Monday, 28th October 2024

ಕಾಳಿದಾಸ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಪೂರ್ವಸಭೆ

ತುಮಕೂರು: ಮುಂದಿನ ಆಗಸ್ಟ್ 03ರಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಹಿಂದುಳಿದ ಸಮುದಾಯಗಳ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಇಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಕಚೇರಿ ಯಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಪೂರ್ವಸಭೆ ಕರೆಯ ಲಾಗಿತ್ತು.

ಪೂರ್ವ ಸಭೆಯಲ್ಲಿ ಕುರುಬ,ಮಡಿವಾಳ, ಕುಂಬಾರ,ನೇಕಾರ,ಸವಿತಾ,ವಾಲ್ಮೀಕಿ,ಗೊಲ್ಲ ಸಮುದಾಯದ ಮುಖಂಡರು ಸೇರಿದಂತೆ ಓಬಿಸಿ ಸಮುದಾಯಕ್ಕೆ ಸೇರಿದ ಹಲವು ಮುಖಂಡರು ಭಾಗವಹಿಸಿ, ಜಿಲ್ಲೆಯಿಂದ ಹೆಚ್ಚು ಜನರನ್ನು ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಂ.ಎಲ್.ಸಿ. ಆರ್.ರಾಜೇಂದ್ರ ಮಾತನಾಡಿ, ದಿವಂಗತ ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಕುಂದುಕೊರತೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ ಮುಖ್ಯಮಂತ್ರಿಗಳಿದ್ದರೆ ಅದು ಸಿದ್ದರಾಮಯ್ಯ ಮಾತ್ರ.

ಹಾಗಾಗಿ ದಾವಣಗೆರೆಯಲ್ಲಿ ನಡೆಯುವ ಅವರ 75ನೇ ಹುಟ್ಟು ಹಬ್ಬದಲ್ಲಿ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ.ಅರಸು ಅವರನ್ನು ಹೊರತುಪಡಿಸಿದರೆ ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳ್ಳಿಕೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಇದು ಎಲ್ಲಾ ಹಿಂದುಳಿದ ವರ್ಗದವರು ಹೆಮ್ಮೆ ಪಡುವ ವಿಚಾರ ಎಂದರು.

ಹಿAದುಳಿದ ವರ್ಗಗಳ ಮುಖಂಡ ಹೆಬ್ಬೂರು ಶ್ರೀನಿವಾಸಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ನಮ್ಮೆಲ್ಲರ ಮನೆಯ ಹಬ್ಬವಿದ್ದಂತೆ. ಹಾಗಾಗಿ ನಾವೆಲ್ಲರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕಾಗಿದೆ. ಒಂದು ವೇಳೆ ಭಾಗವಹಿಸಲು ಇಚ್ಚಿಸುವವರು ವಾಹನದ ವ್ಯವಸ್ಥೆ ಬೇಕಾದಲ್ಲಿ ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ ದೊಡ್ಮನೆ(ದೂ.9844549430) ಅವರಿಗೆ ಮಾಹಿತಿ ನೀಡಿದರೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಹೆಬ್ಬೂರು ಚಿಕ್ಕಣ್ಣನಹಟ್ಟಿಯ ದೇವಾಲಯದ ಪ್ರಧಾನ ಆರ್ಚಕ ಪಾಪಣ್ಣ ಮಾತನಾಡಿ, ಹಿಂದುಳಿದ ಜನಾಂಗದವರು ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ತೋರಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಹಾಗಾಗಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕರ್ಮದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಕೆಲಸ ಮಾಡೋಣ ಎಂದರು.

ಮುಖಂಡ ದನಿಯಾಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರ 75ನೇ ಹುಟ್ಟು ಹಬ್ಬದ ಹೆಸರಿನಲ್ಲಿ ಹರಿದು ಹಂಚಿ ಹೋಗಿ ರುವ ಓಬಿಸಿಗಳು ವಯುಕ್ತಿಕವಾಗಿ ಮತ್ತು ಸಮುದಾಯದ ಹಂತದಲ್ಲಿ ಒಗ್ಗೂಡಲು ವೇದಿಕೆಯಾಗಿದೆ. ಅವರು ಆಡಳಿತ ನಡೆಸಿದ 2013-18ರವರೆಗಿನ ಕಾಲ ಹಿಂದುಳಿದ ವರ್ಗ, ದಲಿತರಿಗೆ ಸುವರ್ಣ ಕಾಲ, ಸಂವಿಧಾನ ಬದ್ದವಾಗಿ ಈ ಸಮುದಾಯಗಳಿಗೆ ದೊರೆಯ ಬೇಕಾದ ಎಲ್ಲಾ ಸವಲತ್ತುಗಳನ್ನು ಪಕ್ಷಭೇದÀ ಮರೆತು ನೀಡಿದ್ದಾರೆ.

ಅವರ ಹಿತೈಷಿಗಳು ಮತ್ತು ಗೆಳೆಯರು ಮಾಡುತ್ತಿರುವ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಕನಿಷ್ಠ 50 ಸಾವಿರ ಭಾಗವಹಿಸುವ ಮೂಲಕ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರ ಒಗ್ಗಟ್ಟಿನ ಆನಾವರಣ ಮಾಡಬೇಕಾಗಿದೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲು ನಾವು ಸಿದ್ದ. ಆಯಾಯ ಸಮುದಾಯಗಳು ತಮ್ಮ ಸಮುದಾಯದ ಬ್ಯಾನರ್ ಅಡಿಯಲ್ಲಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ಸಾರೋಣ. ಆ ಮೂಲಕ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರಿಗೆ ಶಕ್ತಿ ತುಂಬೋಣ ಎಂದರು.

ಸಭೆಯಲ್ಲಿ ಮಡಿವಾಳ ಸಮಾಜದ ಶಾಂತಕುಮಾರ್, ಕುಂಬಾರ ಸಮಾಜದ ಉಪಾಧ್ಯಕ್ಷ ಗುರುಮೂರ್ತಿ, ವಾಲ್ಮೀಕಿ ಸಮುದಾಯದ ಪುರುಷೋತ್ತಮ್, ರಂಗನಾಥ್, ಕನ್ನಡ ಸ್ವಾಭಿಮಾನ ಸಂಘಟನೆಯ ರಂಗನಾಥ್, ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ರೇಣುಕಯ್ಯ, ಸುರೇಶ್, ರಾಜೇಶ್ ದೊಡ್ಡಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.