬಿಜೆಪಿ ಉದ್ದೇಶವಾಗಿದೆ. ಎಂದು ಹೊಸ ಶಿಕ್ಷಣ ನೀತಿ ವಿರುದ್ಧ ಗುಡುಗಿದರು.

ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಸಕರಾದ ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್, ರಾಜ್ಯಸಭಾ ಸದಸ್ಯ ಸೈಯದ್ ನಾಶಿರ್ ಹುಸೇನ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.