ತುಮಕೂರು: ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಚಂಗಾವರ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿದೆ.
ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕಾಡುಗೊಲ್ಲ ನಿಗಮ ಸ್ಥಾಪಿಸಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದ್ದರು. ನಂತರ ಸುಮಾರು ಎರಡು ವರ್ಷಗಳ ಕಾಲ ಅಧ್ಯಕ್ಷರನ್ನು ನೇಮಿಸಲು ಸರಕಾರ ಹಿಂದೇಟು ಹಾಕಿತ್ತು. ಅಧ್ಯಕ್ಷಗಾದಿಯ ಮೇಲೆ ಹಲವಾರು ಮಂದಿ ಕಣ್ಣಿಟ್ಟಿದ್ದರು.
ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡುಗೊಲ್ಲ ಸಮುದಾಯದ ಮುಖಂಡರು ಅಧ್ಯಕ್ಷರನ್ನು ನೇಮಿಸುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದರು. ಶಿರಾ ತಾಲೂಕಿನ ಚಂಗಾವರ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ತ್ಯಜಿಸಿ ಶಿರಾ ಉಪಚುನಾವಣೆಯ ವೇಳೆ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಗೊಂಡಿದ್ದ ಮಾರಣ್ಣ ಅವರಿಗೆ ಅದೃಷ್ಟ ಖುಲಾಯಿಸಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನಾಂಗದ ಅಭಿವೃದ್ದಿಗೆ ಶ್ರಮಿಸಲಿ ಎಂದು ಸಮುದಾಯದ ಮುಖಂಡರು ಆಶಿಸಿದ್ದಾರೆ.