ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಲ ಜೀವನ್ ಮಿಷನ್ ಯೋಜನೆಯಡಿ ೧೦೬ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು ಈಗಾಗಲೇ ೫೩ ಟ್ಯಾಂಕ್ಗಳ ನಿರ್ಮಾಣಕ್ಕೆ ಟೆಂಡರ್ ಅನುಮೋದನೆ ಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಚಿಕ್ಕನಾಯಕನಹಳ್ಳಿಯ ನಾಗತಿಕೆರೆಯಿಂದ ೧೯ ಕೆರೆಗಳಿಗೆ ನೀರು ಹರಿಸುವ ಪೈಪ್ಲೈನ್, ಜಾಕ್ವೆಲ್ ಅಳವಡಿಸುವ ಕಾಮಾಗಾರಿ ಮತ್ತು ಕಂದಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಕಟ್ಟಡಗಳ ಸಮುಚ್ಚಯ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ ದರು.
ವರ್ಷಕ್ಕೆ ಎರಡು ಅಥವಾ ಮೂರು ಟ್ಯಾಂಕ್ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಇಷ್ಟು ಟ್ಯಾಂಕ್ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ನಮ್ಮ ಸರಕಾರದ ಸಾಧನೆಯಾಗಿದೆ.
ಜಲ ಜೀವನ್ ಮಿಷನ್ ಯೋಜನೆಯಡಿ ೪೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಡಿ ಪ್ರತಿ ಮನೆಗೂ ನಲ್ಲಿ ಅಳವಡಿಸಿ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಹಾಲಿ ಇರುವ ಓವರ್ ಹೆಡ್ ಟ್ಯಾಂಕ್ಗಳ ವಿತರಣಾ ಲೈನ್ಗೆ ಪೈಪ್ ಅಳವಡಿಸಿ ಮನೆ ಮನೆಗೆ ಸಂಪರ್ಕ ಕಲ್ಪಿಸಿ ಶುದ್ದ ಕುಡಿಯುವ ನೀರು ಒದಗಿಸಲಾಗುವುದು. ಸ್ಥಳೀಯ ಕಂಟ್ರಾಕ್ಟರ್ಗಳು ಈ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವ ಕಾರಣ ಹೊರಗಿನಿಂದ ಕರೆ ತಂದು ಕೆಲಸ ಮಾಡಿಸಬೇಕಿದೆ. ಎಂದು ತಿಳಿಸಿದರು.
ಕೇಂದ್ರ ಸರಕಾರವು ೧೧೦೦ ಕೋಟಿ ಹಣವನ್ನು ಅಟಲ್ ಭೂಜಲ ಅನುಷ್ಠಾನಕ್ಕೆ ಸಣ್ಣ ನೀರಾವರಿ ಇಲಾಖೆಗೆ ನೀಡಿದೆ. ತಾಲ್ಲೂಕಿ ನಲ್ಲಿ ನಡೆಯುತ್ತಿರುವ ಮೂರು ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸ ಲಾಗಿದೆ. ಈ ಯೋಜನೆಯ ಸಂಪೂರ್ಣ ಹಣ ಬಿಡುಗಡೆಯಾಗಿದ್ದು, ತಾಲ್ಲೂಕಿನ ಅಭಿವೃದ್ದಿಗೆ ಅಧಿಕಾರಿಗಳು ಎಷ್ಟು ಹಣ ಕೇಳಿ ದರೂ ನೀಡಲು ಸಿದ್ದನಿದ್ದೇನೆ. ಅಂತರ್ಜಲ ಹೆಚ್ಚಳಕ್ಕೆ ಬುಕ್ಕಪಟ್ಟಣ ವ್ಯಾಪ್ತಿಯಲ್ಲಿ ೧೦೦ ಪಿಕ್ಅಪ್ ನಿರ್ಮಾಣ ಮಾಡಿದ್ದು ಕಂದಿಕೆರೆ ಹೋಬಳಿಯಲ್ಲಿ ಅತಿ ಹೆಚ್ಚು ಅಣೆ ನಿರ್ಮಿಸಲಾಗಿದೆ ಎಂದರು.
ರಾಜಕಾರಣದ ಕಾಗುಣಿತ ಬರದವರು ನನ್ನನ್ನು ಪ್ರಶ್ನಿಸುತ್ತಾರೆ ?
ಚುನಾವಣೆ ಹತ್ತಿರ ಬಂದಾಗ ಕೆಲ ನಾಯಕರು ಕ್ಷೇತ್ರಗಳ ಹೆಸರು ತೆಗೆದುಕೊಂಡು ತಾವು ಅಲ್ಲಿಂದ ಸ್ಫಧಿಸುವುದಾಗಿ ಹೇಳಿ ಏನೋ ನೋ ಬಡಬಡಿಸುತ್ತಾರೆ. ರಾಜಕಾರಣದ ಕಾಗುಣಿತ ಬರದವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ೫೯ ತಿಂಗಳು ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಚಿಂತಿಸುವ ನಾನು ೧ ತಿಂಗಳು ಮಾತ್ರ ರಾಜಕಾರಣ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಮುಖ್ಯ ಆಯುಕ್ತ ರಾಘವನ್, ಸೂಪರಿ ಡಂಟ್ ಇಂಜಿನಿಯರ್ ನಾಗರಾಜ್, ಕಾರ್ಯಪಾಲಕ ಇಂಜಿನಿಯರ್ ಪ್ರಭಾಕರ್, ಜಿಲ್ಲಾ ಆರೋಗ್ಯಧಿಕಾರಿ ಮಂಜುನಾಥ್, ತಾ.ಆರೋಗ್ಯಧಿಕಾರಿ ನವೀನ್, ಆರೋಗ್ಯ ನಿರೀಕ್ಷಕ ನಿರೂಪ್ ರಾವತ್, ಮುದ್ದೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ, ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಬಗರ್ ಹುಕುಂ ಕಮಿಟಿ ಸದಸ್ಯ ನಿರಂಜನ್ಮೂರ್ತಿ, ಹಾಗು ಗ್ರಾಮಸ್ಥರಿದ್ದರು.